Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ಈತನಕ ಇವರು ನನ್ನ ಬಳಿ ಯಾವ ವೈಯಕ್ತಿಕ ಸಹಾಯವನ್ನೂ ಕೇಳಿಕೊಂಡು ಬಂದಿದ್ದಿಲ್ಲ!’

|

Updated on: May 20, 2021 | 2:16 PM

‘ಸ್ಥಳೀಯವಾಗಿ ಸಾಕಷ್ಟು ಸಮಾಜ ಸೇವಕರನ್ನು ಸಂಘಟಕರನ್ನೂ ನೋಡಿದ್ದೇನೆ. ಆದರೆ ಈ ತಂಡದಲ್ಲಿರುವ ಹುಡುಗರು ಆರ್ಥಿಕವಾಗಿ ಅಷ್ಟೇನು ಸಬಲರಾಗಿಲ್ಲದಿದ್ದರೂ ಭಿಕ್ಷುಕರನ್ನು, ನಿರ್ಗತಿಕರನ್ನು ಗುರುತಿಸಿ ಸಹಾಯ ಮಾಡುತ್ತ ಬಂದಿದ್ದಾರೆ. ವಿನೋದ್ ತೂಗಿದರೆ ನಲವತ್ತಕ್ಕೂ ಏರಲಾರರೇನೋ. ಇನ್ನು ಸಮೀರ ಎನ್ನುವ ಹುಡುಗನಿಗೆ ನರದೌರ್ಬಲ್ಯ, ಸದಾ ಅವನ ಶರೀರ ನಡುಗುತ್ತಲೇ ಇರುತ್ತದೆ. ಹೀಗಿದ್ದಾಗಲೂ ಅವರು ನಿರ್ಗತಿಕರಿಗೆ ಅನ್ನದಾನ ಮಾಡುತ್ತಿದ್ದಾರೆ.’ ಅನೂಪ್ ಮಾದಪ್ಪ

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ಈತನಕ ಇವರು ನನ್ನ ಬಳಿ ಯಾವ ವೈಯಕ್ತಿಕ ಸಹಾಯವನ್ನೂ ಕೇಳಿಕೊಂಡು ಬಂದಿದ್ದಿಲ್ಲ!’
ಮಡಿಕೇರಿಯ ಸಮಾಜ ಸೇವಕ ವಿನೋದ್ ಮತ್ತು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ
Follow us on

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com

ಸರಣಿಯ ಆರಂಭದಲ್ಲಿ ಕೊಡಗಿನ ಶವಾಗಾರದ ಸಹಾಯಕರ ತಲ್ಲಣಕ್ಕೆ ಧ್ವನಿಯಾಗಿದ್ದರು ಸಮಾಜ ಸೇವಕ, ಲೇಖಕ ನೌಶಾದ್ ಜನ್ನತ್. ಈಗ ಮಡಿಕೇರಿಯ ಬೀದಿಬದಿಯ ಜೀವಗಳು ಹಸಿವು ನೀಗಿಸಿಕೊಂಡು ಜೀವ ಉಳಿಸಿಕೊಳ್ಳುತ್ತಿರುವ ಹಿಂದೆ ಇರುವ ನಿಸ್ವಾರ್ಥ ಮನಸ್ಸಗಳನ್ನು ಪರಿಚಯಿಸಿದ್ದಾರೆ.

*

ಪ್ರಪಂಚದಲ್ಲಿ ಯಾರೂ ಯಾವುದು ಶಾಶ್ವತವಲ್ಲ ಎಂಬುದರ ಜೊತೆಗೆ ಒಂದು ಕ್ಷಣ ಯಾಮಾರಿದರೆ ಗಳಿಸಿದ್ದು, ಕೂಡಿಟ್ಟಿದ್ದ ಪ್ರತಿಯೊಂದನ್ನು ಬಿಟ್ಟು ಬರಿಗೈಯಲ್ಲಿ ಅತಿ ಹೀನಾಯವಾಗಿ ಅಂದರೆ ಮನುಷ್ಯ ಸ್ಪರ್ಶ ಸಹ ಇಲ್ಲದೇ, ಪ್ರತಿಯೊಬ್ಬರು ಮುಟ್ಟಲು ಕೂಡ ಭಯಪಟ್ಟು ಮಾರುದ್ಧ ಓಡುವ ರೀತಿಯಲ್ಲಿ ನಮ್ಮ ಕೊನೆಯ ಘಟ್ಟವನ್ನು ನಾವು ತಲುಪಬೇಕಾಗುತ್ತದೆ ಎನ್ನುವ ವಾಸ್ತವದಲ್ಲಿ ನಾವೆಲ್ಲ ಇದ್ದೇವೆ.

ಯಾವುದೇ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳದೆ ಸೋಂಕು ತಡೆಗಟ್ಟುವ ಸಲುವಾಗಿ ನಮ್ಮ ಸರಕಾರ ‘ಲಾಕ್​ಡೌನ್​’ ಎಂಬ ಭೂತವನ್ನು ಜನಸಾಮಾನ್ಯನ ಮೇಲೆ ಹೇರಿತು. ದುಡಿದು ತಿನ್ನುವವನ ಅವಸ್ಥೆ ಗಾಯದ ಮೇಲೆ ಬರೆ ಎಳೆದಂತಾಯಿತು. ವೈರಸ್ಸಿಗೆ ಹೆದರಿ ನಾವೇನೋ ನಾಲ್ಕು ಗೋಡೆಗಳೊಳಗೆ ಬಂದಿಯಾದೆವು. ಆದರೆ ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು, ವಾಸಿಸಲು ಮನೆಯೇ ಇಲ್ಲದವರು, ಬಿಸಾಕಿದ ಎಂಜಲನ್ನೇ ತಿಂದು ಬದುಕುತ್ತಿರುವ ಅನಾಥ ದನಕರು, ನಾಯಿಯಂಥ ಮೂಕಪ್ರಾಣಿಗಳು? ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾಗಿದ್ದಂತಹ ಕುಟುಂಬದವರು ನಿಗದಿತ ಸಮಯದಲ್ಲಿ ಸಾಮಗ್ರಿ ಖರೀದಿಸುತ್ತ, ಈಗಲಾದರೂ ಸರ್ಕಾರ ಒಳ್ಳೆಯ ಕೆಲಸ ಮಾಡಿತು, ಸೋಂಕು ತಡೆಗಟ್ಟಲು ಇದೇ ಸೂಕ್ತ ಮಾರ್ಗ ಎಂದು ಹೇಳುತ್ತ ತಮ್ಮ ಸ್ವಯಂ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅಂದಂದಿನ ದುಡಿಮೆಯಿಂದ ಅಂದಂದೇ ಊಟ ಮಾಡಿಕೊಂಡಿದ್ದವರು ನಿಜಕ್ಕೂ ಕಂಗಾಲಾಗಿದ್ದಾರೆ.

ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಾಗಲೀ, ಸರಕಾರವಾಗಲೀ ಮರೆತ ಇಂಥ ಕರ್ತವ್ಯವನ್ನು ಕೆಲವರಾದರೂ ಮಾಡುತ್ತಿದ್ದಾರೆ ಎನ್ನುವುದೇ ಸಮಾಧಾನ ಮತ್ತು ಸ್ಫೂರ್ತಿಯ ವಿಷಯ. ಸಮಸ್ಯೆಗಳನ್ನು ಅನುಭವಿಸಿದವರು ಮಾತ್ರ ಇತರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಹಾಗೆಯೇ ಹಸಿವನ್ನು ಅನುಭವಿಸಿದವರಿಗೇ ಹಸಿವಿನ ಕಷ್ಟ ಕೂಡ ಅರ್ಥವಾಗುತ್ತದೆ. ಸಹಾಯ ಮಾಡಲು ಬೇಕಿರುವುದು ಪ್ರಾಮಾಣಿಕತೆ, ಮನಸಿನ ಸರಳತೆ ಮತ್ತು ಸಮಾನ ಮನಸ್ಕತೆ. ಈ ನಿಟ್ಟಿನಲ್ಲಿ ಮಡಿಕೇರಿಯ “ಗೆಳೆಯರ ಬಳಗ” ತಂಡ ಕಟ್ಟಿಕೊಂಡು ಅನ್ನದಾನದಲ್ಲಿ ತೊಡಗಿಕೊಂಡಿದೆ. ಮಡಿಕೇರಿಯ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರ ಸಹಕಾರದೊಂದಿಗೆ ಈ ತಂಡ ಕಳೆದ ಇಪ್ಪತ್ತು ದಿನಗಳಿಂದ ನಗರದಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ಮತ್ತು ಬೀದಿದನಕರುನಾಯಿಗಳಿಗೂ ನಿತ್ಯವೂ ಆಹಾರ ಪೂರೈಸುತ್ತಿದೆ.

ಜೀವಗಳನ್ನು ಪೋಷಿಸುವ ಕೆಲಸದಲ್ಲಿ ವಿನೋದ್ ಮತ್ತು ತಂಡದ ಸದಸ್ಯರು

ಸುಮಾರು 56 ವರ್ಷದ ವಿನೋದ್ ಮಡಿಕೇರಿಯ ನಿವಾಸಿ. ಹಲವಾರು ವರ್ಷಗಳಿಂದ ಒಂದಷ್ಟು ಉತ್ಸಾಹಿ ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜಸೇವೆಯಲ್ಲಿ ನಿರತರಾಗಿರುವ ಇವರು ವೃತ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್. ಇವರು ತನ್ನ ದುಡಿಮೆಯ ಒಂದು ಭಾಗವನ್ನು ನಿತ್ಯವೂ ಒಂದು ಡಬ್ಬಿಗೆ ಹಾಕಿಡುತ್ತಾರೆ. ಕನಿಷ್ಟ ನೂರು ರೂಪಾಯಿ. ಆ ಹಣವನ್ನು ಸಮಾಜಸೇವೆಗೆ ಹೊರತು ಬೇರೆ ಯಾವುದಕ್ಕೂ ಉಪಯೋಗಿಸುವುದಿಲ್ಲ. ದೇಶದ ಸಾಕಷ್ಟು ಸಿರಿವಂತರು ತಮಗೇನೂ ಸಂಬಂಧವಿಲ್ಲ ಎಂಬಂತೆ ಕೈಕಟ್ಟಿ ಕುಳಿತಿರುವಾಗ, ದುಡಿದು ತಿನ್ನುತ್ತ, ಇತರರಿಗೂ ಹಂಚುತ್ತ ಬದುಕುವ ಇಂಥವರು ಮಾನವೀಯತೆಯ ಬಗ್ಗೆ ಭರವಸೆ ಹುಟ್ಟಿಸುತ್ತಾರೆ. ‘ನನ್ನ ಟಿವಿ ರಿಪೇರಿ ಅಂಗಡಿ ಮಡಿಕೇರಿಯ ಮಧ್ಯಭಾಗದಲ್ಲಿದೆ. ಲಾಕ್​ಡೌನ್​ ಘೋಷಣೆಯಾದ ದಿನ ಅಂಗಡಿಯ ಬಾಗಿಲು ಮುಚ್ಚಿ ಬಸ್ಸು ತಂಗುದಾಣದ ಬಳಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಅಲ್ಲೊಬ್ಬ ಭಿಕ್ಷುಕ ಕಂಡ. ನಾನು ಎಂದಿನಂತೆ ಅವನ ಬಳಿ ಹೋಗಿ ಹತ್ತು ರೂಪಾಯಿ ನೀಡಿದೆ. ಅದಾಗಲೇ ದಾರಿಹೋಕರಿಂದ ಲಾಕ್​ಡೌನ್​ ಬಗ್ಗೆ ಅಷ್ಟಿಷ್ಟು ಕೇಳಿಸಿಕೊಂಡು ಮುಂಬರುವ ಪರಿಸ್ಥಿತಿಯ ಬಗ್ಗೆ ಗಾಬರಿಗೆ ಬಿದ್ದಿದ್ದ ಅವ, ಇವತ್ತೇನೋ ನೀವು ಕೊಡುತ್ತೀರಾ, ಆದರೆ ನಾಳೆಯಿಂದ ನಮ್ಮ ಗತಿಯೇನು? ಕಳೆದ ಸಲದ ಲಾಕ್​ಡೌನ್​ನಲ್ಲಿ ಅನ್ನವಿಲ್ಲದೆ ಪರದಾಡಿದೆ. ಈಗ ಮತ್ತೆ ಹೀಗೇ ಆದರೆ… ಕಣ್ಣೀರು ಒರೆಸಿಕೊಂಡ. ನನಗೂ ಕಣ್ಣೀರು ಜಿನುಗಿತು. ಭಿಕ್ಷುಕರಿಗೇನಾದರೂ ಮಾಡಬೇಕು ಎಂದು ವೃತ್ತ ನೀರಿಕ್ಷಕ ಅನೂಪ್ ಸರ್ ಅವರಿಗೆ ಕರೆ ಮಾಡಿ ತಿಳಿಸಿದೆ. ಅವರು, ನೀವು ಅವರಿಗೆ ಲಾಕ್​ಡೌನ್​ ಮುಗಿಯುವವರೆಗೂ ಊಟದ ವ್ಯವಸ್ಥೆ ಮಾಡಿ, ನಿಮಗೆ ಬೇಕಾದ ಸಹಾಯವನ್ನು ಮಾಡುತ್ತೇನೆ ಎಂದು ಧೈರ್ಯ ತುಂಬಿದರು. ಇದರಿಂದಾಗಿ ಭಿಕ್ಷುಕರಾಗಲಿ, ಮೂಕ ಪ್ರಾಣಿಗಳಾಗಲಿ ನಮ್ಮ ನಗರದಲ್ಲಿ ಹಸಿವಿನಿಂದ ಬಳಲುತ್ತಿಲ್ಲ’ ಎಂದರು.

ಇಲ್ಲಿರುವುದು ಕೇವಲ ಮನುಷ್ಯ ಸಂಬಂಧ

ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಷ್ಟೂ ಪೊಲೀಸ್ ಅಧಿಕಾರಿಗಳ ನಡುವೆ ಮಡಿಕೇರಿ ನಗರ ವೃತ್ತ ನೀರಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅನೂಪ್ ಮಾದಪ್ಪನವರು ವಿಭಿನ್ನವಾಗಿ ನಿಲ್ಲುತ್ತಾರೆ. ಗೆಳೆಯರ ಬಳಗದ ಬೆನ್ನೆಲುಬು ಈ ವ್ಯಕ್ತಿ. ಪೊಲೀಸ್ ಅಧಿಕಾರಿಯಾಗಿ ನಿಮ್ಮದೇ ಆದ ಚೌಕಟ್ಟಿನೊಳಗೆ ಮಾಡಬೇಕಾದ ಹಲವಾರು ಕೆಲಸಗಳು, ಒತ್ತಡಗಳು ಇರುವಾಗ ಈ ರೀತಿಯಾಗಿ ಸಮಾಜ ಸೇವಾ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಜನಸೇವೆ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಮತ್ತು ಕಾರಣವೇನೆಂದು ಕೇಳಿದಾಗ, ‘ಕಳೆದ ಐದಾರು ವರ್ಷಗಳಿಂದ ನಾನು ಮಡಿಕೇರಿ ನಗರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಿರ್ಗತಿಕರಿಗೆ ಏನಾದರೂ ಸಹಾಯವಾಗಬೇಕಿದ್ದಲ್ಲಿ, ಸಮಸ್ಯೆಯಾಗಿದ್ದಲ್ಲಿ ಈ ತಂಡದ ಸದಸ್ಯರು ನನ್ನನ್ನು ಸಂಪರ್ಕಿಸುತ್ತಿದ್ದರು. ನಾನೂ ಕೂಡ ಒಬ್ಬ ರಕ್ತದಾನಿಯಾಗಿರುವುದರಿಂದ ವಿನೋದ್​ ಅವರ ನೇತೃತ್ವದ ‘ಕೊಡಗು ಬ್ಲಡ್ ಡೋನರ್ಸ್​’ ಮೂಲಕ ಈ ಸದಸ್ಯರೊಂದಿಗೆ ಹೆಚ್ಚೇ ಒಡನಾಟ ಸಾಧಿಸಲು ಸಾಧ್ಯವಾಯಿತು. ಕೊಡಗಿನಲ್ಲಿ ಯಾರಿಗೇ ರಕ್ತ ಬೇಕೆಂದರೂ ಸಂಪರ್ಕಿಸುವುದು ಇವರನ್ನೇ.’

ಆಟೋ ಹತ್ತಿ ಹೊರಡುವ ಮೊದಲಿನ ತಯಾರಿ…

‘ಸ್ಥಳೀಯವಾಗಿ ಸಾಕಷ್ಟು ಸಮಾಜ ಸೇವಕರನ್ನು ಸಂಘಟಕರನ್ನೂ ನೋಡಿದ್ದೇನೆ. ಆದರೆ ಈ ತಂಡದಲ್ಲಿರುವ ಹುಡುಗರು ಆರ್ಥಿಕವಾಗಿ ಅಷ್ಟೇನು ಸಬಲರಾಗಿಲ್ಲದಿದ್ದರೂ ಭಿಕ್ಷುಕರನ್ನು, ನಿರ್ಗತಿಕರನ್ನು ಗುರುತಿಸಿ ಸಹಾಯ ಮಾಡುತ್ತ ಬಂದಿದ್ದಾರೆ. ವಿನೋದ್ ತೂಗಿದರೆ ನಲವತ್ತಕ್ಕೂ ಏರಲಾರರೇನೋ. ಇನ್ನು ಸಮೀರ ಎನ್ನುವ ಹುಡುಗನಿಗೆ ನರದೌರ್ಬಲ್ಯ, ಸದಾ ಅವನ ಶರೀರ ನಡುಗುತ್ತಲೇ ಇರುತ್ತದೆ. ಹೀಗಿದ್ದಾಗಲೂ ಅವರು ಪರರ ಬಗ್ಗೆ ಚಿಂತಿಸುತ್ತಾರೆ. ಈ ತಂಡದವರ ಅನುಕಂಪ ಮತ್ತು ಸಹಾಯ ಮನೋಭಾವ ಯಾರನ್ನೂ ಮೃದುಗೊಳಿಸಿಬಿಡುತ್ತದೆ. ಈಗಾಗಲೇ 25 ರಿಂದ 30 ಬಾರಿ ರಕ್ತದಾನ ಮಾಡಿದರೂ ಇನ್ನೂ ಅವಶ್ಯಬಿದ್ದರೆ ಮತ್ತೆ ರಕ್ತ ಕೊಡಲು ತುದಿಗಾಲಲ್ಲಿ ನಿಂತಿರುವ ಈ ತಂಡದ ಇತರೇ ಸದಸ್ಯರನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಈ ವಿಚಾರವನ್ನು ಎಲ್ಲಿಯಾದರೂ ಹೇಳಿಕೊಳ್ಳುವುದಾಗಲಿ, ಪ್ರಚಾರ ಪಡೆದುಕೊಳ್ಳುವುದಾಗಲಿ ಇವರುಗಳು ಈತನಕ ಮಾಡಿಲ್ಲ. ಒಬ್ಬರೂ ತಮ್ಮ ವೈಯುಕ್ತಿಕ ವಿಚಾರಕ್ಕಾಗಿ ನನ್ನ ಬಳಿ ಬಂದಿದ್ದಿಲ್ಲ, ಸಹಾಯ ಕೇಳಿದ್ದಿಲ್ಲ. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಕೆಲವೊಂದು ಬಾರಿ ನಾವು ಈ ರೀತಿಯಾಗಿ ಸಹಾಯ ಮಾಡಿದಾಗ, ಸಲುಗೆಯಿಂದ ಮಾತನಾಡಿದಾಗ ನಮ್ಮ ಹೆಸರು ಬಳಸಿಕೊಂಡು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡಿಬಿಡುತ್ತಾರೆ. ಆದರೆ ಈ ತಂಡದ ಪ್ರಾಮಾಣಿಕತೆ ಮತ್ತು ನಿಷ್ಠೆಯ ಕಾರಣದಿಂದಾಗಿ ನಾನು ಇಂದಿಗೂ ಅವರಿಗೆ ಬೇಕಾದ ಸಹಾಯ ಮಾಡುತ್ತ ಬಂದಿದ್ದೇನೆ’ ಎಂದು ಅಂತರಾಳವನ್ನು ಬಿಚ್ಚಿಟ್ಟರು.

ಅಡುಗೆ ಮಾಡಿ ಪೊಟ್ಟಣ ಕಟ್ಟಿಕೊಂಡು ಆಟೋದಲ್ಲಿ ಹೊರಟುಬಿಡುವುದು ನಿತ್ಯಕಾಯಕ

ಈತನಕವೂ ಪ್ರಚಾರ ಬಯಸದೆ ಅನ್ನದಾನದ ಖರ್ಚನ್ನು ಇವರುಗಳೇ ಭರಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ ಹತ್ತು ಗಂಟೆಯ ನಂತರ ಆಟೋ ಏರಿ ಮಡಿಕೇರಿಯ ಮೂಲೆಮೂಲೆಗೂ ಆಹಾರ ತಲುಪಿಸುತ್ತಿರುವ ಇವರು ಮತ್ತು ಈ ಗೆಳಯರ ಬಳಗ ಸಮಾಜಕ್ಕೆ ಒಂದು ಮಾದರಿ.

ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ‘ನಿಮ್ಮ ಬ್ಯಾಂಕಿನವರಿಗೆ ಕೊರೋನಾ ಬಂದಿದೆ ನಮ್ಮ ಅಂಗಡಿಗೆ ಬರಬೇಡಿ!’

Published On - 2:11 pm, Thu, 20 May 21