Translated Story: ನೆರೆನಾಡ ನುಡಿಯೊಳಗಾಡಿ; ‘ನೀನು ನಿನ್ನ ಹೊಸ ತಾಯಿಯನ್ನು ನೋಡಿರುವೆಯಾ?’

Story of Nayyar Masood : ನಾನಂತು ಅವಳನ್ನು ಸರೋವರದ ಆತ್ಮವೆಂದೇ ತಿಳಿಯುತ್ತಿದ್ದೆ. ಅವಳು ಸರೋವರದ ಆತ್ಮ ಅಲ್ಲದಿದ್ದರೂ ವಿಸ್ಮಯವಂತೂ ಇತ್ತೇ ಇತ್ತು. ಏಕೆಂದರೆ ಅವಳು ನೀರಿನೊಳಗೆ ಜನ್ಮ ಪಡೆದಿದ್ದಳು. ಇದುವರೆಗೆ ಅವಳ ಪಾದಗಳು ಭೂಮಿಯನ್ನು ಸ್ಪರ್ಶಿಸಿರಲಿಲ್ಲ.

Translated Story: ನೆರೆನಾಡ ನುಡಿಯೊಳಗಾಡಿ; ‘ನೀನು ನಿನ್ನ ಹೊಸ ತಾಯಿಯನ್ನು ನೋಡಿರುವೆಯಾ?’
ಉರ್ದು ಲೇಖಕ ನಯ್ಯರ್ ಮಸೂದ್ ಮತ್ತು ಅನುವಾದಕ ಅದೀಬ್ ಅಖ್ತರ್
Follow us
ಶ್ರೀದೇವಿ ಕಳಸದ
|

Updated on:Jul 01, 2022 | 12:01 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ದೊಡ್ಡ ಸರೋವರದ ಎಲ್ಲಕ್ಕಿಂತ ನಿರ್ಜನ ಭಾಗ ಬಹುಶಃ ಇದೇ ಇರಬಹುದೇನೋ. ಪಾಳು ಬಿದ್ದಿರುವ ಒಂದು ಅಂಚಿನಲ್ಲಿ ಕಂದು ಬಣ್ಣದ ನೀರು ದೂರದವರೆಗೆ ಹರಡಿತ್ತು. ಅದರ ಇನ್ನೊಂದು ತುದಿ ಕಾಣುತ್ತಿರಲಿಲ್ಲ. ಎಡಗಡೆ ಸ್ವಲ್ಪ ನೀರಿನಾಚೆ ದೊಡ್ಡ ದೋಣಿಯೊಂದು ಸರೋವರದ ಒಂದಿಷ್ಟು ಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಬಹುಶಃ ಹಿಂದೊಂದು ಕಾಲದಲ್ಲಿ ದೋಣಿಯಲ್ಲಿ ಜಂತಿಗಳನ್ನು ಸಾಗಿಸುತ್ತಿದ್ದಂತೆ ಕಾಣುತ್ತದೆ. ಈಗ ಅವೇ ಜಂತಿಗಳಿಂದ ದೋಣಿಯಲ್ಲಿ ದೊಡ್ಡ ಹಾಗೂ ಚಿಕ್ಕ ಕೋಣೆಗಳನ್ನು ಮಾಡಿದ್ದರು. ದೋಣಿಯ ಹಲಗೆಗಳು ಸಹ ಸಡಿಲಾಗಿ ಹೋಗಿದ್ದವು. ಅವುಗಳಿಂದ ಕಟಕಟ ಎಂದು ಮುರಿದು ಬೀಳುವಂತಹ ಶಬ್ದ ಬರುತ್ತಿತ್ತು. ಸರೋವರದ ಕಿನಾರೆಯಲ್ಲಿ ಅತಿ ದೊಡ್ಡ ಕಟ್ಟಡವೊಂದು ಭೂಮಿಯ ಮೇಲೆ ಮಲಗಿಕೊಂಡಂತೆ ಭಾಸವಾಗುತ್ತಿತ್ತು. ಅದರ ಸುತ್ತಮುತ್ತ ಬಿರುಕು ಬಿಟ್ಟಿರುವ ನಾಲ್ಕೈದು ಜಗಲಿಗಳಿದ್ದವು. ಇಲ್ಲಿ ಇಷ್ಟೆಲ್ಲ ಹರಡಿಕೊಂಡಿತ್ತು. ಒಂದು ವೇಳೆ ಇವೆಲ್ಲ ಸ್ವಲ್ಪ ಉತ್ತಮವಾದ ಸ್ಥಿತಿಯಲ್ಲಿರುತ್ತಿದ್ದರೆ ಜನ ಇಲ್ಲಿ ಓಡಾಡುವ ಸಂಭವವಿತ್ತು. ಈಗ ಇದು ಹೆಸರಿಗೆ ಮಾತ್ರ ಒಂದು ದಡವಾಗಿತ್ತು. ಅಲ್ಲೊಂದು ದೊಡ್ಡ ಚಪ್ಪರವಿತ್ತು. ಅದರ ಒಂದಿಷ್ಟು ಭಾಗ ಸರೋವರದ ನೀರಿನಲ್ಲಿ ಮುಳುಗಿತ್ತು.

ಕಥೆ : ಶೀಷಾ ಘಾಟ್ | ಮೂಲ : ನಯ್ಯರ್ ಮಸೂದ್ | ಕನ್ನಡಕ್ಕೆ : ಅದೀಬ್ ಅಖ್ತರ್ | ಸೌಜನ್ಯ : ದೇಶಕಾಲ 

(ಭಾಗ 2)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಚಪ್ಪರದಿಂದ ಸ್ವಲ್ಪದೂರದಲ್ಲಿ, ಒಂದಿಷ್ಟು ಎತ್ತರದಲ್ಲಿ ವಿಚಿತ್ರವಾದ ಕಟ್ಟಡವೊಂದಿತ್ತು. ಜೇಡಿಮಣ್ಣು ಮತ್ತು ಜಂತಿಗಳಿಂದ ಅದನ್ನು ಕಟ್ಟುವಾಗ ಅದನ್ನು ಜೇಡಿಮಣ್ಣಿನಿಂದ ಕಟ್ಟಬೇಕೋ ಅಥವಾ ಜಂತಿಗಳಿಂದಲೋ ಎಂಬ ಸಮಸ್ಯೆಗೊಳಗಾಗಿರುವಾಗಲೇ ಕಟ್ಟಡದ ಕೆಲಸ ಪೂರ್ತಿಯಾದಂತೆ ತೋರುತ್ತಿತ್ತು. ಕಟ್ಟಡದ ಛಾವಣಿಯನ್ನು ಮರದಿಂದ ಮಾಡಲಾಗಿತ್ತು. ಅದರ ಮಧ್ಯದಲ್ಲಿರುವ ಎತ್ತರದ ಭಾಗದಲ್ಲಿ ಗುಲಾಬಿ ಬಣ್ಣದ ಚಿಕ್ಕದೊಂದು ಹಾಯಿಪಟ ಕಟ್ಟಲಾಗಿತ್ತು. ಗಾಳಿ ಬೀಸಿದಾಗಲೆಲ್ಲ ಅದು ಊದಿಕೊಳ್ಳುತ್ತಿತ್ತು.

ಅಪ್ಪ ಈ ಹಿಂದೆ ಸಹ ಇಲ್ಲಿ ಬಂದಿರಬಹುದೆಂದು ಕಾಣುತ್ತದೆ. ಅದಕ್ಕೆ ಅವನು ನನ್ನ ಕೈಯನ್ನು ಹಿಡಿದು ಬಿರುಸಿನ ಹೆಜ್ಜೆಯಿಡುತ್ತ ಇಳಿಜಾರಿನಲ್ಲಿರುವ ಚಪ್ಪರದೊಳಗೆ ಪ್ರವೇಶಿಸಿ, ಅಲ್ಲಿಂದಲೇ ಪ್ರಾರಂಭವಾಗಿರುವ ಮಣ್ಣಿನ ಮೆಟ್ಟಲುಗಳನ್ನು ಹತ್ತಿ ಕಟ್ಟಡದ ಬಾಗಿಲಿನಲ್ಲಿ ಹೋಗಿ ನಿಂತುಕೊಂಡ. ಜಹಾಜ್ ನೆಲದ ಮೇಲೆಯೇ ಕುಳಿತು ಹೊಗೆಸೊಪ್ಪು ಸೇವಿಸುತ್ತಿದ್ದ. ನಾವು ಹೋಗಿ ಅವನ ಪಕ್ಕ ನೆಲದ ಮೇಲೆ ಕೂತೆವು.

‘ಬಂದುಬಿಟ್ಟೆಯಾ?’

ಅವನು ಅಪ್ಪನನ್ನು ಪ್ರಶ್ನಿಸಿದ ಬಳಿಕ ಕೆಮ್ಮತೊಡಗಿದ. ಎಂಟು ವರ್ಷದಲ್ಲಿ ಅವನು ಮುದುಕನಾಗಿ ಹೋಗಿದ್ದ. ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದ್ದವು ಮತ್ತು ತುಟಿಗಳು ಕಪ್ಪಾಗಿ ಹೋಗಿದ್ದವು. ಅವುಗಳನ್ನು ನೋಡಿದರೆ ಅವುಗಳಿಗೆ ಬಣ್ಣ ಲೇಪಿಸಿದಂತೆ ಕಾಣುತ್ತಿದ್ದವು. ಆಗಾಗ ಅವನು ಕತ್ತು ಅಲುಗಾಡಿಸುತ್ತಿದ್ದ, ಏನಾದರೂ ಒಪ್ಪಿಕೊಳ್ಳುವಂತೆ. ಅವನು ಅದೇ ರೀತಿ ಕತ್ತನ್ನು ಅಲ್ಲಾಡಿಸುತ್ತ ಹಳದಿ ಬಣ್ಣದ ಕಣ್ಣಿಂದ ನೋಡುತ್ತ ಹೇಳಿದ.

‘ದೊಡ್ಡವನಾಗಿ ಹೋದನೋ?’

‘ಎಂಟು ವರ್ಷದ ನಂತರ ನೋಡುತ್ತಿದ್ದೀರಲ್ಲ’ ಅಪ್ಪ ಹೇಳಿದ.

ಬಹಳ ಸಮಯದವರೆಗೆ ನಾವು ಮೌನವಾಗಿದ್ದೆವು. ಅವರಿಬ್ಬರೂ ಸನ್ನೆಗಳ ಮೂಲಕ ಮಾತಾಡುತ್ತಿದ್ದಾರೆಂಬ ಸಂದೇಹ ನನಗಾಯಿತು. ಆದರೆ ಅವರು ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಅಚಾನಕ್ಕಾಗಿ ಅಪ್ಪ ಎದ್ದು ನಿಂತುಕೊಂಡ. ನಾನೂ ಅವನೊಂದಿಗೆ ಎದ್ದು ನಿಂತುಕೊಂಡೆ. ಜಹಾಜ್ ತಲೆಯೆತ್ತಿ ನೋಡಿ ಪ್ರಶ್ನಿಸಿದ.

‘ಇಲ್ಲಿ ಒಂದಿಷ್ಟು ಸಮಯ ಉಳಿಯುವುದಿಲ್ಲವೇನು?’

‘ಇಲ್ಲ ಬಹಳ ಕೆಲಸಗಳಿವೆ, ಇನ್ನು ಏನೂ ಮಾಡಿಲ್ಲ’ ಅಪ್ಪ ಹೇಳಿದ. ಜಹಾಜ್ ಹೌದೆಂದು ತಲೆ ಅಲ್ಲಾಡಿಸಿದ. ಅಪ್ಪ ಬಾಗಿಲಿಂದ ಹೊರಬಿದ್ದು, ಮಣ್ಣಿನ ಮೆಟ್ಟಲುಗಳನ್ನು ಇಳಿಯುತ್ತ ನಿಂತುಕೊಂಡು ಮತ್ತೆ ಹಿಂತಿರುಗಿ ಬಂದು ನನ್ನನ್ನು ತಬ್ಬಕೊಂಡು ಸ್ವಲ್ಪ ಸಮಯದವರೆಗೆ ಮೌನವಾಗಿದ್ದ ಬಳಿಕ ಹೇಳಿದ – ‘ಇಲ್ಲಿರಲು ಬೇಸರವಾದರೆ ಜಹಾಜ್‌ಗೆ ಹೇಳು. ನಾನು ಬಂದು ಕರೆದುಕೊಂಡು ಹೋಗುತ್ತೇನೆ’.

ಜಹಾಜ್ ಮತೊಮ್ಮೆ ಕತ್ತು ಅಲ್ಲಾಡಿಸಿದ. ಅಪ್ಪ ಮೆಟ್ಟಲುಗಳನ್ನು ಇಳಿದು ಹೋದ.

ಜಹಾಜ್ ಬೇಗಬೇಗನೇ ಹೊಗೆಸೊಪ್ಪಿನ ಹೊಗೆಯನ್ನು ಎಳೆದ. ಅನಂತರ ಅವನಿಂದ ಉಸಿರಾಡಲು ಸಾಧ್ಯವಾಗಲಿಲ್ಲ. ಆಮೇಲೆ ಸ್ವಲ್ಪ ಸುಧಾರಿಸಿಕೊಂಡ ಬಳಿಕ ನನ್ನ ಕೈ ಹಿಡಿದುಕೊಂಡು ಚಪ್ಪರದಡಿಗೆ ಬಂದ. ಅಲ್ಲೆ ನಿಂತುಕೊಂಡು ಸರೋವರದ ಕಡೆ ನೋಡಿದ, ಆಮೇಲೆ ಮಣ್ಣಿನ ಮೆಟ್ಟಿಲುಗಳ ಕಡೆ ಹಿಂತಿರುಗಿದ. ಮೊದಲನೆಯ ಮೆಟ್ಟಿಲಿನ ಮೇಲೆ ಹೆಜ್ಜೆಯಿಡುತ್ತಾ ನಿಂತುಕೊಂಡು ‘ಇಲ್ಲ, ಎಲ್ಲಕ್ಕಿಂತ ಮೊದಲು ಬೀಬಿ’ ಇಷ್ಟನ್ನು ಮಾತ್ರ ಹೇಳಿದ. ಸರೋವರದ ಕಿನಾರೆಯಲ್ಲಿ ನಡೆಯುತ್ತ ನಾವು ದೊಡ್ಡ ದೋಣಿ ಹತ್ತಿರ ತಲುಪಿದೆವು. ಎರಡು ಜಂತಿಗಳನ್ನು ಒಟ್ಟಿಗೆ ಸೇರಿಸಿ ಕಿನಾರೆಯಿಂದ ದೋಣಿಯವರೆಗೆ ಹೋಗುವಂತೆ ರಸ್ತೆ ಮಾಡಲಾಗಿತ್ತು. ಜಂತಿಗಳ ಮೇಲೆ ಒಂದೊಂದು ಹೆಜ್ಜೆಯನ್ನು ಅತಿ ಎಚ್ಚರದಿಂದ ಇಡಬೇಕಾಗಿತ್ತು. ನಾವು ಜಂತಿಯ ರಸ್ತೆ ದಾಟಿ ಮೆಟ್ಟಲನ್ನು ಹತ್ತಿ ದೋಣಿಯ ಮೇಲೆ ಹೆಜ್ಜೆಯಿಟ್ಟೆವು. ಎದುರುಗಡೆಯ ಕೋಣೆಯೊಂದರ ಬಾಗಿಲಿಗೆ ತಾರಪಾಲಿನ ಪರದೆ ಕಟ್ಟಲಾಗಿತ್ತು. ಪರದೆಯ ಆ ಕಡೆ ಎರಡು ಬಣ್ಣಗಳಿರುವ ಬೆಕ್ಕೊಂದು ಕುಳಿತಲ್ಲಿ ತೂಕಡಿಸುತ್ತಿತ್ತು. ಬೆಕ್ಕು ತನ್ನ ಅರೆತೆರೆದ ಕಣ್ಣುಗಳಿಂದ ನಮ್ಮನ್ನು ನೋಡಿತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ 

ಜಹಾಜ್ ಪರದೆಯ ಬಳಿ ಹೋಗಿ ನಿಂತುಕೊಂಡ. ಅವನ ಹಿಂದೆ ಕೆಲವು ಹೆಜ್ಜೆಗಳ ಅಂತರದಲ್ಲಿ ನಾನು ನಿಂತುಕೊಂಡಿದ್ದೆ. ಜಹಾಜ್ ಮತ್ತೆ ಕೆಮ್ಮಲು ಪ್ರಾರಂಭಿಸಿದಾಗ ಪರದೆಯನ್ನು ಒಂದು ಕಡೆ ಮಾಡಿ ಬೀಬಿ ಎದುರಾದಳು. ಅವಳನ್ನು ನೋಡಿದ ಕೂಡಲೇ ನನಗೆ ಭಯವಾಯಿತು. ಇಂಥ ಕುರೂಪಿ ಹಿಂದೊಮ್ಮೆ ಒಬ್ಬನ ಪ್ರೇಯಸಿಯಾಗಿದ್ದಳೆಂದು ಯೋಚಿಸಿದಾಗ ವಿಚಿತ್ರವೆನಿಸಿತು. ಅವಳು ಜಹಾಜ್‌ನನ್ನು ನೋಡಿದ ಬಳಿಕ ನನ್ನನ್ನು ನೋಡಿದಳು. ‘ಮಗು ಬಂದುಬಿಟ್ಟಿದೆಯೇನು?’ ಅವಳು ಜಹಾಜ್‌ನನ್ನು ಕೇಳಿದಳು.

‘ಈಗ ತಾನೇ ಬಂದ’ ಜಹಾಜ್ ಹೇಳಿದ.

ಬೀಬಿ ನನ್ನನ್ನು ಮೇಲಿಂದ ಕೆಳಗಿನವರೆಗೆ ನೋಡಿ ‘ದುಃಖದಲ್ಲಿದ್ದವನಂತೆ ಕಾಣುತ್ತಾನೆ’ ಅಂದಳು. ಜಹಾಜ್ ಏನನ್ನೂ ಹೇಳಲಿಲ್ಲ, ನಾನೂ ಬಾಯಿ ತೆರೆಯಲಿಲ್ಲ. ಅಲ್ಲಿ ಕೆಲವು ಕ್ಷಣದವರೆಗೆ ಮೌನ ಹರಡಿಕೊಂಡಿತು. ನಾನು ಬೀಬಿ ಕಡೆ ನೋಡಿದೆ. ಅದೇ ಸಮಯದಲ್ಲಿ ಅವಳು ಪ್ರಶ್ನಿಸಿದಳು.

‘ಈಜು ಬರುತ್ತೇನು?’

‘ಇಲ್ಲ’ ನಾನು ಕತ್ತು ಅಲ್ಲಾಡಿಸಿ ಸನ್ನೆಯಲ್ಲಿ ಹೇಳಿದೆ.

‘ನೀರಿನಿಂದ ಹೆದರಿಕೆಯಾಗುತ್ತೇನು?’

‘ಹೌದು’ ನಾನು ಸನ್ನೆಯಿಂದ ವಿವರಿಸಿದೆ.

‘ಬಹಳ?’

‘ಹೌದು ಬಹಳ’ ನಾನು ಹೇಳಿದೆ.

‘ಹೆದರಿಕೊಳ್ಳಲೇಬೇಕು’

ಅವಳು ಇದನ್ನು ಯಾವ ರೀತಿ ಹೇಳಿದಳೆಂದರೆ ನಾನು ಅವಳ ಮನಸ್ಸಿನಲ್ಲಿರುವುದನ್ನೇ ಹೇಳಿದಂತೆ. ಹರಡಿಕೊಂಡಿರುವ ಸರೋವರವನ್ನು ನಾನು ನೋಡಿದೆ. ಗಾಳಿಯಿಲ್ಲದೆ ನೀರು ಅಲುಗಾಡದೆ ನಿಂತಿತ್ತು. ಹರಡಿರುವ ಸರೋವರ ಪಾಳು ಬಿದ್ದಿರುವ ಮೈದಾನದಂತೆ ಕಾಣುತ್ತಿತ್ತು. ನಾನು ಬೀಬಿಯತ್ತ ದೃಷ್ಟಿ ಬೀರಿದೆ. ಅವಳೂ ಸಹ ನನ್ನನ್ನೇ ನೋಡುತ್ತಿದ್ದಳು. ಆಮೇಲೆ ಅವಳು ಜಹಾಜ್‌ನ ಕಡೆ ಹೆಜ್ಜೆಯಿಟ್ಟಳು. ಅವನು ಅವಳಿಗೆ ಹೊಗೆಸೊಪ್ಪು ನೀಡಿದ. ಅವರಿಬ್ಬರು ಬಹಳ ಸಮಯದವರೆಗೆ ಹೊಗೆಸೊಪ್ಪು ಸೇವಿಸುತ್ತ ಮಾತಾಡುತ್ತಿದ್ದರು. ಯಾವುದೋ ವ್ಯವಹಾರದ ಲೆಕ್ಕಪತ್ರದ ಬಗ್ಗೆ ಅವರ ಮಾತುಕತೆಯಿತ್ತು.

ಈ ನಡುವೆ ಕಂದು ಬಣ್ಣದ ನಾಯಿಯೊಂದು ಯಾವುದೋ ಮೂಲೆಯಿಂದ ಅಲ್ಲಿಗೆ ಬಂದು ನನ್ನನ್ನು ಮೂಸಿದ ಬಳಿಕ ಹೊರಟುಹೋಯಿತು. ನಾಯಿಯನ್ನು ನೋಡಿ ನಿದ್ದೆ ಮಾಡುತ್ತಿರುವ ಬೆಕ್ಕು ಬಾಲವನ್ನು ಅಲ್ಲಾಡಿಸಿ ಬೆನ್ನನ್ನು ಮೇಲೆತ್ತಿಕೊಂಡು ಪರದೆಯ ಮರೆಯಲ್ಲಿ ಹೊರಟುಹೋಯಿತು. ನಾನು ಆಗಾಗ ಬೀಬಿಯ ಕಡೆ ನೋಡುತ್ತಲೇ ಇದ್ದೆ. ಅವಳು ತುಂಬಾ ಧೈರ್ಯವಂತೆ ಎಂದೆನಿಸಿತು. ತನ್ನ ದೊಡ್ಡ ದೋಣಿಗಿಂತ ಅವಳೇ ಶಕ್ತಿಶಾಲಿಯಾಗಿ ಕಾಣುತ್ತಿದ್ದಳು. ತನ್ನ ದೋಣಿಯಂತೆ ಅವಳೂ ನಿಧಾನವಾಗಿ ದುರ್ಬಲವಾಗುತ್ತಿದ್ದಾಳೆ ಎಂದು ನನಗನಿಸಿತು. ಅವಳ ಮುಖವೂ ಹಾಗೆಯೇ ಕಾಣಿಸುತ್ತಿತ್ತು ಮತ್ತು ಅವಳ ಮಾತಿನಿಂದಲೂ ಸಹ. ಅವಳ ಮಾತು ನನಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಅವಳು ಮಾತಾಡುವುದನ್ನು ನಿಲ್ಲಿಸಿ ಕತ್ತೆತ್ತಿದಳು ಮತ್ತು ಜೋರಾಗಿ ಕೂಗಿದಳು.

‘ರ‍್ಯಾ !’

ದೂರದಿಂದ ಹುಡುಗಿಯೊಬ್ಬಳ ನಗುವಿನ ಶಬ್ದ ನೀರಿನ ಮೇಲೆ ತೇಲುತ್ತ ನಮ್ಮ ಕಡೆ ಬಂತು. ಜಹಾಜ್ ನನ್ನ ಕೈಯನ್ನು ಹಿಡಿದುಕೊಂಡು ಜಂತಿಯ ರಸ್ತೆಯ ಕಡೆ ಹೆಜ್ಜೆಯಿಟ್ಟ. ಏಣಿ ಹತ್ತಿರ ಹೋದಾಗ ಬೆನ್ನ ಹಿಂದಿನಿಂದ ಬರುತ್ತಿರುವ ಬೀಬಿಯ ಮಾತು ಕೇಳಿಸಿತು.

‘ಅವನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಜಹಾಜ್ – ದುಃಖದಲ್ಲಿದ್ದವನಂತೆ ಕಾಣುತ್ತಾನೆ’ ಮತ್ತೆ ಅವಳದು ಅದೇ ರಾಗ.

ಅವಳು ಹೇಳಿದ್ದನ್ನು ಕೇಳಿದ ನಂತರ ನಾನು ನಿಜವಾಗಿಯೂ ದುಃಖದಲ್ಲಿದ್ದೇನೆಂದು ತಿಳಿದುಕೊಂಡೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಟಿ.ಡಿ. ರಾಜಣ್ಣ ತಗ್ಗಿ ಅನುವಾದಿಸಿದ ಪಾಲಗುಮ್ಮಿ ಪದ್ಮರಾಜು ಅವರ ತೆಲುಗು ಕಥೆ

*

ನಾನು ದುಃಖದಲ್ಲಿದ್ದೇನೆಂದು ತಿಳಿದುಕೊಳ್ಳಲು ನಿಜವಾಗಿಯೂ ಯಾವ ಕಾರಣವೂ ಇರಲಿಲ್ಲ. ಇಲ್ಲಿ ಬಂದ ಬಳಿಕ ನನಗಾಗಿ ವ್ಯವಸ್ಥೆ ಮಾಡಲಾಗಿರುವ ಬಿಡಾರವನ್ನು ಜಹಾಜ್ ತೋರಿಸಿದಾಗ ನನಗೆ ನಂಬಿಕೆಯೇ ಬರಲಿಲ್ಲ. ಇಂಥ ದಡದಲ್ಲಿ, ಕಂದು ಬಣ್ಣದ ಸರೋವರದ ಮಧ್ಯದ ಹಳೆಯ ಕಟ್ಟಡದಲ್ಲಿ ಇಂಥಾದೊಂದು ಕೋಣೆಯಿದೆಯೆಂದು ನಂಬಲು ಸಾಧ್ಯವಿರಲಿಲ್ಲ. ಕೋಣೆ ಸುಂದರವಾಗಿತ್ತು ಮತ್ತು ಅಲ್ಲಿ ಎಲ್ಲಾ ಸೌಲಭ್ಯಗಳಿದ್ದವು. ಅದರ ಕಿಟಕಿ ಬಾಗಿಲುಗಳನ್ನು ಮಾಡುವಾಗ ಅದರಲ್ಲಿ ಗಾಜನ್ನು ಹೆಚ್ಚಾಗಿ ಬಳಸಲಾಗಿತ್ತು. ಇದೆಲ್ಲವನ್ನು ಜಹಾಜ್ ಒಬ್ಬನೇ ಮಾಡಿರಬಹುದೇ, ಬೇರೆಯವರ ಸಹಾಯ ಪಡೆದಿರಬಹುದೇ ಅಥವಾ ಅವನು ಎಲ್ಲವನ್ನು ಕಲಿತಿದ್ದಾನೋ – ಏನೇನೋ ಸಂದೇಹಗಳು. ಅಲ್ಲಿರುವ ಅನೇಕ ವಸ್ತುಗಳು ಇಂದೇ ತಂದಿರುವಂತೆ ಕಾಣುತ್ತಿದ್ದವು. ಮತ್ತು ಇಲ್ಲಿಂದ ಎಷ್ಟೋ ವಸ್ತುಗಳು ಬೇರೆ ಕಡೆ ಸಾಗಿಸಲಾಗಿದ್ದಾವೆ ಎಂಬ ಅನುಮಾನ ಸಹ ಬಂತು. ಆಮೇಲೆ ನಾನಿಲ್ಲಿ ಬರುವುದಕ್ಕೆ ಮುನ್ನ ಬೇರೆಯವರು ಇಲ್ಲಿದ್ದರೆಂಬ ಸಂದೇಹವಾಯಿತು.

ನನ್ನ ಬಿಡಾರವನ್ನು ನೋಡಿದ ಬಳಿಕ ಮೊದಲನೆಯ ದಿನವೇ ನಾನು ಶೀಷಾ ಘಾಟ್‌ನಲ್ಲಿರುವುದೆಲ್ಲವನ್ನು ನೋಡಿ ಮುಗಿಸಿದ್ದೇನೆಂದು ಯೋಚಿಸಿದೆ. ಆದರೆ ರ‍್ಯಾಳನ್ನು ಮಾರನೆ ದಿನ ನೋಡಿದೆ.

ನನಗೆ ಆಶ್ಚರ್ಯವಾಗುತ್ತೆ, ಏಕೆಂದರೆ ಅಪ್ಪನ ಮನೆಯಲ್ಲಿರುವವರೆಲ್ಲರೂ ಶೀಷಾ ಘಾಟ್ ಬಗ್ಗೆ ಮಾತಾಡುತ್ತಿದ್ದರೇ ಹೊರತು ಅವರಲ್ಲಿ ಯಾರೊಬ್ಬರೂ ಬೀಬಿಯ ಮಗಳ ಬಗ್ಗೆ ಹೇಳುತ್ತಿರಲಿಲ್ಲ. ಅವಳ ಹೆಸರು ಸಹ ಅವರ ನಾಲಿಗೆಯ ಮೇಲೆ ಬರುತ್ತಿರಲಿಲ್ಲ. ನನ್ನ ಕಿವಿಗೆ ಆ ಹೆಸರು ಶೀಷಾ ಘಾಟ್ ತಲುಪಿದ ಮೊದಲನೆಯ ದಿನ ಬಿದ್ದಿದ್ದು. ಬೀಬಿ ದೋಣಿಯಿಂದ ಅವಳನ್ನು ಕೂಗಿದಾಗ ಆ ದಿನ ರ‍್ಯಾ ಯಾರೆಂದು ನಾನು ಯೋಚಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ ಮಾರನೆ ದಿನ ಬೆಳಗ್ಗೆ ದಡದ ಮುಂದೆ ಸರೋವರದಿಂದ ಯಾರೋ ನಗುವುದು ಕೇಳಿಸಿತು. ಅನಂತರ ಯಾರೋ ಕೇಳಿದರು.

‘ಜಹಾಜ್ ನಿನ್ನ ಮಗನನ್ನು ನೋಡಬೇಕು.’ ಜಹಾಜ್ ಧಾವಿಸಿ ನನ್ನ ಕೈ ಹಿಡಿದುಕೊಂಡು ನನ್ನನ್ನು ಚಪ್ಪರದಡಿಯಲ್ಲಿ ನಿಲ್ಲಿಸಿದ.

‘ಅವಳು ಬೀಬಿಯ ಮಗಳು’ ಎಂದ.

ಹೆಚ್ಚು ಕಡಿಮೆ ಐವತ್ತು ಹೆಜ್ಜೆಗಳ ಅಂತರದಲ್ಲಿ ಸರೋವರದ ಮಧ್ಯದಲ್ಲಿ ಬಹು ಮೆಲ್ಲನೆ ತೇಲುತ್ತಿರುವ ಪುಟ್ಟದಾದ ದೋಣಿಯೊಂದರ ಹಿಂಭಾಗದಲ್ಲಿ ರ‍್ಯಾ ನೆಟ್ಟಗೆ ನಿಂತಿದ್ದಳು. ಅವಳು ತನ್ನ ಮೈಯನ್ನು ತುಸುವೇ ಬಳುಕಿಸಿದಳು. ದೋಣಿ ಚಪ್ಪರದ ಕಡೆ ತೇಲಿತು. ರ‍್ಯಾ ಮತ್ತೊಮ್ಮೆ ಮೈ ಬಳುಕಿಸಿದಳು. ದೋಣಿ ಮತ್ತೆ ಮುಂದೆ ತೇಲಿತು. ಇದೇ ರೀತಿ ದೋಣಿ ನಿಲ್ಲುತ್ತ ತೇಲುತ್ತ ಚಪ್ಪರದ ಸಮೀಪ ಬಂದಿತು.

‘ಇವನೇ ತಾನೇ?’

ಅವಳು ಜಹಾಜ್ ಕಡೆ ಮುಖ ಮಾಡಿ ಕೇಳಿದಳು.

ಇವಳು ಬೀಬಿಯ ಮಗಳೇ ಎಂದು ಆಶ್ಚರ್ಯವಾಯಿತು. ಇದೇ ರೀತಿ ಬೀಬಿಯನ್ನು ನೋಡಿ ಅವಳು ಹಿಂದೊಮ್ಮೆ ಒಬ್ಬನ ಪ್ರೇಯಸಿಯಾಗಿದ್ದಳೆಂದು ಯೋಚಿಸಿ ನಾನು ಆಶ್ಚರ್ಯಪಟ್ಟಿದ್ದೆ.

ರ‍್ಯಾಳನ್ನು ಎವೆಯಿಕ್ಕದೆ ನೋಡಬೇಕೆಂದು ಆಸೆಯಾಯಿತು. ಆದರೆ ಅವಳೇ ನನ್ನನ್ನು ಮೇಲಿಂದ ಕೆಳಗಿನವರೆಗೆ ನೋಡುತ್ತಿದ್ದಳು. ‘ದುಃಖದಲ್ಲಿರುವಂತೆ ಕಾಣುವುದಿಲ್ಲ’ ಮೊದಲು ಅವಳು ಜಹಾಜ್‌ನಿಗೆ ಹೇಳಿದಳು, ಆಮೇಲೆ ನನಗೆ.

‘ದುಃಖದಲ್ಲಿರುವಂತೆ ಕಾಣುವುದಿಲ್ವಲ್ಲ’.

‘ನಾನು ದುಃಖದಲ್ಲಿದ್ದೇನೆಂದು ನಿನಗೆ ಯಾವಾಗ ಹೇಳಿದೆ?’ ಸಿಡಿಮಿಡಿಗೊಂಡು ಹೇಳಬೇಕೆಂದು ಯೋಚಿಸಿದೆ. ಆದರೆ ಹೇಳಲು ಪ್ರಯತ್ನ ಮಾಡಿದಾಗ ಮಾತು ಹೊರಡಲಿಲ್ಲ. ತೊದಲಿ ಮೌನ ಧರಿಸಿಕೊಂಡೆ. ರ‍್ಯಾ ನಗುತ್ತ, ‘ಜಹಾಜ್ ಇವನು ನಿಜವಾಗಿಯೂ’ ಇಷ್ಟನ್ನು ಹೇಳಿ ಅವಳು ಜೋರಾಗಿ ನಗಲಾರಂಭಿಸಿದಳು. ಅವಳು ನಗುತ್ತಿರುವುದನ್ನು ಕೇಳಿಸಿಕೊಂಡು ಬೀಬಿ ದೋಣಿಯಿಂದ ಚೀರಿಕೊಂಡಳು.

‘ರ‍್ಯಾ ಅವಳನ್ನು ಸತಾಯಿಸಬೇಡ’

‘ಕೆ, ಅವನು ದುಃಖದಲ್ಲಿದ್ದಾನೆಂದೋ?’

‘ರ‍್ಯಾ ಇವನೊಂದಿಗೆ ನೀನು ಖುಷಿಯಾಗಿರಬಹುದು’ ಜಹಾಜ್ ಅವಳಿಗೆ ತಿಳಿ ಹೇಳಿದ.

‘ನಾನು ನೆಮ್ಮದಿಯಿಂದಲೇ ಇದ್ದೇನೆ.’ ಇಷ್ಟನ್ನು ಹೇಳಿ ಅವಳು ಮತ್ತೊಮ್ಮೆ ನಗಲಾರಂಭಿಸಿದಳು.

ಹೊಸದೊಂದು ಆಪತ್ತಿನಲ್ಲಿ ಸಿಕ್ಕಿಕೊಂಡಿರುವಂತೆ ಭಾಸವಾಯಿತು. ಅದೇ ಸಮಯದಲ್ಲಿ ಅವಳು ‘ನೀನು ನಿನ್ನ ಹೊಸ ತಾಯಿಯನ್ನು ನೋಡಿರುವೆಯಾ?’ ಎಂದು ಕೇಳಿದಳು.

‘ಇಲ್ಲ ನೋಡಿಲ್ಲ’ ತಲೆಯಲ್ಲಾಡಿಸಿ ಸನ್ನೆಯಿಂದ ಹೇಳಿದೆ.

‘ನೋಡುವುದಕ್ಕೆ ಮನಸ್ಸು ಬಯಸುವುದಿಲ್ಲವೇ?’ ಉತ್ತರಿಸುವ ಗೋಜಿಗೆ ಹೋಗದೆ ಬೇರೆ ಕಡೆ ನೋಡಿದೆ.

‘ಬಯಸುವುದಿಲ್ಲವೇ?’ ಅವಳದು ಮತ್ತೆ ಅದೇ ಪ್ರಶ್ನೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಎಸ್. ಗಂಗಾಧರಯ್ಯ ಅನುವಾದಿಸಿದ ಇವಾನ್​ ಬುನಿನ್​ ಕಾದಂಬರಿಯ ಆಯ್ದ ಭಾಗ

ಉತ್ತರಿಸುವ ಬದಲು ಸುಮ್ಮನೆ ಕತ್ತಲ್ಲಾಡಿಸಿದೆ. ಇದರ ಅರ್ಥ ಹೌದೆಂದು ಸಹ ಆಗುವ ಸಂಭವ ಇತ್ತು ಮತ್ತು ಇಲ್ಲ ಎಂದೂ ಸಹ ಯೋಚಿಸಿದೆ. ಇಂದು ನಮ್ಮ ಮನೆಗೆ ಹೊಸ ತಾಯಿ ಬರುತ್ತಿರಬಹುದು ಅಥವಾ ಅವಳು ಈಗಾಗಲೇ ಬಂದಿರಬಹುದು. ನಾನು ಮಾತಾಡುವುದನ್ನು ನೋಡಿ ಅವಳಿಗೆ ಹುಚ್ಚು ಹಿಡಿದು ಬಿಡುತ್ತದೆಂದು ಅಪ್ಪ ವಿವರಿಸಿದ್ದನ್ನು, ಕಲ್ಪನೆಯಲ್ಲಿ ನಾನು ಮಾತಾಡುತ್ತಿರುವುದನ್ನು ಮತ್ತು ಅವಳಿಗೆ ಹುಚ್ಚು ಹಿಡಿಯುತ್ತಿರುವುದನ್ನು ನೋಡಿದೆ. ನನ್ನಿಂದಾಗಿ ಹುಚ್ಚು ಹಿಡಿಸಿಕೊಂಡಿರುವ ಮಹಿಳೆಯೊಂದಿಗೆ ವಾಸವಾಗುತ್ತಿದ್ದರೆ ಏನಾಗುತ್ತಿತ್ತು? ಅದೇ ಸಮಯದಲ್ಲಿ ನೆನಪಾಯಿತು, ನಿನ್ನೆ ಇದೇ ಸಮಯದಲ್ಲಿ ನಾನು ಆ ಮನೆಯಲ್ಲಿದ್ದೆ. ಆದರೆ ಇದೆಲ್ಲವೂ ತುಂಬ ಹಿಂದೆ ನಡೆದಿರುವಂತೆ ಭಾಸವಾಯಿತು. ಅಲ್ಲಿ ಕಳೆದ ಎಂಟು ವರ್ಷಗಳು ಕೇವಲ ಎಂಟು ಕ್ಷಣಗಳಂತೆ ನೆನಪಿಗೆ ಬಂದವು. ಇದಾದ ಮೇಲೆ ಅಪ್ಪ ಸಹ ನೆನಪಾದ. ನಿನ್ನೆ ಅವನು ನನ್ನನು ಅಪ್ಪಿಕೊಂಡ ಬಳಿಕ ಜಹಾಜ್‌ನ ಬಳಿ ಬಿಟ್ಟು ಹೋಗಿದ್ದ. ಅವನು ನನ್ನನ್ನು ತುಂಬಾ ಪ್ರೀತಿಸುತ್ತಾನೆಂದು ನನಗೆ ವಿಶ್ವಾಸವಿತ್ತು. ಈಗ ಆ ವಿಶ್ವಾಸ ಮತ್ತಷ್ಟು ಹೆಚ್ಚಾಯಿತು.

‘ಜಹಾಜ್ ಸಹ ನಿನ್ನನ್ನು ಪ್ರೀತಿಸುತ್ತಾನೆ.’

ರ‍್ಯಾಳ ಧ್ವನಿ ಕೇಳಿ ನಾನು ಎಚ್ಚರಗೊಂಡೆ. ನಾನು ಅವಳನ್ನು ಮರೆತೇಬಿಟ್ಟಿದ್ದೆ. ಅವಳು ಅಷ್ಟೊತ್ತಿನಿಂದಲೂ ನನ್ನನ್ನೇ ನೋಡುತ್ತಿದ್ದಳು. ಅವಳು ನಿಧಾನವಾಗಿ ಹೆಜ್ಜೆಯಿಡುತ್ತ ದೋಣಿಯ ಇನ್ನೊಂದು ತುದಿಗೆ ಹೋದಳು. ಮೈಯನ್ನು ಮೆಲ್ಲನೆ ತಿರುಗಿಸಿದಳು. ಈಗ ಅವಳ ಬೆನ್ನು ಚಪ್ಪರದ ಕಡೆಯಿತ್ತು. ಅವಳು ಮೈಯನ್ನು ಬಳುಕಿಸಿ ದೋಣಿಯನ್ನು ಮುಂದೆ ತೇಲಿಸಿದಳು ಮತ್ತು ನಿಧಾನವಾಗಿ ನಮ್ಮಿಂದ ದೂರವಾಗತೊಡಗಿದಳು. ಒಂದು ವಿಸ್ಮಯವನ್ನೇ ನೋಡಿದ ಅನುಭವವಾಯಿತು. ಒಂದು ವೇಳೆ ಬೀಬಿ ಅವಳ ಹೆಸರನ್ನು ಹಿಡಿದು ಕೂಗದೆ ಹೋಗಿದ್ದರೆ ನಾನಂತು ಅವಳನ್ನು ಸರೋವರದ ಆತ್ಮವೆಂದೇ ತಿಳಿಯುತ್ತಿದ್ದೆ. ಅವಳು ಸರೋವರದ ಆತ್ಮ ಅಲ್ಲದಿದ್ದರೂ ವಿಸ್ಮಯವಂತೂ ಇತ್ತೇ ಇತ್ತು. ಏಕೆಂದರೆ ಅವಳು ನೀರಿನೊಳಗೆ ಜನ್ಮ ಪಡೆದಿದ್ದಳು. ಇದುವರೆಗೆ ಅವಳ ಪಾದಗಳು ಭೂಮಿಯನ್ನು ಸ್ಪರ್ಶಿಸಿರಲಿಲ್ಲ.

(ಭಾಗ 3 ಓದಲು ಕ್ಲಿಕ್ ಮಾಡಿ)

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇತರೇ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

Published On - 11:24 am, Fri, 1 July 22

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ