ಮೈಸೂರು: ಜನವರಿ ಆರಂಭವಾದರೆ ಸಾಕು ಹಬ್ಬಗಳ ಸಾಲೇ ಆರಂಭವಾಗುತ್ತದೆ. ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಇತ್ಯಾದಿ ಇತ್ಯಾದಿ.. ಹಬ್ಬ ಅಂದರೆ ಸಡಗರ ಸಂಭ್ರಮ. ಇವೆಲ್ಲಾ ಜನರು ಸಂಭ್ರಮಿಸುವ ಹಬ್ಬ. ಇವುಗಳ ಮಧ್ಯೆ ಹಕ್ಕಿ-ಪಕ್ಷಿಗಳಿಗಾಗಿ ಇರುವ ಹಾಗೂ ಎಲ್ಲರ ಗಮನ ಸೆಳೆದಿರುವ ಹಬ್ಬವೇ ಹಕ್ಕಿ ಹಬ್ಬ. ಹೌದು ಹೆಸರೇ ಹೇಳುವಂತೆ ಇದು ಹಕ್ಕಿಗಳ ಹಬ್ಬ. ಅರಣ್ಯ ಇಲಾಖೆ ಕಳೆದ 5 ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಈ ಹಕ್ಕಿ ಹಬ್ಬವನ್ನು ಆಚರಿಸುತ್ತಾ ಬಂದಿದೆ. ಈ ಬಾರಿ ಈ ಹಕ್ಕಿ ಹಬ್ಬ ಜನವರಿ 5 ,6 ಮತ್ತು 7ನೇ ತಾರೀಖಿನಂದು ಬಿಳಿಗಿರಿ ರಂಗನಬೆಟ್ಟದಲ್ಲಿ ಆಚರಿಸಲಾಗುತ್ತಿದೆ.
ಹಕ್ಕಿ ಹಬ್ಬದ ಹಿನ್ನೆಲೆ
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಹಕ್ಕಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ನಮಗೆ ತಿಳಿದಿರುವ ಪಕ್ಷಿಗಳ ಬಗ್ಗೆ ತಿಳಿಸಿಕೊಡುವ ಹಬ್ಬವೇ ಹಕ್ಕಿ ಹಬ್ಬ. ಈ ಹಬ್ಬ ಆಚರಣೆಗೆ ಬಂದಿದ್ದು 2001ರಲ್ಲಿ. ಆ ವೇಳೆ ವಿಶ್ವದ 44 ದೇಶಗಳಲ್ಲಿ ಈ ಹಬ್ಬವನ್ನು ಆಚರಿಸಲಾಗಿತ್ತು. ಮೊದಲ ಬಾರಿ ಆಚರಿಸಿದ ಹಬ್ಬದಲ್ಲೇ ಮೂರು ಲಕ್ಷಕ್ಕೂ ಹೆಚ್ಚು ಜನರು ಸಕ್ರಿಯವಾಗಿ ಭಾಗಿಯಾಗಿದ್ದರು. ಅದರಲ್ಲೂ ಹಕ್ಕಿ ಹಬ್ಬದಲ್ಲಿ ಪಕ್ಷಿ ಪ್ರಿಯರ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.
ಪ್ರತಿ ವರ್ಷ ಹಕ್ಕಿ ಹಬ್ಬದಲ್ಲಿ ಪಕ್ಷಿಗಳ ಬಗ್ಗೆ ತಿಳಿದವರು ಪಕ್ಷಿಗಳ ಬಗ್ಗೆ ಆಸಕ್ತಿಯಿರುವವರು ಹಾಗೂ ಪಕ್ಷಿಗಳನ್ನು ಪ್ರೀತಿಸುವವರು ಭಾಗಿಯಾಗುತ್ತಾರೆ. ಪಕ್ಷಿ ತಜ್ಞರು, ಪ್ರೊಫೆಸರ್‌ಗಳು, ವಿಶೇಷ ಅತಿಥಿಗಳು ಹಬ್ಬಕ್ಕೆ ಆಗಮಿಸಿ ವಿಶೇಷ ಉಪನ್ಯಾಸವನ್ನು ನೀಡುತ್ತಾರೆ. ಹಬ್ಬ ನಡೆಯುವ ಸುತ್ತ ಮುತ್ತಲಿನ ಪ್ರದೇಶಕ್ಕೆ ಪಕ್ಷಿ ವೀಕ್ಷಣೆಗೆ ಕರೆದುಕೊಂಡು ಹೋಗಲಾಗುತ್ತದೆ. ಅವುಗಳ ಚಲನವಲನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಮೂಲಕ ಪರಿಸರ ಸಮತೋಲನದಲ್ಲಿ ಹಕ್ಕಿ ಪಕ್ಷಿಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.
ಹಕ್ಕಿ ಹಬ್ಬ ಜಿಲ್ಲೆಯ ಹಬ್ಬವಾಗಬೇಕು.. ಜನರ ಹಬ್ಬವಾಗಬೇಕು..
ಹೌದು ಸಾಮಾನ್ಯವಾಗಿ ಈ ಹಕ್ಕಿ ಹಬ್ಬಕ್ಕೆ ಸಿಗುತ್ತಿರುವ ಪ್ರಚಾರ ಕಡಿಮೆ ಅಂತಾನೇ ಹೇಳಬಹುದು. ಬಹುತೇಕರಿಗೆ ಇಂತಹದೊಂದು ಹಬ್ಬ ಇದೆ ಎನ್ನುವುದರ ಬಗ್ಗೆ ಮಾಹಿತಿಯೇ ಇಲ್ಲ. ಬಹುತೇಕ ಹಕ್ಕಿ ಪಕ್ಷಿಗಳ ಬಗ್ಗೆ ಗೊತ್ತಿರುವವರು ಅದರ ಮಹತ್ವ ಅರಿತವರೇ ಈ ಹಕ್ಕಿಹಬ್ಬದಲ್ಲಿ ಭಾಗವಹಿಸುತ್ತಾರೆ. ಇದರಿಂದ ಅವರಿಗೆ ಹೆಚ್ಚಿನ ಮಾಹಿತಿ ಸಿಗುತ್ತದೆಯೇ ಹೊರತು. ಹಕ್ಕಿ ಹಬ್ಬದ ಮೂಲ ಉದ್ದೇಶ ಜನಸಾಮಾನ್ಯರಿಗೆ ಪಕ್ಷಿಗಳ ಬಗ್ಗೆ ತಿಳಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ಈ ಹಕ್ಕಿ ಹಬ್ಬದ ರೂಪು ರೇಷೆ ಬದಲಾಗಬೇಕು.
ಅರಣ್ಯ ಇಲಾಖೆ ಈ ಹಬ್ಬವನ್ನು ಪ್ರತಿ ಜಿಲ್ಲೆಯಲ್ಲೂ ಆಚರಿಸಬೇಕು. ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಬ್ಬದಲ್ಲಿ ಭಾಗವಹಿಸುವಂತೆ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಹಕ್ಕಿ ಹಬ್ಬದ ಎಲ್ಲಾ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ಸರಳವಾಗಿರಬೇಕು. ಇದುವರೆಗೂ ನಡೆದಿರುವ ಹಕ್ಕಿ ಹಬ್ಬದಲ್ಲಿ ಬಹುತೇಕ ಇಂಗ್ಲೀಷ್ ಭಾಷೆಯೇ ಪ್ರಧಾನವಾಗಿ ಬಳಸಿಕೊಳ್ಳಲಾಗಿದೆ. ಇಂಗ್ಲಿಷ್ ಇರಲಿ. ಆದರೆ ಸ್ಥಳೀಯ ಪ್ರಾದೇಶಿಕ ಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಹಕ್ಕಿ ಹಬ್ಬಕ್ಕೆ ಸಾರ್ಥಕತೆ ಸಿಗುತ್ತದೆ.
ಎಲ್ಲೋ ಒಂದು ಕಡೆ ಪ್ರಾಣಿಗಳಿಗೆ ಸಿಗುವ ಪ್ರಾಮುಖ್ಯತೆ ಪಕ್ಷಿಗಳಿಗೆ ಸಿಗುತ್ತಿಲ್ಲ. ಪಕ್ಷಿಗಳ ಬಗ್ಗೆ ಒಂದು ಸೀಮಿತ ವರ್ಗ ಮಾತ್ರ ಆಸಕ್ತಿ ಕಾಳಜಿ ವಹಿಸಿಕೊಂಡು ಬರುತ್ತಿದೆ. ಇದು ಬದಲಾಗಬೇಕು. ಪರಿಸರದ ಸಮತೋಲನದಲ್ಲಿ ಪ್ರಾಣಿಗಳಷ್ಟೇ ಪಕ್ಷಿಗಳು ಸಹಾ ಮಹತ್ವದ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲ ಮನಸಿಗೆ ಉಲ್ಲಾಸ ನೀಡುತ್ತವೆ. ಹೀಗಾಗಿ ಹಕ್ಕಿ ಹಬ್ಬ ಇದಕ್ಕೊಂದು ಉತ್ತಮ ವೇದಿಕೆಯಾಗಿದೆ.
ಹಕ್ಕಿ ಹಬ್ಬಕ್ಕೆ ಕೈ ಜೋಡಿಸೋಣ
ಹಕ್ಕಿ ಹಬ್ಬ ಸಾಂಪ್ರದಾಯಿಕ ಹಬ್ಬವಾಗಬಾರದು. ಅಲ್ಲಿ ನಡೆಯುವ ಚರ್ಚೆಗಳು, ಮಂಡಿಸುವ ಪ್ರಬಂಧಗಳು ಸ್ಥಳೀಯರಿಗೆ ಅರ್ಥವಾಗುವಂತಿರಬೇಕು. ಜನ ಸಾಮಾನ್ಯರಲ್ಲಿ ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ ಕುತೂಹಲ ಮೂಡಿಸುವಂತಿರಬೇಕು. ಇದು ಮನೆ ಮನೆಯ ಹಬ್ಬವಾಗಬೇಕು ಹಾಗೂ ಮನಸುಗಳ ಹಬ್ಬವಾಗಬೇಕು. ಆಗ ಮಾತ್ರ ಹಕ್ಕಿ ಹಬ್ಬ ಅರ್ಥಪೂರ್ಣವಾಗುತ್ತದೆ. ಹಕ್ಕಿ ಹಬ್ಬಕ್ಕೆ ಕೈ ಜೋಡಿಸೋಣ
ನಿಜಕ್ಕೂ ಹಕ್ಕಿ ಹಬ್ಬ ಅಪರೂಪದಲ್ಲಿ ಅಪರೂಪದ ಹಬ್ಬವಾಗಿದೆ. ಇದರ ಆಚರಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಇದು ನಾಡಹಬ್ಬವಾಗಲಿದೆ. ಇನ್ನು ಈ ಹಬ್ಬದಲ್ಲಿ ನಾವು, ನೀವು ಎಲ್ಲರೂ ಭಾಗಿಯಾಗಬಹುದು. ಇದೇನು ರಾಕೆಟ್ ಸೈನ್ಸ್ ಅಲ್ಲ. ಬೆಳಗ್ಗೆ ಸ್ವಲ್ಪ ಬೇಗ ಎದ್ದು ನಮ್ಮ ಮನೆಯ ಹೊರಗಡೆ ಇಣುಕಿದರೆ ಸಾಕು ಚಿಲಿಪಿಲಿ ನಿನಾದ ಕಿವಿಗೆ ಬೀಳುತ್ತದೆ. ಆ ನಿನಾದದ ಬೆನ್ನತ್ತಿ ಕೊಂಚ ಆ ಬಗ್ಗೆ ಆಸಕ್ತಿ ವಹಿಸಿ ಆ ಶಬ್ದ ಮಾಡುತ್ತಿರುವ ಪಕ್ಷಿಯ ಬಗ್ಗೆ ತಿಳಿದುಕೊಂಡು ತಾವು ತಿಳಿದುಕೊಂಡಿದ್ದನ್ನು ಸ್ನೇಹಿತರಿಗೂ ತಿಳಿಸಿದರೆ ಅಲ್ಲಿಗೆ ನಾವು ನೀವು ಸಹಾ ಹಕ್ಕಿ ಹಬ್ಬದ ಭಾಗವಾಗುತ್ತೇವೆ.
ಹಕ್ಕಿ ಹಬ್ಬ ಒಂದು ದಿನ ಎರಡು ದಿನ ಅಥವಾ ಮೂರು ದಿನದ ಆಚರಣೆ ಸಾಂಕೇತಿಕ ಆದರೆ ಅದನ್ನು ವರ್ಷದ 365 ದಿನವೂ ಆಚರಣೆ ಮಾಡುವುದು ನಮ್ಮ ಜವಾಬ್ದಾರಿ. ಇಂತಹ ಕೆಲಸ ಮುಂದಿನ ದಿನಗಳಲ್ಲಿ ಆಗಲಿ. ಜನ ಸಾಮಾನ್ಯರು ಹಕ್ಕಿ ಪಕ್ಷಿಗಳ ಮಹತ್ವ ಅವುಗಳ ರಕ್ಷಣೆಯನ್ನು ಸ್ವಯಂಪ್ರೇರಿತವಾಗಿ ಮಾಡುವಂತಾಗಲಿ ಅನ್ನೋದೆ ಟಿವಿ9 ಡಿಜಿಟಲ್‌ನ ಆಶಯವಾಗಿದೆ.
(ಚಿತ್ರಗಳು ಅನುರಾಗ್ ಬಸವರಾಜ್, ಮೈಸೂರು)
ಬಾನಂಗಳದಲ್ಲಿ ಬಾನಾಡಿಗಳ ಕಲರವ, ಕಬಿನಿ ಜಲಾಶಯದಲ್ಲಿ ವಿದೇಶಿ ಪಕ್ಷಿಗಳ ಹಾರಾಟ