Literature: ಅಚ್ಚಿಗೂ ಮೊದಲು; ‘ನಾನು ನೀವಾಗಿರಬಹುದು’ ಜೂನ್ 26ಕ್ಕೆ ವಸುಮತಿ ಉಡುಪರ ಕಾದಂಬರಿ ನಿಮ್ಮ ಕೈಗೆ
Kannada Novel : ‘ಬದುಕು ಯಾವತ್ತೂ, ಯಾರ ತೆಕ್ಕೆಗೂ ನಿಲುಕದ ನಿಗೂಢ. ಯಾವ ತಪ್ಪೂ ಇಲ್ಲದೆ ಕೆಲವರ ಪಾಲಿಗೆ ವಿಧಿ ವಿನಾಕಾರಣ ಯಾಕೆ ಕ್ರೂರವಾಗಿರುತ್ತದೆ ಎನ್ನುವುದು ಮನುಷ್ಯ ಮಾತ್ರರ ಗ್ರಹಿಕೆಗೆ ಸಿಗದ ರಹಸ್ಯ.’ ವಸುಮತಿ ಉಡುಪ
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com
ಕೃತಿ: ನಾನು ನೀವಾಗಿರಬಹುದು (ಕಾದಂಬರಿ) ಲೇಖಕಿ: ವಸುಮತಿ ಉಡುಪ ಪುಟ: 144 ಬೆಲೆ: ರೂ.150 ಮುಖಪುಟ ವಿನ್ಯಾಸ : ಮದನ್ ಸಿ.ಪಿ. ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು
ಬದುಕು ಅನ್ನುವುದು ಯಾವತ್ತೂ, ಯಾರ ತೆಕ್ಕೆಗೂ ನಿಲುಕದ ನಿಗೂಢ. ಯಾವ ತಪ್ಪೂ ಇಲ್ಲದೆ ಕೆಲವರ ಪಾಲಿಗೆ ವಿಧಿ ವಿನಾಕಾರಣ ಯಾಕೆ ಕ್ರೂರವಾಗಿರುತ್ತದೆ ಎನ್ನುವುದು ಮನುಷ್ಯ ಮಾತ್ರರ ಗ್ರಹಿಕೆಗೆ ಸಿಗದ ರಹಸ್ಯ. ವರ ಅಂದುಕೊಂಡಿದ್ದು ಶಾಪವಾಗುವುದು, ಶಾಪ ಅಂದುಕೊಂಡಿದ್ದು ವರವಾಗುವುದು ಜೀವನದ ಚೋದ್ಯ. ವಾಸ್ತವಕ್ಕೆ ಹತ್ತಿರವಾಗುತ್ತಿರುವ ವಸ್ತುವನ್ನು ಇಟ್ಟುಕೊಂಡು ಈ ಕಾದಂಬರಿಯನ್ನು ಬರೆದಿದ್ದೇನೆ. ಕಾಲ ಎಷ್ಟೇ ಮುಂದುವರಿದಿದೆ ಅಂದುಕೊಂಡರೂ ಕೆಲವೊಂದು ಸಂದರ್ಭಗಳು, ಪರಿಸ್ಥಿತಿ, ಭವಿಷ್ಯದ ಆತಂಕ ದಿಟ್ಟ ನಿರ್ಧಾರ ಕೈಗೊಳ್ಳಲು ಹೇಗೆ ಹಿಂದೆಗೆಯುವಂತೆ ಮಾಡುತ್ತದೆ ಎನ್ನುವುದನ್ನು ಕಾದಂಬರಿ ಚಿತ್ರಿಸುತ್ತದೆ. ವಸುಮತಿ ಉಡುಪ, ಲೇಖಕಿ
*
‘ತನ್ನಿಂದ ಹೀಗಾಯ್ತು’, ‘ತನ್ನಿಂದಲೇ ಹೀಗಾಯ್ತು’ ಶ್ರೀನಿವಾಸ ಕೊರಗು ಹಚ್ಚಿ ಕೊಂಡಿದ್ದ. ಉಸಿರೊಡೆಯುತ್ತಿರಲಿಲ್ಲ ಚಿಕ್ಕಿ. ಯಾವತ್ತೂ ಮನೆ ಬಿಟ್ಟು ಒಂದು ರಾತ್ರಿ ಹೊರಗೆ ಉಳಿದು ಗೊತ್ತಿಲ್ಲದ ಸುಭದ್ರಮ್ಮ ತಂಗಿಯ ಮನೆಯಲ್ಲಿ ವಾರಗಟ್ಟಲೆ ಇದ್ದು ಅವಳನ್ನು ಜೋಪಾನ ಮಾಡಿದರು. “ಆಯ್ತಲ್ಲೇ, ಎಲ್ಲಾ ಮುಗೀತು. ಹುಡುಗ ಕೈಗೆ ಬಂದ ಅಂದ್ಕೊಂಡಿದ್ರೆ ನಡುನೀರಲ್ಲಿ ಕೈಬಿಟ್ಟು ಹೋಗ್ಬಿಟ್ಟ..” ಚಿಕ್ಕಿಯ ಅಳಲಿಗೆ ಕೊನೆಮೊದಲಿಲ್ಲ. ಚಿಕ್ಕಪ್ಪ ಅಂಗಡಿ ಬಾಗಿಲು ಮುಚ್ಚಿ ಮನೆ ಸೇರಿಕೊಂಡುಬಿಟ್ಟಿದ್ದರು. ಆಗ ಮುಚ್ಚಿದ ದಿನಸಿ ಅಂಗಡಿ ಮತ್ತ್ಯಾವತ್ತೂ ಪುನರಾರಂಭ ಆಗುವುದಿಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿರಲಿಕ್ಕಿಲ್ಲ, ಬಹುಶಃ. ಯಾರೇ ಆದರೂ ಮನೆ ಮಠ ಬಿಟ್ಟು ಎಷ್ಟು ದಿನ ಕಂಡವರ ಮನೆಯಲ್ಲಿರಲು ಸಾಧ್ಯ? ಸುಭದ್ರಮ್ಮ ಊರಿಗೆ ವಾಪಸು ಹೋಗುವ ಪ್ರಸ್ತಾಪ ಎತ್ತಿದರು. ಚಿಕ್ಕಿ ಉಭ ಶುಭ ಅನ್ನಲಿಲ್ಲ. ‘ಇರು..’ ಅನ್ನಲಿಲ್ಲ. ‘ಹೋಗು’ ಎನ್ನಲೂ ಇಲ್ಲ.
ಅನಿರೀಕ್ಷಿತವಾದ ಒಂದು ದುರ್ಘಟನೆ ಎಲ್ಲರ ಬದುಕಿನ ದಿಕ್ಕನ್ನೂ ಬದಲಾಯಿಸಿ ಬಿಟ್ಟಿತು. “ಇನ್ನು ಇಲ್ಲಿರಲ್ಲ ನಾನು. ನಂಕೈಲಿ ಓದೋಕಾಗಲ್ಲ” ಅಂದ ಶ್ರೀನಿವಾಸ. ಚಿಕ್ಕಿಯ ಮಗನನ್ನು ಪುಸಲಾವಣೆ ಮಾಡಿ ಹೊಳೆಗೆ ಕರೆದುಕೊಂಡು ಹೋಗಿದ್ದು ತಾನೇ ಎನ್ನುವ ಕಟುಸತ್ಯ ಅವನ ಎದೆಯಲ್ಲಿ ಬೆಂಕಿಯ ಚೆಂಡಿನಂತೆ ಸುಡುತ್ತಿತ್ತು, ಅದೆಷ್ಟೋ ವರ್ಷಗಳವರೆಗೆ. ಯಾವುದೋ ವಿಷಾದದ ಗಳಿಗೆಯಲ್ಲಿ ತನ್ನಮ್ಮನೊಂದಿಗೆ ಹಂಚಿಕೊಳ್ಳುವವರೆಗೆ. “ನಮ್ಮಿಂದ ಹೀಗಾಯ್ತು, ನಾವೇ ಮಾಡಿದ್ದು ಅನ್ನೋದೆಲ್ಲಾ ಒಂದು ನಿಮಿತ್ತ. ಹೀಗೊಂದು ಅಪಮೃತ್ಯು ಅವನ ಹಣೇಲಿ ಬರೆದಿದ್ರೆ ಯಾರೇನು ಮಾಡೋಕೆ ಸಾಧ್ಯ? ಇಷ್ಟಕ್ಕೂ ಅವನಿಗೆ ಕುಜ ರಾಹು ಸಂಧಿ ಇತ್ತಂತೆ. ಒಂದು ಶಾಂತಿ ಮಾಡ್ಸಿದ್ರೆ ಕಂಟಕ ಕಳೀತಿತ್ತು. ನಿನ್ನ ಚಿಕ್ಕಪ್ಪಂಗೆ ಇದರಲ್ಲೆಲ್ಲಾ ನಂಬಿಕೆ ಇಲ್ಲ. ಚಿಕ್ಕಿಗೆ ಗೊತ್ತಿಲ್ಲ..” ಮಗನನ್ನು ಸಂತೈಸಿದ್ದರು ಸುಭದ್ರಮ್ಮ. ‘ಯಾರು ಇದೆಲ್ಲಾ ಹೇಳಿದ್ದು?’ ಎಂದು ಕೇಳಬೇಕಾದ ಅಗತ್ಯ ಇರಲಿಲ್ಲ. ಶ್ರೀನಿವಾಸನ ಅಪ್ಪ ಮಂಜುನಾಥಯ್ಯ. ಸತ್ತ ಮೇಲೆ ನಾದಿನಿಯ ಮಗನ ಜಾತಕ ನೋಡಬೇಕೆಂದು ಅವರಿಗೆ ಯಾಕೆ ಅನಿಸಿತೋ ಪರಮಾತ್ಮ ಬಲ್ಲ.
ಒಂದು ಹಂತ ತಲುಪಬೇಕಾದ ಓದನ್ನು ಅಷ್ಟಕ್ಕೇ ನಿಲ್ಲಿಸಿ ಅಣ್ಣ ಹೊರಟ ಮೇಲೆ ತಂಗಿ ನಳಿನಿಗೆ ಚಿಕ್ಕಿಯ ಮನೆಯಲ್ಲಿರಲು ಮನಸ್ಸು ಒಪ್ಪಲಿಲ್ಲ. ಯಾವ ಕೆಲಸವನ್ನೂ ಮಾಡದೆ ಬೆಪ್ಪುಕಟ್ಟಿ ಹೋದಂತೆ ಮೂಲೆ ಸೇರಿದ್ದ ತಂಗಿ ಇನ್ನು ಈ ಹುಡುಗಿಯರ ನಿಗಾ ನೋಡಿಕೊಂಡು ಹೊತ್ತಿಗೆ ಸರಿಯಾಗಿ ಸ್ಕೂಲಿಗೆ ಕಳಿಸುತ್ತಾಳೆ ಅನ್ನುವುದರಲ್ಲಿ ಸುಭದ್ರಮ್ಮನಿಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಅಣ್ಣನ ಜೊತೆ ತಂಗಿಯ ಓದೂ ಕೈದಾಯ್ತು. ಮಕ್ಕಳಿಬ್ಬರನ್ನೂ ಕರೆದುಕೊಂಡು ಸುಭದ್ರಮ್ಮ ಹಳ್ಳಿಗೆ ವಾಪಸಾದರು. ಹೊರಡುವ ಹೊತ್ತಿಗೆ ಆ ಮನೆಯಲ್ಲಿ ಒಂದು ಭಾವಪೂರ್ಣ ವಿದಾಯ.
ಇದನ್ನೂ ಓದಿ : ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ
“ಭಾವಾ, ಅವಳ ಮೇಲೆ ಒಂದು ಕಣ್ಣಿಟ್ಟಿರಿ. ಅವಳ ಪರಿಸ್ಥಿತಿ ನೋಡಿದ್ರೆ ಕೈಯಾರೆ ಜೀವ ತೆಕ್ಕಂತಾಳಾ ಅಂತ ನಂಗೆ ಅನುಮಾನ. ಹೋದೋರ ಜೊತೆ ಇದ್ದೋರೂ ಹೋಗೋಕೆ ಸಾಧ್ಯಾನಾ? ಭೂಮಿ ಮೇಲೆ ಅವನ ಋಣ ಇಷ್ಟೇ ಇತ್ತು ಅಂತ..” ಗೊಳೋ ಎಂದು ಅತ್ತುಬಿಟ್ಟರು ಸುಭದ್ರಮ್ಮ, ತಂಗಿಯ ಬಾಳಲ್ಲಿ ಧುತ್ತನೆ ಎದುರಾದ ಈ ದುರ್ಗತಿ ಕಂಡು.
“ನಾನಿದೀನಿ, ನೋಡ್ಕಂತೀನಿ. ನೀವು ಹೋಗ್ಬನ್ನಿ..” ಉಸುರಿದ್ದರು ಚಿಕ್ಕಪ್ಪ.
“ಹೋಗ್ತೀಯನೇ? ಹೊಗ್ತೀಯನೇ? ಇರೇ..” ಪ್ರಾಣಪ್ರಿಯಳಂತಿದ್ದ ಹಿರಿಯಮ್ಮನ ಮಗಳ ಕೈ ಹಿಡಿದು ಜೋರಾಗಿ ಅತ್ತಿದ್ದಳು ಶಾಲಿನಿ.
“ಅಳ್ಬರ‍್ದು ಕಂದಾ, ಇದೊಂದು ಪರೀಕ್ಷೆ ಅಂತ ಗಟ್ಟಿಯಾಗಿ ನಿಲ್ಬೇಕು. ನಿನ್ನಮ್ಮ ಈಗ ನಿನ್ನ ಮಗಳು. ನೀನು ಅಮ್ಮ..” ಸಾಂತ್ವನಿಸಿದ್ದರು ಸುಭದ್ರಮ್ಮ. ಹದಿನಾಲ್ಕು ವರ್ಷದ ಹುಡುಗಿ ತನ್ನಮ್ಮನಿಗೆ ಅಮ್ಮ. ಈ ಮಾತು ಸತ್ಯವಾಗಿದ್ದು ಇನ್ನೊಂದು ಅಚ್ಚರಿ. ‘ಅಸ್ತು, ಅಸ್ತು’ ಅಂದಿತಾ ವಾಸ್ತುದೇವತೆ? ಇರಬಹುದೇನೋ.
ಹಣಕ್ಕೆ ಬಡತನವಿದ್ದರೇನು, ಗುಣಕ್ಕೆ ಅರಕೆಯಿಲ್ಲದ ಮನೆ. ಎಷ್ಟೆಲ್ಲಾ ಸುಖ ಸಂತೋಷಗಳನ್ನು ಮೊಗೆಮೊಗೆದು ಕೊಟ್ಟಿದ್ದ ಮನೆ. ಚಿಕ್ಕಿಯ ಪ್ರೀತಿ, ಶಾಲಿನಿಯ ಸ್ನೇಹ, ಇನ್ನಿಲ್ಲವಾದ ಅಣ್ಣನ ವಾತ್ಸಲ್ಯದ ಜೊತೆಗೆ ಕೈಕೈ ಹಿಡಿದು ಪೇಟೆ ಸುತ್ತಿದ ಹುಡುಗಿಯರ ಸಡಗರ, ಜಾತ್ರೆಯ ದಿನಗಳ ಉತ್ಸಾಹ. ಒಟ್ಟಿಗೆ ಓದುತ್ತಿದ್ದ, ಬರೆಯುತ್ತಿದ್ದ ಗಳಿಗೆಗಳಿಗೆ ಶಾಶ್ವತವಾದ ವಿದಾಯ. ಯಾವ ಗಳಿಗೆಗಳೂ ಈ ಬದುಕಿನಲ್ಲಿ ಶಾಶ್ವತವಲ್ಲ ಎನ್ನುವಂತಾದ್ದೇನೋ ಅನಿಸತೊಡಗಿ, ನೆನಪುಗಳು ಗಿಟಿಗಿರಿದು ತುಂಬಿಕೊಂಡ ತಲೆ ಧಿಮ್ಮೆಂದು ಭಾರವಾಗುತ್ತಾ, ‘ಕೋಡಂಗಿ..’ಎಂದು ಚಿಕ್ಕಿಯ ಕೈಲಿ ಮುದ್ದಿನ ಬೈಗುಳ ಕೇಳಿಸಿಕೊಂಡವನು ಗೋಡೆಯ ಮೇಲಿನ ಪಟದಲ್ಲಿ ಮಾತ್ರಾ ಜೊತೆಯಾಗಿ ಉಳಿದುಕೊಂಡ ಸತ್ಯವನ್ನು ಅರಗಿಸಿಕೊಳ್ಳುತ್ತಾ, ಶಾಲಿನಿಯ ಕಡೆ ತಿರುತಿರುಗಿ ನೋಡುತ್ತಾ, ಮನೆಯ ಮೆಟ್ಟಿಲಿಳಿದು ತನ್ನವರನ್ನು ಹಿಂಬಾಲಿಸಿದ್ದಳು ನಳಿನಿ.
*
ಕಷ್ಟದ ಮರೆಯಲ್ಲಿ ಸುಖ, ಸುಖದ ಮರೆಯಲ್ಲಿ ಕಷ್ಟ ಅಡಗಿ ಕೂತಿರುತ್ತದೆಯಾ? ಹಗ್ಗವೆಂದುಕೊಂಡಿದ್ದು ಹಾವಾಗಿ, ಹಾವು ಹಗ್ಗವಾಗಿ, ಕಾರ್ಗತ್ತಲ ದಾರಿಯ ಕೊನೆಯಲ್ಲಿ ಬೆಳಕಿನ ಕ್ಷೀಣ ಕಿರಣ ಗೋಚರಿಸಿತು. ಅಷ್ಟಾಗುವಾಗ ಚಿಕ್ಕಪ್ಪ ನೆಲ ಕಚ್ಚಿದ್ದರು. ಅಂಗಡಿ ನಡೆಸುವ ಯಾವ ಉಮೇದೂ ಉಳಿದುಕೊಂಡಿರದೆ ಬಾಗಿಲು ಮುಚ್ಚಿಕೊಂಡಿತ್ತು ಅಂಗಡಿ. ವ್ಯಾಪಾರಕ್ಕಿಟ್ಟಿದ್ದ ದಿನಸಿ ಸಾಮಗ್ರಿಗಳು ಮನೆಗೆ ಬಂದಿದ್ದುವು. ತತ್ಕಾಲದ ಗುಜರಾಣಿ ಕಳೆಯಲು ಸಹಾಯಕವಾಗಿದ್ದುವು. ನಳಿನಿಯ ನಿರ್ಗಮನದ ಬೆನ್ನ ಹಿಂದೆ ಶಾಲಿನಿಯೂ ಸ್ಕೂಲಿಗೆ ನಮಸ್ಕಾರ ಹೇಳಿದ್ದಳು. ಮನೆಯ ಕೆಲಸಕಾರ್ಯಗಳಲ್ಲಿ ಅಪ್ಪನ ಜೊತೆ ಕೈ ಜೋಡಿಸುತ್ತಾ, ಕುಸಿದು ಹೋಗಿದ್ದ ಅಮ್ಮನಿಗೆ ಆಸರೆಯಾಗುತ್ತಾ, ತೆವಳುತ್ತಲಾದರೂ ಸಾಗುತ್ತಿತ್ತು ಬದುಕಿನ ಬಂಡಿ. ಇಷ್ಟರಲ್ಲಿ ಇನ್ನೊಂದು ಕುತ್ತ ಬಂದೆರಗಿತು. ಮೂರು ತಿಂಗಳಿಂದ ಮನೆಬಾಡಿಗೆ ಕಟ್ಟಲಾಗದೆ ಕೈ ಸೋತಿದ್ದ ಚಿಕ್ಕಪ್ಪನೊಡನೆ ಮನೆ ಬಿಡಬೇಕೆಂದು ಮನೆಯೊಡೆಯ ತಗಾದೆ ತೆಗೆದ.
ಲೋಕದ ಕಣ್ಣಿನಲ್ಲಿ ಇದು ಸಹಜ. ಪುಗಸಟ್ಟೆ ಯಾರಾದರೂ, ಯಾರಿಗಾದರೂ, ಯಾಕೆ ಸಹಾಯ ಮಾಡುತ್ತಾರೆ? ಎಷ್ಟು ದಿನ ಮಾಡುತ್ತಾರೆ? ಆ ನಿರೀಕ್ಷೆಯೇ ಸರಿಯಾದ್ದಲ್ಲ. ‘ಅಯ್ಯೋ..’ ಅನ್ನುವ ಕನಿಕರ ದೀರ್ಘಕಾಲ ಬಾಳುವುದಿಲ್ಲ. ಅದೇನಿದ್ದರೂ ಅಲ್ಪಾಯು. ಶಾಂತಿಚಿಕ್ಕಿಯಾಗಲೀ, ಚಿಕ್ಕಪ್ಪನಾಗಲೀ, ಈ ಬಗ್ಗೆ ಸಣ್ಣದೊಂದು ಸುಳಿವು ಸೂಚನೆ ಕೊಟ್ಟಿದ್ದರೂ ಸಹಾಯಕ್ಕೆ ಧಾವಿಸುತ್ತಿದ್ದರು ಮಂಜುನಾಥಯ್ಯ. ಅವರ ಕಿವಿಯವರೆಗೆ ಯಾವ ಸುದ್ದಿಯೂ ತಲುಪಲಿಲ್ಲ. ಹಾಗೆಂದು ಷಡ್ಡಕನ ಸಂಸಾರಕ್ಕೆ ಕೈಲಾದ ಸಹಾಯ ಮಾಡಲು ಅವರು ಹಿಂದೆಗೆದಿರಲಿಲ್ಲ. ತಮ್ಮಿಂದ ಸಾಧ್ಯವಾದುದನ್ನು ನಿರ್ವಂಚನೆಯಿಂದ ಮಾಡಿದ್ದರು, ಮಾಡುತ್ತಿದ್ದರು. ಸಾಧ್ಯವಾಗಿದ್ದು ಅಂದರೆ ಏನು? ತಾವು ಬೆಳೆದ ಅಕ್ಕಿಯನ್ನೋ, ತರಕಾರಿಯನ್ನೋ ಮೂಟೆಗಟ್ಟಲೆ ತಂದುಕೊಟ್ಟು ಮಾತಾಡಿಸಿಕೊಂಡು ಹೋಗುವ ಸೌಜನ್ಯ. ಚಿಕ್ಕಪ್ಪ ಮನೆ ಬಿಡಲೇಬೇಕಾದ ಪರಿಸ್ಥಿತಿ ಬಂತು. ವರ್ಷಾವರ್ಷ ಬಾಡಿಗೆ ಏರಿಸದೆ, ಮನೆ ತಮ್ಮದೆಂಬ ಹಕ್ಕುದಾರಿಕೆ ತೋರಿಸದೆ, ಸ್ವಂತ ಮನೆ ಎನ್ನುವಂತಾಗಿದ್ದ ಬಾಡಿಗೆ ಮನೆ. ನವವಧುವಾಗಿದ್ದ ಚಿಕ್ಕಿ ಬಲಗಾಲಿಟ್ಟು ಒಳಗೆ ಪ್ರವೇಶಿಸಿದ ಮನೆ. ಅವರಿಬ್ಬರ ಮಟ್ಟಿಗೆ ಆ ಮನೆಯಲ್ಲಿ ಅದ್ಯಾವ್ಯಾವ ಮಧುರ ನೆನಪುಗಳು ಜಮೆಯಾಗಿದ್ದುವೋ ಅವರಿಗೇ ಗೊತ್ತು. ಮತ್ತು ಅದಕ್ಕೆ ಸಾಕ್ಷಿಯಾಗಿದ್ದ ಮನೆಗೆ ಗುಟ್ಟು ಬಿಟ್ಟುಕೊಡಲು ಬರುವಂತಿದ್ದಿದ್ದರೆ ಗೊತ್ತು. ಆಯ್ತು, ಎಲ್ಲಾ ಮುಗಿದು ಹೋಯ್ತು ಅಂದುಕೊಂಡಿತ್ತಂತೆ ಕುಟುಂಬ.
ಇದನ್ನೂ ಓದಿ : Literature: ಅಚ್ಚಿಗೂ ಮೊದಲು; ಕರ್ಕಿ ಕೃಷ್ಣಮೂರ್ತಿಯವರ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಕೃತಿ ಜೂನ್ 26ಕ್ಕೆ ಬಿಡುಗಡೆ
ಇಲಿ ಪಾಷಾಣವೋ, ಮತ್ತೊಂದೋ ಒಂದಿಷ್ಟು ವಿಷ ಖರೀದಿಸಿ ತಂದು ಮೂರು ಜನರೂ ಪ್ರಾಣ ಕಳೆದುಕೊಳ್ಳಬೇಕೆಂಬ ಚಿಕ್ಕಪ್ಪನ ನಿರ್ಧಾರಕ್ಕೆ ಎಲ್ಲರೂ ಸಮ್ಮತಿಸಿದ್ದರಂತೆ. ಹೀಗಿರುವಾಗ, ಹೀಗೊಂದು ಪದಪ್ರಯೋಗ ಬಂದಾಗ ಕತೆಗೊಂದು ತಿರುವು ದೊರಕುತ್ತದೆ ಎಂದು ಯಾರಿಗೆ ಗೊತ್ತಿಲ್ಲ? ಅದು ಆಗಿದ್ದೂ ಹಾಗೇ.. ಈ ಕುಟುಂಬದ ನಿಕಟವರ್ತಿಯೊಬ್ಬರು, ಹಾಗೆ ಚಿಕ್ಕಪ್ಪನಿಗೆ ಸಲಿಗೆಯ ಗೆಳೆಯರು ಬೇಕಾದಷ್ಟಿದ್ದರು. ಅಂಗಡಿಯಿಂದ ಕಡ ತೆಗೆದುಕೊಂಡು ಹೋಗಿ ತಿಂಗಳ ಮೊದಲಲ್ಲಿ ತೀರಿಸುತ್ತಿದ್ದ ಸಂಬಳದ ಜನ, ಕೂತು ಹರಟೆ ಕೊಚ್ಚಲು ಬಂದು ಅರ್ಧ, ಗಿರ್ಧ ಕಾಫಿಗೆ ಭಾಜನರಾಗುತ್ತಿದ್ದ ಜನ, ವರ್ಷಗಟ್ಟಲೆಯ ವ್ಯವಹಾರದಿಂದ ಬಳಕೆಯಾಗಿದ್ದ ಜನ, ಇಂತವರೊಬ್ಬರು ಒಂದು ಪ್ರಸ್ತಾಪ ಹಿಡಿದುಕೊಂಡು ಬಂದರು. ಅವರು ಹತ್ತಿರದಿಂದ ಬಲ್ಲ ವಿಧುರ ಒಬ್ಬರಿದ್ದಾರೆ. ಐದು, ಮೂರು ವರ್ಷದ ಎರಡು ಗಂಡುಮಕ್ಕಳಿದ್ದಾವೆ. ಮೂರನೆಯ ಹೆರಿಗೆಯಲ್ಲಿ ಹೆಂಡತಿ ತೀರಿಕೊಂಡು, ‘ನನಗೆ ಹೆಣ್ಣಿನ ಸುಖ ಆಗಿ ಬರುವುದಿಲ್ಲ’ ಎಂದು ಗಟ್ಟಿಯಾಗಿ ನಂಬಿಕೊಂಡವರು. ಹೆತ್ತವರ ಒತ್ತಾಯಕ್ಕೆ ಮಣಿದು ಇನ್ನೊಂದು ಮದುವೆಗೆ ಸಮ್ಮತಿಸಿದ್ದಾರೆ. ‘ನಿಮ್ಮ ಮಗಳನ್ನು ಕೊಡುವುದಾದರೆ ನೋಡಿ, ವಿಚಾರ ಮಾಡಿ’ ಎನ್ನುವ ಪ್ರಸ್ತಾಪ. ‘ವಯಸ್ಸು?’ ಅಂದರೆ ದೌತ್ಯ ವಹಿಸಿಕೊಂಡು ಬಂದವರು ಉಗುಳು ನುಂಗಿದ್ದರು. ಕರಾರುವಾಕ್ಕಾಗಿ ಶಾಲಿನಿಯ ಎರಡರಷ್ಟು ವಯಸ್ಸು. ಮತ್ತೆ ನಾಲ್ಕು ಸೇರಿಸಬೇಕೆಂದು ಹೇಳಲು ಅವರಿಗೆ ಬಾಯಿ ಬಂದಿರಲಿಲ್ಲ. “ನಿಂತ ಕಾಲಲ್ಲಿ ಉತ್ರ ಕೊಡೋಕಾಗಲ್ಲ. ನಂಗೆ ಸ್ವಲ್ಪ ಸಮಯ ಬೇಕು” ಹೇಳಿ ಕಳಿಸಿದ್ದರು ಶಾಲಿನಿಯ ಅಪ್ಪ.
(ಈ ಕಾದಂಬರಿಯ ಪೂರ್ತಿ ಓದಿಗೆ ಮತ್ತು ಖರೀದಿಗೆ ಸಂಪರ್ಕಿಸಿ : 9019190502 )