AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Kissing Day 2022: ಇಂದು ವಿಶ್ವ ಚುಂಬನ ದಿನ; ಮುದ್ದಿಸಿ, ಮುದ್ದು ಮಾಡಿಸಿಕೊಳ್ಳಿ, ಸುಖವಾಗಿರಿ

ಜಗತ್ತನ್ನು ಮರೆಸುವಷ್ಟು ಮೋಹ ಆವರಿಸಿಕೊಂಡಿದ್ದಾಗ ಮುತ್ತಿನ ಮಳೆಗರೆಯುವುದು ಬಿಟ್ಟರೆ ಬೇರೇನಿದ್ದೀತು ಅವರಿಗೆ ಉದ್ಯೋಗ?

International Kissing Day 2022: ಇಂದು ವಿಶ್ವ ಚುಂಬನ ದಿನ; ಮುದ್ದಿಸಿ, ಮುದ್ದು ಮಾಡಿಸಿಕೊಳ್ಳಿ, ಸುಖವಾಗಿರಿ
ವಿಶ್ವ ಚುಂಬನ ದಿನ
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 06, 2022 | 7:58 AM

Share

‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು, ಕಂದ ಕೊಡುವೆಯಾ…’ -ಅಣ್ಣಾವ್ರು ಡಾ ರಾಜ್​ಕುಮಾರ್ ಅಭಿನಯದ ‘ನಾ ನಿನ್ನ ಮರೆಯಲಾರೆ’ ಚಿತ್ರದ ಈ ಹಾಡು ಕೇಳದ ಕನ್ನಡಿಗರೇ ಇಲ್ಲ. ಈ ಜನಪ್ರಿಯ ಹಾಡಿನ ಒಂದು ಸೊಲ್ಲು ಕಿವಿಯ ಮೇಲೆ ಬಿದ್ದರೂ ಎಂಥವರ ಮೊಗದಲ್ಲೂ ಮುಗುಳ್ನಗೆಯೊಂದು ತೇಲಿ ಹೋಗುತ್ತದೆ. ‘ಮುತ್ತು’ ಎನ್ನುವ ಎರಡಕ್ಷರದ ಪದಕ್ಕಿರುವ ಚುಂಬಕ ಶಕ್ತಿಯೇ ಅಂಥದ್ದು. ಅಂದಹಾಗೆ ಇಂದು ‘ವಿಶ್ವ ಚುಂಬನ ದಿನ’ (International Kissing Day). ಪಾಶ್ಚಿಮಾತ್ಯ ದೇಶಗಳ ಹಲವು ಆಚರಣೆ, ವಿಶೇಷ ದಿನಗಳಿಗೆ ಇರುವಂತೆ ಈ ದಿನಕ್ಕೂ ಒಂದು ಇತಿಹಾಸ ಮತ್ತು ಪರಂಪರೆ ಇದೆ. ಆದರೆ ಅದಕ್ಕೆ ಮಿಗಿಲಾದ ಮುಖ್ಯ ಅಂಶವೆಂದರೆ ಮುತ್ತಿನ ನೆಪದಲ್ಲಿ ನಮ್ಮ ಸುತ್ತಲಿರುವವರ ಬಗ್ಗೆ ನಮಗಿರುವ ಆದರ, ಭಾವ ಶೋಧನೆಗೆ ಈ ದಿನ ಒದಗಿಸುವ ಅದ್ಭುತ ಅವಕಾಶ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಮುತ್ತಿನಿಂದ ಹಲವು ಅನುಕೂಲಗಳಿವೆ. ಇದನ್ನು ಸಾಬೀತುಪಡಿಸುವ ಸಾಕಷ್ಟು ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆ.

ಇಂಗ್ಲಿಷ್​ನ ಕಿಸ್ ಪದಕ್ಕೆ ಸದ್ಯದ ಮಟ್ಟಿಗೆ ಕನ್ನಡದಲ್ಲಿ ಮುತ್ತು ಹಾಗೂ ಚುಂಬನ ಎಂಬ ಶಬ್ದಗಳು ಬಳಕೆಯಾಗುತ್ತಿವೆ. ‘ಮುತ್ತು’ ಎನ್ನುವ ಪದಕ್ಕೆ ಅಮೂಲ್ಯವಾದುದು ಎಂಬ ಅರ್ಥವಿದ್ದರೆ, ‘ಚುಂಬನ’ ಎನ್ನುವ ಪದವನ್ನು ತೀರಾ ಹತ್ತಿರಕ್ಕೆ ಸೆಳೆಯಬಲ್ಲ ಶಕ್ತಿ ಎಂದು ಅರ್ಥೈಸಬಹುದು. ತಮ್ಮ ಪ್ರೀತಿ, ವಿಶ್ವಾಸ ಮತ್ತು ಸ್ನೇಹದಿಂದ ನಮ್ಮನ್ನು ತೀರಾ ಹತ್ತಿರಕ್ಕೆ ಸೆಳೆಯಬಲ್ಲ ಶಕ್ತಿಗೆ ನಾವು ತೋರಿಸುವ ಕೃತಜ್ಞತೆಯ ಅಥವಾ ಭಾವಸ್ಪಂದನೆಯ ಆಂಗಿಕ ರೂಪವಾಗಿ ಮುತ್ತನ್ನು ನಾವು ಅರ್ಥೈಸಬಹುದು.

ತಂದೆ-ತಾಯಿ ತಮ್ಮ ಕೈಗೂಸುಗಳಿಗೆ, ಮರೆಯದ ಮಗನ / ಮಗಳ ತಲೆಸುಳಿ ನೋಡಿದಾಗ ಅಪ್ಪ ಅಥವಾ ಅಮ್ಮನ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ಮುತ್ತಿಗೆ ಹೊರತಾದ ಬೇರೆ ಯಾವುದಾದರೂ ಅಭಿವ್ಯಕ್ತಿ ಇರಲು ಸಾಧ್ಯವೇ? ಪೋಷಕರು ಮಕ್ಕಳ ಸಂಬಂಧದಲ್ಲಿ ಹರಿಯುವ ಮುತ್ತುಗಳ ಒರತೆ ಒಂದು ರೀತಿಯಿದ್ದರೆ, ಒಲಿದ ಜೀವಗಳು ಹತ್ತಿರವಿದ್ದಾಗ ಸುರಿಯುವ ಚುಂಬನದ ಮಳೆ ಮತ್ತೊಂದು ರೀತಿಯದ್ದು. ಜಗತ್ತನ್ನು ಮರೆಸುವಷ್ಟು ಮೋಹ ಆವರಿಸಿಕೊಂಡಿದ್ದಾಗ ಮುತ್ತಿನ ಮಳೆಗರೆಯುವುದು ಬಿಟ್ಟರೆ ಬೇರೇನಿದ್ದೀತು ಅವರಿಗೆ ಉದ್ಯೋಗ?

ಯುದ್ಧದಲ್ಲಿ ಅರಳಿದ ಅತಿಪ್ರೀತಿ ಇದು

ಕ್ರಿಸ್ತಪೂರ್ವದ ಕಾಲದಿಂದಲೂ ಮುತ್ತಿನ ಬಗ್ಗೆ ಉಲ್ಲೇಖಗಳಿವೆ. ಮನುಷ್ಯನ ವಿಕಸನದೊಂದಿಗೆ, ಭಾಷೆಗೆ ಅಕ್ಷರರೂಪ ಸಿಗುವ ಮೊದಲಿನಿಂದಲೂ ಮುತ್ತು ಇದ್ದೇ ಇರಬೇಕು. ಆದರೆ ಸ್ಪಷ್ಟ ಉಲ್ಲೇಖಗಳು ಸಿಗುವುದು ರೋಮ್ ಸಾಮ್ರಾಜ್ಯದಲ್ಲಿ. ಪ್ರಾಚೀನ ಯೂರೋಪ್​ನಲ್ಲಿ ಮೂರು ರೀತಿಯ ಮುತ್ತುಗಳು ಪ್ರಚಲಿತದಲ್ಲಿದ್ದವು. ಒಸ್ಕಾಲಮ್ (ಗೆಳೆಯರು ಪರಸ್ಪರ ಸಂಧಿಸಿದಾಗ ಕೆನ್ನೆ ಮೇಲೆ ಹಗುರವಾಗಿ ತುಟಿ ಒತ್ತುವುದು), ಬಾಸಿಯಮ್ (ಸಾಮಾನ್ಯವಾಗಿ ಮಕ್ಕಳಿಗೆ ಕೊಡುವ ಮುದ್ದಿನ ಮುತ್ತು), ಸಾವಿಯಮ್ (ಒಲಿದವರು ಪರಸ್ಪರರಿಗೆ ತುಟಿ ಒತ್ತಿ ಕೊಡುವ ಮುತ್ತು). ಸಭೆ-ಸಮಾರಂಭಗಳಲ್ಲಿ ಯಾರು ಯಾರಿಗೆ ಹೇಗೆ ಮುತ್ತು ಕೊಡುತ್ತಿದ್ದರು ಎಂದು ರೋಮನ್ನರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಎಷ್ಟೋ ಸಲ ಸಾಮಾಜಿಕ ಸ್ಥಾನಮಾನಗಳಿಗೂ ಸಿಗುವ ಅಥವಾ ಕೊಡುವ ಮುತ್ತುಗಳಿಗೂ ಸಂಬಂಧ ಇರುತ್ತಿತ್ತು. ಯುದ್ಧಗಳಿಗೆ ಹೊರಡುವ ಮೊದಲು ತಮ್ಮ ಸಂಗಾತಿಗಳಿಗೆ ಪ್ರೇಯಸಿಯರು ಚುಂಬಿಸಿ ಕಳಿಸುವುದು ವಾಡಿಕೆಯಾಗಿತ್ತು. ತಮ್ಮ ಮುತ್ತಿನ ಶಕ್ತಿ ಒಲಿದವನ ಜೀವ ಕಾಯಲಿದೆ ಎನ್ನುವ ಆಶಯವಿತ್ತು ಅವರಲ್ಲಿ.

ಫ್ರೆಂಚ್ ಕಿಸ್

ಇಂದು ವಿಶ್ವ ಪ್ರಸಿದ್ಧವಾದ ‘ಫ್ರೆಂಚ್​ ಕಿಸ್’ ಪರಿಕಲ್ಪನೆ ಚಾಲ್ತಿಗೆ ಬಂದಿದ್ದು ಮೊದಲ ಜಾಗತಿಕ ಯುದ್ಧದಲ್ಲಿ. ಫ್ರಾನ್ಸ್​ಗೆ ನಿಯೋಜನೆಯಾಗಿದ್ದ ಅಮೆರಿಕ ಮತ್ತು ಬ್ರಿಟನ್​ನ ಯೋಧರು ಫ್ರಾನ್ಸ್​ನ ಮಹಿಳೆಯರು ತಾವು ಒಲಿದವರಿಗೆ ಅತ್ಯಾಸೆ-ಅತಿಪ್ರೀತಿಯಿಂದ ಮೈಚಳಿ ಬಿಟ್ಟು ಮುತ್ತು ಕೊಡುವುದು ನೋಡಿ ಮಂತ್ರಮುಗ್ಧರಾಗಿದ್ದರು. ಫ್ರೆಂಚ್​ ಕಿಸ್​ಗೆ ನಾಲಿಗೆಯಿಂದ ಮುತ್ತುಕೊಡುವುದು ಎಂದೂ ಕೆಲವರು ವಿವರಿಸುತ್ತಾರೆ.

ಮುತ್ತು ಕೊಡುವ ಯಂತ್ರ

ಮುತ್ತು ಎನ್ನುವುದು ಭಾವಾಭಿವ್ಯಕ್ತಿ, ಭರವಸೆಯ ಸಂಕೇತವಾಗಿದೆ ಎನ್ನುವುದು ನಿರ್ವಿವಾದ. ಆದರೆ ಯಂತ್ರ ನಾಗರಿಕತೆಯು ಭಾವನೆಗಳನ್ನೂ ಬಿಟ್ಟಿಲ್ಲ. ಜಪಾನ್​ನ ತಂತ್ರಜ್ಞರು ಮುತ್ತುಕೊಡುವ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಈ ಕಂಪ್ಯೂಟರ್ ಪ್ರೋಗ್ರಾಮಿಂಗ್ ಯಂತ್ರವು ಪಕ್ಕಾ ಫ್ರೆಂಚ್​ ಕಿಸ್ ಕೊಡುತ್ತದೆಯಂತೆ.

ಇಷ್ಟೆಲ್ಲಾ ಸರ್ಕಸ್ ಯಾಕೆ. ಭಾವನೆಗಳನ್ನು ಜೀವಂತ ಇಟ್ಟುಕೊಳ್ಳಿ. ಮಕ್ಕಳು, ಸಂಗಾತಿಯನ್ನು ಪ್ರೀತಿಸಿ. ತನ್ನಿಂತಾನೆ ಸಿಗುತ್ತೆ ಸಿಹಿಮುತ್ತು. ಇಷ್ಟೆಲ್ಲಾ ಓದಿದ ಮೇಲೆ ಇನ್ನೊಂದು ಸಲ, ‘ಸಿಹಿಮುತ್ತು ಸಿಹಿಮುತ್ತು’ ಹಾಡು ಕೇಳಿಬಿಡಿ.

Published On - 7:34 am, Wed, 6 July 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ