Literature: ನೆರೆನಾಡ ನುಡಿಯೊಳಗಾಡಿ; ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕನ್ನು ಒದಗಿಸಿದ್ದವು

Ivan Bunin : ಅದಾದ ಒಂದು ತಿಂಗಳಿನ ನಂತರ ಅವಳಿಗೆ ತನ್ನೊಂದಿಗೆ ಮಗು ಬೆಳೆಯುತ್ತಿರುವ ಅನುಭವವಾಗತೊಡಗಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಯುವ ಯಜಮಾನರುಗಳು ಯುದ್ಧದಿಂದ ಬರುವ ಹಿಂದಿನ ದಿನ ಜಹಗೀರುದಾರನ ಮನೆಗೆ ಬೆಂಕಿ ಬಿದ್ದಿತ್ತು.

Literature: ನೆರೆನಾಡ ನುಡಿಯೊಳಗಾಡಿ; ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕನ್ನು ಒದಗಿಸಿದ್ದವು
ಲೇಖಕ ಇವಾನ್ ಬುನಿನ್ ಮತ್ತು ಅನುವಾದಕ ಎಸ್. ಗಂಗಾಧರಯ್ಯ
Follow us
ಶ್ರೀದೇವಿ ಕಳಸದ
|

Updated on:Jun 24, 2022 | 1:04 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ‘ಸಾಗರಗಳಾಚೆಗೆ…ಕಡಲುಗಳಾಚೆಗೆ…’ ಪಿಸುಗುಡುತ್ತಿದ್ದವಳು ಈ ಪೈಶಾಚಿಕ ಮಂತ್ರವನ್ನು ಪದೇ ಪದೇ ಹೇಳುವುದರಿಂದ ತನ್ನ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂಬುದು ಅವಳಿಗೆ ಅರಿವಾಗುತ್ತಲೇ ಚಕ್ಕನೆ ಅದನ್ನು ನಿಲ್ಲಿಸಿ, ‘ಮಲಗಿಹುದದರ ಮೇಲೆ…’ ಓಬೀರಾಯನ ಕಾಲದ ಬೆದರಿಕೆಯ ಒಂದೆರಡು ಸೊಲ್ಲು ನುಡಿದು ಹಿಂದಿರುಗಿ ನೋಡಿದರೆ ಅವಳಿಂದ ಕೇವಲ ಎರಡು ಮಾರು ದೂರದಲ್ಲಿ ಯೂಶ್ಕಾ ನಿಂತಿದ್ದ. ಪೊಟರೆಯಂಥ ನಿಸ್ತೇಜ ಕಪ್ಪು ಕಣ್ಣುಗಳಿಗಾಗಿ ಇದ್ದ ಅವನ ಮುಖವನ್ನು ಮಿಂಚೊಂದು ಮಿನುಗಿಸಿತು. ಒಂದೇ ಒಂದು ಮಾತಿಲ್ಲದೆ ಅವನು ಏಕಾಏಕಿ ಅವಳ ಮೇಲೆರಗಿದ. ತನ್ನ ಉದ್ದನೆಯ ಕೈಗಳಿಂದ ಅವಳನ್ನು ಬಿಗಿಯಾಗಿ ಹಿಡಿದುಕೊಂಡ. ಒಂದೇ ಚಣದಲ್ಲಿ ನಜ್ಜುಗುಜ್ಜು ಮಾಡುತ್ತಾ ಅವಳನ್ನು ಮಂಡಿಯ ಮೇಲೆ ಕುಕ್ಕರಿಸುವಂತೆ ಮಾಡಿ, ನಂತರ ಅವಳನ್ನು ಅಂಗಾತವಾಗಿ ಶೀತಗಟ್ಟಿದ್ದ ನೆಲಕ್ಕೆ ಬೀಳಿಸಿಕೊಂಡ…

ಕಾದಂಬರಿ : ಸುಖ್ದೋಲ್  | ಮೂಲ :  ಇವಾನ್ ಬುನಿನ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ  

(ಭಾಗ 2)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಯೂಶ್ಕಾ ಮಾರನೆಯ ದಿನದ ಇರುಳು ಕೂಡಾ ಬಂದಿದ್ದ. ಬರುತ್ತಲೇ ಹೋದ ಅನುಕ್ರಮವಾಗಿ ಹಲವು ಇರುಳು. ಅವಳು ಮನಸಿಲ್ಲದ ಮನಸಿನಲ್ಲಿ, ಅಪಾರ ಭಯ ಮತ್ತು ಜಿಗುಪ್ಸೆಯಲ್ಲಿ ಅವನಿಗೆ ಶರಣಾಗತಳಾದಳು. ಅವಳಿಗೆ ಪ್ರತಿಭಟಿಸುವ ಅವಕಾಶವೇ ಸಿಗಲಿಲ್ಲ. ಅಥವಾ ಹೇಗೆ ತಾನ್ಯಳಿಗೆ ಇರುಳಿನಲ್ಲಿ ಬಂದು ಸುಖಿಸುತ್ತಿದ್ದ ದೆವ್ವವನ್ನು ನಿಗ್ರಹಿಸಲಾಗುತ್ತಿರಲಿಲ್ಲವೋ, ಅದೇರೀತಿ, ಅವರು ಹೇಳುವಂತೆ ತುಂಬಾ ಚೆಲುವೆ ಆಗಿದ್ದ ಅಜ್ಜಿಗೆ ಘೋರ ಫಟಿಂಗ ಮತ್ತು ಕಳ್ಳನಾಗಿದ್ದ, ಕಡೆಗೆ ಸೈಬೀರಿಯಾಕ್ಕೆ ಗಡೀಪಾರುಗೊಂಡಿದ್ದ ತನ್ನದೇ ಜೀತಗಾರ ಟಿಕಾಚ್‍ನನ್ನು ಹೇಗೆ ನಿಗ್ರಹಿಸಲಾಗುತ್ತಿರಲಿಲ್ಲವೋ, ಹಾಗೆಯೇ ನಟಾಲಿಯಾಳಿಗೆ ನಿಗ್ರಹಿಸಲಾಗದೇ ಹೋಗಿದ್ದಲ್ಲದೆ, ಅವಳಿಗೆ ತನ್ನ ಒಡತಿಯ ಇಲ್ಲವೇ ಸೇವಕರುಗಳ ರಕ್ಷಣೆ ಪಡೆಯಲೂ ಆಗಲಿಲ್ಲ. ಕಡೆಗೆ ಅದೊಂದು ದಿನ ಯೂಶ್ಕಾನಿಗೆ ನಟಾಲಿಯಾಳೂ ಸಾಕಾಗಿ, ಸುಖ್ದೋಲ್ ಕೂಡಾ ಸುಸ್ತಾಗಿ, ಹೇಗೆ ಧುತ್ತನೇ ಕಾಣಿಸಿಕೊಂಡಿದ್ದನೋ ಹಾಗೆಯೇ ಧುತ್ತನೆ ಕಣ್ಮರೆಯಾಗಿಬಿಟ್ಟ.

ಅದಾದ ಒಂದು ತಿಂಗಳಿನ ನಂತರ ಅವಳಿಗೆ ತನ್ನೊಂದಿಗೆ ಮಗು ಬೆಳೆಯುತ್ತಿರುವ ಅನುಭವವಾಗತೊಡಗಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಯುವ ಯಜಮಾನರುಗಳು ಯುದ್ಧದಿಂದ ಬರುವ ಹಿಂದಿನ ದಿನ ಜಹಗೀರುದಾರನ ಮನೆಗೆ ಬೆಂಕಿ ಬಿದ್ದಿತ್ತು. ತುಂಬಾ ಹೊತ್ತು ಭಯಾನಕವಾಗಿ ಧಗಧಗಿಸಿತ್ತು. ಅವಳ ಎರಡನೆಯ ಕನಸು ನಿಜವಾಗಿತ್ತು. ಅದೊಂದು ಸಂಜೆ. ಒಳಗೆ ಮನೆ ಚಿನ್ನದಂಥ ಬೆಳಕಿನ ಚೆಂಡೊಂದರಿಂದ ಅಪ್ಪಳಿಸಲ್ಪಟ್ಟಾಗ ಹೊರಗೆ ಧೋ ಅಂತ ಜಡಿಮಳೆ ಸುರಿಯುತ್ತಿತ್ತು. ಸೊಲುಷ್ಕಾನ ಪ್ರಕಾರ ಅದು ಅಜ್ಜನ ಮಲಗುವ ಕೋಣೆಯ ಮುಚ್ಚೊಲೆಯಿಂದ ಲಂಘಿಸಿ, ಕ್ರಮೇಣ ಕಣ್ಮುಚ್ಚಿ ಕಣ್ಬಿಡುವುದರೊಳಗೆ ಇತರೆ ರೂಮುಗಳಲ್ಲೂ ನರ್ತಿಸತೊಡಗಿತ್ತು. ಹೊಗೆ ಮತ್ತು ಬೆಂಕಿಯ ಜ್ವಾಲೆಗಳನ್ನು ನೋಡುತ್ತಲೇ ನಟಾಲಿಯಾ ಇತ್ತೀಚೆಗೆ ಇರುಳು ಮತ್ತು ಹಗಲುಗಳನ್ನು ಕಣ್ಣೀರಿನೊಂದಿಗೆ ಕಳೆಯುತ್ತಿದ್ದ ಸ್ನಾನದ ಮನೆಯಿಂದ ಚೆನ್ನಾಗಿದ್ದ ವಸ್ತುಗಳನ್ನೆಲ್ಲಾ ತನ್ನಿಂದಾದಷ್ಟನ್ನು ಅವುಚಿಕೊಂಡು ಆಚೆ ಓಡಿದಳು. ತರುವಾಯ ಅವಳು ವೃತ್ತಾಂತಿಸಿದಂತೆ, ಹಾಗೆ ಓಡಿ ಬರುವಾಗ ತೋಟದೊಳಗೆ ಕೆಂಪು ಕೋಟನ್ನು ಧರಿಸಿದ್ದ, ಚಿನ್ನದ ಪಟ್ಟಿಯಿದ್ದ ಉದ್ದನೆಯ ಕಾಸ್ಯಾಕ್ ಟೋಪಿಯನ್ನು ತೊಟ್ಟಿದ್ದವನೊಬ್ಬ ತಾನೂ ತನಗೆ ಬೇಕಾದ್ದನ್ನೆಲ್ಲಾ ಅವುಚಿಕೊಂಡು ತೊಟ್ಟಿಕ್ಕುತ್ತಿದ್ದ ಪೊದೆಗಳೊಳಗಿಂದ, ಬರ್ಡಾಕ್ ಅಂಟು ಮುಳ್ಳುಗಳ ನಡುವಿಂದ ಓಡುತ್ತಿದ್ದನಂತೆ…ನಟಾಲಿಯಾ ನಿಜವಾಗಿಯೂ ಇದನ್ನೆಲ್ಲಾ ನೋಡಿದ್ದಳಾ ಅಥವಾ ಅದವಳ ಭ್ರಮೆಯಾಗಿತ್ತೆ? ಅವಳದನ್ನು ಇಷ್ಟೇ ಅಂತ ಹೇಳಲಾಗದವಳಾಗಿದ್ದಳು. ಆದರೆ ಅದರಿಂದ ಅವಳಿಗೆ ಪೂರಾ ಗೊತ್ತಾಗಿದ್ದು ಏನೆಂದರೆ, ಆ ಭಯ ಅವಳನ್ನು ತನ್ನ ಭಾವೀ ಕಂದನಿಂದ ವಿಮೋಚನೆಗೊಳಿತ್ತು.

ಇದನ್ನೂ ಓದಿ : Translated Story: ನೆರೆನಾಡ ನುಡಿಯೊಳಗಾಡಿ; ಮುಕುಂದ ಜೋಷಿ ಅನುವಾದಿಸಿದ ಹಿಂದಿ ಕಥೆ ‘ತಿರೀಛ’

ನಂತರ ಆ ಶರತ್ಕಾಲದಲ್ಲಿ ಅವಳು ಸೊರಗತೊಡಗಿದ್ದಳು. ಅವಳ ಬದುಕು ನೀರಸ ತೋಡಿನೊಳಗೆ ಸಿಕ್ಕಾಕಿಕೊಂಡಿತ್ತು. ಅದು ಅಲ್ಲಿಂದ ಮತ್ತೆ ಇನ್ಯಾವತ್ತೂ ಮೇಲೇಳಲೇ ಇಲ್ಲ.  ಅವರು ತಾನಾ ಚಿಕ್ಕಮ್ಮನನ್ನು ಸಂತನ ಅವಶೇಷಗಳನ್ನು ಮುತ್ತಿಕ್ಕಿಸುವ ಸಲುವಾಗಿ ವರೋನಿಷ್‍ಗೆ ಕರೆದೊಯ್ದರು. ಅದಾದ ನಂತರ ಆ ದೆವ್ವಕ್ಕೆ ಅವಳ ಬಳಿ ಬರುವ ದೈರ್ಯವಾಗಲಿಲ್ಲ. ಅದೇರೀತಿ ಅವಳ ಮನಸು ಕೂಡಾ ಪ್ರಶಾಂತಗೊಂಡು ಎಲ್ಲರಂತೆ ಬದುಕತೊಡಗಿದಳು. ಅವಳ ಮನಸಿನ ಹುಚ್ಚು ಹಾಗೂ ಉತ್ಸಾಹಗಳು ಕೇವಲ ಅವಳ ಪ್ರಕ್ಷುಬ್ಧ ಕಣ್ಣುಗಳ ತೇಜಸ್ಸಿನಲ್ಲಿ ಮಾತ್ರ ವ್ಯಕ್ತಗೊಳ್ಳುತ್ತಿದ್ದವು. ಅವಳ ಅಪ್ಪಟ ಅವ್ಯವಸ್ಥೆ, ಅನಾಗರೀಕ ಮುಂಗೋಪ ಮತ್ತು ಹತಾಶೆಗಳು ಪ್ರತೀಕೂಲ ಹವಾಮಾನದಲ್ಲಿ ಕೆದರಿಕೊಳ್ಳುತ್ತಿದ್ದವು. ಈ ಯಾತ್ರೆಯಲ್ಲಿ ನಟಾಲಿಯಾ ಕೂಡಾ ಅವಳೊಂದಿಗಿದ್ದಳು. ಅವಳಿಗೆ ಕೂಡಾ ಅದರಿಂದ ಅವಳ ಮನಃಶಾಂತಿ ಪುನರ್‍ಸ್ಥಾಪಿತಗೊಂಡಿತು. ಬಗೆಹರಿಸಲು ಸಾಧ್ಯವೇ ಇಲ್ಲ ಅನ್ನುವ ಸಮಸ್ಯೆಗಳಿಗೆಲ್ಲಾ ಅವಳು ಅಲ್ಲಿ ಪರಿಹಾರ ಕಂಡುಕೊಂಡಳು. ಪ್ಯೋತರ್ ಪೆಟ್ರೋವಿಚ್‍ನ ಭೇಟಿಯ ಆಲೋಚನೆಯೇ ಅವಳೊಳಗೆ ಅದೆಷ್ಟು ನಡುಕ ಹುಟ್ಟಿಸುತ್ತಿತ್ತು! ಅದಕ್ಕಾಗಿ ಅವಳು ತನ್ನನ್ನು ತಾನು ಅದೆಷ್ಟೇ ತಯಾರಿ ಮಾಡಿಕೊಳ್ಳುತ್ತಿದ್ದರೂ, ಶಾಂತವಾಗಿ ಅದರ ಬಗ್ಗೆ ಯೋಚಿಸಲೂ ಕೂಡಾ ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಮತ್ತೆ ಆ ಯೂಶ್ಕಾ, ಅವಳ ಅಪಕೀರ್ತಿ ಮತ್ತು ಅಳಿವು. ಆದರೆ ಅವಳ ಸಾಕ್ಷಾತ್ ವಿನಾಶದ ಏಕತ್ವ, ಅವಳ ಅಸಾಮಾನ್ಯ ವೇದನೆಗಳ ಗಾಢತೆ, ಅವಳ ದುರದೃಷ್ಟದ ಅವನತಿಯೊಳಗಿನ ಧಾತು, ಸಂತನ ಅವಶೇಷಗಳಿದ್ದೆಡೆಗಿನ ಅವಳ ಯಾತ್ರೆ- ಅವಳಿಗೆ ಪ್ರಾಮಾಣಿಕವಾಗಿ ಮತ್ತು ಪ್ರಶಾಂತವಾಗಿ ಪ್ಯೋತರ್ ಪೆಟ್ರೋವಿಚ್‍ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕನ್ನು ಒದಗಿಸಿದ್ದವು. ಅವಳು ವರೋನಿಷ್‍ನಿಂದ ಸುಖ್ದೋಲ್‍ನ ಮನೆಗೆ ಹಿಂದಿರುಗಿದ್ದು- ಸಂನ್ಯಾಸಿನಿಯಂತೆ, ಎಲ್ಲರಿಗೂ ಸರಳ ಸೇವಕಿಯಂತೆ, ಮನದಲ್ಲಿ ಅರಿವು ಮತ್ತು ನಿಷ್ಕಪಟತೆಯೊಂದಿಗೆ. ಬಂದವಳೇ ಧೈರ್ಯದಿಂದ ಪ್ಯೋತರ್ ಪೆಟ್ರೋವಿಚ್‍ನ ಕೈಗೆ ಮುತ್ತಿಡಲು ಹತ್ತಿರ ಹೋದಳು. ಅವಳ ತುಟಿಗಳು ಅವನ ಕಪ್ಪು ಕೈಯ್ಯನ್ನು ಸ್ಪರ್ಶಿಸಿದ ಆ ಒಂದೇ ಒಂದು ಚಣ ಮಾತ್ರ, ಅವಳ ಎದೆ ಯೌವ್ವನ ಸಹಜವಾಗಿ, ಸುಕೋಮಲವಾಗಿ ಹಾಗೂ ರೋಮಾಂಚನಕಾರಿಯಾಗಿ ಕಂಪಿಸಿತ್ತು…

ಸುಖ್ದೋಲ್‍ನಲ್ಲಿನ ಬದುಕು ನಿರಾಶಾದಾಯಕವಾಗಿ ಸಾಗತೊಡಗಿತು. ವಿಮೋಚನೆಯ ಬಗೆಗಿನ ಖಚಿತ ಸಮಾಚಾರಗಳು ಹರಿದಾಡತೊಡಗಿದವು. ಈ ಸುದ್ದಿ ನಿಜವಾಗಿಯೂ ಸೇವಕರುಗಳನ್ನೂ ಮತ್ತು ಹಳ್ಳಿಗರನ್ನೂ ಅಪಾಯದ ಸೂಚನೆಗೆ ದೂಡಿತ್ತು. ಮುಂದಿನ ದಿನಗಳು ಹೇಗಿರಬಹುದೆಂಬ ಅಚ್ಚರಿಯಲ್ಲಿ ಮುಳುಗಿದರು. ಬಹುಶಃ ಅವು ಕಳವಳಕಾರಿಯಾಗಿರಬಹುದೆ? ಅವರು ಹೊಸಾ ರೀತಿಯಲ್ಲಿ ಬದುಕತೊಡಗಿದ್ದರು. ಇದನ್ನು ಮಾಡುವುದಕ್ಕಿಂತ ಹೇಳುವುದು ಸುಲಭ. ಯಜಮಾನರುಗಳು ಕೂಡಾ ಹೊಸ ಬದುಕಿನ ಕ್ರಮದತ್ತ ಮುಖ ಮಾಡಬಹುದಿತ್ತು. ಆದರೆ ಅವರು ಹಳೆಯ ಬದುಕಿನ ಕ್ರಮವನ್ನು ಕೂಡಾ ಸರಿಯಾಗಿ ರೂಢಿಸಿಕೊಂಡಿರಲಿಲ್ಲ. ಅಜ್ಜನ ಸಾವು, ಯುದ್ಧ, ಬೆಂಕಿಯ ಅನಾಹುತಗಳು, ವಿಮೋಚನೆಯ ಸಮಚಾರಗಳು-ಈ ಎಲ್ಲವುಗಳು ಅವರನ್ನು ನಗ್ಗಿ ನುಗ್ಗೆಕಾಯಿ ಮಾಡಿದ್ದ ಪರಿಣಾಮವಾಗಿ ಅವರ ಮುಖಭಾವ ಮತ್ತು ಮನಸ್ಸುಗಳಲ್ಲಿ ಕ್ಷಿಪ್ರ ಬದಲಾವಣೆ ಕಂಡಿತ್ತು. ಅವರುಗಳ ತಾರುಣ್ಯ ಮತ್ತು ನಿರಾತಂಕ ಸ್ವಭಾವ, ಹಿಂದಿನ ತಮ್ಮ ಸುಲಭ ಉಪಶಮನದ ಮುಂಗೋಪಗಳನ್ನು ಕಸಿದುಕೊಂಡು, ಹಗೆತನ, ಬೇಸರ ಮತ್ತು ಹತೋಟಿಗೆ ಸಿಗದ ಬದ್ಧ ವೈರತ್ವಗಳು ಅವುಗಳ ಸ್ಥಾನವನ್ನು ಆಕ್ರಮಿಸಿಕೊಂಡಿದ್ದವು. ಅಪ್ಪ ಹೇಳುವಂತೆ, ನಂತರ ಅವರುಗಳು ತಮ್ಮ ತಮ್ಮೊಳಗೆ ‘ಭಿನ್ನತೆಗಳನ್ನು’ ರೂಢಿಸಿಕೊಂಡು, ಅದು ಚಾವಟಿಕೋಲುಗಳೊಂದಿಗೆ ಊಟಕ್ಕೆ ಕೂರುವಲ್ಲಿಗೆ ಅವರನ್ನು ತಂದು ನಿಲ್ಲಿಸಿತ್ತು. ಕ್ರೈಮಿಯಾ ಯುದ್ಧದಿಂದ, ಬೆಂಕಿ ಅನಾಹುತದಿಂದ, ಸಾಲದಿಂದ ಪೂರಾ ಹಾಳಾಗಿ ಹೋಗಿದ್ದ ತಮ್ಮ ಸ್ಥಿತಿಯನ್ನು ಅವರುಗಳು ಹೇಗಾದರೂ ಮಾಡಿ ನೇರೂಪುಗೊಳಿಸಿಕೊಳ್ಳಲೇ ಬೇಕಾದಂಥ ತುರ್ತು ಒತ್ತಾಯದ ಹಂತ ತಲುಪಿದ್ದರು.

ಆದರೆ ಎಸ್ಟೇಟಿನ ನಿರ್ವಹಣೆಯ ವಿಚಾರದಲ್ಲಿ ಅಣ್ಣ ತಮ್ಮಂದಿರ ದಾರಿಗಳು ಬೇರೆ ಬೇರೆಯಾಗಿದ್ದವು. ಒಬ್ಬ ಹಾಸ್ಯಾಸ್ಪದ ಅನಿಸುವಷ್ಟು ದುರಾಸೆಯವನು, ನಿರ್ದಯಿ ಮತ್ತು ಅಪನಂಬಿಕೆಯ ಸ್ವಭಾವದವನು. ಮತ್ತೊಬ್ಬ ಹಾಸ್ಯಾಸ್ಪದ ಅನಿಸುವಷ್ಟು ಉದಾರಿ, ದಯಾಮಯಿ ಮತ್ತು ನಂಬಿಕೆಯ ಸ್ವಭಾವದವನು. ಕೊನೆಗೂ ತುಂಬಾ ಆದಾಯ ತರಬಲ್ಲಂಥ ಸಾಹಸಕ್ಕೆ ಕೈ ಹಾಕುವಂಥ ಒಂದು ಒಪ್ಪಂದಕ್ಕೆ ಬರುವಲ್ಲಿ ಅವರು ಸಫಲರಾದರು. ತಮ್ಮ ಆಸ್ತಿಯನ್ನು ಅಡವಿಟ್ಟು ಅವರು ದೀನ ಸ್ಥಿತಿಯಲ್ಲಿದ್ದ ಸುಮಾರು ಮುನ್ನೂರು ಕದುರೆಗಳನ್ನು ಖರೀದಿಸಿದರು. ಅವುಗಳನ್ನು ಖರೀದಿಸಲು ಈಲ್ಯಾ ಸಂಸೋನಫ್ ಅನ್ನುವ ಜಿಪ್ಸಿಯೊಬ್ಬನ ನೆರವನ್ನು ಅವರು ಪಡೆದಿದ್ದರು. ಚಳಿಗಾಲದಲ್ಲಿ ಆ ಕುದುರೆಗಳಿಗೆ ಚೆನ್ನಾಗಿ ಮೇವು ತಿನ್ನಿಸಿ, ಮೈ ಕೈ ದುಂಡಗೆ ಮಾಡಿ, ವಸಂತ ಋತುವಿನ ಕಾಲದಲ್ಲಿ ಅವುಗಳನ್ನು ಲಾಭಕ್ಕೆ ಮಾರಬೇಕು ಅನ್ನುವುದು ಅವರ ಲೆಕ್ಕಾಚಾರವಗಿತ್ತು. ಆದರೆ ಅತಿಯಾಗಿ ಕಾಳು ಕಡ್ಡಿ, ಮೇವನ್ನು ತಿನ್ನಿಸಿದ್ದರಿಂದ ಕುದುರೆಗಳು ಚೆನ್ನಾಗುವುದರ ಬದಲು ಕಾಯಿಲೆ ಬೀಳತೊಡಗಿದವು. ಅಂತೆಯೇ ಗೊತ್ತಿರದ ಯಾವುದೋ ಕಾರಣಕ್ಕಾಗಿ ಅವು ಒಂದರ ಹಿಂದೆ ಒಂದು ಅಸುನೀಗತೊಡಗಿದವು. ಅವರು ಲಾಭಕ್ಕೆ ಮಾರಬೇಕು ಅಂದುಕೊಂಡಿದ್ದ ಸಮಯ ಬರುವ ಹೊತ್ತಿಗೆ ಹೆಚ್ಚೂ ಕಡಿಮೆ ಎಲ್ಲಾ ಕುದುರೆಗಳು ಅಸುನೀಗಿದ್ದವು.

ಅಣ್ಣ ತಮ್ಮಂದಿರ ನಡುವಿನ ತಕರಾರು, ತಿಕ್ಕಾಟಗಳು ಬಲಗೊಂಡವು. ಚಾಕು, ಚೂರಿ ಮತ್ತು ಬಂದೂಕುಗಳನ್ನು ಹಿಡಿದು ಜಗಳಾಡುವ ಮಟ್ಟಕ್ಕೆ ಅವು ತಲುಪಿದವು. ಸುಖ್ದೋಲ್‍ನಲ್ಲಿ ಅದೊಂದು ಆಪತ್ತು ಸಂಭವಿಸದೇ ಹೋಗಿದ್ದರೆ, ಆ ಜಗಳಗಳು ಎಲ್ಲಿಗೆ ಹೋಗಿ ತಲುಪುತ್ತಿದ್ದವು, ಅನ್ನವುದು ಯಾರ ಊಹೆಗೂ ನಿಲುಕದಾಗಿತ್ತು. ಚಳಿಗಾಲದ ಒಂದು ದಿನ. ಪ್ಯೋತರ್ ಪೆಟ್ರೋವಿಚ್ ಲನೇವೋದಲ್ಲಿ ತನಗಿದ್ದ ಮತ್ತೊಬ್ಬ ಯಜಮಾನಿಯನ್ನು ನೋಡಲೆಂದು ಹೋಗಿದ್ದ.  ಅವನು ಅಲ್ಲಿ ಎರಡು ದಿನ ತಂಗಿದ್ದ. ಆ ಎರಡೂ ದಿನಗಳು ವಿಪರೀತ ಕುಡಿದಿದ್ದ. ಅವನು ತಿರುಗಿ ಮನೆಗೆ ಹೊರಟಾಗಲೂ ಚೆನ್ನಾಗಿಯೇ ಕುಡಿದಿದ್ದ. ಆ ಚಳಿಗಾಲದಲ್ಲಿ ತುಂಬಾ ಹಿಮ ಬಿದ್ದಿತ್ತು. ತಗ್ಗಾದ, ಅಗಲವಾಗಿದ್ದ, ದಪ್ಪ ಉಣ್ಣೆಯ ರಜಾಯಿ ಕವುಚಿದ್ದ ಸ್ಲೆಜ್ ಗಾಡಿಗೆ ಸಜ್ಜುಹಾಕಿದ್ದ ಎರಡು ಕುದುರೆಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ಒಂದು ಚುರುಕಾದ ಕಿರಿಯ ಹೆಣ್ಣು ಕುದುರೆಗೆ ಪ್ಯೋತರ್ ಪೆಟ್ರೋವಿಚ್ ಹೊರಡುವಂತೆ ಹುಕುಂ ಕೊಟ್ಟಾಗ, ಅದು ಮುಂದಡಿಯಿಡುತ್ತದ್ದಂತೆ ಸಡಿಲವಾಗಿದ್ದ ಹಿಮದ ಗುಸುಬಿನಲ್ಲಿ ತನ್ನ ಹೊಟ್ಟೆಯವರಗೂ ಹೂತುಕೊಂಡು, ತನಗೆ ಹಾಕಿದ್ದ ಸಜ್ಜುವಿನಿಂದ ಕಳಚಿಕೊಳ್ಳಲು ಕೊಸರಾಡುತ್ತಾ ಸ್ಲೆಜ್ ಗಾಡಿಯ ಹಿಂಭಾಗಕ್ಕೆ ಸಿಕ್ಕಾಕಿಕೊಂಡಿತು. ಆಗ ಪ್ಯೋತರ್ ಪೆಟ್ರೋವಿಚ್ ಗಾಡಿಯ ಮೂಕಿನ ಮೇಲಿಂದ ಮಕಾಡೆಯಾಗಿ ಅದರತ್ತ ಮುಖ ಹಾಕಿ ಮಲಗಿದ್ದ, ಅಂತ ಅವರು ಹೇಳಿದ್ದರು.

ಇದನ್ನೂ ಓದಿ : Translated Story: ನೆರೆನಾಡ ನುಡಿಯೊಳಗಾಡಿ; ನಾಗರೇಖಾ ಗಾಂವಕರ ಅನುವಾದಿಸಿದ ಚೆಕಾವ್ ಕಥೆ ‘ತುಂಟ ಹುಡುಗ’

ಎರಡು ದಿನಗಳ ಹಿಂದೆ ಅವನು ಅಲ್ಲಿಗೆ ಹೊರಡುವುದಕ್ಕೆ ಮುಂಚೆ ಮಾಮೂಲಿ ಗಾಡಿಯ ಸಾರಥಿಯಾಗಿರುತ್ತಿದ್ದ ವ್ಯಾಸ್ಕಾ ಕಝ್ಯಾಕ್‍ನ ಬದಲಿಗೆ ಯೆವ್ಸಿ ಬೊಡೂಲ್ಯಾಗೆ ಗಾಡಿಗೆ ಕುದುರೆಗಳನ್ನು ಕಟ್ಟುವಂತೆ ಕಿರುಚಿಕೊಂಡಿದ್ದ. ತಾನು ಸೇವಕರುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದರಿಂದ ವ್ಯಾಸ್ಕಾ ಕಝ್ಯಾಕ್ ತನ್ನನ್ನು ಕೊಂದು ಬಿಡಬಹುದು ಅನ್ನುವ ಭಯ ಅವನೊಳಗಾಡುತ್ತಿದ್ದ ಕಾರಣಕ್ಕಾಗಿ ಅವನ ಬದಲಿಗೆ ಯೆವ್ಸಿ ಬೋಡೂಲ್ಯಾನಿಗೆ ಹೇಳಿದ್ದ. ‘ಏನು ಇನ್ನೂ ಸುಮ್ಮನೆ ನೋಡ್ತಿದ್ದೀಯಾ ಹೊರಡು!’ ಅಂತ ಕಿರುಚಿಕೊಂಡು ಯೆವ್ಸಿಯ ಬೆನ್ನಿಗೆ ಒದ್ದಿದ್ದ. ಗಾಡಿ ಆ ಮಾಮೇರಿ ಸುರಿದಿದ್ದ ದುರ್ಗಮ ಹಿಮದ ದಾರಿಯಲ್ಲಿ ಮುಲುಕಿಕೊಂಡು, ಮಂಜುಗವಿದಿದ್ದ, ನಿರ್ಜನವಾಗಿದ್ದ ಹುಲ್ಲುಗಾವಲಿನತ್ತ ಚಳಿಗಾಲದ ಕತ್ತಲು ಇಳುಕೊಳ್ಳುತ್ತಿದ್ದ ಇರುಳಿನೊಳಕ್ಕೆ ಸಾಗತೊಡಗಿತ್ತು.

ಮಧ್ಯರಾತ್ರಿ. ಸುಖ್ದೋಲ್‍ನಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ನಟಾಲಿಯಾ ಮಲಗಿದ್ದ ಕಾರಿಡಾರಿನ ಕಿಟಕಿಯ ಕದವನ್ನು ಯಾರೋ ಒಂದೇ ಸಮ ಬಡಿಯತೊಡಗಿದರು. ನಟಾಲಿಯಾ ತಾನು ಮಲಗಿದ್ದ ಬೆಂಚಿನಿಂದ ಚಂಗನೆ ನೆಗೆದು ಬರಿಗಾಲಿನಲ್ಲೇ ಪೋರ್ಟಿಕೋದತ್ತ ಓಡಿದಳು. ಅಲ್ಲಿ ಕುದುರೆಗಳ ಮತ್ತು ಗಾಡಿಯ ಕಪ್ಪನೆಯ ನೆರಳುಗಳನ್ನು ಕಂಡಳು. ಯೆವ್ಸಿ ಕೈಯ್ಯಲ್ಲಿ ಚಾವಟಿಯನ್ನು ಹಿಡಿದು ನಿಂತಿದ್ದ.

‘ಅನಾಹುತ, ದೊಡ್ಡ ಅನಾಹುತ ಆಗೋಯ್ತು, ಒಂಟಿ ಕುದುರೆ…ಒಂಟಿ ಕುದುರೆ ಒಡೆಯನನ್ನು ಕೊಂದಿದೆ…, ಯೆವ್ಸಿ ಅಸ್ಪಷ್ಟವಾಗಿ, ಅಪ್ರಾಮಾಣಿಕವಾಗಿ, ನಿದ್ದೆಯಲ್ಲಿದ್ದಾನೇನೋ ಎಂಬಂತೆ ವಿಚಿತ್ರವಾಗಿ ಮಣಗುಟ್ಟಿದ. ಓಡುತ್ತಿದ್ದ ನಟಾಲಿಯಾ ಮುಗ್ಗರಿಸಿದಳು… ನಂತರ ಅವನಿಗೊಂದು ಸಾರ್ತಿ ಒದ್ದಳು…ನಂತರ ಅವನ ಮುಖಕ್ಕೆ ಗುದ್ದಿದಳು…ಅವನಾಗಲೇ ಭಯಬಿದ್ದುಹೋಗಿದ್ದ…ಅದು ನಾನಲ್ಲ, ಆ ಕೆಲ್ಸ ನಾನು ಮಾಡಿಲ್ಲ, ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ, ಅದು ನಾನಲ್ಲ!’

ಒಂದೇ ಒಂದು ಮಾತಿಲ್ಲದೆ ನಟಾಲಿಯಾ ಪೋರ್ಟಿಕೋದಡಿಯ ಮೆಟ್ಟಿಲುಗಳನ್ನು ಇಳಿದಳು. ಅವಳ ಬರಿಗಾಲುಗಳು ಹಿಮದ ಗುಸುಬಿನಲ್ಲಿ ಹೂತುಕೊಳ್ಳುತ್ತಿದ್ದವು. ಸ್ಲೆಜ್ ಗಾಡಿಯವರೆಗೂ ನಡೆದವಳೇ ಕುಸಿದು ಮಂಡಿಯೂರಿದಳು. ಥಟಕ್ಕನೆ ತಣ್ಣಗೆ ಕೊರೆಯುತ್ತಿದ್ದ, ರಕ್ತ ಹೆಪ್ಪುಗಟ್ಟಿದ್ದ ಪ್ಯೋತರ್ ಪೆಟ್ರೋವಿಚ್‍ನ ತಲೆಯನ್ನು ಎದೆಗೊತ್ತಿಕೊಂಡು ಮುತ್ತಿನ ಮಳೆಗರೆದಳು. ನಂತರ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಕಿರುಚಿಕೊಂಡಳು: ಉಸಿರು ಕಟ್ಟಿಕೊಂಡು ಹುಚ್ಚಾಬಟ್ಟೆ ಹಿಗ್ಗಿನಲ್ಲಿ, ಬಿಕ್ಕಳಿಸುತ್ತಾ, ಅಂತೆಯೇ ನಗುತ್ತಾ …

(ಪೂರ್ಣ ಓದಿಗೆ ಸದ್ಯದಲ್ಲೇ ಪ್ರಕಟವಾಗಲಿರುವ ಎಸ್. ಗಂಗಾಧರಯ್ಯ ಅನುವಾದಿಸಿದ ‘ಬುನಿನ್ ಕಥೆಗಳು’  ಸಂಕಲನದ ಖರೀದಿಗೆ ಸಂಪರ್ಕಿಸಿ : 9448250969)

ಈ ಕಾದಂಬರಿಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

Published On - 12:28 pm, Fri, 24 June 22