Translated Story: ನೆರೆನಾಡ ನುಡಿಯೊಳಗಾಡಿ; ಅವಳು ನೀರಿನ ಮೇಲೆ ನಡೆಯುವ ಆಸೆ ಹೊಂದಿದ್ದಳು

Story of Nayyar Masood : ‘ಇನ್ನೇನು ಕೆಲವೇ ಹೊತ್ತಿನಲ್ಲಿ ನೀನು ಗಾಜು ತಯಾರಿಸುವ ಊರಿಗೆ ತಲುಪಿಬಿಡುತ್ತಿಯಾ. ಅಲ್ಲಿಂದ ಮುಂದೆ ಹೋಗಲು ಗಾಡಿ ಸಿಗುತ್ತೆ. ಸಿಗದಿದ್ದರೆ ನನ್ನ ಹೆಸರು ಹೇಳು'. ಅವನು ರುಮಾಲಿನಲ್ಲಿ ಕಟ್ಟಿರುವ ಹಣದಿಂದ ಸ್ವಲ್ಪ ತೆಗೆದು ನನ್ನ ಕಿಸೆಗೆ ಹಾಕಿದ.

Translated Story: ನೆರೆನಾಡ ನುಡಿಯೊಳಗಾಡಿ; ಅವಳು ನೀರಿನ ಮೇಲೆ ನಡೆಯುವ ಆಸೆ ಹೊಂದಿದ್ದಳು
ಉರ್ದು ಲೇಖಕ ನಯ್ಯರ್ ಮಸೂದ್ ಮತ್ತು ಅನುವಾದಕ ಅದೀಬ್ ಅಖ್ತರ್
ಶ್ರೀದೇವಿ ಕಳಸದ | Shridevi Kalasad

|

Jul 01, 2022 | 12:17 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಬೀಬಿಯಂತಹ ಮಹಿಳೆ ಇಂಥವಳ ತಾಯಿಯಾಗಲು ಹೇಗೆ ಸಾಧ್ಯವೆಂದು ಯೋಚಿಸಿ ದಂಗಾಗಿ ಹೋದೆ. ಅದೇ ಸಮಯದಲ್ಲಿ ರ‍್ಯಾ ತನ್ನ ಮೈಯನ್ನು ಸ್ವಲ್ಪ ಅಲುಗಾಡಿಸಿದಳು. ಅವಳ ದೋಣಿ ನಮ್ಮಿಂದ ದೂರವಾಗತೊಡಗಿತು. ಸರೋವರದ ಮಧ್ಯದಲ್ಲಿ ಹೋದ ಬಳಿಕ ದೋಣಿ ತಡವರಿಸುತ್ತ ನಿಂತುಕೊಂಡಿತು. ತನ್ನ ಎಡಗಡೆ, ಬಲಗಡೆ ಹಾಗೂ ಎದುರಿಗೆ ಹರಡಿರುವ ಸರೋವರವನ್ನು ರ‍್ಯಾ ನೋಡಿದಳು. ದೋಣಿ ಮತ್ತೊಮ್ಮೆ ತಡವರಿಸತೊಡಗಿದಾಗ ರ‍್ಯಾ ತನ್ನ ಮೈಯನ್ನು ನೆಟ್ಟಗೆ ಮಾಡಿಕೊಂಡಳು. ಇದರಿಂದ ದೋಣಿ ಸಮತೋಲನ ಪಡೆಯಿತು. ನಾನು ಮತ್ತೊಮ್ಮೆ ರ‍್ಯಾಳನ್ನು ಎವೆಯಿಕ್ಕದೆ ನೋಡಿದೆ. ನಾನೀ ರೀತಿ ನೋಡುತ್ತಿರುವುದರಿಂದ ಅವಳು ಬೇಸರಗೊಳ್ಳಬಹುದೆಂಬ ಅನುಮಾನ ಸಹ ಕಾಡಿತು. ಆದರೆ ಅವಳ ದೃಷ್ಟಿ ನನ್ನ ಕಡೆ ಇರಲಿಲ್ಲ. ದಡದ ಪಕ್ಕದಲ್ಲಿ ಅಲುಗಾಡದೆ ನಿಂತಿರುವ ನೀರನ್ನು ಗಮನವಿಟ್ಟು ಅವಳು ನೋಡುತ್ತಿದ್ದಳು, ಜೀವನದಲ್ಲಿ ಮೊದಲ ಬಾರಿ ನೋಡುತ್ತಿರುವಂತೆ.

ಕಥೆ : ಶೀಷಾ ಘಾಟ್ | ಮೂಲ : ನಯ್ಯರ್ ಮಸೂದ್ | ಕನ್ನಡಕ್ಕೆ : ಅದೀಬ್ ಅಖ್ತರ್ | ಸೌಜನ್ಯ : ದೇಶಕಾಲ 

(ಭಾಗ 4)

ಅವಳು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ದೋಣಿಯ ಇನ್ನೊಂದು ತುದಿಗೆ ಬಂದಳು. ಆ ತುದಿ ಚಪ್ಪರದ ಕಡೆ ಮುಖ ಮಾಡಿತ್ತು. ಸ್ವಲ್ಪ ಬಗ್ಗಿ ಮತ್ತೊಮ್ಮೆ ನೀರನ್ನು ನೋಡಿದಳು. ಆಮೇಲೆ ಅವಳು ಮೈಯನ್ನು ನೆಟ್ಟಗೆ ಮಾಡಿಕೊಂಡಳು. ಅನಂತರ ಅವಳು ಶಾಂತಿಯಿಂದ ನೀರಿನ ಮೇಲ್ಮೈ ಮೇಲೆ ಕಾಲಿಟ್ಟಳು, ಒಣ ಭೂಮಿಯ ಮೇಲೆ ಕಾಲಿಡುವಂತೆ. ಆಮೇಲೆ ಅವಳ ಎರಡನೆ ಕಾಲು ಸಹ ದೋಣಿಯಿಂದ ಹೊರಬಂತು. ಅವಳು ನೀರಿನ ಮೇಲೆ ಮೊದಲನೆಯ ಹೆಜ್ಜೆ ಇಟ್ಟು, ಬಳಿಕ ಎರಡನೆ ಹೆಜ್ಜೆಯಿಟ್ಟಳು.

‘ನೀರಿನ ಮೇಲೆ ನಡೆಯುತ್ತಿದ್ದಾಳೆ’ ನನ್ನನ್ನು ನಾನೇ ಆಶ್ಚರ್ಯದಿಂದ ಭಯದಿಂದ ಹೇಳಿಕೊಂಡೆ. ಅನಂತರ ಅಲ್ಲಿಂದ ಸ್ವಲ್ಪ ದೂರದಲ್ಲಿ ಕುಳಿತು ಹೊಗೆಸೊಪ್ಪು ಸೇವಿಸುತ್ತಿರುವ ಜಹಾಜ್‌ನ ಕಡೆ ತಿರುಗಿ ನೋಡಿದೆ. ಅನಂತರ ಕೂಡಲೇ ಸರೋವರದ ಕಡೆ ಗಮನ ಹರಿಸಿದೆ.

ರ‍್ಯಾಳ ದೋಣಿ ಖಾಲಿಯಾಗಿತ್ತು. ದೋಣಿ ಮತ್ತು ಚಪ್ಪರದ ಮಧ್ಯದಲ್ಲಿ ನೀರಿನ ಹೊರತು ಇನ್ನೇನು ಕಾಣಲಿಲ್ಲ. ನೀರಿನ ಮೇಲೆ ಅಲೆಗಳಿದ್ದವು. ಕೆಲವು ಕ್ಷಣದ ನಂತರ ಅಲೆಗಳ ಮಧ್ಯ ರ‍್ಯಾಳ ತಲೆ ಮೇಲೆದ್ದಿತ್ತು. ಅವಳು ನೀರಿನ ಮೇಲೆ ಅನೇಕ ಬಾರಿ ಹಸ್ತಗಳನ್ನು ಹೊಡೆದಳು. ಸರೋವರದ ನೀರಿನ ಮೇಲ್ಮೈಯನ್ನು ಹಿಡಿಯುತ್ತಿರುವಂತೆ. ನೀರೆರಚುವ ಶಬ್ದ ಹೆಚ್ಚಾಗುತ್ತಿರುವಾಗಲೇ ಜಹಾಜ್ ರ‍್ಯಾಳಿಗೆ ತಿಳಿ ಹೇಳಿದ.

‘ನೀರೊಂದಿಗೆ ಆಟವಾಡಬೇಡ ರ‍್ಯಾ’

ಇದನ್ನು ಹೇಳಿದ ನಂತರ ಜಹಾಜ್ ಕೆಮ್ಮತೊಡಗಿದ. ಆ ಕೂಡಲೇ ನಾನು ಅವನನ್ನು ನೋಡಿದೆ. ಅವನ ಸ್ಥಿತಿಯನ್ನು ಕಂಡರೆ ಇನ್ನೇನು ಸತ್ತೇ ಹೋಗುತ್ತಾನೆಂದೆನಿಸಿತು.

ಮತ್ತೊಮ್ಮೆ ನಾನು ಸರೋವರದ ಕಡೆ ನೋಡಿದೆ. ಸರೋವರದಲ್ಲಿ ಅಲೆಗಳಿದ್ದವು. ಅವಳು ನೀರಿಂದ ಮೇಲೆದ್ದಳು. ಮತ್ತೆ ಒಳಹೋದಳು. ನನ್ನ ದೃಷ್ಟಿ ಅವಳ ಕಣ್ಣುಗಳತ್ತ ಹೋಯಿತು. ನಾನು ದಿಢೀರನೆ ಎದ್ದು ನಿಂತುಕೊಂಡೆ.

‘ಜಹಾಜ್’ ನಾನು ಜೋರಾಗಿ ಕೂಗಿದೆ. ನನ್ನ ನಾಲಿಗೆಯಲ್ಲಿ ಗಂಟು ಬಿದ್ದುಕೊಂಡವು.

ನಾನು ಜಹಾಜ್ ಕಡೆ ಓಡಿದೆ. ಅವನ ಕೆಮ್ಮು ನಿಂತಿತ್ತು ಆದರೆ ಉಸಿರಾಟ ಹೆಚ್ಚಾಗಿತ್ತು. ಅವನು ಒಂದು ಕೈಯಿಂದ ಎದೆಯನ್ನು ಸವರಿಕೊಳ್ಳುತ್ತಿದ್ದ, ಇನ್ನೊಂದು ಕೈಯಿಂದ ಕಣ್ಣುಜ್ಜಿಕೊಳ್ಳುತ್ತಿದ್ದ. ಮೆಟ್ಟಲು ಹತ್ತಿ ಅವನ ಎರಡೂ ಕೈಗಳನ್ನು ಹಿಡಿದು ಜೋರಾಗಿ ಅಲುಗಾಡಿಸಿದೆ.

‘ರ‍್ಯಾ !’ ನನ್ನ ಬಾಯಿಂದ ಹೊರಬಿತ್ತು.

ಅವನು ತನ್ನ ಹಳದಿ ಕಣ್ಣಿನಿಂದ ನನ್ನ ಕಡೆ ಸ್ವಲ್ಪ ಸಮಯದವರೆಗೆ ನೋಡಿದ ಅನಂತರ ಅವನ ಕಣ್ಣಿನಲ್ಲಿ ಮಿಂಚಿನಂತಹುದು ಹೊಳೆಯಿತು. ಆ ಸಮಯದಲ್ಲಿ ನನ್ನ ಕೈಯಿಂದ ಪಕ್ಷಿ ತಪ್ಪಿಸಿಕೊಂಡಿದೆಯೆಂದೆನಿಸಿತು. ಚಪ್ಪರದಿಂದ ಧೂಳು ಹಾರಿಸುತ್ತ ಜಹಾಜ್ ಕೆಳಗಿಳಿದು ದಡದ ಹತ್ತಿರ ಬಂದ.

ರ‍್ಯಾಳ ದೋಣಿ ಈಗ ಸುತ್ತಾಡುತ್ತಿತ್ತು. ಜಹಾಜ್, ದೋಣಿಯನ್ನು ನೋಡಿದ. ಆಮೇಲೆ ಅವನು ನೀರನ್ನು ನೋಡಿದ. ಇದಾದ ನಂತರ ಅವನು ಯಾವುದೋ ಅಪರಿಚಿತ ಭಾಷೆಯ ಒಂದು ಶಬ್ದವನ್ನು ಜೋರಾಗಿ ಕಿರಿಚಿಕೊಂಡು ಹೇಳಿದ. ಬೀಬಿ ಸಹ ಆ ಶಬ್ದವನ್ನೇ ಮತ್ತಷ್ಟು ಜೋರಾಗಿ ಹೇಳಿದಳು. ಅನಂತರ ದೂರದೂರದಿಂದ ಇದೇ ಶಬ್ದ ಕೇಳಿಸಿತು.

ಈ ಮಧ್ಯ ಬೀಬಿ ಕೂಗಿ ಹೇಳಿದಳು ‘ದುಃಖಿಯೇ?’

‘ರ‍್ಯಾ !’ ಜಹಾಜ್ ಎಷ್ಟೊಂದು ಜೋರಾಗಿ ಕೂಗಿದನೆಂದರೆ ಇಡೀ ಸರೋವರದ ನೀರು ನಡುಗಿ ಹೋಯಿತು. ದೂರದಿಂದ ಹಾಗೂ ಹತ್ತಿರದಿಂದ ಬರುತ್ತಿರುವ ಧ್ವನಿಗಳು ಜಹಾಜ್ ಹೇಳಿದ್ದನ್ನೇ ಹೇಳುತ್ತಿದ್ದವು. ಬಲೆಗಳನ್ನು ಎಳೆಯುತ್ತ ಬೆಸ್ತರು ದಡದ ಕಡೆ ಓಡುತ್ತಿರುವುದನ್ನು ನಾನು ನೋಡಿದೆ.

ಚಪ್ಪರವನ್ನು ಸಮೀಪಿಸುವುದಕ್ಕೆ ಮುನ್ನವೇ ಎಷ್ಟೋ ಮಂದಿ ಬೆಸ್ತರು ನೀರಿಗಿಳಿದರು. ಜಹಾಜ್ ಸನ್ನೆಯ ಮೂಲಕ ನೀರು ಮೇಲೆ ಹಾರಿದ ಸದ್ದು ಎಡಗಡೆಯಿಂದಲೇ ಬಂದಿತು ಎಂದು ವಿವರಿಸಿದ. ನಾನು ಗಮನಿಸಿದೆ, ನಾಯಿ ಸಹ ಬೊಗಳುತ್ತಾ ಆ ಕಡೆಯೇ ಓಡುತ್ತಿತ್ತು. ನಾಯಿಯನ್ನು ನೋಡಿ ಛಾವಣಿ ಮೇಲಿರುವ ಎರಡು ಬಣ್ಣದ ಮೈಯ ಬೆಕ್ಕು ನಿಂತುಕೊಂಡು ಬೆನ್ನನ್ನು ಎತ್ತರ ಮಾಡಿಕೊಂಡಿತ್ತು.

ಆಮೇಲೆ ನೋಡಿದೆ. ಬೀಬೀ ಹೆಚ್ಚು ಕಡಿಮೆ ಬೆತ್ತಲೆ ಬೆತ್ತಲೆಯಾಗಿ ಮನುಷ್ಯರುಚಿ ಕಂಡಿರುವ ಕಜ್ಜಿ ಮೀನಂತೆ ನೀರನ್ನು ಸೀಳುತ್ತ ಬಂದಳು. ಅವಳ ದೇಹ ರ‍್ಯಾಳ ದೋಣಿಯನ್ನು ಅಪ್ಪಳಿಸಿತು. ಬೀಬಿ ಮುಳುಗು ಹಾಕಿ ದೋಣಿಯ ಇನ್ನೊಂದು ತುದಿ ಬಳಿ ಎದ್ದೇಳಿದಳು. ಆಮೇಲೆ ಅವಳು ಬೆಸ್ತರಿಗೆ ಸನ್ನೆಗಳಲ್ಲಿ ಬೇಗಬೇಗನೆ ಏನೇನೋ ಹೇಳಿ ಮತ್ತೆ ಮುಳುಗು ಹಾಕಿದಳು.

ಸುದ್ದಿ ಹರಡಿ ಬೇರೆ ದಡಗಳಿಂದ ನಾವಿಕರು ಶೀಷಾ ಘಾಟ್ ಕಡೆ ದೋಣಿಗಳಲ್ಲಿ ಧಾವಿಸಿದರು. ಎಷ್ಟೋ ನಾವಿಕರು ರಸ್ತೆ ಮಧ್ಯದಿಂದಲೇ ನೀರಿಗೆ ಹಾರಿ ಈಜತೊಡಗಿದರು. ಈಗ ರ‍್ಯಾಳ ದೋಣಿಯಿಂದ ಚಪ್ಪರದವರೆಗೆ ಮತ್ತು ಚಪ್ಪರದಿಂದ ದೋಣಿಯವರೆಗೆ ನೀರಿನಲ್ಲಿ ತಲೆಗಳು ಮಾತ್ರ ಕಾಣುತ್ತಿದ್ದವು. ಸರೋವರದ ಕಿನಾರೆಗಳಲ್ಲಿ ಜನ ಸಂದಣಿ ಹೆಚ್ಚಾಗುತ್ತಲೆ ಹೋಯಿತು. ಪ್ರತಿಯೊಂದು ವಸ್ತು ಅಲುಗಾಡುತ್ತಿತ್ತು ಮತ್ತು ಎಲ್ಲಾ ಕಡೆಯೂ ಗಲಾಟೆಯಿತ್ತು. ಪ್ರತಿಯೊಬ್ಬರೂ ಏನೇನೋ ಹೇಳುತ್ತಿದ್ದರು. ಆದರೆ ಯಾರು ಏನು ಹೇಳುತ್ತಿದ್ದಾರೆಂದು ಅರ್ಥವಾಗುತ್ತಿರಲಿಲ್ಲ. ಕೊನೆಗೆ ಯಾರೋ ಜೋರಾಗಿ ಏನೋ ಹೇಳಿದಾಗ ಗಲಾಟೆ ಮತ್ತಷ್ಟು ಹೆಚ್ಚಾಗಿ ಕೂಡಲೇ ನಿಂತು ಹೋಯಿತು. ನೀರಲ್ಲಿರುವ ದೇಹಗಳು ಶಬ್ದ ಮಾಡದೆ ಈಜತೊಡಗಿದವು. ನಿಧಾನವಾಗಿ ಜನ ಒಂದು ಕಡೆ ಸೇರಿಕೊಂಡರು. ಎಲ್ಲರೂ ಮೌನವಾಗಿದ್ದರೆ ದೋಣಿಗಳ ಮೇಲಿರುವ ನಾಯಿಗಳು ಮಾತ್ರ ಬೊಗಳುತ್ತಿದ್ದವು.

ಅದೇ ಸಮಯದಲ್ಲಿ ನನಗನಿಸಿತು ಯಾರೋ ಬಂದು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ನೋಡಿದೆ ಜಹಾಜ್ ನನ್ನ ಹತ್ತಿರ ನಿಂತಿದ್ದ. ‘ನಡಿ’ ಅವನು ನನ್ನ ಕೈ ಅಲ್ಲಾಡಿಸಿ ಹೇಳಿದ. ಅವನು ಎಲ್ಲಿಗೆ ನಡೆಯಲು ಹೇಳುತ್ತಿದ್ದಾನೆಂದು ನನಗೆ ಅರ್ಥವಾಗಲಿಲ್ಲ. ಈಗ ಅವನು ನನ್ನನ್ನು ಎಳೆದುಕೊಂಡು ಕಟ್ಟಡದ ಕಡೆ ಹೊರಟ. ಹಿಂತಿರುಗಿ ಸರೋವರವನ್ನು ನೋಡುವಾಸೆಯಾಯಿತು. ಆದರೆ ಜಹಾಜ್ ನನ್ನ ಕೈಯನ್ನು ಮತ್ತೊಮ್ಮೆ ಅಲ್ಲಾಡಿಸಿದ. ನಾನು ಅವನ ಕಡೆ ನೋಡಿದೆ, ಅವನು ನನ್ನನ್ನೇ ನೋಡುತ್ತಿದ್ದ. ‘ನಡಿ’ ಮತ್ತೊಮ್ಮೆ ಅವನು ಹೇಳಿದ. ನಾವು ಮನೆಯ ಹಿಂದಿನ ಬಾಗಿಲಿನ ಹತ್ತಿರ ಬಂದೆವು. ಜಹಾಜ್ ಬಾಗಿಲು ತೆಗೆದ.

‘ಅವಳು ಸಿಕ್ಕಿದಳು’ ಅಂದ.

ಮನೆಯ ಹಿಂದೆ ಪಾಳು ಮೈದಾನವಿತ್ತು. ಮೈದಾನದ ಎಡಗಡೆಯಿರುವ ಕಿನಾರೆಯ ಕಡೆ ಸನ್ನೆ ಮಾಡಿದ ನಂತರ ಬೇಗಬೇಗನೆ ಹೇಳಿದ. ‘ಇನ್ನೇನು ಕೆಲವೇ ಹೊತ್ತಿನಲ್ಲಿ ನೀನು ಗಾಜು ತಯಾರಿಸುವ ಊರಿಗೆ ತಲುಪಿಬಿಡುತ್ತಿಯಾ. ಅಲ್ಲಿಂದ ಮುಂದೆ ಹೋಗಲು ಗಾಡಿ ಸಿಗುತ್ತೆ. ಸಿಗದಿದ್ದರೆ ನನ್ನ ಹೆಸರು ಹೇಳು’. ಅವನು ರುಮಾಲಿನಲ್ಲಿ ಕಟ್ಟಿರುವ ಹಣದಿಂದ ಸ್ವಲ್ಪ ತೆಗೆದು ನನ್ನ ಕಿಸೆಗೆ ಹಾಕಿದ.

ಅವನೊಂದಿಗೆ ಬಹಳಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುವ ಆಸೆಯಿತ್ತು. ಆಮೇಲೆ ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಂದ ಹೋಗಲು ನನಗೆ ಇಷ್ಟವಿಲ್ಲವೆಂದು ಹೇಳಬೇಕಾಗಿತ್ತು. ‘ನೀನೊಬ್ಬ ಮಾತ್ರ ಅವಳು ಮುಳುಗುತ್ತಿರುವುದನ್ನು ನೋಡಿವುದು. ಎಲ್ಲರೂ ಒಂದೊಂದು ವಿಷಯದ ಬಗ್ಗೆ ಕೆದಕಿ ಕೆದಕಿ ಕೇಳುತ್ತಾರೆ. ಬೀಬಿ ಸಹ ಎಲ್ಲರಿಗಿಂತ ಹೆಚ್ಚಾಗಿ ಕೇಳುತ್ತಾಳೆ. ಅವರೆಲ್ಲರಿಗೂ ಉತ್ತರಿಸುವ ಶಕ್ತಿ ನಿನ್ನಲ್ಲಿ ಇದೆಯೇ?’

ಅದೇ ಸಮಯದಲ್ಲಿ ಕಲ್ಪಿಸಿಕೊಂಡೆ: ಅನೇಕ ಮಂದಿ ಕಿವಿಯಲ್ಲಿ ಕುಂಡಲಿ ಹಾಕಿಕೊಂಡಿರುವ ಬೆಸ್ತರು, ಕೈಯಲ್ಲಿ ಕಡಗ ಧರಿಸಿಕೊಂಡಿರುವ ನಾವಿಕರು ಮತ್ತು ದಡದಲ್ಲಿ ಸೇರಿದ ನಾನಾ ಭಾಗದ ಜನರು ನನ್ನ ಸುತ್ತ ನಿಂತುಕೊಂಡಿದ್ದಾರೆ. ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಬೀಬಿ ನನ್ನನ್ನೇ ನೋಡುತ್ತಿದ್ದಾಳೆ. ಬೀಬಿಯನ್ನು ನೋಡಿದ ಕೂಡಲೇ ಎಲ್ಲರೂ ಮೌನ ಧರಿಸಿಕೊಳ್ಳುತ್ತಾರೆ. ಬೀಬಿ ಮುಂದೆ ನಡೆದು ನನ್ನ ಸಮೀಪ ಬರುತ್ತಾಳೆ. ನಡುಗುತ್ತಿರುವ ನನ್ನ ಮೈಯನ್ನು ನೋಡಿ ಜಹಾಜ್ ಹೇಳಿದ ‘ನನಗೆ ಸ್ವಲ್ಪ ಹೇಳು, ಏನಾದರೂ ಸರಿಯೇ, ಅವಳು ನೀರಲ್ಲಿ ಬಿದ್ದಳಾ?’

‘ಇಲ್ಲ’ ನಾನು ಕಷ್ಟಪಟ್ಟು ಹೇಳಿದೆ.

‘ಮತ್ತೆ ಅವಳೇ ತಾನಾಗಿ ಸರೋವರಕ್ಕೆ ಹಾರಿಬಿಟ್ಟಳಾ?’

‘ಇಲ್ಲ’ ಬಾಯಿಬಿಟ್ಟು ಹೇಳಿದೆ. ಆಮೇಲೆ ತಲೆಯಲ್ಲಾಡಿಸಿ ಸನ್ನೆಯಿಂದಲೂ ಸಹ.

ನನ್ನನ್ನು ಅಲುಗಾಡಿಸಿ ಹೇಳಿದ. ‘ಏನಾದರೂ ಹೇಳು ಬೇಗ’ ನನಗೆ ಗೊತ್ತಿತ್ತು ನಾನು ಬಾಯಿಂದ ಏನನ್ನೂ ಹೇಳಲಾರೆ ಎಂದು. ಅದಕ್ಕೆ ಕೈಯ ಸನ್ನೆಗಳ ಮೂಲಕ ಹೇಳಲು ಪ್ರಯತ್ನಪಟ್ಟೆ. ಅವಳು ನೀರಿನ ಮೇಲೆ ನಡೆಯುವ ಆಸೆ ಹೊಂದಿದ್ದಳೆಂದು ವಿವರಿಸಲು ಕೈಗಳಿಂದ ಸನ್ನೆಗಳನ್ನು ಮಾಡಿದೆ. ಆದರೆ ನನ್ನ ಕೈಗಳು ಮೇಲೇಳುತ್ತಿರಲಿಲ್ಲ. ನನಗಾಗ ಅನಿಸಿತು, ನನ್ನ ಸನ್ನೆಗಳು ಸಹ ತೊದಲತೊಡಗಿವೆ. ನಾನು ವ್ಯಕ್ತ ಮಾಡಬೇಕಾಗಿರುವುದನ್ನು ಸನ್ನೆ ಮೂಲಕವೂ ಮಾಡಲಾಗುತ್ತಿಲ್ಲ. ಜಹಾಜ್ ಮೆಲ್ಲನೆ ಕೇಳಿದ.

‘ಅವಳು ನೀರಿನ ಮೇಲೆ ನಡೆಯುತ್ತಿದ್ದಳೇನು?’

‘ಹೌದು’ ಕಷ್ಟಪಟ್ಟು ಹೇಳಿದೆ.

‘ಆಮೇಲೆ ಅವಳು ನೀರಲ್ಲೆ ಮುಳುಗಿಹೋದಳಾ?’

‘ಹೌದು’

‘ಅವಳು ನೀರಿನ ಮೇಲೆ ನಡೆದುಕೊಂಡು ಬೀಬಿ ಕಡೆ ಹೋಗುತ್ತಿದ್ದಳೇನು?’

‘ಇಲ್ಲ’

‘ಮತ್ತೆ, ನಮ್ಮ ಕಡೆ ಬರುತ್ತಿದ್ದಳೇನು?’

‘ಹೌದು’ ನಾನು ತಲೆಯಲ್ಲಾಡಿಸಿ ಸನ್ನೆಯಲ್ಲಿ ಹೇಳಿದೆ.

ಜಹಾಜ್ ತಲೆ ಬಗ್ಗಿಸಿದ ಮತ್ತು ನೋಡುನೋಡುತ್ತಿದ್ದಂತೆ ಮತ್ತಷ್ಟು ಮುದುಕನಾಗಿ ಹೋದ.

‘ಯಾವ ದಿನ ಅವಳ ತಲೆ ನೀರಿಂದ ಮೇಲೆ ಬಂದಿತ್ತೋ, ಆ ದಿನದಿಂದ ಅವಳನ್ನು ನಿತ್ಯ ನೋಡುತ್ತಿದ್ದೆ. ಈಗವಳು ಎಷ್ಟು ಬೆಳೆದಿದ್ದಾಳೆಂಬುದನ್ನು ನಾನು ಗಮನಿಸಿರಲಿಲ್ಲ.’

ಜಹಾಜ್ ಇಷ್ಟನ್ನು ಹೇಳಿದ. ಅವನಿಗೆ ಕೆಮ್ಮು ಬರುತ್ತಾ ಇದ್ದು ನಿಂತು ಹೋಯಿತು. ಅವನು ಮುದುಕನಾಗುತ್ತಿರುವುದನ್ನು ನೋಡುತ್ತ ಮೌನ ಧರಿಸಿಕೊಂಡೆ.

‘ಆಯಿತು, ನೀನು ಹೋಗು. ನಾನು ಅವರಿಗೆ ಏನಾದರೊಂದು ಹೇಳುತ್ತೇನೆ. ನೀನು ಮಾತ್ರ ಯಾರಿಗೂ ಏನೂ ಹೇಳಬೇಡ.’ ಅವನು ನನ್ನ ಭುಜದ ಮೇಲೆ ಕೈಯಿಟ್ಟು ಹೇಳಿದ.

ನಾನು ಯಾರಿಗಾದರೂ ಏನೆಂದು ಹೇಳಲಿ ಎಂದು ಯೋಚಿಸಿದೆ.

ಇಷ್ಟು ಹೊತ್ತು ನಾನು ದಡವನ್ನು ಮರೆತುಬಿಟ್ಟಿದ್ದೆ. ನನಗೆ ಮತ್ತೆ ಅದರ ನೆನಪಾಯಿತು. ಜಹಾಜ್ ಮೆಲ್ಲನೆ ತನ್ನ ಮುಖವನ್ನು ಮೈದಾನದ ಕಡೆ ಮಾಡಿದ. ನಾನು ಮೈದಾನದ ಕಡೆ ಹೆಜ್ಜೆ ಹಾಕಿದೆ ಅಷ್ಟರಲ್ಲೆ ಜಹಾಜ್ ಹೇಳಿದ. ‘ನಿನ್ನೆ ನಿನ್ನ ಅಪ್ಪ ಬಂದು ತನ್ನೊಂದಿಗೆ ನಿನ್ನನ್ನು ಕರೆದುಕೊಂಡು ಹೋಗಲು ಹೇಳಿದಾಗ ನಾನು ಇನ್ನಷ್ಟು ದಿನ ಕಾಯಲು ಹೇಳಿದೆ…’

ಅವನು ಕೆಮ್ಮತೊಡಗಿದ. ಅವನು ಬಾಗಿಲನ್ನು ಹಿಡಿದುಕೊಂಡು ಮೆಲ್ಲನೆ ಅದರ ಮರೆಗೆ ಹೋದ. ಅವನು ಬಾಗಿಲು ಮುಚ್ಚುವುದಕ್ಕೆ ಮುನ್ನವೇ ನಾನು ಅಲ್ಲಿಂದ ಹೊರಟು ನಿಂತೆ. ಹದಿನೈದು ಹೆಜ್ಜೆ ಹೋಗಿರಬಹುದು ಅಷ್ಟರಲ್ಲೆ ಅವನು ಹಿಂದಿನಿಂದ ಕೂಗಿದ. ನಾನು ಹಿಂತಿರುಗಿ ಅವನ ಕಡೆ ದೃಷ್ಟಿ ಬೀರಿದೆ. ಅವನು ಮೆಲ್ಲ-ಮೆಲ್ಲನೆ ನನ್ನ ಕಡೆ ಹೆಜ್ಜೆಯಿಡುತ್ತಿದ್ದ. ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಹಾಯಿಪಟವನ್ನು ಕಳೆದುಕೊಂಡು ಇನ್ನೇನು ಮುಳುಗುತ್ತದೆಯೆನ್ನುವ ಹಡಗಿನ ನಕಲಿಯನ್ನು ಜಹಾಜ್ ಮಾಡುತ್ತಿದ್ದಾನೆಂದು ನನಗನಿಸಿತು. ಅವನು ಬಂದು ನನ್ನನ್ನು ತಬ್ಬಿಕೊಂಡ. ತುಂಬ ಸಮಯದವರೆಗೆ ತಬ್ಬಿಕೊಂಡೇ ಇದ್ದ. ಆಮೇಲೆ ನನ್ನನ್ನು ಬಿಟ್ಟು ಹಿಂದೆ ಹೊರಟು ಹೋದ.

‘ಜಹಾಜ್!’

ದಡದ ಕಡೆಯಿಂದ ಬೀಬಿ ಕಿರಿಚಿಕೊಂಡಳು. ಮುದುಕನಾಗಿರುವ ಜೋಕರ್‌ನ ಹಳದಿ ಕಣ್ಣುಗಳು ಕೊನೆಯ ಬಾರಿ ನನ್ನನ್ನು ನೋಡಿದವು. ಅವನು ಕತ್ತನಾಡಿಸಿದ ಬಳಿಕ ಹಿಂತಿರುಗಿ ಹೋದ.

(ಮುಗಿಯಿತು) 

ಇದನ್ನೂ ಓದಿ

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇತರೇ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada