New Book: ಅಚ್ಚಿಗೂ ಮೊದಲು; ದಿವ್ಯಾ ರಾವ್ ಅವರ ‘ನಿತ್ಯಜೀವನದ ಸತ್ಯಕಥೆಗಳು’ ಜುಲೈ 3ರಂದು ಬಿಡುಗಡೆ

Book Release : ‘ಅಲ್ಲಾ ಕಣೇ ಪದ್ದಕ್ಕ… ನಮ್ ಜಾತೀಲಿ ಹೆಣ್ ಇಲ್ಲಾ ಅಂದ್ರೆ ಸುಮ್ನಾಗುಕ್ ಏನ್ ಅಲೇನೇ? ಮದ್ವಿ ಮಾಡದೇ ಇದ್ರೂ ಅಡ್ಡಿಲ್ಲ, ನಿಮ್ಮನೆ ಮಾಣಿಗ್ ಬ್ಯಾರೆ ಜ್ಯಾತಿ ಹೆಣ್ ಒಂದ್ ತರ್ಬೇಡ ಕಣೇ, ಹೇಸ್ಗೆ ವ್ಯಾಪಾರನೇ ಸೈ ಊರೋರ ಮುಂದ್ ಇದು’

New Book: ಅಚ್ಚಿಗೂ ಮೊದಲು; ದಿವ್ಯಾ ರಾವ್ ಅವರ ‘ನಿತ್ಯಜೀವನದ ಸತ್ಯಕಥೆಗಳು’ ಜುಲೈ 3ರಂದು ಬಿಡುಗಡೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jul 02, 2022 | 10:58 AM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ನಿತ್ಯಜೀವನದ ಸತ್ಯಕಥೆಗಳು ಲೇಖಕಿ: ದಿವ್ಯಾ ಶ್ರೀಧರ್ ರಾವ್ ಪುಟ : 78 ಬೆಲೆ : ರೂ. 120 ಮುಖಪುಟ ವಿನ್ಯಾಸ : ರಾಘವೇಂದ್ರ ಚಾತ್ರಮಕ್ಕಿ ಪ್ರಕಾಶನ : ಆರ್ಯ ಪ್ರಕಾಶನ, ಉಡುಪಿ

ಕಥೆಗಳಲ್ಲಿರುವ ಅನೇಕ ಮಹಿಳಾ ಪಾತ್ರಗಳು ಒಳಗಿನ ಬೇಗುದಿಯನ್ನು ಹೊರಹಾಕದೆ ಹೆಣಗಾಡುವ ಚಿತ್ರಣವಿದೆ. ಹೆಣ್ಣಿನ ಅಂತರಂಗದ ಶೋಧಕ್ಕೆ ‌ಮುಂದಾಗುವ ಗೆಳತಿ ಕೊನೆಗೂ ಅವಳ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ನೋವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗುತ್ತಾಳೆ. ಧ್ವನಿ ಕಥೆಯ ಗುಲಾಬಿ ಪಾತ್ರ ಇಲ್ಲಿ ಉಲ್ಲೇಖಾರ್ಹ. ಮದುವೆಯಾದ ಗಂಡ ಪರಸ್ತ್ರೀ ಮೋಹಕ್ಕೆ ಸಿಲುಕುವುದು, ಕೈಹಿಡಿದ ಮಡದಿ ಮರ್ಯಾದೆಗಾಗಿ ನೋವು ನುಂಗಿಕೊಂಡು ಭಾರವಾದ ಜೀವನ ಸಾಗಿಸುವುದು ಮೊದಲಾದ ಅನೇಕ ಘಟನೆಗಳು ಬೇರೆ ಬೇರೆ ಕಥೆಗಳಲ್ಲಿ ಮೂಡಿವೆ. ಮಹಿಳೆಯರೂ ಪಾಪದ ಪುರುಷರನ್ನು ಮೋಸ ಮಾಡುವ ವಸ್ತುವೂ ಇಲ್ಲಿ ಸ್ಥಾನ ಪಡೆದಿದೆ. ವಿಚ್ಛೇದನ ಕಥೆಯಲ್ಲಿ ಬರುವ ಸ್ರ್ತೀ ತನ್ನ ಗಂಡನ ವಿರುದ್ಧ ಕೋರ್ಟಿನಲ್ಲಿ ಸುಳ್ಳು ಕೇಸನ್ನು ಹಾಕುತ್ತಾಳೆ. ಕೊನೆಗೂ ಅವಳಿಗೆ ಪಶ್ಚಾತ್ತಾಪ ವಾಗಿ ವಿಚ್ಛೇದನದಿಂದ ಹಿಂದೆ ಸರಿಯುತ್ತಾಳೆ. ಡಾ. ಶ್ರೀಕಾಂತ್‌ ರಾವ್‌

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಅದೆಷ್ಟೋ ಮನೆಗಳಲ್ಲಿ ಅದೇನೇನೋ ಕಷ್ಟಗಳು. ಕಷ್ಟಗಳಿಗೆ ಖಂಡಿತಾ ಕೊನೆಯಿಲ್ಲ. ಹಾಗಂತ ಕಷ್ಟಗಳೇ ಬದುಕಲ್ಲ. ಕಷ್ಟದ ನಂತರದ ಸುಖದ ನಿರೀಕ್ಷೆ ನಮ್ಮನ್ನು ಸಂತೋಷವಾಗಿಡುತ್ತವೆ. ಬಂದ ಕಷ್ಟಗಳನ್ನು ಮೆಟ್ಟಿ ನಿಲ್ಲುವುದೇ ಬದುಕಿನ ಸಾರ್ಥಕತೆ ಎಂದೆನಿಸುವುದು ನನಗೆ. ಇಂತಹ ಸಾರ್ಥಕತೆಯ ಬೆನ್ನೇರಿ ಹೊರಟ ನಮ್ಮನ್ನು ಅನೇಕಾನೇಕ ಸವಾಲುಗಳು ಎದುರಾಗುತ್ತವೆ, ಸವಾಲಿಗೇ ಸವಾಲಾಗಿ ಬದುಕಿದವರು ನನ್ನ ದೃಷ್ಟಿಯಲ್ಲಿ ಬಹಳ ಎತ್ತರದ ಸ್ಥಾನಕ್ಕೇರಿದ್ದಾರೆ. ಇಂತಹ ನೂರಾರು – ಸಾವಿರಾರು ಕತೆಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಕಂಡು ಮರುಗುತ್ತಿರುತ್ತೇವೆ. ಕಂಡು – ಮರುಗಿ, ಛೇ.. ಏನಾಗಿ ಹೋಯಿತು? ಎಂದೆನಿಸಿದ ಕೆಲವು ಕತೆಗಳನ್ನು ನನ್ನದೇ ಕಲ್ಪನೆಯಲ್ಲಿ ಬರಹ ರೂಪಕ್ಕಿಳಿಸಿದ್ದೇನೆ. ದಿವ್ಯಾ ಶ್ರೀಧರ್‌ ರಾವ್

ಕತೆಯಾಯಿತು ಬದುಕು

ಮಧ್ಯಾಹ್ನ ಊಟಕ್ಕೆ ಮಾಡಿದ್ದ ಕೆಸುವಿನ ದಂಟಿನ ಹುಳಿಯ (ಸಾಂಬಾರು) ಕಾರಣವೋ ಇಲ್ಲ ತನಗಿದ್ದ ಮಾತಿನ ಚಾಳಿಯ ಚಟಕ್ಕೋ ಗೊತ್ತಿಲ್ಲ ಭಟ್ಟರ ಓಣಿಯ ಕೊನೆ ಮನೆ ಸುಭದ್ರಳಿಗೆ ಯಾರಲ್ಲಿಯಾದರೂ ಮಾತನಾಡಿ ಬರುವ ಆಸೆ ಆಗಿತ್ತು. ಮಧ್ಯಾಹ್ನದ ಊಟ ಮುಗಿಸಿ, ಒಂದು ಗಳಿಗೆ ಮಲಗಿ, ಬೆಲ್ಲದ ಕಾಫೀ ಕುಡಿದು, ಹಾಲು ಕರೆದು, ದನ -ಕರಗಳನ್ನು ಮೇಯಲಿಕ್ಕೆ ತೋಟದ ಮೂಲೆಯ ಅಡಿಕೆ ಮರಕ್ಕೆ ಕಟ್ಟಿ, ಹಾಲು ಡೈರಿಗೆ ಹಾಕುವ ನೆಪ ಮಾಡಿ ಹೊರಟಿದ್ದಳು.

ಹಾಲು ಡೈರಿಯಲ್ಲಿ ಯಾರ್ಯಾರು ಬರಬಹುದು, ನಾನು ಯಾರಲ್ಲಿ ಆ ವಿಷಯ ಕೇಳಿ ತಿಳಿಯಬಹುದೆಂಬ ಹುನ್ನಾರ ತಲೆಯಲ್ಲಿ ನಡೆಯುತ್ತಲೇ ಇತ್ತು. ಈ ಸುಭದ್ರಳಿಗೆ ತನ್ನ ಅನುಮಾನಗಳನ್ನು ಬಗೆಹರಿಸಲಿಕ್ಕೆ ಬೇರೆ ಜಾತಿಯವರು ಆಗಲಿಕ್ಕಿಲ್ಲ. ಭಟ್ರ ಮನೆಯವರೇ ಬೇಕು. ‘ಈ ಭಟ್ರಮ್ಮನಿಗೆ ಅದೆಂತ ಮಡಿಯೋ, ನಮ್ ಮೈನಾಗೇ ಇವರಂಗೇ ಕೆಂಪು ರಕ್ತ ಹರಿಯದಿಲ್ವೇನಾ ಹಂಗಾರೇ ’ ಅಂತ ಆಚೀಚೆ ಮನೆಯವರು ಹಿಂದಿನಿಂದ ಬೈದುಕೊಳ್ಳುತ್ತಲೇ ಇದ್ದರು. ಆ ಬೈಗುಳ ಇವಳ ಕಿವಿಗೂ ಬಿದ್ದಿತ್ತು. ಆದರೂ ಬಿಡದ ವ್ಯಕ್ತಿತ್ವ ಅದು, ಹುಟ್ಟು ಗುಣ ಸುಟ್ಟರೂ ಹೋಗುವುದಲ್ಲಂತೆ.

ಇದನ್ನೂ ಓದಿ : Literature: ಅಚ್ಚಿಗೂ ಮೊದಲು; ಕರ್ಕಿ ಕೃಷ್ಣಮೂರ್ತಿಯವರ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಕೃತಿ ಜೂನ್ 26ಕ್ಕೆ ಬಿಡುಗಡೆ

‘ಹ್ವಾಯ್… ಯಾರೂ ಇಲ್ಲೇನ್ರಿ ಮನೇಲಿ?’ ಎನ್ನುತ್ತಾ ಪದ್ದಕ್ಕನ ಮನೆಯೊಳಗೆ ಬಂದ ಸುಭದ್ರಳಿಗೆ ಕಾಣಿಸಿದ್ದು ಪದ್ದಕ್ಕನ ಮಗ ವಿಕ್ರಮ. ‘ಏಯ್ ಮಾಣಿ… ಯಾವಾಗ್ ಬಂದ್ಯಾ? ಸಪೂರ ಆಗಿದ್ದೀ ನೋಡು. ಆ ಪ್ಯಾಟೆ ಊಟ ಹಿಡಿಸ್ಲಿಲ್ಲ ಕಾಣುತ್ತೆ. ಇಲ್ಲೇ ತ್ವಾಟ, ಮನಿ ನೋಡ್ಕಂಡು ಇರ್ಬೋದ್ ಅಂದ್ರೆ ನಿಮ್ಗೆಲ್ಲ ಅರ್ಥ ಆಗುಲ್ಲ. ಬಿಡೀಗಾ… ಪದ್ದಕ್ಕ ಎಲ್ಲೋದ್ಲಾ?’ ತಾನು ಬಂದ ಮೂಲ ಉದ್ದೇಶವೇ ಪದ್ದಕ್ಕನಲ್ಲಿ ಮಾತನಾಡಲು ಎಂಬುದನ್ನು ಹೇಳಲಿಕ್ಕೆ ಇಷ್ಟುದ್ದ ಮಾತನಾಡಿದ್ದಳು.

‘ಯಾರಾ ಮಾಣಿ ಅದು’ ಪದ್ದಕ್ಕ ಮನೆಯ ಹಿಂದಿನ ಅಂಗಳಕ್ಕೆ ಸಗಣಿ ಹಾಕಿ ಸಾರಿಸುತ್ತಿದ್ದವಳು ಅರ್ಧಂಬರ್ಧ ಕೈ ತೊಳೆದುಕೊಂಡು, ಮೂಗು ಮುಚ್ಚಿಕೊಳ್ಳುವಷ್ಟು ವಾಸನೆಯೊಂದಿಗೆ ಮನೆಯ ಒಳಗೆ ಬಂದಿದ್ದಳು. ‘ಅಲ್ದೇ ಪದ್ದಕ್ಕಾ… ಎಷ್ಟು ದಿನಾ ಆತೇ ಮಾರೇತಿ ನಿನ್ನ ಮಖ ನೋಡ್ದೆ. ಅದಿಕ್ಕೆ ಮಾತಾಡ್ಸಿ ಹೋಗಣ, ಜ್ಯೊತಿಗ್ ಹೆಂಗಿದ್ದೀ ನೋಡ್ದಂಗೂ ಅಗುತ್ತೆ ಅಂತ ಬಂದ್ನೇ’ ಸುಭದ್ರ ಎಲ್ಲಾ ಒಂದೇ ಸಲಕ್ಕೆ ಮಾತಾಡಿ ಮುಗಿಸೋ ಹಾಗೆ ಮಾತನಾಡುತ್ತಿದ್ದರೂ ಮೂಗು ಮುಚ್ಚಿಕೊಳ್ಳುವುದನ್ನು ಮರೆತಿರಲಿಲ್ಲ. ‘ಹೋ ಸುಬ್ಬೀ, ಬಾರೇ ಮಾರೇತಿ…. ಎಷ್ಟು ದಿನ ಆತಲೇ ಈ ಕಡಿಗ್ ಬರ್ದೆ, ಬಾ ಪತ್ರೋಡೆ ಮಾಡಿದೀನಿ, ಕೊಡ್ತ್ನಿ’ ಪದ್ದಕ್ಕ ಹೇಳ್ತಾ ಹೇಳ್ತಾ ಕೈ ಒರೆಸಿಕೊಂಡು ಒಂದು ತಟ್ಟೆಗೆ ಪತ್ರೋಡೆ ಹಾಕಿ ತಂದು ಸುಭದ್ರಳ ಮುಂದಿಟ್ಟು ‘ಎಂತೇ ಸಮಾಚಾರಾ ಮತ್ತೆ, ಎಲ್ಲೂ ತಿಥಿ ಊಟ ಇಲ್ಲೇನೆ? ಊಟದ್ ಮನಿ ಇದ್ದಿದ್ದಾಗಾದ್ರೂ ನಾವೆಲ್ಲ ಕೂತು ಮಾತಾಡಕ್ ಆಗ್ತಿತ್ತ್, ಅದೂ ಇಲ್ಲ’ ಎನ್ನುತ್ತಾ ಮುಖ ಸಣ್ಣ ಮಾಡಿದ್ದಳು. ‘ಹೋಗ್ಲಿ ಬಿಡು, ಎಂತಾ ಕಥೆನೇ ಮಾರೇತಿ ಈ ಕೆಲ್ಸದವದ್ದು? ಅಂಗಳಕ್ ಸಗಣಿ ಹಾಕಣ ಬಾರೇ ಅಂತ ಆ ಸಾಧುಗೆ ಹೇಳ್ ಹೇಳ್ ಸಾಕಾತು ಮಾರೇತಿ, ಸಾಯ್ಲಿ ಅಂತ ಇವತ್ತು ನಾನೇ ಶುರು ಮಾಡ್ಕಂದೀನಿ ನೋಡು’ ಎನ್ನುತ್ತಾ ತನ್ನ ಕಷ್ಟವನ್ನು ಹೇಳಿಕೊಳ್ತಾ ಕೂತ ಪದ್ದಕ್ಕನಿಗೆ ಸುಭದ್ರ ಮೌನವಾಗಿ ಕುಳಿತದ್ದು ಅನುಮಾನಕ್ಕೀಡು ಮಾಡಿತು.

ಇದನ್ನೂ ಓದಿ : Literature: ಅಚ್ಚಿಗೂ ಮೊದಲು; ‘ನಾನು ನೀವಾಗಿರಬಹುದು’ ಜೂನ್ 26ಕ್ಕೆ ವಸುಮತಿ ಉಡುಪರ ಕಾದಂಬರಿ ನಿಮ್ಮ ಕೈಗೆ

‘ಎಂತಾ ಆತೇ ಸುಬ್ಬಿ’ ಎಚ್ಚರಿಸುವಂತೆ ರಾಗ ಎಳೆದು ಕೇಳಿದ ಪದ್ದಕ್ಕನಿಗೆ ಸುಭದ್ರ ಉತ್ತರವೆಂಬಂತೆ, ‘ಶ್ಯಾಮ್ ಭಟ್ರು ಬಂದಿದ್ರನೇ ನಿಮ್ಮನಿಗೆ? ಮದ್ವಿಮನಿ ಬಂತಂತಲೇ ಅವ್ರ್ ಮನಿಲಿ. ವಿಷ್ಯಾ ಗೊತ್ತಾತನೇ’ ಜೋರಾಗಿ ಮಾತನಾಡುತ್ತಿದ್ದವಳು ಕದ್ದು ಮುಚ್ಚಿ ಸ್ವರ ಸಣ್ಣ ಮಾಡಿ ಮಾತನಾಡಲಾರಂಬಿಸಿದ್ದಳು. ಅಲ್ಲಿಯವರೆಗೆ ಸುಮ್ಮನೆ ಕುಳಿತಿದ್ದ ಪದ್ದಕ್ಕ ಯಾವುದೋ ಒಂದು ಶಕ್ತಿ ಮೈಮೇಲೆ ಬಂದವರಂತೆ ‘ಬಂದಿದ್ರು ಕಣೇ. ಅದೇನೋ ಬ್ಯಾರೆ ಜಾತಿ ಹುಡ್ಗಿ ಅಂತೆಲ್ಲ ಗುಸುಗುಸು ಅಪಾ, ಹೌದನೇ ಸುಬ್ಬಿಅದೆಲ್ಲ? ಹಾಂಗಂತ ಆ ಶ್ಯಾಮ್ ಭಟ್ರೇನು ಬಾಯಿ ಬಿಡ್ಲ ನೋಡು ‘ಎನ್ನುತ್ತಾ ಕುತೂಹಲದಿಂದ ಹೇಳಿದ್ದಳು. ತಾನು ಬಂದ ಕೆಲಸ ಆದಂತೆ ಖುಷಿ ಪಟ್ಟ ಸುಭದ್ರ ‘ಹೂ ಅದೇ, ಅದ್ನೇ ಹೇಳಕ್ ಬಂದ್ನಿ. ಯಾಕ್ ಬೇಕಿತ್ತೇ ಇವುಕ್ಕೆ ಇದೆಲ್ಲ. ಅದೆಲ್ಲ ಸರಿ ಆಗುತ್ತನೇ ಹೇಳ್ ನೋಡಣ? ಅಲ್ಲಾ ಪೂಜೆ – ಪುನಸ್ಕಾರ ಅಂತ ಮಾಡ್ಕಂಡು ಸುಮ್ಮನೇ ಇದ್ದಿದ್ ಈ ಶ್ಯಾಮ್ ಭಟ್ರು ಯಾಕ್ ಹಿಂಗ್ ಮಾಡಿದ್ರೋ ನಾ ಕಾಣೆ’ ಎನ್ನುತ್ತಾ ಪದ್ದಕ್ಕನ ಮಾತಿಗೆ ಒಗ್ಗರಣೆ ಹಾಕಿದ್ದಳು.

‘ಅಲ್ಲಾ ಕಣೇ ಪದ್ದಕ್ಕ… ನಮ್ ಜಾತೀಲಿ ಹೆಣ್ ಇಲ್ಲಾ ಅಂದ್ರೆ ಸುಮ್ನಾಗುಕ್ ಏನ್ ಅಲೇನೇ? ಮದ್ವಿ ಮಾಡದೇ ಇದ್ರೂ ಅಡ್ಡಿಲ್ಲ, ನಿಮ್ಮನೆ ಮಾಣಿಗ್ ಬ್ಯಾರೆ ಜ್ಯಾತಿ ಹೆಣ್ ಒಂದ್ ತರ್ಬೇಡ ಕಣೇ, ಹೇಸ್ಗೆ ವ್ಯಾಪಾರನೇ ಸೈ ಊರೋರ ಮುಂದ್ ಇದು’ ಸಿಡುಕಿ ಹೇಳುತ್ತಾ ಮನಸ್ಸಿನಲ್ಲಿದ್ದನ್ನು ಪದ್ದಕ್ಕನಿಗೆ ಹೇಳುವ ಮೂಲಕ ಸುಭದ್ರ ನಿರಾಳಳಾದಳು. ‘ಇವುನ್ನೆಲ್ಲ ಇನ್ ದೇವಸ್ಥಾನಕ್ ಬಿಟ್ಕಣೋರು…’ ಎನ್ನುತ್ತಾ ಏನನ್ನೋ ಹೇಳಹೊರಟ ಪದ್ದಕ್ಕ ತನ್ನ ಮಗ ಬಂದದ್ದನ್ನು ನೋಡಿ ಮಾತು ಬದಲಾಯಿಸುತ್ತಾ ‘ಎಂತ ಆಗಿದ್ಯೇ ಪತ್ರೋಡೆ’ ಕೇಳಿದ್ದಳು. ಅಲ್ಲಿಗೆ ಬಂದ ವಿಕ್ರಮ, ‘ಸುಬ್ಬಿ ಅತ್ತೆ, ಪತ್ರೋಡೆ ಬಾಯಿ ತುರ್ಸತಾ ಇತ್ತನೇ’ ಎಂದು ಕೇಳಿ ನಗುತ್ತಾ ಹೊರನಡೆದಿದ್ದ. ಸುಭದ್ರಳ ಮುಖ ಸಪ್ಪಗಾಗಿದ್ದನ್ನು ಪದ್ದಕ್ಕ ಗಮನಿಸಿದ್ದರೂ ಏನನ್ನೂ ಕೇಳದೇ ‘ಕಾಫಿ ಕೊಡದನೇ? ‘ ಕೇಳುತ್ತಾ ಮೇಲೆದ್ದಿದ್ದನ್ನು ನೋಡಿ ಸುಭದ್ರ ‘ಬ್ಯಾಡ ಪದ್ದಕ್ಕ, ಈಗಷ್ಟೇ ಕುಡ್ಕಂಡ್ ಬಂದ್ನಿ, ಬರ್ತ್ನಿ ನಾ, ಬರದನಾ ಮಾಣಿ?’ ಎನ್ನುತ್ತಾ ವಿಕ್ರಮನಿಗೂ ಹೇಳಿ ಹೊರಟಿದ್ದಳು.

(ಪೂರ್ಣ ಓದಿಗೆ ಮತ್ತು ಈ ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 9590252456)