Gokak Falls: ಅದೃಷ್ಟ ದುರಾದೃಷ್ಟಗಳ ನಡುವೆ ಹರಿಯುತ್ತಲೇ ಇರುವ ಘಟಪ್ರಭೆ

|

Updated on: Jun 15, 2022 | 2:38 PM

Decision : ನಾವು ಇಂದು ಏನಾಗಿದ್ದೇವೋ ಅದಕ್ಕೆ ನಾವು ಮಾಡಿದ ಆಯ್ಕೆಗಳು, ಹಿಡಿದ ದಾರಿ, ಇಟ್ಟ ನಂಬಿಕೆ, ನಾವು ಒಳಗೊಂಡ ಅವಕಾಶಗಳೇ ಕಾರಣವಾಗಿರುತ್ತವೆ.

Gokak Falls: ಅದೃಷ್ಟ ದುರಾದೃಷ್ಟಗಳ ನಡುವೆ ಹರಿಯುತ್ತಲೇ ಇರುವ ಘಟಪ್ರಭೆ
ಫೋಟೋ : ಡಾ. ನಿಸರ್ಗ
Follow us on

Gokak Falls : ಈ ಅದೃಷ್ಟ, ದುರಾದೃಷ್ಟದ ಲೆಕ್ಕಾಚಾರದ ಗೊಂದಲ ನನಗೆ ಒಮ್ಮೊಮ್ಮೆ ಬಗೆಹರಿಯುವುದೇ ಇಲ್ಲ. ಈ ಸಂದರ್ಭಗಳು ಸೃಷ್ಟಿಸಿ ಇಡೋ ಅವಾಂತರಗಳಂತೂ ಕೆಲವೊಮ್ಮೆ ಭುಗಿಲೆಬ್ಬಿಸಿಬಿಡುತ್ತವೆ. ಕೆಲವೊಮ್ಮೆ ಎಷ್ಟೇ ಯೋಚಿಸಿದರೂ ತಪ್ಪು ಯಾವುದು, ಯಾರದು, ಎಂತಲೇ ಗೊತ್ತಾಗುವುದಿಲ್ಲ. ಅಂತಹ ಅನೇಕ ಸ್ಥಿತಿಗಳಿಗೆ ನಾವು ಸಾಕ್ಷಿ ಆಗಿರುತ್ತೇವೆ. ಇಲ್ಲವೇ ಇನ್ಯಾರೋ ಸಾಕ್ಷಿಯಾದ ಕಥೆಗಳನ್ನು ಕೇಳಿರುತ್ತೇವೆ, ಓದಿರುತ್ತೇವೆ, ನೋಡಿರುತ್ತೇವೆ. ಅದರಲ್ಲಿ ಕೆಲವು ನಮಗರಿವಿಲ್ಲದಂತೆ ನಮ್ಮ ಸ್ಮೃತಿಪಟಲದ ಆಳಕ್ಕೆ ಇಳಿದು ಆಗಾಗ ಮನಕಲುಕುತ್ತವೆ. ಈ ಬಾರಿ ಘಟಪ್ರಭೆ ಇಂತಹ ಪ್ರಸಂಗಗಳ ಮೇಲುಕಿನಲ್ಲಿ ಹರಿಯಲು ಬಯಸಿದ್ದಾಳೆ.
ಕೆಲವೊಮ್ಮೆ ನಾವು ಕಷ್ಟಪಟ್ಟು ಪಡೆದ ಪ್ರತಿಫಲಕ್ಕೂ ಕೆಲವರು ಅದು ಅವರ ಅದೃಷ್ಟ ಅನ್ನೋ ಹಣೆಪಟ್ಟಿ ಕಟ್ಟಿಬಿಡ್ತಾರೆ. ತಮ್ಮಿಂದ ಗಿಟ್ಟಿಸಿಕೊಳ್ಳಲು ಆಗದಿದ್ದಾಗ ಅದು ದುರಾದೃಷ್ಟ ಅಂತ ಹಲುಬಿ ಬಿಡ್ತಾರೆ. ಇಲ್ಲ ಅಂದ್ರೆ ಟೈಮ್ ಸರಿಯಿಲ್ಲ ಅಂತಾ ಸಮಯದ ಮೇಲೆ ಅಪವಾದ ಹೊರೆಸಿ ಸುಮ್ಮನಾಗ್ತಾರೆ.
ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಹರಿವು 17)

ಬಹುಶಃ ಕೆಲವರು ತಮ್ಮ ಹೊಟ್ಟೆಕಿಚ್ಚು, ಅಧೈರ್ಯ, ಗೊಂದಲಗಳಿಂದ ಮುಕ್ತಿಹೊಂದಿ ತಮ್ಮನ್ನು ತಾವೇ ಸಮಾಧಾನಿಸಲು ಹೀಗೆಲ್ಲ ಮಾತಾಡ್ತಾರೆ. ನಡೆದಿರುವ ಕೆಟ್ಟದ್ದಕ್ಕೆ ಬೇರೆ ಯಾರನ್ನೂ ದೂಷಿಸಲಾಗದ  ಸಂದರ್ಭದಲ್ಲಿ ಈ ಅದೃಷ್ಟ, ದುರಾದೃಷ್ಟ, ಸಮಯ ಎಂಬ ಪದಗಳು ಉಚಿತವಾಗಿ ಸಿಕ್ಕುಬಿಡುತ್ತವೆ ಅಲ್ವಾ. ಅದೂ ಸ್ವಲ್ಪ ಕಡಿಮೆ ಎನಿಸಿದರೆ ಆ ದೇವರು ಇದ್ದಾನಲ್ಲ. ಭೂಮಿ ಭಾರ ಹೊತ್ತವನಿಗೆ ಅಪವಾದಗಳ ಭಾರ ಹೆಚ್ಚಾದಿತೆ?
ಸುಮಾರು ವರ್ಷಗಳ ಹಿಂದೆ ಅಜ್ಜನೊಬ್ಬ ಜೀವನಕ್ಕೆ ಬೆಸೊತ್ತು ಸಾಯೋ ನಿರ್ಧಾರ ಮಾಡಿ ಗೋಕಾಕ್ ಜಲಪಾತದಿಂದ ಹಾರಿದ್ದನಂತೆ. ತೆಳ್ಳಗೆ, ಸ್ವಲ್ಪ ಉದ್ದಗೆ ಇದ್ದ ಆತ ಬಿಳಿ ಧೋತರ ಉಟ್ಟು ಮೇಲಿಂದ ಹಾರಿದರೆ ಘಟಪ್ರಭೆ ಅವನನ್ನು ತುಂಬ ಸುರಕ್ಷಿತವಾಗಿಯೆ ತಂದು ಪಕ್ಕಕ್ಕೆ ಹಾಕಿದಳು ನಂತರ ಅಲ್ಲಿದ್ದ ಜನ ಅವನನ್ನು ಕರೆದು ತಂದರು, ಆತನನ್ನು ಎರಡು ದಿನ ಪೊಲೀಸ್ ಸ್ಟೇಶನ್​ನಲ್ಲಿ ಇರಿಸಿ ಅವನ ಮಗನನ್ನು ಹುಡುಕಿ ಅವರ ಮನೆಗೆ ಕಳುಹಿಸಿಕೊಟ್ಟರಂತೆ. ಅದಾದ ಮೇಲೆ ಅವರ ಮನೆಯವರು ಅವನನ್ನ ಚೆನ್ನಾಗಿ ನೋಡಿಕೊಂಡರು, ತುಂಬಾ ದಿನ ಬದುಕಿದ್ದ ಅಂತ ತಮಾಷೆಯಾಗಿ ಆಗಾಗ ಆ ಕಥೆ ಹೇಳೋದನ್ನ ಕೇಳಿದ್ದೆ.

ಇದನ್ನೂ ಓದಿ
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಆದರೆ 3 ವರ್ಷದ ಹಿಂದೆ ಅದೇ ಸ್ಥಳದಲ್ಲಿ ಗಣೇಶ ವಿಸರ್ಜನೆ ಮಾಡಲು ಹೋದ ನಡು ವಯಸ್ಸಿನ ವ್ಯಕ್ತಿಯೊಬ್ಬ ಇನ್ನೂ ಮೆಟ್ಟಿಲು ಇಳಿಯುತ್ತಿದ್ದಂತೆ ಜಾರಿದ್ದ ಅಷ್ಟೇ. ಅವನ ದೇಹವೂ ಪತ್ತೆ ಆಗಲಿಲ್ಲ. ಇಂತ ಪ್ರಸಂಗಗಳಲ್ಲಿ ಯಾರನ್ನ ದೂರಲು ಸಾಧ್ಯ? ಸಾಯಲು ಹೊರಟವನು ಬದುಕಿ, ಜೀವನ ಹಸನು ಮಾಡಿಕೊಂಡ. ದೇವ ಕಾರ್ಯಕ್ಕೆ ಹೋದವ ದೇವರ ಪಾದಕ್ಕೆ ಹೋದ. ಇಲ್ಲಿ ಅದೃಷ್ಟ, ದುರಾದೃಷ್ಟ ಅಂದು ಸುಮ್ಮನಾಗುವುದು ಬಿಟ್ಟರೆ ಬೇರೆ ಆಯ್ಕೆ ಇಲ್ಲವಲ್ಲ?

ಇದನ್ನೂ ಓದಿ : Gokak Falls: ಬಾಲ್ಯದ ಈ ಪಠ್ಯಪುಸ್ತಕಗಳೇ ನನ್ನಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳಿಸಿದ್ದು

ಯಾವಾಗೋ ನೋಡಿದ ಸಿನೆಮಾ ಸನ್ನಿವೇಶವೊಂದು ಆಗಾಗ ಕಾಡ್ತಾ ಇರುತ್ತೆ. ನಾಯಕಿ ನಾಯಕನನ್ನು ಹೆದರಿಸೋಕೆ ತಾನು ಸಾಯ್ತೀನಿ ಅಂತ ಮೈಮೇಲೆ ಸೀಮೆ ಎಣ್ಣೆ ಹಾಕೊಂಡು ಲೈಟರ್ ಹಿಡ್ಕೊಂಡು ನಿಂತಿರುತ್ತಾಳೆ.  ಅವಳನ್ನ ಉಳಿಸಬೇಕು ಅನ್ನೋ ಆತುರದಲ್ಲಿ ನಾಯಕ ಅಲ್ಲೇ ಪಕ್ಕದ ಬಕೆಟನಲ್ಲಿ ಇರೋ ನೀರನ್ನು ಸುರೀತಾನೆ. ಆಗ ಬೆಂಕಿ ಧಗ್ಗನೆ ಹತ್ತಿ ಅವಳು ಸತ್ತೇ ಹೋಗ್ತಾಳೆ. ನಿಜಕ್ಕೆ ಆ ಬಕೆಟ್​ನಲ್ಲಿ ನೀರಲ್ಲ, ಮನೆಗೆಲಸದವ ಬೇರೆ ಯಾವುದೋ ಕೆಲಸಕ್ಕಾಗಿ ಪೆಟ್ರೋಲ್ ತುಂಬಿ ಇಟ್ಟಿರ್ತಾನೆ.

ಇಂಥದ್ದೇ ಇನ್ನೊಂದು ಪ್ರಸಂಗ ಪ್ರಕಾಶ ರೈ ಅವರು ಹಂಚಿಕೊಂಡ ತಮ್ಮದೇ ಜೀವನದ ಕಥೆಯಲ್ಲಿ ಓದಿದ್ದೆ. ಗೆಳೆಯನೊಬ್ಬ ಆತಂಕದಲ್ಲಿ ಬಂದು ಮನೆಬಾಗಿಲು ತಟ್ಟಿದಾಗ ಗೆಳತಿ ಒಟ್ಟಿಗೆ ಇದ್ದ ಅವರಿಗೆ ಬಾಗಿಲು ತೆರೆಯಲು ಆಗಿರಲಿಲ್ಲ. ಹೇಗೂ ಸಂಜೆ ಭೇಟಿ ಆಗುತ್ತಾನಲ್ಲ ಎಂಬ ಭರವಸೆ ಮತ್ತು ಅಸಡ್ಡೆ ಹಾಗೆ ಮಾಡಿಸಿತ್ತು. ಸಂಜೆ ಭೇಟಿ ಆಗಲು ಹೋದ ಹೊತ್ತಿಗಾಗಲೇ ಆತ ಕಾರಣ ತಿಳಿಸದೆ ಸಾವಿಗೆ ಶರಣಾಗಿದ್ದ. ಬಾಗಿಲು ತೆರೆದಿದ್ದರೆ ಏನಾದರೂ ಬದಲಾಗಬಹುದಿತ್ತೇನೋ. ಪ್ರಾಣಸ್ನೇಹಿತನಿಗೆ ಅದೆಂಥ ನೋವಿತ್ತೋ, ಬಾಗಿಲು ತೆರೆದಷ್ಟೆ ಸರಾಗವಾಗಿ ಅವನ ನೋವು ತನ್ನೆದುರು ತೆರೆಯಬಹುದಿತ್ತೇನೋ?

ಇದನ್ನೂ ಓದಿ : Column: ಅನುಸಂಧಾನ; ಮರಿಯಾನೊ ಸಿಗ್ಮನ್​ನ ‘ಮನಸ್ಸಿನ ಹೆಜ್ಜೆ ಗುರುತು’

ಆದರೆ ಯಾವುದರ ಸಣ್ಣ ಸುಳಿವೂ ಆಗ ಸಿಗಲಿಲ್ಲ. ಇಂತಹ ಘಟನೆಗಳನ್ನ ಏನೆಂದು ನಿರ್ಧರಿಸುವುದು. ಯಾವ ಕೆಟ್ಟ ಉದ್ದೇಶವಿಲ್ಲದಿದ್ದಾಗ್ಯೂ ಇಂಥ ದುರ್ಘಟನೆಗೆ ನಾವು ಕಾರಣವಾದಾಗ ಅದಕ್ಕೆ ಏನಂತ ಹೆಸರಿಡಬೇಕು? ಹೇಗೆ ಸಮಾಧಾನಿಸಿ ಕೊಳ್ಳಬೇಕು? ನಮ್ಮದಲ್ಲದ ಸನ್ನಿವೇಶಗಳ ತಪ್ಪಿಗೆ ಕ್ಷಮೆ ಯಾಚಿಸುವವರು ಯಾರು?
ಇಂತ ಸಂದಿಗ್ಧ ಸ್ಥಿತಿಗಳಲ್ಲಿ, ಯಾವುದು ನಮ್ಮ ಕೈಯಲ್ಲಿ ಇಲ್ಲದಿದ್ದಾಗ, ಎಲ್ಲವೂ ನಮ್ಮ ಕೈಮೀರಿ ಹೋದಾಗ ಹೀಗೆ ಅದೃಷ್ಟ, ದುರಾದೃಷ್ಟ, ಸಮಯ, ಹಣೆಬರಹ ಅಂತೆಲ್ಲ ದೂರಿದರೆ ಅದು ಸಹ್ಯವಾಗಬಹುದು. ಆದರೆ ಯಾವ ಪ್ರಯತ್ನವೂ ಇರದೆ ತಮ್ಮ ಸೋಮಾರಿತನ, ತಪ್ಪಿಂದ ಪಾರಾಗಲು ಈ ಶಬ್ದಗಳನ್ನು ಸರಾಗವೆಂಬಂತೆ ಹೊರಡಿಸುವವರು ಇದ್ದಾರೆ. ನೇಮಿಚಂದ್ರ ಅವರು ಹೇಳುವ ಹಾಗೆ “ಅತಿ ಕಡಿಮೆ ಸಂಭವ ಇದ್ದಾಗ ಘಟಿಸುವುದನ್ನು ಅದೃಷ್ಟ ಎನ್ನಬಹುದು.”

ಆದರೆ ಈ ರೀತಿಯ ಪವಾಡ ಎನ್ನಿಸಬಲ್ಲ ಸಂಗತಿಗಳು ಯಾವಾಗಲೂ ಸಂಭವಿಸುವುದಿಲ್ಲ. ನಮ್ಮ ಜೊತೆ ನಡೆದ ಎಲ್ಲ ಒಳ್ಳೆಯ ಮತ್ತು ಕೆಟ್ಟ ಘಟನೆಗಳಿಗೂ ನೇರವಾಗಿಯೋ ಇಲ್ಲ ಅನೆರವಾಗಿಯೋ ನಾವೇ ಕಾರಣಕರ್ತರು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ನಾವು ಇಂದು ಏನಾಗಿದ್ದೇವೋ ಅದಕ್ಕೆ ನಾವು ಮಾಡಿದ ಆಯ್ಕೆಗಳು, ಹಿಡಿದ ದಾರಿ, ಇಟ್ಟ ನಂಬಿಕೆ, ನಾವು ಒಳಗೊಂಡ ಅವಕಾಶಗಳೇ ಕಾರಣವಾಗಿರುತ್ತವೆ. ಸಿಕ್ಕ ಕೆಲಸ ಬಿಟ್ಟು ಬಂದದ್ದಕ್ಕೆ, ಓದಲು ಎಲ್ಲ ಅವಕಾಶಗಳು ಇದ್ದಾಗಲೂ ತಿರಸ್ಕರಿಸಿದ್ದಕ್ಕೆ, ಕೆಟ್ಟವರು ಎಂದು ತಿಳಿದೂ ಒಡನಾಟ ಮಾಡಿದ್ದಕ್ಕೆ, ಅಸಡ್ಡೆ, ನಿಷ್ಕಾಳಜಿಯಿಂದಾಗಿ ಕಳೆದುಕೊಂಡಿದ್ದಕ್ಕೆ ಪಶ್ಚಾತಾಪ ಪಡುವವರನ್ನು ನಾವು ನೋಡುತ್ತೇವೆ. ಅವೆಲ್ಲ ತಮ್ಮ ದುರಾದೃಷ್ಟ, ಹಣೆಬರಹ ಎಂದು ಅಪವಾದ ತಮ್ಮ ಮೇಲೆ ಬರದಂತೆ ನಯವಾಗಿ ಬದುಕುವವರೂ ಇದ್ದಾರೆ.

ಇದನ್ನೂ ಓದಿ : Column: ವೈಶಾಲಿಯಾನ; ‘ನೀವುದಯ್ಯಾ ದೇಹ ತ್ರಾಣ, ನೀನೆ ಪ್ರಾಣ, ನೀನೆ ಮಾನ, ಕಾವುದೆನ್ನ ಶೀಲ ನಿಧಾನ’

ಆದರೆ ಸತ್ಯ ಏನು? ಅದನ್ನೆಲ್ಲ ಬದಲಾಯಿಸಬಹುದಾದ ಆಯ್ಕೆ, ಅವಕಾಶಗಳು ಇತ್ತಲ್ಲವೇ? ಈ ಸ್ಪರ್ಧೆ ವಿಷಯ ಬಂದಾಗಲಂತೂ ಕೈಲಾಗದವರು ಅದೆಷ್ಟು ಸರಳವಾಗಿ “ಪಕ್ಷಪಾತ” ಅನ್ನೋ ಪದ ಬಳಸಿಬಿಡ್ತಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಇದ್ದ ಯಾವ ಗುಣ ಅಥವಾ ತಯಾರಿಯ ಕೊರತೆ ತಮ್ಮಲ್ಲಿದೆ ಎಂದು ಯೋಚಿಸಿ, ತಾವು ಸುಧಾರಿಸಿಕೊಳ್ಳುವುದನ್ನು ಬಿಟ್ಟು. ಅವಕಾಶಗಳು, ಮೆಚ್ಚುಗೆಗಳು ಅವರಿಗೆ ಮಾತ್ರ, ಅವರನ್ನೇ ಎಲ್ಲರೂ ಇಷ್ಟಪಡೋದು, ಅದು ಅವರ ಅದೃಷ್ಟ, ನನ್ನ ದುರಾದಷ್ಟ ಅಂತ ಬೈದುಕೊಳ್ಳೋದರಲ್ಲಿ ಏನು ಅರ್ಥ ಇದೆ. ಸುಲಭಕ್ಕೆ ಬಾಯಿಗೆ ಎಟುಕುವ ಈ ಅದೃಷ್ಟ, ದುರಾದೃಷ್ಟವನ್ನು ಪಕ್ಕಕ್ಕೆ ಇಟ್ಟು ಬದುಕು ನೀಡುವ ಆಯ್ಕೆ, ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸಾಗಿದಾಗ ಆ ದಾರಿಗೂ ಒಂದು ಸಾರ್ಥಕತೆ ಸಿಕ್ಕಿತೂ. ದಾರಿ ನಡುವೆ ಸಿಗುವ ಸೋಲು, ಗೆಲವು, ಪಾಠಗಳೆಲ್ಲ ಜೀವನ ಮೂಟೆಗೆ ಸಂಗ್ರಹವಾಗುವ ಸುಂದರ ಅನುಭವಗಳು. ಅವನ್ನೆಲ್ಲ ತಬ್ಬಿ – ತೆಕ್ಕಿ ಮೂಟೆಗೆ ಸೇರಿಸುತ್ತ ಸಾಗಬೇಕಷ್ಟೆ.

(ಮುಂದಿನ ಹರಿವು : 29.6.2022)

ಈ ಅಂಕಣದ ಎಲ್ಲಾ ಬರಹಗಳನ್ನು ಇಲ್ಲಿ ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 2:29 pm, Wed, 15 June 22