Literature: ನೆರೆನಾಡ ನುಡಿಯೊಳಗಾಡಿ; ಎಸ್. ಗಂಗಾಧರಯ್ಯ ಅನುವಾದಿಸಿದ ಇವಾನ್ ಬುನಿನ್ ಕಾದಂಬರಿಯ ಆಯ್ದ ಭಾಗ
Ivan Bunin : ಆ ತಪ್ಪಿಸಿಕೊಳ್ಳಲಾಗದ್ದು ಘಟಿಸೇ ಬಿಟ್ಟಿತು. ಬೇಸಿಗೆಯ ಕೊನೆ ದಿನಗಳ ಒಂದು ಕರಾಳ ಇರುಳಿನಲ್ಲಿ, ಸಂತ ಎಲಿಜ್ಹನ ಹಬ್ಬದ ಮುನ್ನಾ ದಿನ ಯೂಶ್ಕಾ ಬಂದಿದ್ದ. ಆ ಇರುಳಿನಲ್ಲಿ ಗುಡುಗಿನ ಸದ್ದಿರಲಿಲ್ಲ. ಅಂತೆಯೇ ನಟಾಲಿಯಾಳಿಗೆ ನಿದ್ದೆ ಎಂಬುದೂ ಇರಲಿಲ್ಲ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಇವಾನ್ ಬುನಿನ್ (Ivan Bunin) ರಷ್ಯಾಕ್ಕೆ ಸಾಹಿತ್ಯಕ್ಕಾಗಿ ಮೊಟ್ಟಮೊದಲ ನೊಬೆಲ್ ಬಹುಮಾನ (Nobel Prize) ತಂದು ಕೊಟ್ಟವನು. ವಿಶಷ್ಟವಾದ ಗ್ರಹಿಕೆ ಮತ್ತು ಗದ್ಯದ ದ್ರವ್ಯ ಅದರ ನಾವೀನ್ಯತೆ ಮತ್ತು ವೈಶಿಷ್ಟ್ಯತೆಗಳಿಂದಾಗಿ ಬುನಿನ್ ಅವನ ಸಮಕಾಲೀನ ಲೇಖಕರ ನಡುವೆ ಅಕ್ಷರ ಲೋಕದಲ್ಲಿ ತನ್ನದೇ ದಾರಿ ತುಳಿದವನು. ಕಾವ್ಯಾತ್ಮಕ ನಿರೂಪಣೆ ಹಾಗೂ ಅದರೊಳಗೆ ಅನಾವರಣಗೊಳ್ಳುತ್ತಾ ಹೋಗುವ ಥರಾವರಿ ಪರಿಮಳಗಳು, ಬಣ್ಣಗಳು ಹಾಗೂ ಸದ್ದುಗಳು, ಕಾಡುಮೇಡು ಮತ್ತು ಅಲ್ಲಿನ ಗಿಡಮರ, ಪ್ರಾಣಿಪಕ್ಷಿ, ಹಳ್ಳಕೊಳ್ಳ, ಅಲ್ಲಿ ಮಳೆ, ಸುರಿಯುವ ಹಿಮ, ಬೀಸುವ ಚಳಿಗಾಳಿ, ಮೂಡುವ ಮತ್ತು ಮುಳುಗುವ ಸೂರ್ಯ ಚಂದ್ರ ಬೆಳೆದ ಬೆಳೆಗಳು, ತೂಗುವ ತೆನೆಗಳು ಕಣಗಾಲದ ಬದುಕು, ಬೇಟೆಗಾರನ ಸುತ್ತಾಟಗಳು, ಆ ಹೊತ್ತಿನ ರೋಮಾಂಚನಗಳು, ಹೀಗೆ ಅವನು ಕಂಡದ್ದನ್ನು ಅಥವಾ ಚಿತ್ರಿಸಿದ್ದನ್ನೆಲ್ಲಾ ಸೀದಾ ಓದುಗನ ಎದೆಯೊಳಗೆ ನಡೆದುಬಿಡುವಂತೆ, ನೇರವಾಗಿ ಕಣ್ಣಿಗೆ ಕಟ್ಟುವಂತೆ, ಓದುಗನೊಳಗೆ ಅನುರಣಿಸುವಂತೆ ಮಾಡುವ, ಅದರೊಳಗೇ ಮುಳುಗಿ ಹೋದಂಥ ಅನುಭವವನ್ನು ನೀಡಬಲ್ಲ ಸರಿಸಾಟಿಯಿಲ್ಲದಂಥ ನಿರೂಪಣಾ ತಂತ್ರ ಬುನಿನ್ದು. ಇಂಥ ಇಂದ್ರಿಯ ಜನ್ಯ ವರ್ಣನಾತ್ಮಕತೆ ಬುನಿನ್ನ ಶೈಲಿಗೆ ಕಾವ್ಯಾತ್ಮಕ ಸಾಂದ್ರತೆಯನ್ನು ಮಾಂತ್ರಿಕ ಸ್ಪರ್ಶವನ್ನೂ ತಂದುಕೊಟ್ಟಿದೆ.
ಕಾದಂಬರಿ : ಸುಖ್ಬೋಲ್ | ಮೂಲ : ಇವಾನ್ ಬುನಿನ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ
(ಭಾಗ 1)
ಹುಟ್ಟಿನಿಂದ ಯೂಶ್ಕಾ ಒಬ್ಬ ರೈತ. ಆದರೆ ಅವನು ಜೀವನದಲ್ಲಿ ಕೆಲಸ ಅಂತ ಮಾಡಿದವನೇ ಅಲ್ಲ. ಗೊತ್ತು ಗುರಿಯಿಲ್ಲದ ಅಲೆಮಾರಿ ಬದುಕು ಅವನದಾಗಿತ್ತು. ತಾತ್ಕಾಲಿಕವಾಗಿ ಆತಿಥ್ಯ ನೀಡಿದವರಿಗೆ ಅವನು ಪ್ರತಿಯಾಗಿ ತನ್ನ ಮೈಗಳ್ಳತನದ ಮತ್ತು ‘ಅನುಚಿತವರ್ತನೆ’ಗಳ ಕಥೆಗಳನ್ನು ಹೇಳುತ್ತಿದ್ದ.
‘ನಾನೊಬ್ಬ ರೈತ ಕಣಪ್ಪ, ಆದರೆ ಬುದ್ಧಿವಂತ. ನನ್ನನ್ನ ನೋಡಿ, ನಾನು ಗೂನು ಬೆನ್ನಿನವನಂತೆ ಕಾಣಲ್ವ? ಹಂಗಾಗಿ ನಾನ್ಯಾಕೆ ಕೆಲ್ಸ ಮಾಡ್ಲಿ?’ ಅಂತ ಅನ್ನುತ್ತಿದ್ದ.
ಅವನು ನಿಜಕ್ಕೂ ಗೂನುಬೆನ್ನಿನವನ ಥರವೇ ಕಾಣುತ್ತಿದ್ದ. ಅವನ ಕಣ್ಣುಗಳಲ್ಲಿ ಅಣಕ ಮತ್ತು ಅರಿವು ಇತ್ತು. ಅವನ ಮುಖ ಬೋಳುಬೋಳಾಗಿತ್ತು. ತಾಮ್ರ ಬಣ್ಣದ ಉದ್ದನೆಯ ತಲೆಗೂದಲನ್ನು ತನ್ನ ನೀಳ ಮತ್ತು ಬಲಿಷ್ಠ ಕೈಬೆರಳುಗಳಿಂದ ಆಗಾಗ ಹಿಂದಕ್ಕೆ ತೀಡಿಕೊಳ್ಳುತ್ತಿದ್ದ. ವ್ಯವಸಾಯ ಮಾಡೋದು ಅಸಭ್ಯವಾದದ್ದು ಮತ್ತು ಬೇಜಾರು ಹುಟ್ಟಿಸುವಂಥದ್ದು ಅಂತ ಅವನು ಅಂದುಕೊಂಡಿದ್ದ. ಹಂಗಾಗಿ ಅವನು ಕಿಯೇಫ್ ಮನಾಸ್ಟ್ರಿಗೆ ಹೋಗಿದ್ದ. ಅಲ್ಲಿ ಪೂರಾ ‘ಪಕ್ವಗೊಂಡು’ ಕಟ್ಟಕಡೆಗೆ ತನ್ನ ‘ಅನುಚಿತ’ ವರ್ತನೆಯಿಂದಾಗಿ ಬಹಿಷ್ಕರಿಸಲ್ಪಟ್ಟಿದ್ದ. ನಂತರ ಪವಿತ್ರ ಯಾತ್ರಾರ್ಥಿಯ ಸೋಗು ಹಾಕುವುದರಿಂದ, ಅದು ಹಳೆಯ ಉಪಾಯವಾದರೂ ಹಾಗೂ ಅಂಥ ಲಾಭವಿಲ್ಲದ್ದಾದರೂ, ತನ್ನನ್ನು ತಾನು ರಕ್ಷಿಸಿಕೊಳ್ಳಬಹುದೆಂಬುದು ಅವನಿಗೆ ಮನವರಿಕೆಯಾಗಿತ್ತು. ಅಂತೆಯೇ ಅವನು ಆ ತಂತ್ರವನ್ನೂ ಪರೀಕ್ಷೆಗೊಡ್ಡಿದ್ದ: ತನ್ನ ಬಿಗಿ ನಿಲುವಂಗಿಯನ್ನು ಕಳಚದೆ, ಅವನು ತನ್ನ ಮೈಗಳ್ಳತನ ಮತ್ತು ಕಚ್ಚೆ ಹರುಕುತನದ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದ. ಅಶ್ಲೀಲ ಅಂಗಸನ್ನೆಗಳಲ್ಲಿ ತಾನೇಕೆ ಬಹಿಷ್ಕೃತಗೊಂಡೆ ಎಂಬುದನ್ನು ತೋರಿಸುವ ಮೂಲಕ ಮನಾಸ್ಟ್ರಿಯನ್ನು ಅಣಕಿಸುತ್ತಿದ್ದ.
‘ಹಂಗಾಗಿ ಅವರು ಅಲ್ಲಿಂದ ನನ್ನನ್ನು ಕಿತ್ತೊಗೆದರು. ನಾನು ಸೀದಾ ತಿರುಗಿ ನನ್ನ ತಾಯ್ನಾಡು ರಷ್ಯಾಕ್ಕೆ ಬಂದೆ…ಈಗ ಇಲ್ಲಿ ಜೊತೆಗಿದೀನಿ…’ ಅಂತ ಗಂಡಸರತ್ತ ನೋಡುತ್ತಾ ಕಣ್ಣು ಮಿಟುಕಿಸಿದ. ರಷ್ಯನ್ ಮಾತೆ ಅವನಗೆ ಅನ್ನ ಕೊಟ್ಟಳು. ಇರುಳಲ್ಲಿ ನೆಲೆಯಿತ್ತಳು. ಅವನ ಆನಂದ ಪರವಶದ ಮಾತುಗಳಿಗೆ ಕಿವಿಯಾದಳು.
‘ಹಂಗಾದ್ರೆ ನೀನು ಯಾವತ್ತೂ ಕೆಲ್ಸಾನೇ ಮಾಡಿಲ್ಲ ಅನ್ನು,’ ಅವನ ಸುತ್ತ ನೆರೆದಿದ್ದ ಗಂಡಸರು ಪ್ರತೀಕ್ಷೆಯ ರೋಮಾಂಚಕಾರಿ ಭರವಸೆಗಳೊಂದಿಗೆ ಕೇಳಿದರು. ಆಗವರ ಕಂಗಳಲ್ಲಿ ಮಿಂಚಿತ್ತು.
‘ಯಾವ ಬ್ರಹ್ಮ ಬಂದ್ರೂ ನನ್ ಕೈಲಿ ಈಗ ಕೆಲ್ಸ ಮಾಡ್ಸಾಕಾಗಲ್ಲ, ನಾನು ಪೂರಾ ಯಕ್ಕುಟ್ಟಿ ಹೋಗಿದೀನಿ. ನನಗೀಗ ಆ ಮನಾಸ್ಟ್ರಿಯ ಹೋತಕ್ಕಿಂತ ಹೆಚ್ಚು ಮದವಿದೆ.’ ಯೂಶ್ಕಾ ಉತ್ತರಿಸಿದ.
ಅವನು ಅನುಭವಸ್ಥನಾಗಿ ಸುಖ್ದೋಲ್‍ಗೆ ಬಂದಾಗ, ಸೀದಾ ಮನೆಯತ್ತ ನಡೆದು ಹಜಾರವನ್ನು ಹೊಕ್ಕ. ಅಲ್ಲಿ ನಟಾಲಿಯಾ, ‘ಗುಡಿಸಿದೆ ನಾನು, ಗುಡಿಸಿದೆ ನಾನು ನೆಲವನು ಆ ದಿನ, ಸಿಕ್ಕಿತ್ತು ನನಗೆ ಸಿಕ್ಕಿತು ನನಗೆ, ಒಂದೇ ಒಂದು ಸಕ್ಕರೆಯ ಕಣ…’ ಹಾಡೊಂದನ್ನು ಗುಣುಗುತ್ತಾ ಕೂತಿದ್ದಳು. ಅವಳು ಅವನನ್ನು ಕಾಣುತ್ತಲೇ ಭಯದಿಂದ ಅವನನ್ನೇ ದಿಟ್ಟಿಸುತ್ತಾ ಕೂಗಿದಳು: ‘ಯಾರು ನೀನು?’
ಇದನ್ನೂ ಓದಿ : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ
‘ನಾನೊಬ್ಬ ಮನುಷ್ಯ. ನಾನು ಬಂದಿದೀನಿ ಅಂತ ನಿನ್ನ ಒಡತಿಗೆ ಹೇಳು’, ಅನ್ನುತ್ತಾ ಯೂಶ್ಕಾ ಚಕ್ಕನೆ ಅಡಿಯಿಂದ ಮುಡಿಯವರೆಗೂ ಅವಳತ್ತ ಮಿನುಗು ನೋಟ ಬೀರಿ ಅಂದ.
‘ಯಾರದು?’ ಒಡತಿ ಡ್ರಾಯಿಂಗ್ ರೂಮಿನಿಂದ ಕೂಗಿಕೊಂಡಳು.
‘ನಾನೊಬ್ಬ ಬೈರಾಗಿ, ಕದ್ದು ಬಂದಿರುವ ಸೈನಿಕ ಅಲ್ಲ,’ ಅನ್ನುವ ಮುಖೇನಾ ಯೂಶ್ಕಾ ಒಡತಿಯ ಹೆದರಿಕೆಗಳನ್ನೆಲ್ಲಾ ಒಂದು ಚಣದಲ್ಲಿ ತಣ್ಣಗಾಗಿಸಿದ. `ಹಂಗೂ ನಿನಗೆ ಅನುಮಾನ ಇತ್ತು ಅಂದ್ರೆ ನನ್ನ ತಲಾಷು ಮಾಡಿ. ನಂತರ ನನಗೀ ರಾತ್ರಿ ಇಲ್ಲಿ ಉಳುಕಂಡು ಒಂಚೂರು ಸುಧಾರಿಸಿಕೊಳ್ಳಲು ಅವಕಾಶ ಕೊಡಿ,’ ಅಂದ ಮುಂದುವರೆದು. ಮುಚ್ಚುಮರೆಯಿಲ್ಲದ ಅವನ ಮಾತುಗಳು ಒಡತಿಯನ್ನು ಚಕಿತಗೊಳಿಸಿದವು. ಹಂಗಾಗಿ ಮಾರನೆಯ ದಿನದಿಂದ ಅವನು ಸೇವಕರುಗಳ ಮನೆಗೋಗಿ ಅಲ್ಲಿ ಅವರುಗಳಲ್ಲಿ ಒಂದಾಗಿ ಉಳುಕೊಳ್ಳಬಹುದು ಅಂತ ಹೇಳಿದಳು. ಬಿರುಗಾಳಿ, ಆಲಿಕಲ್ಲುಗಳ ಮಳೆ ಒಂದರ ಹಿಂದೆ ಒಂದರಂತೆ ರಪ್ಪಡಿಸಿದವು. ಆದರೆ ಅವನು ಮಾತ್ರ ದಣಿವರಿಯದವನಂತೆ ತನ್ನ ಕಥೆಗಳ ಮುಖೇನಾ ಆತಿಥ್ಯಕಾರಿಣಿಯನ್ನು ರಂಜಿಸಿದ. ಮಿಂಚಿನಿಂದ ಚಾವಣಿಯನ್ನು ರಕ್ಷಿಸುವ ಸಲುವಾಗಿ ಚಾಚು ಕಿಟಕಿಗಳನ್ನು ಹಲಗೆ ಹಾಸುಗಳಿಂದ ಮುಚ್ಚಬೇಕು ಅಂದುಕೊಂಡ. ಅಂತೆಯೇ ತುಂಬಾ ಭಯ ಹುಟ್ಟಿಸುತ್ತಿದ್ದ ಸಿಡಿಲು ಹೊಡೆತಗಳ ನಡುವೆ ಅವು ಎಷ್ಟು ಕಡಿಮೆ ಅಪಾಯಕಾರಿಗಳು ಎಂಬುದನ್ನು ಸಾಬೀತು ಪಡಿಸುವ ಸಲುವಾಗಿ ಅವನು ಆ ಹೊತ್ತಲ್ಲಿ ಪೋರ್ಟಿಕೋದಡಿಗೆ ಓಡಿಬಿಡುತ್ತಿದ್ದ. ಸಮವಾಗಳನ್ನು ಬಿಸಿ ಮಾಡಲು ಹೆಣ್ಣಾಳುಗಳಿಗೆ ಸಹಾಯ ಮಾಡುತ್ತಿದ್ದ. ಆ ಹೆಣ್ಣಾಳುಗಳು ಅವನತ್ತ ಹುಬ್ಬುಗಂಟಿಕ್ಕಿಕೊಂಡು ನೋಡುತ್ತಿದ್ದರು. ಅಂತೆಯೇ ಅವರುಗಳು ತಮ್ಮ ದೇಹಗಳತ್ತ ಅವನು ಬೀರುತ್ತಿದ್ದ ಕಾಮುಕ ದೃಷ್ಟಿಯ ಬಗ್ಗೆ ಎಚ್ಚರ ವಹಿಸುತ್ತಿದ್ದರು. ಆದರೆ ಅವನ ಗೇಲಿಯ ಮಾತುಗಳಿಗೆ ಅವರುಗಳು ನಗಾಡುತ್ತಿದ್ದರು. ನಟಾಲಿಯಾ ಕತ್ತಲ ಮೂಲೆಯೊಂದರಲ್ಲಿ ನಿಂತು, ‘ನಾನು ನಿನ್ನ ಪ್ರೀತೀಲಿ ಬಿದ್ದೆ,’ ಅಂತ ಸುಮಾರು ಸಾರ್ತಿ ಬಿರಬಿರನೆ ಪಿಸುಗುಟ್ಟಿಕೊಂಡಳು. ಆದರೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹೆದರುತ್ತಿದ್ದಳು. ಕಳಪೆ ತಂಬಾಕಿನ ವಾಸನೆಯಿಂದ ಕೂಡಿದ್ದ ಅವನ ಇಡೀ ನಿಲುವಂಗಿ, ತುಂಬಾ ಅಂದರೆ ತಂಬಾ ದಿಗಿಲು ಹುಟ್ಟಿಸುವಂತಿದ್ದ ನೋಟದಿಂದಾಗಿ ಅವನು ಅವಳಿಗೆ ಜಿಗುಪ್ಸೆ ಹುಟ್ಟಿಸುವಂತಿದ್ದ.
ಅವಳಿಗೆ ಮುಂದೇನಾಗಬಹುದು ಅಂತ ಖಂಡಿತ ಗೊತ್ತಾಗಿತ್ತು. ಅವಳು ಒಡತಿಯ ಮಲಗುವ ಕೋಣೆಯ ಬಾಗಿಲಿಗೆ ತುಂಬಾ ಹತ್ತಿರವಾಗಿ ಕಾರಿಡಾರಿನಲ್ಲಿ ಒಬ್ಬಳೇ ಮಲಗಿದ್ದಳು. ಯೂಶ್ಕಾ ಆಗಲೇ ಅವಳತ್ತ ಬುಸುಗುಟ್ಟಿದ್ದ: ‘ನಾನು ಬರ್ತೀನಿ. ಒಂದು ವೇಳೆ ಅದಕ್ಕಾಗಿ ನನ್ನ ನೀನು ಕೊಂದ್ರೂ ಪರ್ವಾಗಿಲ್ಲ. ನೀನೇನಾದರೂ ಕಿರುಚಿಕೊಳ್ಳೋಕೆ ಶುರು ಮಾಡ್ದೆ ಅಂದ್ರೆ, ಈ ಮನೇನೇ ಪೂರಾ ಸುಟ್ಟು ಬೂದಿ ಮಾಡಿ ಬಿಡ್ತೀನಿ.’ ಎಲ್ಲಕ್ಕಿಂತ ಮಿಗಿಲಾಗಿ ಅವಳನ್ನು ಶಕ್ತಿಗುಂದಿಸಿದ್ದು: ಯಾವುದೋ ಒಂದು ‘ತಪ್ಪಿಸಿಕೊಳ್ಳಲಾಗದ’ ಘಟನೆಯೊಂದು ಸಾಕ್ಷಾತ್ಕರಣವಾಗುತ್ತಿರುವುದಕ್ಕೆ, ಷೋಸ್ಕಿಯಲ್ಲಿ ಅವಳು ಕಂಡಿದ್ದ ಆ ಭಯಾನಕ ಹೋತದ ಕನಸು ಸಧ್ಯದಲ್ಲೇ ನಿಜವಾಗಲಿರುವುದಕ್ಕೆ, ಕುಮಾರಿ ತಾನ್ಯಾಳೊಂದಿಗೆ ತಾನೂ ನಾಶವಾಗಿ ಹೋಗಬೇಕೆಂಬುದು ಸ್ಪಷ್ಟವಾಗಿ ಮೊದಲೇ ನಿಯಾಮಕ ಮಾಡಿರುವ ದೈವ ಸಂಕಲ್ಪ ಎಂಬುದಕ್ಕೆ. ಇರುಳಿನಲ್ಲಿ ಇಲ್ಲಿ ಮನೆಯಲ್ಲಿ ದೆವ್ವದ್ದೇ ಕಾರುಬಾರು, ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿ ಹೋಗಿತ್ತು. ಬೆಂಕಿ, ಬಿರುಗಾಳಿ, ಆಲಿಕಲ್ಲಿನ ಮಳೆಯ ಹೊರತಾಗಿಯೂ ಕುಮಾರಿ ತಾನ್ಯಳನ್ನು ಹುಚ್ಚುತನಕ್ಕೆ ದೂಡುತ್ತಿರುವುದು, ಅವಳನ್ನು ನಿದ್ದೆಯಲ್ಲಿ ಭೊಗಲಾಲಸೆಯಿಂದ, ಹುಚ್ಚಾಬಟ್ಟೆ ಗೋಳಾಡುವಂತೆ ಮಾಡುತ್ತಿರುವುದು, ನಂತರ ಒಮ್ಮೆಗೇ ಭಯಾನಕವಾಗಿ ಕಿರುಚಿಕೊಂಡು ನೆಗೆದು ಬಿಡುತ್ತಿದ್ದದ್ದು ಯಾಕೆಂಬುದು ಎಲ್ಲರಿಗೂ ಅರ್ಥವಾಗಿಹೋಗಿತ್ತು. ‘ಈಡನ್ನಿನ ಹಾಗೂ ಜರೂಸಲಂನ ಸರ್ಪ ನನ್ನ ಕತ್ತು ಹಿಸುಕಿ ಕೊಲ್ಲುತ್ತಿದೆ!’ ಅಂತ ಅವಳು ಕಿರುಚಿಕೊಳ್ಳತ್ತಿದ್ದಳು. ಅದು ದೆವ್ವ ಆಗಿರದೇ ಹೋದಲ್ಲಿ, ಆ ಸರ್ಪ, ಇರುಳಿನಲ್ಲಿ ಹುಡುಗಿಯರು ಮತ್ತು ಹೆಂಗಸರುಗಳ ರೂಮಿಗೆ ಬರುವ ಆ ಬೂದು ಬಣ್ಣದ ಹೋತ ಮತ್ಯಾರು ಆಗಿರಲಿಕ್ಕೆ ಸಾಧ್ಯ? ಗವ್ವೆನ್ನುವ ಕತ್ತಲೆಯಲ್ಲಿ, ಮಳೆ ಹಿಡಿದ ಇರುಳುಗಳಲ್ಲಿ ಗುಡುಗು ಮಿಂಚುಗಳು ಅಬ್ಬರಿಸುತ್ತಿರುವಾಗ, ಮಿಂಚಿನ ಬೆಳಕು ಕಪ್ಪು ಪ್ರತಿಮೆಗಳನ್ನು ಫಳಾರಿಸುತ್ತಿರುವಾಗ, ಅವನ ಬರುವಿಕೆಗಿಂತ ಭಯ ಹುಟ್ಟಿಸುವ ಸಂಗತಿ ಲೋಕದಲ್ಲಿ ಮತ್ಯಾವುದಿದೆ? ನಟಾಲಿಯಾಳಿಗೆ ಅವನ ಪಿಸುಗುಡುವಿಕೆಯಲ್ಲಿದ್ದ ಉದ್ವೇಗ, ಕಾಮಾತುರತೆಗಳು ಪಶುಪ್ರಾಯಗಿದ್ದವು. ಹಾಗಿರುವಾಗ ಅವಳು ಅವುಗಳ ವಿರುದ್ಧ ಸೆಣೆಸಾಡಲು ಹೇಗೆ ತಾನೆ ಸಾಧ್ಯವಿತ್ತು? ಆವರಿಸಿಕೊಳ್ಳಲಿರುವ, ಅನಿವಾರ್ಯವಾಗಿ ಬಂದೆರಗಲಿರುವ ಆ ವಿಧಿನಿಯತ ಘಳಿಗೆಗಾಗಿ ಗದಗುಡುವ ಎದೆಯಲ್ಲಿ ಕತ್ತಲೆಗೆ ಕಣ್ಣು ನೆಟ್ಟು, ಒಂದು ಸಣ್ಣ ಸದ್ದಿಗೂ ಗಕ್ಕನೆ ಬೆಚ್ಚುತ್ತಾ ಕಾರಿಡಾರಿನಲ್ಲಿ ಕುದುರೆ ಪಾವಡದ ಮೇಲೆ ಕಾಯುತ್ತಾ ಕೂರುತ್ತಿದ್ದಳು. ಆ ಚಣದಲ್ಲಿ ಅವಳಿಗೆ ಅತೀ ಆವೇಶದಿಂದ, ಅತೀ ಭಾವವಿಕಾರದಿಂದ ಮತ್ತು ದಾರುಣ ವೇದನೆಯಿಂದ ಕುಮಾರಿ ತಾನ್ಯಾಳಿಗಿಂತಲೂ ಮಿಗಿಲಾಗಿ ಕಿರುಚಿಕೊಂಡುಬಿಡಬೇಕು ಅನಿಸುತ್ತಿತ್ತು.
ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು ; ಕಥೆಗಾರ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಇಂದಿನಿಂದ ನಿಮ್ಮ ಓದಿಗೆ
ಆ ತಪ್ಪಿಸಿಕೊಳ್ಳಲಾಗದ್ದು ಘಟಿಸೇ ಬಿಟ್ಟಿತು. ಬೇಸಿಗೆಯ ಕೊನೆ ದಿನಗಳ ಒಂದು ಕರಾಳ ಇರುಳಿನಲ್ಲಿ, ಸಂತ ಎಲಿಜ್ಹನ ಹಬ್ಬದ ಮುನ್ನಾ ದಿನ ಯೂಶ್ಕಾ ಬಂದಿದ್ದ. ಆ ಇರುಳಿನಲ್ಲಿ ಗುಡುಗಿನ ಸದ್ದಿರಲಿಲ್ಲ. ಅಂತೆಯೇ ನಟಾಲಿಯಾಳಿಗೆ ನಿದ್ದೆ ಎಂಬುದೂ ಇರಲಿಲ್ಲ. ಒಂದು ಸಣ್ಣ ಜೊಂಪಿಗೆ ಜಾರಿದ್ದಳು ಅಷ್ಟೇ, ಯಾರೋ ಹಿಡಿದು ಕುಲುಕಾಡಿಸುತ್ತಿರುವರೇನೋ ಎಂಬಂತೆ ಬೆಚ್ಚಿ ಬಿದ್ದು ಎಚ್ಚರಗೊಂಡಳು. ಗಾಢ ನಿದ್ದೆಯ ಹೊತ್ತಿನ ಕಾರಿರುಳು. ಎದೆಯ ಹುಚ್ಚು ಬಡಿತದಿಂದ ಅವಳಿಗದು ಗೊತ್ತಾಗಿತ್ತು. ಅವಳು ದಡ್ಡನೆ ಮೇಲೆದ್ದು, ಕಾರಿಡಾರಿನ ತುತ್ತ ತುದಿಯವರೆಗೂ ದಿಟ್ಟಿಸಿ ನೋಡಿದಳು. ಚಣ ಚಣಕ್ಕೂ ಕಾರಿಡಾರಿನಲ್ಲಿ ಹಗಲಿನಂತೆ ಅಚ್ಚಗಾಗುತ್ತಿತ್ತು. ಅವಳು ಓಡಲಾರಂಭಿಸಿದಳು. ತುಂಬಾ ದಿನಗಳಿಂದ ಒಟ್ಟಿಲು ಹಾಕಿದ್ದ ಆಸ್ಪ್ ಮರದ ದಿಮ್ಮಿಗಳು ಮಿಂಚಿನ ಬೆಳಕಲ್ಲಿ ಮಾಮೇರಿ ಬೆಳ್ಳಗೆ ಕಾಣುತ್ತಿದ್ದವು. ಊಟದ ಮನೆಯತ್ತ ಓಡಿದಳು. ಅದರ ಒಂದು ಕಿಟಕಿ ಹಾರೊಡೆದಿತ್ತು. ಗಾಳಿಗೆ ಮರಗಳು ಮಾಡುತ್ತಿದ್ದ ದೃಢ ಅಲುಗಾಟದ ಸದ್ದು ಅವಳ ಕಿವಿ ತುಂಬುತ್ತಿತ್ತು. ಜೊತೆಗಲ್ಲಿ ಕತ್ತಲಿತ್ತು. ಕಿಟಕಿಗಳಾಚೆಗೆ ಮಿಂಚಿನ ಫಳಾರಿಸುವ ಬೆಳಕಿತ್ತು. ಒಂದು ಚಣ ಕತ್ತಲು ಅಲ್ಲಿನ ಎಲ್ಲದನ್ನೂ ಆವರಿಸಿಕೊಂಡುಬಿಡುತ್ತಿತ್ತು. ಮರು ಚಣವೇ ಮಿಂಚಿನ ಬೆಳಕು ಅವುಗಳ ಮೇಲೆ ಅಲ್ಲಲ್ಲಿ ಬೆಳಗುತ್ತಿತ್ತು. ದೇವಲೋಕದ ಚಿನ್ನದ ಮತ್ತು ಮಸುಕು ನೇರಿಳೆ ಬಣ್ಣದೆದುರು ತೋಟದೊಳಗಿನ ಕಸೂತಿ ಬಟ್ಟೆಯನ್ನು ಹೊದ್ದಂತಿದ್ದ ಮರಗಳ ತುದಿಗಳು, ಮಸುಕು ಹಸಿರಿನ ಘೋರ ಬರ್ಚ್ ಹಾಗೂ ಪಾಪ್ಲರ್ ಮರಗಳು ಹಿಗ್ಗುತ್ತಾ, ಕಂಪಿಸುತ್ತಾ ಒನೆದಾಡುತ್ತಿದ್ದವು.
ಈ ಕಾದಂಬರಿಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
Published On - 11:51 am, Fri, 24 June 22