New Year Resolution | ನಮ್ಮೊಳಗಿನ ಒಳ್ಳೆಯದು ಹೆಚ್ಚಿಗೆ ಮಾಡಿಕೊಳ್ಳೋಣ: ವಿದುಷಿ ಟಿ.ಎಸ್.ಸತ್ಯವತಿ
ಉತ್ತಮ ಸಾಹಿತ್ಯ, ಸಂಗೀತ ಅಥವಾ ಕಲೆ ಮನಸ್ಸನ್ನು ಅರಳಿಸಬಲ್ಲದು ಎಂಬುದು ಅನುಭವಕ್ಕೆ ಬಂದ ವಿಷಯ. ನನ್ನದೇ ಇತಿಮಿತಿಯಲ್ಲಿ, ನನಗೆ ತಿಳಿದಿರುವಂಥ ಪರಿಮಿತವಾದ ಸಾಹಿತ್ಯ ಮತ್ತು ಸಂಗೀತ ಜ್ಞಾನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬ ಅಪೇಕ್ಷೆ ಇದೆ.
ಸಂಗೀತ ವಿದುಷಿ ಟಿ.ಎಸ್.ಸತ್ಯವತಿ ಹೊಸ ವರ್ಷದ ಆಶಯಗಳ ಬಗ್ಗೆ ‘ಟಿವಿ9 ಕನ್ನಡ ಡಿಜಿಟಲ್’ ತಂಡದ ಜೊತೆಗೆ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ
ಯಾವುದೇ ಒಂದು ಸಂಕಲ್ಪದಲ್ಲಿ ಆಮೂಲಾಗ್ರ ಬದಲಾವಣೆ ಅನ್ನುವುದನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಏನಿದ್ದರೂ ಕೆಟ್ಟದ್ದನ್ನು ಕಡಿಮೆ ಮಾಡಿಕೊಳ್ಳುವಂಥದ್ದು, ನಮ್ಮೊಳಗೆ ಇರುವಂಥ ಒಳ್ಳೆಯದನ್ನು ಹೆಚ್ಚು ಮಾಡಿಕೊಳ್ಳುವುದು. ಇದು ತುಂಬಾ ಒಳ್ಳೆಯ ವಿಚಾರ. ಹಾಗಾಗಿ, ನನ್ನ ಸಂಕಲ್ಪ ಈ 2021ಕ್ಕೆ, ಹೆಚ್ಚು ಹೆಚ್ಚು ಆತ್ಮಾವಲೋಕನ ಮಾಡಿಕೊಳ್ಳುವುದು. ಋಣಾತ್ಮಕ ಚಿಂತನೆಗಳನ್ನು ಕೈಬಿಡುವುದು. ಧನಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳುವುದು. ಕರ್ತವ್ಯ ಪ್ರಜ್ಞೆ ಹೆಚ್ಚಿಸಿಕೊಳ್ಳುವುದು. ಹೀಗೆ ಒಳ್ಳೆಯತನವನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳಬೇಕು ಎಂಬ ಸಂಕಲ್ಪವನ್ನು ನಾನು ಮಾಡಿಕೊಳ್ಳುತ್ತಿದ್ದೇನೆ.
ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ
ಸಮಾಜದಲ್ಲಿ ಒಂದು ಅನುಕಂಪೆಯ, ಸಂವೇದನಾಶೀಲತೆಯ ಕೊರತೆ ಎದ್ದು ಕಾಣುತ್ತಿದೆ. ಅದು ಸಹನೆ, ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಬದಲಾಗಬೇಕು. ಮನಸ್ಸುಗಳು ನೆಮ್ಮದಿಯನ್ನು ಪಡೆದುಕೊಳ್ಳಬೇಕು. ಶಾಂತಿಯನ್ನು ರೂಢಿಸಿಕೊಳ್ಳಬೇಕು. ‘ಶೀತಲಂ ಪರದುಃಖಂ’ ಎಂದು ಆಗಬಾರದು. ಅಂದರೆ, ಬೇರೆಯವರ ದುಃಖ ನಮಗೆ ಮುಟ್ಟುವುದೇ ಇಲ್ಲ ಎಂಬಂತೆ ಆಗಬಾರದು. ಸಮಷ್ಟಿ ಭಾವ ಬರಬೇಕು. ಲೋಕ, ರಾಷ್ಟ್ರ, ರಾಜ್ಯ, ಸಮಾಜ ಎಲ್ಲವೂ ಸ್ವಸ್ಥವಾಗಿದ್ದರೆ ನಾವು ಚೆನ್ನಾಗಿರುತ್ತೇವೆ. ಈ ಭಾವ ಬಲಿಯುತ್ತಾ ಹೋದಷ್ಟು ಪ್ರೀತಿಯ ಸೆಲೆ ಒಡೆಯುತ್ತದೆ. ಎಲ್ಲರೂ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತೆ. ಹಾಗಾಗಬೇಕು ಎಂಬುದು ಆಶಯ.
ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ
ಮನಸ್ಸು ಸ್ವಸ್ಥ, ಸ್ವಚ್ಛವಾಗಬೇಕು. ಉತ್ತಮ ಸಾಹಿತ್ಯ, ಸಂಗೀತ ಅಥವಾ ಕಲೆ ಮನಸ್ಸನ್ನು ಅರಳಿಸಬಲ್ಲದು ಎಂಬುದು ಅನುಭವಕ್ಕೆ ಬಂದ ವಿಷಯ. ನನ್ನದೇ ಇತಿಮಿತಿಯಲ್ಲಿ, ನನಗೆ ತಿಳಿದಿರುವಂಥ ಪರಿಮಿತವಾದ ಸಾಹಿತ್ಯ ಮತ್ತು ಸಂಗೀತ ಜ್ಞಾನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬ ಅಪೇಕ್ಷೆ ಇದೆ.
Published On - 11:21 pm, Thu, 31 December 20