ಸೆನ್ಸೆಕ್ಸ್ 51,000ದ ಗಡಿದಾಟುವ ಮೂಲಕ, ನಿಫ್ಟಿ 15,000ಕ್ಕೇರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕೊರೊನಾ ಹೊಡೆತಕ್ಕೆ ಸಿಕ್ಕು ನಲುಗಿದ ಆರ್ಥಿಕತೆಗೆ ಚೇತರಿಕೆ ಕಾಣಲು ಕೆಲ ವರ್ಷಗಳೇ ಬೇಕು. ಷೇರು ಮಾರುಕಟ್ಟೆಯ ಪರಿಸ್ಥಿತಿ ಕಷ್ಟವಿದೆ ಎಂದೆಲ್ಲಾ ಭಾವಿಸಿದ್ದವರಿಗೆ ಈ ಬೆಳವಣಿಗೆ ಸಹಜವಾಗಿಯೇ ಅಚ್ಚರಿ ಮೂಡಿಸಿದೆ. ಆರ್ಥಿಕ ತಜ್ಞರೇನೋ ಪ್ರಸ್ತುತ ದೇಶದ ಆರ್ಥಿಕತೆಗೂ ಷೇರು ಮಾರುಕಟ್ಟೆ ಬೆಳವಣಿಗೆಗೂ ಸಂಬಂಧವಿಲ್ಲ, ಅದು ಭವಿಷ್ಯದ ಆರ್ಥಿಕತೆಯನ್ನು ಅವಲಂಬಿಸಿರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಇದು ಬಹುತೇಕರಿಗೆ ಕಬ್ಬಿಣದ ಕಡಲೆಯಂತೆಯೇ ಆಗಿದೆ. ಇಷ್ಟಕ್ಕೂ ಈ ಬೆಳವಣಿಗೆ ಜನಸಾಮಾನ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಜನರಿಗೆ ಇದರಿಂದ ಲಾಭವೇನು? ಈ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು? ಷೇರು ಮಾರುಕಟ್ಟೆ ಚೇತರಿಕೆ ಕಂಡರೆ ನಮ್ಮ ಜೇಬಿಗೆ ಅದು ಹೇಗೆ ಉಪಯುಕ್ತ? ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತಲೇ ಇರುತ್ತದೆ. ಅದೆಲ್ಲವಕ್ಕೂ ಉತ್ತರ ನೀಡುವ ಪ್ರಯತ್ನವನ್ನು ಆರ್ಥಿಕ ತಜ್ಞ ರುದ್ರಮೂರ್ತಿ ಮಾಡಿದ್ದಾರೆ.
ನಮ್ಮ ದೇಶದ ಜನರಿಗೆ ಆರ್ಥಿಕತೆಯ ಕುರಿತು ತಿಳುವಳಿಕೆ ಮೂಡಿಸುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಅಧಿಕವಾಗಿದೆ. ಷೇರು ಮಾರುಕಟ್ಟೆಯ ವ್ಯವಹಾರ ಶ್ರೀಮಂತರಿಗೆ ಮಾತ್ರ ಮೀಸಲು, ಅಲ್ಲಿ ಹಣ ಹಾಕುವುದು ಜೂಜು ಆಡಿದಂತೆ ಎಂಬ ಪರಿಕಲ್ಪನೆಯಿಂದ ಅವರನ್ನು ಹೊರತಂದು.. ಅಲ್ಲಿಯ ಸಾಧಕ, ಬಾಧಕಗಳನ್ನು ವಿವರಿಸಬೇಕಿದೆ. ಹಂತಹಂತವಾಗಿ ಜನಸಾಮಾನ್ಯರನ್ನೂ ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರೂ ಅದರ ಲಾಭ ಪಡೆಯುವಂತೆ ಮಾಡಿದಾಗ ಮಾತ್ರ ಎಲ್ಲರೂ ಲಾಭ ಕಾಣುವಂತೆ ಮಾಡಬಹುದು.
ಇದರ ಮೊದಲ ಹೆಜ್ಜೆಯೆಂಬಂತೆ ಜನರು ಷೇರು ಮಾರುಕಟ್ಟೆಯಲ್ಲಿ ಇವತ್ತೇ ಹೂಡಿಕೆ ಮಾಡಿ, ಇವತ್ತೇ ಲಾಭಗಳಿಸಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ಈಗಿನ ಮಾರುಕಟ್ಟೆಯ ಬೆಳವಣಿಗೆಗಳೆಲ್ಲಾ ಒಮ್ಮೆಲೆ ಅಚ್ಚರಿಗೊಳಿಸಿ ತನ್ನತ್ತ ಸೆಳೆಯುವಂತಿದ್ದರೂ ಅಥವಾ ಒಂದೇ ಸಲಕ್ಕೆ ಲಾಭ ಬರಲಿ ಎಂದು ಕೈಯಲ್ಲಿದ್ದ ಹಣವನ್ನೆಲ್ಲಾ ಹೂಡುವಂತೆ ಪ್ರೇರೇಪಿಸುವಂತಿದ್ದರೂ.. ಅದಕ್ಕೆ ಮಾರುಹೋಗದೇ ಜಾಣ ಹೆಜ್ಜೆಯನ್ನಿಡಬೇಕು. ಲಾಭ ಇರುವುದು ಷೇರು ಮಾರುಕಟ್ಟೆಯಲ್ಲಿ ಎನ್ನುವುದು ನಿಜ. ಆದರೆ, ಅದನ್ನು ಗಳಿಸಲು ಯಾವ ದಾರಿಯಲ್ಲಿ ಹೋಗಬೇಕು ಎನ್ನುವುದೂ ಮುಖ್ಯ.
ಈಗ ಬಹುತೇಕರು ಬ್ಯಾಂಕ್ನಲ್ಲಿ ಹಣ ಇಡುತ್ತಾರೆ. ಅದರಿಂದ ವರ್ಷಕ್ಕೆ ಶೇ.6-7ರಷ್ಟು ಬಡ್ಡಿ ಪಡೆಯುತ್ತಾರೆ. ಅದರ ಬದಲು ಅಲ್ಲಿ ಇಡುವ ಹಣದ ಒಂದಷ್ಟು ಪಾಲನ್ನು ಅದೇ ಬ್ಯಾಂಕ್ಗಳ ಷೇರಿನ ಮೇಲೆ ಹೂಡಿಕೆ ಮಾಡಿದರೆ ಬ್ಯಾಂಕ್ ಬಡ್ಡಿದರಕ್ಕಿಂತಲೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಒಂದಷ್ಟು ದೊಡ್ಡ ಸಂಸ್ಥೆಗಳ ಮೇಲೆ ದೀರ್ಘಕಾಲಿಕ ಹೂಡಿಕೆ ಮಾಡಿದರೆ ನಿಶ್ಚಿತ ಲಾಭ ಪಡೆಯಬಹುದು. ಕೊರೊನಾ ಸಂದರ್ಭದಲ್ಲಿ ಹೂಡಿಕೆ ಮಾಡಿದವರಿಗೆ ಈಗಿನ ಮಾರುಕಟ್ಟೆ ಶೇ.100ರಷ್ಟು ಲಾಭ ತಂದುಕೊಟ್ಟಿರಬಹುದು. ಆದರೆ, ಇನ್ನುಮುಂದೆ ಅಷ್ಟು ದೊಡ್ಡ ಪ್ರಮಾಣದ ಲಾಭ ಬರದಿದ್ದರೂ ಶೇ.15-20ರಷ್ಟು ಲಾಭಕ್ಕಂತೂ ತೊಂದರೆ ಇರುವುದಿಲ್ಲ ಎನ್ನುವುದು ಸತ್ಯ.
ಕೈಯಲ್ಲಿರುವ ಹಣವನ್ನು ವಿಂಗಡಣೆ ಮಾಡಿ ವಿನಿಯೋಗಿಸುವುದ್ನು ನಮ್ಮ ಜನರು ಕಲಿಯಲೇಬೇಕಿದೆ. ಒಂದಷ್ಟು ಪಾಲು ನೇರವಾಗಿ ಹೂಡಿಕೆ ಮಾಡಿದರೆ, ಒಂದಷ್ಟು ಪಾಲು ಮ್ಯೂಚುಯಲ್ ಫಂಡ್ನಲ್ಲಿ ಹಾಕಬೇಕು. ಹೀಗೆ ಬೇರೆ ಬೇರೆ ಮಾರ್ಗಗಳಿಂದ ಹೂಡಿಕೆ ಮಾಡಿದರೆ ಅಪಾಯ ಇರುವುದಿಲ್ಲ. ಷೇರು ಮಾರುಕಟ್ಟೆಯ ಏರಿಳಿತಕ್ಕೆ ಹೆದರಿ ದೂರ ಕೂರುವುದು ಮತ್ತು ಏಕಾಏಕಿ ಆಕರ್ಷಿತರಾಗಿ ಕೈಯಲ್ಲಿರುವ ಅಷ್ಟೂ ಹಣವನ್ನು ಒಂದೆಡೆ ಹೂಡುವುದು ಎರಡೂ ಒಳ್ಳೆಯದಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಶೇ.4-5ರಷ್ಟು ಜನರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಅಮೆರಿಕಾದಂತಹ ದೇಶಗಳಲ್ಲಿ ಕಡಿಮೆಯೆಂದರೂ ಶೇ.40ರಷ್ಟು ಜನ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುತ್ತಾರೆ. ನಮ್ಮ ದೇಶದಲ್ಲಿಯೂ ಹೀಗೆ ಹೆಚ್ಚೆಚ್ಚು ಜನರು ಹೂಡಿಕೆ ಮಾಡುವಂತಾದಾಗ ಮಾತ್ರ ಎಲ್ಲರೂ ಲಾಭ ಗಳಿಸಲು ಸಾಧ್ಯ. ಇಲ್ಲದಿದ್ದರೆ ಶ್ರೀಮಂತರು ಶ್ರೀಮಂತರಾಗುತ್ತಲೇ ಇರುತ್ತಾರೆ ಮತ್ತು ಉಳಿದವರು ಇರುವಲ್ಲೇ ಉಳಿಯುತ್ತಾರೆ.
ಆದ್ದರಿಂದ, ಈಗಿನ ಷೇರು ಮಾರುಕಟ್ಟೆಯ ಬೆಳವಣಿಗೆಗಳನ್ನು ನೋಡಿಯಾದರೂ ಜನ ನಿಧಾನಕ್ಕೆ ಇದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಹಣ ಹೂಡಿಕೆ ಮಾಡಲು ಬಂಗಾರ, ರಿಯಲ್ ಎಸ್ಟೇಟ್, ಬ್ಯಾಂಕ್ ಮಾತ್ರವಲ್ಲ. ಷೇರು ಮಾರುಕಟ್ಟೆ ಎಂಬ ಅದ್ಭುತ ಲೋಕವೂ ಇದೆ ಎಂಬುವತ್ತ ಗಮನ ಹರಿಸಬೇಕು.
Sensex: ದಾಖಲೆಯ ದಾರಿಯಲ್ಲಿ ಷೇರು ಮಾರುಕಟ್ಟೆ, 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್.. ಕಾರಣವೇನು?