Reporter’s Diary: ಐವತ್ತಾರು ಗಂಟೆಗಳ ಕಾಲ ನಿರಂತರ ಸುದ್ದಿ ಪ್ರಸಾರವಾಗಿತ್ತು

|

Updated on: May 14, 2022 | 11:29 AM

Father and Son : ಕಾಲಿಗೆ ಗಮ್ ಹಾಕಿ ಅಂಟಿಸಿದಂತೆ ನಮ್ಮೆಲ್ಲರ ಸಾಕ್ಸ್​. ಕೆಲವರವು ಹರಿದೇ ಹೋದವು. ಹರಿದು ಹೋದ ಏನನ್ನೂ ತರಬಹುದು. ಆದರೆ ಜೀವ, ಸಂಬಂಧ... ಆಗ ಒಂದು ತಿಂಗಳ ಮುಂಚೆಯಷ್ಟೇ ನನಗೂ ಮಗ ಹುಟ್ಟಿದ್ದ. ತಂದೆಯ ಪ್ರೀತಿ ಏನು ಅನ್ನುವುದು ನನಗೂ ಆಗಷ್ಟೇ ಗೊತ್ತಾಗತೊಡಗಿತ್ತು.

Reporters Diary: ಐವತ್ತಾರು ಗಂಟೆಗಳ ಕಾಲ ನಿರಂತರ ಸುದ್ದಿ ಪ್ರಸಾರವಾಗಿತ್ತು
Follow us on

Reporter‘s Diary : ಅಷ್ಟೊತ್ತಿಗೆ ನಾನು ಟಿವಿ9 ವರದಿಗಾರನೆಂದೂ, ನಾನೇ ಪದೇಪದೆ ಟಿವಿಯಲ್ಲಿ ಮಾತನಾಡೋ ವ್ಯಕ್ತಿ ಅನ್ನೋದೂ ಗೊತ್ತಾಗಿ ಹೋಗಿತ್ತು. ಹೀಗಾಗಿ ನನ್ನ ಸುತ್ತಮುತ್ತಲೂ ಜನರು ಸುತ್ತಾಡಲು ಶುರು ಮಾಡಿದರು. ಅದರಲ್ಲಿಯೂ ಫೋನೋ ಕೊಡುವಾಗ ಏನೇನು ಮಾಹಿತಿ ನೀಡುತ್ತೇನೆ ಅನ್ನೋದನ್ನು ತೀರಾ ನನ್ನ ಪಕ್ಕಕ್ಕೆ ಬಂದು ನಿಂತು ಕೇಳತೊಡಗಿದರು. ಇದೇ ವೇಳೆ ಸಣ್ಣನೆಯ ಗಾಳಿಗೆ ಮೈತೆರೆದುಕೊಳ್ಳಬೇಕೆಂದುಕೊಂಡು ಹಾಗೆಯೇ ಗುಡ್ಡದ ಕಡೆಗೆ ಹೆಜ್ಜೆ ಹಾಕುತ್ತಾ ಹೋದೆ. ಅತಿ ಮುಖ್ಯವಾದ ಫೋನೋ ಬರುತ್ತೆ. ಅದರಲ್ಲಿ ಏನೆಲ್ಲಾ ಅಂಶಗಳನ್ನು ಹೇಳಬಹುದು ಅಂತಾ ಲೆಕ್ಕ ಹಾಕುತ್ತಾ ಸಾಗುತ್ತಿದ್ದವನ ಹಿಂದೆ ಮೂವತ್ತಕ್ಕೂ ಹೆಚ್ಚು ಜನ ಯುವಕರು. ಎಷ್ಟೇ ಹೇಳಿದರೂ ಅಲ್ಲಿಂದ ಕಾಲ್ಕಿತ್ತಲು ಸಿದ್ಧರಿರಲಿಲ್ಲ. ಆದರೆ ಇದೆಲ್ಲದರಿಂದ ನನ್ನೊಳಗಿನ ರಿಪೋರ್ಟರ್​ನ ಉಮೇದಿ ಹೆಚ್ಚುತ್ತಿದ್ದದ್ದೂ ಸುಳ್ಳಲ್ಲ. ಮೊದಲ ಬಾರಿಗೆ ನನ್ನಂಥವನನ್ನು ಹಿಂಬಾಲಿಸಿಕೊಂಡು ಜನರು ಬರುತ್ತಿದ್ದುದನ್ನು ಕಂಡೆ. ಜೆಸಿಬಿ ಸದ್ದಿನಿಂದ ಬಲು ದೂರ ಬಂದಿದ್ದೆ.
ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಹಿರಿಯ ವರದಿಗಾರ, ಧಾರವಾಡ

 

ರಾಯಚೂರು ಜಿಲ್ಲೆಯ ನೀರಮಾನ್ವಿಯ ಕೊಳವೆಬಾವಿಯಲ್ಲಿ ಬಿದ್ದ ಬಾಲಕ ಸಂದೀಪ ಇಹಲೋಕ ತ್ಯಜಿಸಿ ಇಂದಿಗೆ ಹದಿನೈದು ವರ್ಷ. ಈ ದುರ್ಘಟನೆಯನ್ನು ವರದಿ ಮಾಡಲು ಹೋಗಿದ್ದ ವರದಿಗಾರರು ನೆನಪಿನ ಸುರುಳಿಯನ್ನು ಬಿಚ್ಚಿದ್ದಾರೆ.

 

(ಭಾಗ 3) 

ಅಂದುಕೊಂಡ ಹಾಗೆ ಕಚೇರಿಯಿಂದ ಫೋನ್ ಬಂತು. ಆ್ಯಂಕರ್ ಕೇಳಿದ ಪ್ರಶ್ನೆಗೆ ಈ ಬಾರಿ ಹತ್ತಾರು ನಿಮಿಷ ಉತ್ತರಿಸಲು ನನ್ನ ಬಳಿ ಎಲ್ಲವೂ ಸಿದ್ಧವಿತ್ತು. ಪ್ರಶ್ನೆ ಕಿವಿಗೆ ಬೀಳುತ್ತಲೇ ಭರ್ಜರಿ ಫೋನೋ ಶುರುವಾಗಿತ್ತು. ಬಾಲಕ ಬಿದ್ದಾಗಿನಿಂದ ಹಿಡಿದು ನಡೆದ ಎಲ್ಲವನ್ನು ವಿವರವಾಗಿ ಹೇಳುತ್ತಾ ಹೋದೆ. ಎಡಗೈಯಲ್ಲಿ ಪಾಯಿಂಟ್ ಮಾಡಿಟ್ಟುಕೊಂಡಿದ್ದ ನೋಟ್ ಪ್ಯಾಡ್, ಬಲಗೈಯಲ್ಲಿ ಮೊಬೈಲ್. ಜೋರು ಜೋರಾಗಿ ಫೋನೋ ಕೊಡೋವಾಗ ಒಂದೇ ಕಡೆ ನಿಲ್ಲಬಾರದು ಅಂದುಕೊಂಡು ಅತ್ತಿಂದ ಇತ್ತ, ಇತ್ತಿಂದ ಅತ್ತ ನಡೆದಾಡತೊಡಗಿದೆ. ನಾನು ಹೋದ ಕಡೆಗೆಲ್ಲಾ ಯುವಕರ ತಂಡ ಬರುತ್ತಲೇ ಇತ್ತು. ಅದನ್ನು ನೋಡಿದ ಮತ್ತಷ್ಟು ಜನರು ಆ ತಂಡವನ್ನು ಸೇರಿಕೊಂಡರು. ನನಗಾಗ ಮತ್ತಷ್ಟು ಶಕ್ತಿ ಬಂದಿತ್ತು..! ದನಿಯನ್ನು ಎತ್ತರಿಸಿ ಹೇಳತೊಡಗಿದೆ. ನನ್ನ ಹಿಂದೆ ಹಿಂದೆ ಬರುತ್ತಿದ್ದ ಯುವಕರಿಗೆ ಖುಷಿಯೋ ಖುಷಿ. ತಾವು ಕೇಳುತ್ತಿರೋ ದನಿಯನ್ನು ಮನೆಯಲ್ಲಿ ಕುಳಿತು ಟಿವಿ ನೋಡುತ್ತಿರೋ ಜನರು ಕೂಡ ಕೇಳಿಸಿಕೊಳ್ಳುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಿಗೆ, ಟಿವಿ ನೋಡುವವರಿಗೆ ಫೋನಿನಲ್ಲಿ ಮಾತನಾಡುತ್ತಿರೋ ವ್ಯಕ್ತಿ ಕಾಣುತ್ತಿಲ್ಲ. ಆದರೆ ಆತ ನಮ್ಮೆದುರಿಗೆ ಇದ್ದಾನೆ ಅನ್ನೋ ಭಾವನೆ.

ಮತ್ತೆ ಕೆಲವರು ಮನೆಗೆ ಫೋನ್ ಮಾಡಿ ದನಿ ಬರುತ್ತಿದೆಯಾ ಅಂತಾ ಕೇಳಲು ಯತ್ನಿಸಿದರು. ನಾನು ಕಣ್ಣಿನಲ್ಲಿ ಅವರಿಗೆ ಬೆದರಿಸಿದೆ. ಅವರು ಫೋನ್ ಕಟ್ ಮಾಡಿದರು. ಜಿಲ್ಲಾಡಳಿತದ ವೈಫಲ್ಯ, ಸರಕಾರದ ನಿಷ್ಕಾಳಜಿ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷದ ಬಗ್ಗೆ ಒತ್ತಿಒತ್ತಿ ಹೇಳುತ್ತಿದ್ದೆ. ಇದರಿಂದ ಸುತ್ತಲಿನ ಯುವಕರಿಗೆ ಖುಷಿಯಾಗಿ, ಕರೆಕ್ಟ್ ಕರೆಕ್ಟ್ ಅನ್ನುವಂತೆ ಸನ್ನೆ ಮಾಡಿ, ತಮ್ಮ ಅಸಮಾಧಾನವನ್ನು ನನ್ನ ಫೋನೋ ಮೂಲಕ ತೀರಿಸಿಕೊಳ್ಳುತ್ತಿದ್ದರು. ಆಗಂತೂ ನಾನು ಅವರ ದನಿಯೇ ಆಗಿ ಹೋದೆ ಅಂತಾ ಜಂಭಪಟ್ಟುಕೊಂಡು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಮತ್ತಷ್ಟು ಮತ್ತಷ್ಟು ಟೀಕಿಸಿದೆ. ಹೀಗೆ ನಿರಂತರವಾಗಿ ಹದಿನೈದು ನಿಮಿಷ ಫೋನೋ ಕೊಟ್ಟೆ. ಅದು ನನ್ನ ವೃತ್ತಿ ಬದುಕಿನ ಅತ್ಯಂತ ದೀರ್ಘವಾದ ಫೋನೋ ಆಗಿತ್ತು.

ಇನ್ನೇನು ಹೇಳುವ ಎಲ್ಲ ವಿಷಯವೂ ಮುಗಿಯಿತು ಅನ್ನುವಾಗ ದೂರದಿಂದ ಕ್ಯಾಮೆರಾಮನ್ ಸದಾನಂದ ನನ್ನ ಕಡೆ ಓಡೋಡಿ ಬರುತ್ತಿರೋದು ಕಂಡು ಬಂತು. ಒಂದು ಕೈಯಲ್ಲಿ ಕ್ಯಾಮೆರಾ, ಮತ್ತೊಂದು ಕೈಯಲ್ಲಿ ಮೊಬೈಲ್. ಓಡೋಡಿ ಏದುಸಿರು ಬಿಡುತ್ತಾ ಬಂದವನೇ, ‘ಸರ್, ಆಗಿನಿಂದಲೂ ನಿಮಗೆ ಆಫೀಸ್ನಿಂದ ಫೋನ್ ಮಾಡುತ್ತಿದ್ದಾರಂತೆ. ನಿಮ್ಮ ಫೋನ್ ಸ್ವಿಚ್ ಆಫ್ ಅಂತಾ ಬರುತ್ತಿದೆಯಂತೆ. ಇಲ್ಲಿ ಮಾತಾಡ್ತಾರೆ ನೋಡಿ’ ಅಂತಾ ಸ್ಪೀಕರ್ ಆನ್ ಮಾಡಿ ಕೊಟ್ಟ. ಆಗ ನನ್ನ ಫೋನ್ ನೋಡಿಕೊಂಡೆ. ಅದು ಯಾವಾಗಲೋ ಸತ್ತು ಹೋಗಿತ್ತು. ಸದಾನಂದನ ಕೈಯಲ್ಲಿನ ಮೊಬೈಲ್ ಇಸಿದುಕೊಂಡು ಯಾವುದಕ್ಕೂ ಸೇಫ್ ಆಗಿರಲಿ ಅಂತಾ ಸ್ಪೀಕರ್ ಬಂದ್ ಮಾಡಿ ಮಾತನಾಡಿದರೆ, ‘ಪ್ಯಾಟಿ, ಆವಾಗಿನಿಂದ ಟ್ರೈ ಮಾಡ್ತಾನೇ ಇದ್ದೇವೆ. ನಿಮ್ಮ ಮೊಬೈಲ್ ಸ್ವಿಚ್ ಆಫ್ ಅಂತಾ ಬರ್ತಾ ಇದೆ. ಏನಾಗಿದೆ ನಿಮ್ಮ ಮೊಬೈಲ್ಗೆ?’ ಅಂತಾ ಕೇಳಿದರು; ಫೋನೋ ಶುರುವಾದ ಹತ್ತೇ ಸೆಕೆಂಡಿಗೆ ಫೋನ್ ಸಂಪರ್ಕ ಕಡಿದೇ ಹೋಯಿತಂತೆ. ಹದಿನೈದು ನಿಮಿಷದಿಂದ ನನಗೆ ಫೋನ್ ಟ್ರೈ ಮಾಡಿ ಮಾಡಿ, ಕೊನೆಗೆ ಸದಾನಂದನಿಗೆ ಫೋನ್ ಮಾಡಿದ್ದರಂತೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ದೇವರೇ, ಸಾವೆಂಬ ಭಾರವನ್ನು ಎಂದೆಂದಿಗೂ ಕಿತ್ತೆಸೆಯುವಂತಿದ್ದರೆ?

ಇದನ್ನು ಕೇಳಿದ ನನಗೆ ದಿಕ್ಕೇ ತೋಚದಂತಾಗಿ ಹೋಯಿತು. ನಾನು ಯುವಕರ ಪಡೆಯಿಂದ ದೂರಕ್ಕೆ ಹೋಗಿ, ‘ಅಲ್ಲಾರೀ, ಇದುವರೆಗೂ ನಾನು ಫೋನೋ ಕೊಟ್ಟೆನಲ್ಲಾ? ಅದ್ಯಾವುದೂ ಬಂದೇ ಇಲ್ಲವಾ?’ ಅಂತಾ ಕೇಳಿದೆ. ‘ಅಯ್ಯೋ ದೇವರೇ, ಆವಾಗಿಂದ ನಿಮ್ಮ ಮೊಬೈಲ್​ಗೆ ಟ್ರೈ ಮಾಡ್ತಾನೇ ಇದ್ದೇವೆ. ಬಹಳ ಮುಖ್ಯವಾದ ಫೋನೋ ಅಂತಾ ಅದಕ್ಕೆ ಮೊದಲೇ ಹೇಳಿದ್ದೆವು’ ಅಂದಾಗ ಏನು ಮಾತಾಡಬೇಕು ಗೊತ್ತಾಗಲಿಲ್ಲ. ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಯುವಕರಿಂದ ಮೆಚ್ಚುಗೆ ಪಡೆದಿದ್ದು ಎಲ್ಲವೂ ‘ಗೋವಿಂದ… ಗೋವಿಂದ…’ ಸದಾನಂದ ‘ಏನು?’ ಅನ್ನುವಂತೆ ನನ್ನನ್ನು ನೋಡಿದ. ನಾನು ಸುಮ್ಮನಿರು ಅನ್ನುವಂತೆ ಕಣ್ಣಿನಲ್ಲಿಯೇ ಹೇಳಿದೆ. ಇದರ ಬಗ್ಗೆ ತಿಳಿದೋ ತಿಳಿಯದೋ ಅಲ್ಲಿದ್ದ ಯುವಕರು ನಮ್ಮ ಕಡೆ ಪ್ರಶ್ನಾರ್ಥಕ ಚಿಹ್ನೆಯಿಂದ ನೋಡುತ್ತಿದ್ದರು. ಆತನಕ ನನಗೆ ಹುಮ್ಮಸ್ಸು ನೀಡಿದ್ದ ಅವರನ್ನೇ ತಿರುಗಿ ನೋಡಿದೆ. ಕೋಪ ತಡೆದುಕೊಂಡು, ‘ಅಲ್ಲಾ ಮಾರಾಯಾ, ಹಂಗ ಹಿಂದಿಂದ ಬಂದ್ರೆ ನಮಗ ಎಷ್ಟು ಕಷ್ಟ ಆಗ್ತಾದೋ… ಕೆಲಸ ಮಾಡಲಿಕ್ಕೆ ಬಿಡ್ತಿರೋ ಇಲ್ಲವೋ?’ ಅಸಮಾಧಾನ ಹೊರ ಹಾಕಿದೆ. ಅವರಿಗೆ ಕಸಿವಿಸಿಯಾಯ್ತೇನೋ ಇದ್ದಕ್ಕಿದ್ದಂತೆ ನನ್ನ ವರಸೆ ಬದಲಾಗಿದ್ದುದರಿಂದ.  ಅವರೆಲ್ಲಾ ಅಲ್ಲಿಂದ ಹೊರಟು ಹೋದರು.

ಸತತ ಐವತ್ತಾರು ಗಂಟೆಗಳ ಕಾಲ ನಿರಂತರವಾಗಿ ಸುದ್ದಿ ಪ್ರಸಾರವಾಗಿತ್ತು. ಏಪ್ರಿಲ್ 26ರ ಬೆಳಗಿನ ಜಾವ ಸಂದೀಪ ಹೊರಗಡೆ ಬಂದಿದ್ದ. ಆದರೆ ಜೀವ ಅದ್ಯಾವಾಗಲೋ ಹೋಗಿತ್ತು. ನನ್ನನ್ನು ಈತನಕವೂ ಘಾಸಿಗೊಳಪಡಿಸಿದ ಸುದ್ದಿ ಇದು. ಆಗ ಒಂದು ತಿಂಗಳ ಮುಂಚೆಯಷ್ಟೇ ನನಗೂ ಮಗ ಹುಟ್ಟಿದ್ದ. ತಂದೆಯ ಪ್ರೀತಿ ಏನು ಅನ್ನುವುದು ನನಗೂ ಆಗ ಗೊತ್ತಾಗತೊಡಗಿತ್ತು. ಸಂದೀಪನ ತಂದೆಯ ಸ್ಥಿತಿ ಕರುಳು ಹಿಂಡಿತ್ತು. ನಾವೆಲ್ಲರೂ ಅತ್ತಿದ್ದೆವು. ಆಗ ಇಡೀ ಕಾರ್ಯಾಚರಣೆಯ ವೇಳೆ ಪಿಎಸ್​ಐ ಆಗಿದ್ದ ನಾಗಿರೆಡ್ಡಿ (ಇದೀಗ ಯಲಬುರ್ಗಾದ ಸಿಪಿಐ) ಘಟನೆ ನಡೆದ ಕೂಡಲೇ ಅವರೇ ಮೊದಲಿಗೆ ಸ್ಥಳಕ್ಕೆ ಹೋಗಿದ್ದರು. ಕೊನೆಯವರೆಗೂ ಅವರು ಅಲ್ಲಿಯೇ ಇದ್ದರು. ಇವತ್ತಿಗೂ ಅವರು ಭೇಟಿಯಾದಾಗ ಸಂದೀಪನನ್ನು ನೆನಪಿಸಿಕೊಳ್ಳುತ್ತೇವೆ. ಇದೇ ವೇಳೆ ಮೂರು ದಿನಗಳ ಕಾಲ ಸರಿಯಾದ ಊಟ, ನಿದ್ರೆ, ಸ್ನಾನ ಇಲ್ಲದೇ ಕಂಗೆಟ್ಟ ಬಗ್ಗೆಯೂ ಮಾತನಾಡಿಕೊಳ್ಳುತ್ತೇವೆ. ಈ ಕಾರ್ಯಾಚರಣೆ ಮುಗಿದ ನಂತರ  ಫ್ರೆಶ್ ಆಗಿ ಬರಲು ಲಾಡ್ಜ್​ವೊಂದಕ್ಕೆ ತೆರಳಿ ಶೂ ತೆಗೆದು, ಸಾಕ್ಸ್ ಬಿಚ್ಚಲು ಹೋದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಅಕ್ಷರಶಃ ಸಾಕ್ಸ್​ ಕಾಲಿಗೆ ಗಮ್ ಹಾಕಿ ಅಂಟಿಸಿದ ಹಾಗಾಗಿದ್ದವು. ಬಿಚ್ಚಲು ಹೋದ ಕೆಲವರ ಸಾಕ್ಸ್ ಹರಿದೇ ಹೋದವು. ಹರಿದು ಹೋದ ಏನನ್ನೂ ತರಬಹುದು. ಆದರೆ ಜೀವ, ಸಂಬಂಧ…

ಇದನ್ನು ಬರೆದುಮುಗಿಸುವ ಹೊತ್ತಿಗೆ, ಎಷ್ಟೋ ದಿನಗಳ ಕಾಲ ಜೋಬಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ ಆತನ ಸ್ಟ್ಯಾಂಪ್​ ಸೈಝ್ ಫೋಟೋಗಾಗಿ ಹುಡುಕಾಡಿದೆ. ಈಗದು ಸಿಗಲಿಲ್ಲ. ಅವತ್ತು ಸಂದೀಪ ಬದುಕಿ ಬಂದಿದ್ದರೆ ಇವತ್ತಿಗೆ ಅವ 23 ವರ್ಷದ ಚಿರಯುವಕನಾಗಿರುತ್ತಿದ್ದ.

(ಮಗಿಯಿತು)

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/reporters-diary

ಗಮನಿಸಿ : ಇಂದಿನಿಂದ ಶುರುವಾಗುವ ‘ರಿಪೋರ್ಟರ್ಸ್ ಡೈರಿ’  ಪ್ರತೀ ಶನಿವಾರ ಪ್ರಕಟವಾಗುತ್ತದೆ. ಟಿವಿ9 ವರದಿಗಾರರು, ತಾಂತ್ರಿಕ ವರ್ಗದವರು ಇಲ್ಲಿ ತಮ್ಮ ವರದಿಗಳನ್ನು ಹಂಚಿಕೊಳ್ಳುತ್ತಾರೆ.  ಪ್ರತಿಕ್ರಿಯೆಗಾಗಿ : tv9kannadadigital@gmail.com

 

Published On - 10:35 am, Sat, 23 April 22