Interview: ಭಾರತೀಯ ಭಾಷೆಗಳ ಸುಲಲಿತ ಕಲಿಕೆಗೆ ತಂತ್ರಜ್ಞಾನ, ಪಠ್ಯದ ಬೆಂಬಲ ಬೇಕು: ಚಮೂ ಕೃಷ್ಣಶಾಸ್ತ್ರಿ

Interview: ಭಾರತೀಯ ಭಾಷೆಗಳ ಸುಲಲಿತ ಕಲಿಕೆಗೆ ತಂತ್ರಜ್ಞಾನ, ಪಠ್ಯದ ಬೆಂಬಲ ಬೇಕು: ಚಮೂ ಕೃಷ್ಣಶಾಸ್ತ್ರಿ
ಚಕ್ರಕೋಡಿ ಮೂಡಂಬೈಲು ಕೃಷ್ಣ ಶಾಸ್ತ್ರಿ

ನವೆಂಬರ್ 15 ರಂದು ಚಮೂ ಕೃಷ್ಣ ಶಾಸ್ತ್ರಿಗಳು ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಮಿತಿಯ ಆಶಯದ ಕುರಿತು ಅವರ ಚುಟುಕು ಸಂದರ್ಶನ ಮಾಡಲಾಗಿದೆ. 

ganapathi bhat

| Edited By: shivaprasad.hs

Nov 18, 2021 | 9:05 AM

ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷರಾಗಿ ಚಮೂ ಕೃಷ್ಣ ಶಾಸ್ತ್ರಿ (ಚಕ್ರಕೋಡಿ ಮೂಡಂಬೈಲು ಕೃಷ್ಣ ಶಾಸ್ತ್ರಿ) ನೇಮಕಗೊಂಡಿದ್ದಾರೆ. ಇವರು ಮೂಲತಃ ದಕ್ಷಿಣ ಕನ್ನಡ ಬಂಟ್ವಾಳದವರು. ಇವರು ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತುಳು ಮುಂತಾದ ಭಾಷೆಗಳನ್ನು ಬಲ್ಲವರು. ಇತ್ತೀಚಿನವರೆಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಸಾಹಿತ್ಯ- ಶಿಕ್ಷಣ ಕ್ಷೇತ್ರಗಳಲ್ಲಿ ಅವರು ನೀಡಿರುವ ಮಹತ್ತರ ಕೊಡುಗೆ ಪರಿಗಣಿಸಿ 2017ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇದೀಗ, ನವೆಂಬರ್ 15 ರಂದು ಚಮೂ ಕೃಷ್ಣ ಶಾಸ್ತ್ರಿಗಳು ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಮಿತಿಯ ಆಶಯದ ಕುರಿತು ಅವರ ಚುಟುಕು ಸಂದರ್ಶನ ಮಾಡಲಾಗಿದೆ. 

ಪ್ರಶ್ನೆ: ಎಲ್ಲಾ ಭಾರತೀಯ ಭಾಷೆಗಳ ಉನ್ನತಿ ಎಂದಿದೆ. ಭಾರತದಲ್ಲಿ ಅಸಂಖ್ಯ ಭಾಷೆಗಳು ಇವೆ. ಇದೆಲ್ಲವನ್ನೂ ಒಟ್ಟಾಗಿ ಪರಿಗಣಿಸಿ ಕೆಲಸ ಮಾಡುವುದು ಎಂಬ ಕಲ್ಪನೆಯೇ ರೋಚಕ, ಆಶ್ಚರ್ಯ ಅಥವಾ ಕುತೂಹಲಭರಿತ. ಇದನ್ನು ಸಾಧ್ಯವಾಗಿಸುವುದು ಹೇಗೆ? ನಿರ್ವಹಿಸುವುದು ಹೇಗೆ?

ಉತ್ತರ: ಭಾರತ ಸಂಘದ ರಾಜಭಾಷೆ 2, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇರುವ ಭಾಷೆಗಳು 22 ಇವೆ. ಇದೆರಡರಲ್ಲೂ ಹಿಂದಿ ಬರುವುದರಿಂದ ಇಲ್ಲಿ ಒಟ್ಟು 23 ಭಾಷೆ ಆಯಿತು. ಶಾಸ್ತ್ರೀಯ ಅಥವಾ ಪ್ರಾಚೀನ ಭಾಷೆಗಳು ಎಂದು ಪರಿಗಣಿತವಾದ ಭಾಷೆಗಳದ್ದು ಮತ್ತೊಂದು ವಿಭಾಗ. ಅದರಲ್ಲಿ ಪಾಲಿ, ಪ್ರಾಕೃತ, ಸಂಸ್ಕೃತ, ಅರೇಬಿಕ್, ಮರಾಠಿ, ಕನ್ನಡ, ಒಡಿಯಾ, ತಮಿಳು ಇತ್ಯಾದಿ ಬರುತ್ತವೆ. ಕನ್ನಡ ಮುಂತಾದ ಕೆಲವು ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದದಲ್ಲೂ ಇದೆ. ಆದರೆ, ಉಳಿದ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆಗಳು ಈ ವಿಭಾಗದಲ್ಲಿ ಮಾತ್ರ ಸೇರುತ್ತದೆ.

ನಂತರ, ಇತರ ಪ್ರಾಂತಭಾಷೆ, ಅಳಿವಿನ ಅಂಚಿನಲ್ಲಿ ಇರುವ ಭಾಷೆಗಳು, ಬುಡಕಟ್ಟು ಜನಾಂಗದ ಭಾಷೆಗಳು (Tribal Language) ಹೀಗೆ ಒಟ್ಟು 1,500 ರಷ್ಟು ಭಾಷೆಗಳು ಇದೆ. ನೂತನ ಶಿಕ್ಷಣ ನೀತಿಯ ಅನ್ವಯ ಕೆಲವು ವಿಭಾಗಗಳನ್ನು ಮಾಡಲಾಗಿದೆ. ಮಾತೃಭಾಷೆ, ಪ್ರಾಚೀನ ಭಾಷೆ, ವಿದೇಶಿ ಭಾಷೆ ಎಂಬ ಪರಿಕಲ್ಪನೆ ನೂತನ ಶಿಕ್ಷಣ ನೀತಿಯಲ್ಲಿ ಇದೆ. ಇದೆಲ್ಲವೂ ಭಾಷೆಯ ವಿಂಗಡಣೆ, ಭಾಷೆಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬ ವಿಚಾರ.

ಭಾಷೆಗೆ ಸಂಬಂಧಿಸಿ ಬೇರೆ ಬೇರೆ ಸಂಸ್ಥೆಗಳು ಇವೆ. ಕೌನ್ಸಿಲ್ ಫಾರ್ ಪ್ರಮೋಷನ್ ಆಫ್ ಕನ್ನಡ, ಸಂಸ್ಕೃತ, ಹಿಂದಿ ಮತ್ತು ಉರ್ದು ವಿಶ್ವ ವಿದ್ಯಾಲಯಗಳು, ಸಂಸ್ಕೃತಕ್ಕೆ ಸಂಬಂಧಪಟ್ಟು 17 ವಿಶ್ವ ವಿದ್ಯಾಲಯಗಳು ಇವೆ. ಇನ್​​ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ ಸಿಸ್ಟಮ್ ಅಂತ ಇದೆ. ಹಲವು ಪರಿಷತ್​ಗಳು, ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅಲ್ಲಿನ ಲಿಂಗ್ವಿಸ್ಟಿಕ್, ಭಾಷಾಂತರ ವಿಭಾಗ ಇತ್ಯಾದಿ ಇದೆ. ಇವುಗಳ ಮೂಲಕ ಭಾಷೆಯ ಬಗ್ಗೆ ಕೆಲಸ ಮಾಡಲಾಗುತ್ತದೆ.

ಪ್ರಶ್ನೆ: ಸಮಿತಿಯ ಧ್ಯೇಯೋದ್ದೇಶ ಏನು? ಮುಖ್ಯವಾಗಿ ಏನು ಕೆಲಸ ಆಗಲಿದೆ?

ಉತ್ತರ: ಭಾರತೀಯ ಭಾಷೆಗಳನ್ನು ಕಲಿಯುವ ವಾತಾವರಣ, ಅದಕ್ಕೆ ಬೇಕಾದ ತಂತ್ರಜ್ಞಾನ, ಪಠ್ಯ ಬೇಕು. ನೂತನ ಶಿಕ್ಷಣ ನೀತಿ ಅನ್ವಯ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ಕೌಶಲ ಶಿಕ್ಷಣ ಇದೆಲ್ಲಾ ಭಾರತೀಯ ಭಾಷೆಗಳಲ್ಲಿ ಆಗಬೇಕು ಅಂತ ಇದೆ. ಅದಕ್ಕೆ ಬೇಕಾದ ಪಠ್ಯ, ಕರಿಕುಲಮ್ ಅನ್ನು ಈ ಸಮಿತಿಯ ಮೂಲಕ ಕ್ರಿಯಾನ್ವಯ ಮಾಡಲಾಗುತ್ತದೆ.

ನೂತನ ಶಿಕ್ಷಣ ನೀತಿಯ ಕ್ರಿಯಾನ್ವಯ ಆಗಬೇಕು. ಅದಕ್ಕೆ ಬೇಕಾಗಿ ಈ ಸಮಿತಿಯು ದಿಕ್ಸೂಚಿ ಅಥವಾ ಮಾರ್ಗಸೂಚಿ ತಯಾರು ಮಾಡಲಿದೆ ಮತ್ತು ನೀಡಲಿದೆ. ನೂತನ ಶಿಕ್ಷಣ ನೀತಿಯಲ್ಲಿ ಹೇಳಲಾದ ಮಾತೃಭಾಷೆ, ಪ್ರಾಚೀನ ಭಾಷೆ, ವಿದೇಶಿ ಭಾಷೆ, ಮಾತೃಭಾಷೆಯಲ್ಲಿ ಶಿಕ್ಷಣ ಈ ವಿಚಾರಗಳು ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಅನ್ವಯವಾಗಬೇಕು. ಅದಕ್ಕಾಗಿ ಸಲಹೆ ನೀಡುವುದು, ಪರಾಮರ್ಶೆ ಮಾಡುವುದು, ಆಕ್ಷನ್ ಪ್ಲಾನ್ ಸಿದ್ದಪಡಿಸುವುದು ನಮ್ಮ ಕೆಲಸ. ಕಾಲಕಾಲಕ್ಕೆ ಬೇಕಾದ ಸಲಹೆ ಯೋಜನೆ ನಾವು ಕೊಡುವುದು. ಅದರ ಕ್ರಿಯಾನ್ವಯ ಆಗುವುದು ಮಂತ್ರಾಲಯದ ಮೂಲಕ.

ಪ್ರಶ್ನೆ: ಭಾಷಾ ವಿದ್ಯಾರ್ಥಿಗಳ ಉದ್ಯೋಗಾವಕಾಶ ಎಂದೂ ಇದೆ. ಈ ವಿಚಾರವನ್ನು ವಿವರಿಸುವುದಾದರೆ..

ಉತ್ತರ: ಶಿಕ್ಷಣ ಪರಿಣಾಮಕಾರಿ ಆಗುವುದು ಹೇಗೆ, ಹೆಚ್ಚು ಆಕರ್ಷಕ ಆಗುವುದು ಹೇಗೆ, ಅದಕ್ಕೆ ಬೇಕಾದ ತರಬೇತಿ, ಸಾಮಗ್ರಿ ಒದಗಿಸುವುದು. ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕೆ ಬೇಕಾದಂತ ಪಠ್ಯ ರೂಪಿಸುವುದು. ಶಿಕ್ಷಣ ಮಕ್ಕಳನ್ನು ಹಾಗೆ ತಯಾರು ಮಾಡಬೇಕು. ಅಂತಹ ಗುಣಮಟ್ಟದ ಮೂಲಕ ಮಕ್ಕಳ ಯೋಗ್ಯತೆ ಹೆಚ್ಚಾಗುವಂತೆ, ಅವರು ಉದ್ಯೋಗಾರ್ಹರಾಗುವಂತೆ ಮಾಡುವುದು. ಭಾಷೆಯ ಅಂತಹ ಪಠ್ಯ ತಯಾರಿ ನಮ್ಮ ಯೋಜನೆ. ಇದು ಬಹು ಆಯಾಮ ಹೊಂದಿರುವ ವಿಷಯ.

ಮುಂದಿನ 10, 20 ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಅಭಿವೃದ್ಧಿ, ನಗರ- ಗ್ರಾಮದ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ, ಜನಜೀವನದಲ್ಲಿ ವ್ಯತ್ಯಾಸ ಇತ್ಯಾದಿ ಆಗಲಿದೆ. ರಾಷ್ಟ್ರ ವಿಕಾಸಕ್ಕೆ ಎಲ್ಲಾ ಕ್ಷೇತ್ರಗಳು ಮುಂದೆ ಬರಲು ಏನೆಲ್ಲಾ ಅವಶ್ಯಕತೆ ಇದೆ ಅದಕ್ಕೆ ಅನುಗುಣವಾಗಿ ಭಾಷೆಯ ಶಿಕ್ಷಣ ರೂಪುಗೊಳ್ಳಬೇಕು. ದೂರಗಾಮಿ ಹಾಗೂ ಸದ್ಯದ ಅವಶ್ಯಕತೆ ಎರಡನ್ನೂ ಗಮನದಲ್ಲಿ ಇರಿಸಿ ಈ ಹಾದಿಯಲ್ಲಿ ಕೆಲಸ ಸಾಗಲಿದೆ.

ಪ್ರಶ್ನೆ: ಕಾರ್ಯಕ್ಷೇತ್ರ, ಕಾರ್ಯವ್ಯಾಪ್ತಿ ಬಹಳ ಅಗಾಧ ಅನಿಸುತ್ತದೆ..

ಉತ್ತರ: ಶಿಕ್ಷಾ ಮಂತ್ರಾಲಯದಿಂದ ಈ ಸಮಿತಿ ರಚನೆ ಆಗಿದೆ. ನಮ್ಮ ಮುಖ್ಯ ಕಾರ್ಯಕ್ಷೇತ್ರ ಶಿಕ್ಷಾ ಕ್ಷೇತ್ರ. ಅದಕ್ಕೆ ಮುಂದೆ ಇತರ ಕ್ಷೇತ್ರದಗಳಾದ ಆರ್ಥಿಕ, ವಿಜ್ಞಾನ, ಆರೋಗ್ಯ ಹಾಗೂ ಎಲ್ಲಕ್ಕೂ ಭಾರತದಲ್ಲಿ ಯಾವ ರೀತಿಯ ಜನ ರೂಪುಗೊಳ್ಳಬೇಕು. ಆ ರೀತಿ ಶಿಕ್ಷಣವನ್ನು ಭಾರತೀಯ ಭಾಷೆಗಳಲ್ಲಿ ಕೊಡುವುದು, ಅದನ್ನು ಸಾಧ್ಯವಾಗುವಂತೆ ಶ್ರಮಿಸುವುದು ನಮ್ಮ ಸಮಿತಿ.

ಸಮಿತಿಯು ಭಾಷೆಗಳ ತಂತ್ರಜ್ಞಾನ ಸಂಬಂಧಿತ ಬೆಳವಣಿಗೆ, ಭಾಷಾ ಶಿಕ್ಷಣ, ಭಾಷಾ ವಿದ್ಯಾರ್ಥಿಗಳ ಉದ್ಯೋಗಾವಕಾಶ, ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಭಾರತೀಯ ಭಾಷೆಗಳಿಗೆ ಶಿಕ್ಷಣ ರಂಗದಲ್ಲಿ ಬೇಕಾದ ನೀಲನಕಾಶೆ, ಭಾಷಾ ಸಂಸ್ಥೆಗಳ ಶಕ್ತಿವರ್ಧನೆ, ಭಾಷಾ ಶಿಕ್ಷಣ ಸಂಶೋಧನೆ, ಭಾಷಾ ದತ್ತ ಸಂಚಯ, ಅನುವಾದ, ಭಾಷಾಂತರ ಈ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

ಸಂದರ್ಶನ: ಗಣಪತಿ ದಿವಾಣ

ಇದನ್ನೂ ಓದಿ: 1ರಿಂದ 10ನೇ ತರಗತಿವರೆಗೆ ಪಂಜಾಬಿ ಭಾಷೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ 2 ಲಕ್ಷ ರೂ. ದಂಡ -ಪಂಜಾಬ್ ಸರ್ಕಾರ ಆದೇಶ

ಇದನ್ನೂ ಓದಿ: ಹಿಂದಿ ಭಾಷೆ ವಿರುದ್ಧ ಕರಾಳ ದಿನ; ನವೆಂಬರ್ 21ರಿಂದ ಚಳುವಳಿ ನಡೆಸಲು ವಾಟಾಳ್ ಕರೆ

Follow us on

Related Stories

Most Read Stories

Click on your DTH Provider to Add TV9 Kannada