ನಾನೆಂಬ ಪರಿಮಳದ ಹಾದಿಯಲಿ: ಪ್ರೀತಿಯನ್ನು ಆತುಕೊಂಡಿದ್ದಕ್ಕೆ ಇಂದು ನಿನ್ನ ಮುಂದೆ ಹೀಗಿದ್ದೇನೆ

|

Updated on: Feb 05, 2021 | 10:54 AM

‘ಪ್ಲೇಹೋಮ್​ನಿಂದ ಮಗಳನ್ನು ಕರೆತರಲು ಹೋದಾಗ ಆರೂವರೆ ದಾಟಿತ್ತು. ಉಪ್ಪರಿಗೆಯಿಂದ ಅಳುವ ದನಿ ಕೇಳುತ್ತಿತ್ತು. ಇಷ್ಟಗಲ ಕೋಣೆಯ ಮೂಲೆಯಲ್ಲಿ ನನ್ನ ದೇವತೆ ಮುದುಡಿ ಕೂತು ಸಶಬ್ದ ಅಳುತ್ತಿದ್ದಳು. ಎದುರಿಗೆ ಒಬ್ಬಳು ಹೆಂಗಸು ಪೊರಕೆ ಕಡ್ಡಿ ಹಿಡಿದು ‘ಬಿಡಲಾ ಒಂದು’ ಅಂತ ಹೆದರಿಸುತ್ತಿದ್ದಳು. ಮಾತಿರಲಿಲ್ಲ ನನ್ನಲ್ಲಿ, ಸೀದಾ ಮಗುವನ್ನೆತ್ತಿಕೊಂಡು ಬಂದೆ. ಮನೆಗೆ ಬಂದವಳೇ ಪತಿಯಲ್ಲಿ ಕೇಳಿದ್ದೆ ‘ನಾನು ರಾಜಿನಾಮೆ ಕೊಡಬಹುದಾ…’ ಅವರು ‘ಖಂಡಿತ’ ಅಂದರು.’ ಅನುರಾಧಾ ಪಿ. ಸಾಮಗ

ನಾನೆಂಬ ಪರಿಮಳದ ಹಾದಿಯಲಿ: ಪ್ರೀತಿಯನ್ನು ಆತುಕೊಂಡಿದ್ದಕ್ಕೆ ಇಂದು ನಿನ್ನ ಮುಂದೆ ಹೀಗಿದ್ದೇನೆ
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಮೈಸೂರಿನಲ್ಲಿ ವಾಸಿಸುತ್ತಿರುವ ಕವಿ, ಲೇಖಕಿ ಅನುರಾಧಾ ಪಿ. ಸಾಮಗ ಅವರ ಆಪ್ತ ಬರಹ ನಿಮ್ಮ ಓದಿಗೆ…

‘ಹೆಣ್ಣುಮಕ್ಕಳು ಕೆಲಸಕ್ಕೆ ಹೋಗುವುದೆಂದರೆ ಹೆಣ್ಣಿನ ಜೀವನಧರ್ಮಕ್ಕೆ ಹಾನಿ ಮಾಡಿದ ಹಾಗೆ. ಅಲ್ಲಿ ಹಾದಿ ತಪ್ಪುವ ಅವಕಾಶ ಮತ್ತು ಆಸ್ಪದವೆರಡೂ ಇರುವ ಕಾರಣ ಅವಳು ಅವಳಾಗಿ ಉಳಿಯುವುದು ಬಹಳ ಕಷ್ಟ ಮತ್ತು ಅವಳಾಗಿ ಉಳಿಯದಿದ್ದರೆ ಕುಟುಂಬ ವ್ಯವಸ್ಥೆಗೆ ಅದು ಗಂಡಾಂತರವೇ ಹೌದು’ ನನಗೆ ಬಹಳ ಪ್ರೀತಿಪಾತ್ರರಾಗಿದ್ದ ವ್ಯಕ್ತಿಯೊಬ್ಬರ ಈ ಮಾತು ಮತ್ತು ‘ನೋಡು ನಿನ್ನಪ್ಪ ತುಂಬ ಪಾಪದವ. ಅವನಿಗೆ ಗಂಡುಮಕ್ಕಳಿಲ್ಲ. ನೀವು ಮೂವರು, ಅದರಲ್ಲೂ ನೀನು ಮೊದಲಮಗಳು ದೊಡ್ಡವಳಾದ ಮೇಲೆ ಅವರಿಗೆ ಆ ಕೊರತೆ ಕಾಡದಂತೆ ಅಪ್ಪ ಅಮ್ಮನನ್ನು ನೋಡಿಕೊಳ್ಳಬೇಕು ಗೊತ್ತಾಯ್ತಾ?’ ಅನ್ನುವ ಕಂಡಕಂಡವರೆಲ್ಲರ ಮಾತು, ಇವೆರಡೂ ಸೇರಿ ನನ್ನ ಹದಿಹರಯದ ದಿನಗಳಲ್ಲಿ ನನ್ನನ್ನು ಬಹಳಷ್ಟು ಗೊಂದಲಕ್ಕೆ ತಳ್ಳಿದ್ದವು. ದೊಡ್ಡವಳಾದಾಗ ಬಹಳ ಭಾರವಾದದ್ದೇನೋ ಹೆಗಲೇರಲಿದೆ ಅನ್ನುವ ಗಾಬರಿ ಮತ್ತು ಗಂಡುಮಗನಂತಾಗುವುದು ಅಂದರೆ ಹೇಗೆ ಮತ್ತೆ ಯಾಕೆ ಅನ್ನುವ ಗೊಂದಲದಲ್ಲಿ ಪಕ್ಕದಲ್ಲಿರುತ್ತಿದ್ದ ಅಪ್ಪ-ಅಮ್ಮನ ಮುಖ ನೋಡುತ್ತಿದ್ದೆ. ಅಲ್ಲೂ ಒಂದೆಳೆ ಹತಾಶೆ ಮತ್ತು ನೋವು ಪ್ರತಿಬಾರಿ ಕಂಡಾಗ ಒಳಗೇನೋ ಮುದುಡುತ್ತಿದ್ದದ್ದೂ ಸುಳ್ಳಲ್ಲ. ಮುಂದೆ ಯಾವತ್ತೋ ಒಳಗೆ ಎದ್ದೇಳಬಹುದಾದ ಒಂದು ಸಾಧಿಸಿ ತೋರಿಸುವ ಛಲದ ಬೆಳೆ ಇಲ್ಲೇ ಬಿತ್ತಲ್ಪಡುತ್ತಿತ್ತು ಅನ್ನುವ ಅರಿವಾದದ್ದು ಮಾತ್ರ ಎಷ್ಟೋ ವರ್ಷಗಳ ನಂತರ!

ಉಡುಪಿಯಿಂದ ಸುಮಾರು ಹನ್ನೆರಡು ಮೈಲಿ ದೂರದಲ್ಲಿ ಕಾಪು ಅನ್ನುವ ಕಡಲತಡಿಯ ಚಂದದ ಊರಿನೊಳಗೆ ಉಳಿಯಾರು ಅನ್ನುವ ಕುಗ್ರಾಮ ನನ್ನ ಊರು. ಊರಿಗೆ ಪ್ರತಿಷ್ಠಿತರೆನಿಸಿಕೊಂಡಿದ್ದ ನನ್ನಜ್ಜ, ಅವರ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರು ನನ್ನಪ್ಪ. ಎರಡು ತಲೆಮಾರುಗಳಿಗೆ ಮೊದಲ ಹೆಣ್ಣುಮಗಳಾಗಿ ಆ ವೈಭವದ ಮನೆಯಲ್ಲಿ ಹುಟ್ಟಿದ ನನಗೆ ನೆಲಕ್ಕೆ ದೇವಲೋಕದಿಂದ ಉದುರಿದ ಚಿನ್ನದ ತುಂಡು ಎಂಬಂಥ ಸ್ವಾಗತ ಸಿಕ್ಕಿತ್ತು. ಓದು, ಹಾಡು, ಹರಿಕಥೆ, ನಾಟಕಗಳಲ್ಲೆಲ್ಲ ಮುಂಚೂಣಿಯಲ್ಲಿರುತ್ತಿದ್ದುದರಿಂದ ಊರಿನ, ಶಾಲೆಯ, ಕುಟುಂಬದ ಕಣ್ಮಣಿಯೆಂಬಂತೆ ಬೆಳೆದವಳು. ಇದರಿಂದಾಗಿ ಆ ವೈಭವದ ಮನೆತನಕ್ಕೆ ಗಂಡು ಸಂತಾನವಾಗುವುದಕ್ಕೆ ಅಡ್ಡಿಯಾಗಿ ಹುಟ್ಟಿದ್ದೇನೇನೋ ಅನ್ನುವ ಕೀಳರಿಮೆ ನನ್ನೊಳಗೆ ಬಿತ್ತಲ್ಪಡಲು ಹೊರಟಿದ್ದದ್ದು ಈ ಮೆಚ್ಚುಗೆಯೆಂಬ ಹೆಗ್ಗಳಿಕೆಯಡಿ ನಗಣ್ಯವಾಗುತ್ತಿತ್ತು. ನನ್ನೊಳಗೆ ನಾನು ನಾನಾಗಿರುವ ಬಗೆಗಿರುವ ಧನ್ಯತೆ ಇಂದಿಗೂ ಮಾಸದೇ ಉಳಿದಿರುವುದಕ್ಕೆ ಬಾಲ್ಯದಲ್ಲಿ ದೊರೆತ ಈ ಗುರುತಿಸುವಿಕೆಯೇ ಕಾರಣವೆನಿಸಿದ್ದು ಹಲಬಾರಿ.

ಓದುಬರಹದಲ್ಲಿ ತಮ್ಮ ಮೂವರು ಹೆಣ್ಣುಮಕ್ಕಳು ಮಹತ್ತದ್ದೇನೋ ಸಾಧಿಸಿ ತಮ್ಮ ಹೆಮ್ಮೆಗೆ ಕಾರಣರಾಗಬೇಕು ಅನ್ನುವ ಆಸೆಗಿಂತಲೂ ನಮ್ಮ ಹೆತ್ತವರಿಗೆ ನಾಕು ಜನರೆದುರು ಒಳ್ಳೆಯ ಮಕ್ಕಳೆನಿಸಿಕೊಂಡು, ನಾಳೆ ಒಳ್ಳೆಯಕಡೆಗೆ ಮದುವೆಯಾಗುವುದಕ್ಕೆ ಅದು ಸಹಾಯಕವಾಗಿ, ಮದುವೆಯಾದಲ್ಲಿ ಎಲ್ಲರಿಗೂ ಹೊಂದಿಕೊಂಡು, ಸುಖೀ ಸಂಸಾರ ನಡೆಸಬೇಕು ಅನ್ನುವ ಆಶಯವಿತ್ತು, ಅದಕ್ಕೆ ನಮ್ಮನ್ನು ತಯಾರು ಮಾಡುವುದು ಅವರ ಜೀವನದ ಗುರಿಯಾಗಿತ್ತು. ಹಾಡು, ಹಸೆ, ಸಾಧಾರಣಮಟ್ಟಿಗೆ ಅಡುಗೆ ಈ ಮನೆವಾರ್ತೆಗಳನ್ನು ಕಲಿಸುವುದರರಲ್ಲಿ ಇದ್ದ ಮುತುವರ್ಜಿ, ಇವತ್ತು ಶಾಲೆಯಲ್ಲಿ ಏನಾಯಿತು, ಯಾವಾಗ ಪರೀಕ್ಷೆ, ಎಷ್ಟು ಮಾರ್ಕ್ಸ್ ಬಂತು ಅಂತೆಲ್ಲ ವಿಚಾರಿಸುವುದರಲ್ಲಿರಲಿಲ್ಲ. ಓದಿದೆಯಾ ಬರೆದೆಯಾ ಅಂತೆಲ್ಲ ಒಮ್ಮೆಯೂ ವಿಚಾರಿಸಿದ್ದು ನೆನಪಿಲ್ಲ. ಆದರೆ ಹಂಡೆಗೆ ನೀರು ತುಂಬಿಸಿ ಆಯ್ತಾ, ದನಕ್ಕೆ ಹುಲ್ಲು ಹಾಕಿಲ್ಲವಾ ಇವತ್ತು, ಹೊಸ್ತಿಲು ಬರೆದೆಯಾ, ಪೂಜೆಗೆ ಹೂವು ಕೊಯ್ದಾಯ್ತಾ ಇವೆಲ್ಲಕ್ಕೆ ಬಹಳ ಕಟ್ಟುನಿಟ್ಟಿನ ವೇಳಾಪಟ್ಟಿ ಇರುತ್ತಿತ್ತು. ಇಂಥ ವಾತಾವರಣದಲ್ಲಿ ಬೆಳೆಯುತ್ತಾ ನಾನು ಮದುವೆ, ಮಕ್ಕಳು, ಸಂಸಾರ ಅನ್ನುವದಷ್ಟೇ ಯೋಚನೆಯಿರುವ ಅಪ್ಪಟ ಶಾದಿ ಮೆಟೀರಿಯಲ್ ಆಗಿ ರೂಪುಗೊಳ್ಳುತ್ತಿದ್ದೆ. ಒಂದು ಡಿಗ್ರಿ ಅಂತಾದರೆ ಆಯ್ತು ಮತ್ತೆ ಒಬ್ಬ ಹುಡುಗನನ್ನು ಹುಡುಕಿ ಮದುವೆ ಅಷ್ಟೇ, ಇನ್ನು ಯಾವ ನಿರೀಕ್ಷೆಯನ್ನೂ ನನ್ನಿಂದ ಇಟ್ಟುಕೊಳ್ಳಬೇಡ” ಅಂತ  ಅಪ್ಪ ಪದೇಪದೇ ಹೇಳುತ್ತಿದ್ದುದರ ಹಿಂದೆಯೂ ಕಾರಣವಿತ್ತು. ನನಗೆ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಕಲಿತುಕೊಳ್ಳುವುದರಲ್ಲಿ ತುಂಬ ದಾಹ, ತಿಳುವಳಿಕೆಯನ್ನು ದಕ್ಕಿಸಿಕೊಳ್ಳುವ ಏಕಾಗ್ರತೆ, ಮತ್ತು ಅಸಾಧಾರಣ ನೆನಪಿನ ಶಕ್ತಿ ಇತ್ತು. ಹಾಗಾಗಿ ತುಂಬ ಓದಿ ನಮ್ಮ ಊರಿಗೇ ಹೆಸರು ತರುವವಳು ಎಂಬಂತೆ ಶಾಲೆಯಲ್ಲಿ ತುಂಬು ಅಭಿಮಾನದಿಂದ ಕಾಣಲಾಗುತ್ತಿತ್ತು ಮತ್ತು ಅದು ನನ್ನೊಳಗೆ ಎಲ್ಲಿ ಮದುವೆಯಾಚೆಗಿನ ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕೀತೋ ಅನ್ನುವ ಅಪ್ಪನ ಭಯ ಅದರ ಹಿಂದಿತ್ತು. ಆದರೆ ಯಾವ ಹೊಗಳಿಕೆ, ಅಭಿಮಾನದ ಮಾತೂ, ಯಾವ ಸಲಹೆ-ಸೂಚನೆಗಳೂ ನನ್ನೊಳಗೆ ಮದುವೆ ಮಕ್ಕಳು ಸಂಸಾರವೆಂಬುದಕ್ಕೆ ಹೊರತಾದ ಒಂದು ಗುರಿಯನ್ನು ಹುಟ್ಟುಹಾಕಲಿಲ್ಲ.

ಬದುಕಿನಲ್ಲಿ ದಿಢೀರ್ ಅಂತ ಬೆಳವಣಿಗೆಗಳಾಗಿ ಹಳ್ಳಿ ಬಿಟ್ಟು ಪಟ್ಟಣದಲ್ಲಿ ವಾಸಕ್ಕೆ ಬಂದಾಗ ನಾನು ಒಂಬತ್ತನೆಯ ಇಯತ್ತೆ ಪಾಸಾಗಿದ್ದೆ. ನಮ್ಮೂರಿನಲ್ಲಿದ್ದ ವೈಭವದ ಜೀವನ ಹಳೆಯ ಜನ್ಮವೇನೋ ಎಂಬಂತೆ ಹೊಸತೇ ಆದ ರೀತಿಯಲ್ಲಿ ಬದುಕು ಚಲಿಸತೊಡಗಿತ್ತು. ಅದು ಜುಲಾಯಿ ತಿಂಗಳು. ಶಾಲೆಯ ನೇಮಕಾತಿ ಎಲ್ಲ ಮುಗಿದಾಗಿತ್ತು. ಅಪ್ಪನ ಸ್ನೇಹಿತರೊಬ್ಬರು ನನ್ನ ಬುದ್ಧಿಮತ್ತೆಯ ಬಗ್ಗೆ ಬಹಳ ಅಭಿಮಾನ ಇದ್ದವರು ಇವಳನ್ನು ಕಾನ್ವೆಂಟಿಗೇ ಸೇರಿಸಬೇಕು ಅನ್ನುವ ಹಟಕ್ಕೆ ಅರವತ್ತಕ್ಕೆ ಸೀಮಿತವಿದ್ದ ಒಂದು ಕ್ಲಾಸಿನ ಸದಸ್ಯರ ಸಂಖ್ಯೆಯನ್ನು ಆ ವರ್ಷ ಅರವತ್ತೊಂದಾಗುವ ಹಾಗೆ ನನ್ನನ್ನು ಅಲ್ಲಿಗೆ ಸೇರಿಸಿದ್ದರು. ಅಲ್ಲಿನ ಶಿಸ್ತಿನ ವಾತಾವರಣ ಹಳ್ಳಿಯ ಶಾಲೆಯಲ್ಲಿ ಹಾಡಿಕೊಂಡು, ಕಥೆ ನಾಟಕ ಅಂತೆಲ್ಲ ಮುಕ್ತವಾಗಿ ಹಕ್ಕಿಯ ಹಾಗೆ ಬದುಕಿದ್ದ ನನಗೆ ರೆಕ್ಕೆ ಕತ್ತರಿಸಿದ ಅನುಭವ ಕೊಟ್ಟಿತ್ತು. ಅಲ್ಲದೇ ಹಣದ ಮುಗ್ಗಟ್ಟು, ಹಿರಿಯರ ಆಸ್ತಿ ಮಾರಿ ಬಂದವರು ಅನ್ನುವ ಹಣೆಪಟ್ಟಿಯಿಂದಾಗಿ ಮನೆಯಲ್ಲಿ ಮಂದಿ ಹುಟ್ಟುಹಾಕುತ್ತಿದ್ದ ಇರಿಸುಮುರಿಸುಗಳೆಲ್ಲ ಸೇರಿ ಮನಸು ಅಶಾಂತವಿರುತಿತ್ತು. ಮೊದಲ ಪರೀಕ್ಷೆಯಲ್ಲಿ ಹಿಂದಿ ಮತ್ತು ಗಣಿತದಲ್ಲಿ ಬರೀ ಮುವತ್ತೈದು ಪಡೆದು ಜಸ್ಟ್ ಪಾಸು.

ಅದೊಂದು ಸಂಜೆ ಅಪ್ಪ ಬಂದವರೇ  ‘ಮೂರು ಹೆಣ್ಣುಮಕ್ಕಳ ಅಪ್ಪ ಅಂತ ಆಗುವ ಅವಮಾನ ಸಾಲದು ಅಂತ ಮೂರುಕಾಸಿನ ಯೋಗ್ಯತೆ ಇಲ್ಲದ ಮಕ್ಕಳ ಅಪ್ಪ ಅಂತಲೂ ಅನ್ನಿಸಿಕೊಳ್ಳುವ ದಿನ ಬಂತು, ಮರ್ಯಾದೆ ತೆಗೆದುಬಿಟ್ಟೆ ನನ್ನದು…’ ಅಂತಂದು ಮುಖವೂ ನೋಡದೇ ಅತ್ತ ನಡೆದು ಹೋದಾಗ ಕಣ್ಣೆದುರು ಕತ್ತಲಿಟ್ಟಿತ್ತು. ‘ಒಬ್ಬ ಮಗನಾದರೂ ಇದ್ದಿದ್ದರೆ, ಪೂಜೆಗಷ್ಟು ತುಳಸಿ ಕುಯ್ದುಕೊಡು ಅಂತಲಾದರೂ  ಹೇಳಬಹುದಾಗಿತ್ತು, ನಿಮ್ಮನ್ನು ಕಟ್ಟಿಕೊಂಡು ನನ್ನ ಹಣೆಬರಹ ನೋಡು’  ಜೋರು ಚಳಿಜ್ವರದಲ್ಲಿ ನರಳುತ್ತಿದ್ದ ಅಪ್ಪ ಪೂಜೆಗೆ ತುಳಸಿ ಕುಯ್ಯುತ್ತಾ ಅಂದ ಮಾತು ಯಾಕೋ ಅವತ್ತು ತುಂಬ ಸಲ ನೆನಪಾಗಿಹೋಗಿತ್ತು. ಆವರೆಗೆ ಓದಿನ ಕಲಿಕೆಯ ವಿಷಯದಲ್ಲಿ ಹಿನ್ನಡೆ ಕಂಡಿದ್ದವಳಲ್ಲ ನಾನು. ಸುಮಾರು ಹೊತ್ತು ಅತ್ತು ಮುಗಿಸಿದಾಗ ನನ್ನೊಳಗೇನೋ ನನ್ನದೊಂದು ಭಾಗ ಗಟ್ಟಿಯಾದ ಅನುಭವವಾಗಿತ್ತು. ಅದೇ ವರ್ಷದ ಆಖೈರಿಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮೀಡಿಯಮ್ ನ ಅರುವತ್ತೂ ಮಂದಿಯನ್ನು ದಾಟಿ ಮೊದಲ ಸ್ಥಾನ ಪಡೆದುಬಿಟ್ಟಿದ್ದೆ. ಹತ್ತನೇ ತರಗತಿಯಲ್ಲಿ ಎಂಬತ್ತೊಂದು ಪ್ರತಿಶತ ಅಂಕಗಳು ಬಂದಾಗ (1987-88) ನಾವಿದ್ದ ಇಡೀ ಬೈಲೂರೇ ನನ್ನ ಫಲಿತಾಂಶವನ್ನು ಸಂಭ್ರಮಿಸಿತ್ತು. ಇಷ್ಟಾದರೂ ನನ್ನೊಳಗಿನ ಶಕ್ತಿಯ ಪರಿಚಯವಾಗಲಿ, ಓದನ್ನು ಗಂಭೀರವಾಗಿ ತೆಗೆದುಕೊಂಡು ಏನೋ ದೊಡ್ಡದೊಂದನ್ನು ಸಾಧಿಸಬೇಕೆನ್ನುವ ಕೆಚ್ಚಾಗಲಿ ಮೂಡಲೇ ಇಲ್ಲ. ಮತ್ತೂ ಮದುವೆಗೆಂದೇ ಮಾನಸಿಕವಾಗಿ ತಯಾರಾಗುತ್ತಿದ್ದೆ. ಅಪ್ಪ-ಅಮ್ಮನಿಗೆ ಖುಷಿಯಾಗುವ ರೀತಿಯಲ್ಲಿ ಮತ್ತು ಅವರಿಗೆ ಒಂದಿಷ್ಟೂ ನೋವಾಗದ ರೀತಿಯಲ್ಲಿ ಇದ್ದುಬಿಡುವುದಷ್ಟೇ ಆಗ ಬದುಕಿನ ಕ್ಷಣಕ್ಷಣಕ್ಕೆಂದು ನಿಗದಿಯಾಗಿದ್ದ ಗುರಿಯಾಗಿತ್ತು.

ಇಡೀದಿನ ಮನೆಯಲ್ಲಿ ಭಜನೆ,  ಮಂತ್ರ, ಸುಪ್ರಭಾತ, ಪೂಜೆಯ ಹಾಡು, ಆರತಿಯ ಹಾಡುಗಳಿರುತ್ತಿದ್ದ ಮೂಲಕ ಕಾವ್ಯವೆಂಬ ಸೊಗಸಿನ ಪರಿಚಯವಾದರೆ, ಶಾಲೆಯಲ್ಲಿ ಪೌರಾಣಿಕ ನಾಟಕಗಳಲ್ಲಿ ಭಾಗವಹಿಸುತ್ತಿದ್ದುದರಿಂದ ಪುಟಗಟ್ಟಲೆ ಕಾವ್ಯಾತ್ಮಕ ಸಂಭಾಷಣೆಗಳನ್ನು ಕಲಿಯುತ್ತಿದ್ದದರಿಂದ ಮತ್ತು ಪಠ್ಯದಲ್ಲಿನ ಪದ್ಯಪಾಠಗಳನ್ನು ರಾಗವಾಗಿ ಹಾಡಿ ಅದರ ಸವಿಯುಣಿಸುತ್ತಿದ್ದ ಅಧ್ಯಾಪಕರುಗಳ ದೆಸೆಯಿಂದ ಹಾಡು ಕಟ್ಟುವುದು ಅನ್ನುವದ್ದು ನನಗೆ ಪ್ರಿಯವಾಗತೊಡಗಿತ್ತು. ಐದನೇ ತರಗತಿಯಲ್ಲಿ ಅಜ್ಜನಗಡ್ಡ ಅನ್ನುವ ಗಾಳಿಯಲ್ಲಿ ಹಾರಿಹೋಗುವ ಬೀಜವೊಂದರ ಮೇಲೆ ಪದ್ಯ ಬರೆದಿದ್ದು ಅದು ಆಗಷ್ಟೇ ಆರಂಭವಾಗಿದ್ದ ತರಂಗ ವಾರಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು. ಮುಂದೆ ಹಾಗೇ ನನ್ನ ಪಾಡಿಗೆ ಬರೆಯುತ್ತಿದ್ದ ಅನೇಕ ಪದ್ಯಗಳು ಬರೆಯುವ ಸುಖವಷ್ಟೇ ಸಾಕು ಅನ್ನುವ ನನ್ನ (ಇಂದಿಗೂ ಬದಲಾಗಿಲ್ಲದ) ನಿಲುವಿನಿಂದಾಗಿ ಎಲ್ಲೆಲ್ಲೋ ಕಳೆದುಹೋದವು. ಆದರೆ ಆ ಹೆಜ್ಜೆಗಳು ನನ್ನೊಳಗೆ ಭಾಷೆಯೆಂಬ ಸೊಗಸು ಸುಂದರವಾಗಿ ಗರಿಗೆದುಬಲ್ಲುದು ಅನ್ನುವ ತಿಳಿವಳಿಕೆ ನನಗೆ ಬರುವಂತೆ ಮಾಡಿದವು.

ಸಾಂದರ್ಭಿಕ ಚಿತ್ರ

ಹತ್ತನೇ ತರಗತಿಯ ನಂತರ ಕಲಾವಿಭಾಗಕ್ಕೆ ಸೇರುವುದು, ಪದವಿ ತರಗತಿಗಳಲ್ಲಿ ಭಾಷೆಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಅದರ ಸೊಗಸನ್ನು ಆನಂದಿಸುವುದು ಅಂತ ಆಗ ಕನಸುಂಡಿದ್ದೆ. ಅಪ್ಪ ನಿನ್ನಿಷ್ಟ ಅಂದಿದ್ದರು. ಕಲಾವಿಭಾಗಕ್ಕೆ ಅರ್ಜಿ ಕೊಡಲು ಹೋದಾಗ ಅಪ್ಪನ ಪರಿಚಿತರೊಬ್ಬರು ಭೌತಶಾಸ್ತ್ರದ ಅಧ್ಯಾಪಕರು ನನ್ನ ಅಂಕಪಟ್ಟಿಯನ್ನು ನೋಡಿದವರೇ ‘ಇಂಥ ಅದ್ಭುತ ಮಾರ್ಕ್ಸ್ ಬಂದ ಮಗು ಕಲಾವಿಭಾಗಕ್ಕೆ ಸೇರುವುದಾದರೆ ವಿಜ್ಞಾನ ವಿಭಾಗಕ್ಕೆ ಯಾರು ಬರುವುದು?’ ಅಂತಂದು ಅರ್ಜಿಯಲ್ಲಿ ವಿಭಾಗ ಅಂತಿದ್ದಲ್ಲಿ ಕಲಾ ಅನ್ನುವುದನ್ನು ಹೊಡೆದುಹಾಕಿ ವಿಜ್ಞಾನ ಅಂತ ತಾವೇ ಬರೆದು ನನ್ನ ಮುಂದಿನ ಐದು ವರ್ಷಗಳ ವನವಾಸಕ್ಕೆ ನಾಂದಿ ಹಾಡಿದರು. ಇಷ್ಟವಿಲ್ಲದ ವಿಷಯಗಳನ್ನು ಅಳುತ್ತಳುತ್ತಲೇ ಕಲಿತು ಐದುವರ್ಷದಾಖೈರಿನಲ್ಲಿ ಬಿ.ಎಸ್ಸಿ ಅನ್ನುವ ಪದವಿಯನ್ನು ಡಿಸ್ಟಿಂಕ್ಷನ್ ನೊಂದಿಗೆ ಪಡೆದುಕೊಂಡೆ. ಪಿಯುಸಿಯಲ್ಲಿದ್ದಾಗ ಕನ್ನಡ ಮೀಡಿಯಂ ಶಾಲೆಯಿಂದ ಬಂದ ನನ್ನ ಇಂಗ್ಲಿಷ್ ಪೇಪರನ್ನು ಎತ್ತಿಹಿಡಿದು ಪೂರ್ಣಪ್ರಜ್ಞ ಕಾಲೇಜಿನ ಪ್ರೊ. ಕೃಷ್ಣಮೂರ್ತಿಯವರಂಥ ಕಟ್ಟುನಿಟ್ಟಿನ ಅಧ್ಯಾಪಕರು ‘ಕಾಲದಿಂದ ಪಿಯುಸಿ ವಿದ್ಯಾರ್ಥಿಗಳಿಂದ ನಾನು ನಿರೀಕ್ಷಿಸುತ್ತಿದ್ದ ಭಾಷೆಯ ಗುಣಮಟ್ಟವನ್ನು ಈ ಪೇಪರ್ ನಲ್ಲಿ ಕಂಡೆ, ಖುಷಿಯಾಯಿತು ಅನೂ’ ಅಂದಿದ್ದರು. ‘ಇಂಗ್ಲಿಷ್ ಎಮ್ಎ ಮಾಡು’ ಅಂತಂದು ಮತ್ತೆ ಭಾಷಾಕಲಿಕೆಯ ಆಸೆಯನ್ನು ಕುದುರಿಸಿದ್ದರು.

‘ನೀನು ಬರೀ ಬಿ.ಎಸ್ ಸಿ ಅಂತಲ್ಲ ಮಗಾ, ಅಭಿಯಂತರ ಅಂತ ಕರೆಯಿಸಿಕೊಳ್ಳಲೇಬೇಕು. ಈ ಜಾತಕ ಸರಿಯೇ ಹೌದಾಗಿದ್ದರೆ, ನೀನು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಲೇಬೇಕು’ ಅಂತ ನನ್ನ ಜಾತಕದ ಗ್ರಹಗಳ ಸ್ಥಾನ, ಚಲನೆಗಳನ್ನು ನನಗೆ ವಿವರಿಸುತ್ತಾ ಖಡಾಖಂಡಿತವಾಗಿ ಹೇಳುತ್ತಿದ್ದ ಆ ಹಿರಿಯರು ಜ್ಯೋತಿಷ್ಯ ಶಾಸ್ತ್ರವನ್ನ ವಿಜ್ಞಾನದೊಂದಿಗೆ ಹೊಂದಿಸಿ ತೋರಿಸುತ್ತಾ ಅವೆರಡರ ನಡುವಿನ ಸೇತುವಿನಂತಿದ್ದ ಉಡುಪಿಯ ನಡೆದಾಡುವ ಅದ್ಭುತ,  ಪ್ರೊ. ಯು. ಎಲ್. ಆಚಾರ್ಯರು. ಅವರ ಹೇಳಿಕೆಗಳ ಬಗ್ಗೆ ಅಪಾರ ನಂಬಿಕೆ ಇದ್ದರೂ ಆಗ ನನಗೆ ನಗು ಬರುತ್ತಿತ್ತು. ದಿನಕ್ಕೊಂದರಂತೆ ಮದುವೆಯ ಪ್ರಸ್ತಾಪ ಬರುತ್ತಿದ್ದವು. ಹಿಂದೆಯೇ ತಂಗಿ ಹದಿನೆಂಟಕ್ಕೆ ಕಾಲಿರಿಸಿದ್ದಳು. ಆದಷ್ಟು ಬೇಗ ನನ್ನ ಮದುವೆ ಮುಗಿಸಿ ಅವಳ ಮದುವೆಗೂ ತಯಾರಾಗಬೇಕೆಂಬ ಧಾವಂತದಲ್ಲಿ ಅಪ್ಪ ಇರುವಾಗ ಇನ್ನೆಲ್ಲಿಯ ತಾಂತ್ರಿಕ ವಿದ್ಯಾಭ್ಯಾಸ?

ಆ ದಿನಗಳಲ್ಲಿ ಆಚಾರ್ಯರು ಒಂದು ಸಂಜೆ ಪೇಪರ್ ಹಿಡಿದುಕೊಂಡು ಬಂದವರೇ ನೋಡು ಡಿಪಾರ್ಟ್ಮೆಂಟ್ ಆಫ ಟೆಲಿಕಾಂ ನಿಂದ ಕಾಲ್ ಫಾರ್ ಮಾಡಿದ್ದಾರೆ. ಅರ್ಜಿ ಹಾಕು ಅಂದರು. ಸರಿ ಅಂದೆ.  ಆ ಸ್ಪರ್ಧಾತ್ಮಕ ಪರೀಕ್ಷೆಯ ಸಿಲಬಸ್ ನೋಡಿ ಮೂರ್ಛೆ ತಪ್ಪುವ ಹಾಗಾಗಿತ್ತು. ಯಾವ ಇಷ್ಟವಿಲ್ಲದ ವಿಷಯಗಳಿಂದ ಬೇಸತ್ತು ಐದುವರ್ಷ ಒದ್ದಾಡಿದ್ದೆನೋ ಮತ್ತೆ ಅವುಗಳನ್ನೇ ಇನ್ನಷ್ಟು ಆಳಕ್ಕಿಳಿದು ಕಲಿಯಬೇಕಿತ್ತು. ಆದರೆ ಅರ್ಜಿ ಹಾಕಿಯಾಗಿತ್ತು ಮತ್ತದು ಊರವರೆಲ್ಲರಿಗೂ ತಿಳಿದಾಗಿತ್ತು. ಇನ್ನು ನನ್ನ ಪ್ರಯತ್ನವನ್ನು ನಾನು ಮಾಡಲೇಬೇಕಿತ್ತು. ನಾಕುತಿಂಗಳ ಕಾಲ ಇಂಜಿನಿಯರಿಂಗ್ನೊಳಗೆ ಕಲಿಸುವ ಭೌತಶಾಸ್ತ್ರ, ಗಣಿತಗಳನ್ನು ಯಾರ ಸಹಾಯವೂ ಇಲ್ಲದೇ ಒಂದಷ್ಟು ರೆಫರೆನ್ಸ್ ಪುಸ್ತಿಕೆಗಳ ಸಹಾಯದಿಂದ ಹೇಗೆ ಕಲಿತೆನೋ ಗೊತ್ತಿಲ್ಲ. ಮಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ನಾಕು ಪೇಪರ್ ಬರೆದು ಹೊರಬಂದಾಗ ನನ್ನ ಪ್ರಯತ್ನ ಇಲ್ಲಿಗೆ ಮುಗಿಯಿತು ಅನ್ನುವ ನಿರಾಳಭಾವ ಬಿಟ್ಟು ಯಾವ ನಿರೀಕ್ಷೆಯೂ ಮನಸಲ್ಲಿರಲಿಲ್ಲ.

ಮಳೆಗಾಲದ ಒಂದು ಮಧ್ಯಾಹ್ನ ಜಿಟಿಜಿಟಿ ಮಳೆಯಲ್ಲಿ ಬಂದು ಒಬ್ಬರು ಕಾನ್​ಸ್ಟೇಬಲ್ ಅನುರಾಧಾ ಭಟ್ ಯಾರೂ… ಅಂತ ಬಾಗಿಲಲ್ಲಿ ನಿಂತು ಕೇಳಿದಾಗ ಬೆಚ್ಚಿಬಿದ್ದಿದ್ದೆ. ‘ಭಟ್ರ ಮಗಳಾಗಿದ್ದೂ ಕೇಂದ್ರ ಸರಕಾರದ ನೌಕರಿ ಗಿಟ್ಟಿಸಿಕೊಂಡಿದ್ದೀಯಲ್ಲಾ, ಯಾಕೆ ಬಿಳಿಚಿಕೊಳ್ತಾ ಇದ್ದೀಯಾ, ಪಾಯಸ ಮಾಡಹೇಳು ಅಮ್ಮನಿಗೆ’ ಅಂತಂದು ವಾಪಾಸಾಗಿದ್ದರು. ನನಗೆ ಜೂನಿಯರ್ ಟೆಲಿಕಾಂ ಆಫೀಸರ್ ಕೆಲಸ ಸಿಕ್ಕಿತ್ತು, ಹುದ್ದೆ ಜನಜನಿತವಿದ್ದದ್ದು ಜೂನಿಯರ್ ಇಂಜಿನಿಯರ್ ಅನ್ನುವ ಹೆಸರಲ್ಲಿ. ಅಂತೂ ನಾನೂ ಅಭಿಯಂತರೆ ಅನಿಸಿಕೊಂಡಿದ್ದೆ. ಮುಂದಿನೊಂದು ವರ್ಷದಲ್ಲಿ ಮದುವೆಯಾಗಿತ್ತು, ನಾನಿರುವಲ್ಲೇ ಪೋಸ್ಟಿಂಗ್ ಆದರೆ ಮಾತ್ರ ಕೆಲಸ ಇಲ್ಲದಿದ್ದರೆ ಇಲ್ಲ ಅಂತ ಪತಿರಾಯರು ಹೇಳಿಯೂ ಆಗಿತ್ತು. ಅವರು ಹರಿಹರದಿಂದ ಮೈಸೂರಿನ ಕಿರ್ಲೋಸ್ಕರ್ ಕಂಪೆನಿಗೆ ಕೆಲಸ ಬದಲಾಯಿಸಿದ ಕೆಲವೇ ದಿನಗಳಲ್ಲಿ ನನಗೂ ಮೈಸೂರಿನ ರೀಜನಲ್ ಟೆಲಿಕಾಂ ಟ್ರೇನಿಂಗ್ ಸೆಂಟರ್​ನಲ್ಲಿ ಟ್ರೇನಿಂಗ್ ಶುರುವಾಗುವ ಮೂಲಕ ತಾಂತ್ರಿಕ ವಿದ್ಯಾಭ್ಯಾಸದ ಆಚಾರ್ಯರ ಜ್ಯೋತಿಷ್ಯವೂ ನಿಜವಾಗಿತ್ತು. ಒಂಬತ್ತು ತಿಂಗಳ ಟ್ರೇನಿಂಗ್ ಮುಗಿದು ರಾಷ್ಟ್ರಾಧ್ಯಕ್ಷರ ಸಹಿ ಇರುವ ಪೋಸ್ಟಿಂಗ್ ಲೆಟರ್ ಕೈಗೆ ಬಂದಾಗ ಇದು ಕನಸಲ್ಲ ತಾನೇ ಅನಿಸಿದ್ದು ಹಲವು ಬಾರಿ. ಎಲ್ಲಿ ಮದುವೆ ಮಕ್ಕಳು ಅಂತ ತಯಾರಾಗುತ್ತಿದ್ದ ನಾನು ಎಲ್ಲಿಯ ಈ ಪ್ರತಿಷ್ಠಿತ ನೌಕರಿ!

ಜೀವನ ಇನ್ನೊಂದು ಅನಿರೀಕ್ಷಿತ ತಿರುವಿನಲ್ಲಿ ಚಲಿಸಲಾರಂಭಿಸಿತ್ತು. ಚಾಮುಂಡಿಬೆಟ್ಟದ ಮೈಕ್ರೋವೇವ್ ಸ್ಟೇಶನ್ ಆಗಿನ್ನೂ ಆಪ್ಟಿಕಲ್ ಫೈಬರ್ ಬಂದಿರದ ಕಾಲವಾಗಿದ್ದು ಮೈಸೂರನ್ನು ಬೇರೆಲ್ಲ ಊರುಗಳ ಜೊತೆ ಟೆಲಿಫೋನಿಕ್ ಆಗಿ ಬೆಸೆದಿಡುವ ಏಕೈಕ ಕೊಂಡಿ. ಹಾಗಾಗಿ ಅದಕ್ಕೆ ಬಲು ಪ್ರಾಮುಖ್ಯತೆ ಇತ್ತು. ಸಿಸ್ಟಮ್ಗ​ಳ ನಿಗದಿತ ತಪಾಸಣೆಗಳು, ಡೀಸೆಲ್ ಜನರೇಟರ್​ನ ಸುಸ್ಥಿತಿ, 40 ಮೀ ಎತ್ತರದ ಟವರ್​ನಲ್ಲಿ ದಿಕ್ಕಿಗೊಂದರಂತೆ ಇಷ್ಟಗಲ ಮೈ ಹರವಿ ಊರೂರಿಂದ ಬರುವ ಮಾತುಮೌನ ಸಂದೇಶಗಳ ತರಂಗಾಂತರಗಳನ್ನು ಹೀರಿಕೊಂಡು ಸಿಸ್ಟಮ್​ಗಳಿಗೆ ಕೊಟ್ಟು ಮೈಸೂರಿನ ಸಂಬಂಧಿಸಿದವರಿಗೆ ತಲುಪಿಸುವ ಜವಾಬುದಾರಿ ಹೊತ್ತ ದೈತ್ಯ ಆಂಟೆನಾಗಳ ಸುಸ್ಥಿತಿ ಇವೆಲ್ಲವೂ ನನ್ನ ಜವಾಬುದಾರಿಯಾಗಿತ್ತು. ಎಲ್ಲಕ್ಕಿಂತ ಹೆಚ್ಚು ಊರಿನ ಗಲಗಲದಿಂದಾಚೆ ಕಾಡಿನ ಮಧ್ಯೆ ಎಂಬಂತೆ ಇರುವ ಸ್ಟೇಶನ್​ನಲ್ಲಿ ನಾನೊಬ್ಬಳೇ ಬೆಳಿಗ್ಗೆಯಿಂದ ಸಂಜೆವರೆಗೆ ಇರಬೇಕಾಗಿತ್ತು. ಫೋನ್ ಮೆಕ್ಯಾನಿಕ್​ಗಳು ದಿನಕ್ಕೆ ಮೂರು ಪಾಳಿಗಳಲ್ಲಿ ಬರುತ್ತಿದ್ದರಾದರೂ ಅವರು ಕೆಳಗಿನ ಮಾಳಿಗೆಯಲ್ಲಿರುತ್ತಿದ್ದರು. ಮೇಲೆ ಸಿಸ್ಟಂಗಳ ಜೊತೆಗೆ ಗುಂಯ್ ಅನ್ನುವ ಎಸಿ, ಅವುಗಳ ಕೊಳವೆಗಳ ಮೂಲಕ ಒಳಬರುವ ತರತರದ ಹಾವುಗಳು, ಸುಂಯ್ಗುಡುವ ಬೀಸುಗಾಳಿ, ಮಂಜು ಇವೆಲ್ಲವುಗಳ ಜೊತೆ ನಾನೊಬ್ಬಳೇ ಇರುತ್ತಿದ್ದೆ. ಎಷ್ಟೋಬಾರಿ ಜನರೇಟರ್ ಚಾಲೂ ಮಾಡಬೇಕಾದ ಹೊತ್ತಿನಲ್ಲಿ ಹುಡುಗರು ಕಾಫಿಗೆಂದು ಹೋಗಿರುತ್ತಿದ್ದಾಗ ಅದರ ಕೋಣೆಯ ಮಣಭಾರದ ಶಟರ್ ಎತ್ತಿ ಕ್ರಾಂಕರ್ ತಿರುಗಿಸಿ ಜನರೇಟರ್ ಶುರು ಮಾಡಬೇಕಾಗಿ ಬಂದದ್ದಿತ್ತು. ಎಷ್ಟೋಬಾರಿ ಹತ್ತು ಮೀಟರ್, ಇಪ್ಪತ್ತು ಮೀಟರ್ ಅಂತ ಅಳುಕುತ್ತಲೇ ದೂಕುವಷ್ಟು ರಭಸದಿಂದ ಗಾಳಿ ಬೀಸುವ ಟವರ್​ನ ನಲವತ್ತೂ ಮೀಟರ್ ಹತ್ತಿ ಅಂಟೆನಾಗಳ ನಟ್ಟುಬೋಲ್ಟು ಬಿಗಿ ಮಾಡಿಸಿದ್ದೂ ಇದೆ. ನವಿರು ಮನಸಿನ ಹೆದರುಪುಕ್ಕಲಿಯಾಗಿದ್ದು ಮದುವೆ ಮಕ್ಕಳು ಅಂತ ನಾಜೂಕಿನ ಕೆಲಸಗಳನ್ನ ಕಲಿಯುತ್ತಾ ತಯಾರಾಗುತ್ತಿದ್ದ ನನ್ನನ್ನು ನೋಡು ನೀನೆಂದರೇನೆಂದು ಸರಿಯಾಗಿ ಪರಿಚಯಿಸಿಕೋ ಅಂತ ಬದುಕು ತಂದು ಇಲ್ಲಿ ನಿಲ್ಲಿಸಿತ್ತು.

ಇಂಥ ಇನ್ನೂ ಅನೇಕ ಮೆಶೀನುಜನಿತ ಹಾಗೂ ಮಾನವಜನಿತ ಸವಾಲುಗಳನ್ನು ಬಹಳ ಸಮಾಧಾನದಿಂದಲೇ ಎದುರಿಸುತ್ತ ನಾಕಾರು ವರ್ಷಗಳುರುಳಿದವು. ಬುದ್ಧಿ ಬಂದಾಗಿನಿಂದ ದೊಡ್ಡವಳಾಗಿ ನೀನೇನಾಗುತ್ತೀಯೇ ಅಂದರೆ ಅಮ್ಮ ಅನ್ನುತ್ತಿದ್ದವಳು ನಾನು, ಮಕ್ಕಳೆಂದರೆ ಹುಚ್ಚು ಅನ್ನುವಷ್ಟು ಆಸೆ ಇದ್ದವಳು ನಾನು ಅಮ್ಮನಾಗುವುದು ಸಾಧ್ಯವಿಲ್ಲ ಅನ್ನುವ ಮಾತು ಸಿಡಿಲಿನಂತೆ ಬಂದೆರಗಿತ್ತು. ಹತ್ತುವರ್ಷಗಳಲ್ಲಿ ನನ್ನತನ ಇಂಚಿಂಚೇ ನಶಿಸುವುದನ್ನು ಅಸಹಾಯಕಳಾಗಿ ನೋಡುತ್ತಿದ್ದೆ. ಎಷ್ಟೇ ಮುತುವರ್ಜಿ ಮಾಡಿದರೂ ಈ ಶಾಕ್​ನಿಂದ ಚೇತರಿಸಿಕೊಳ್ಳಲಾಗದೇ ನನ್ನೊಳಗಿನ ಸಕಾರಾತ್ಮಕತೆ ಹಾಗೂ ದೈಹಿಕ ಆರೋಗ್ಯವೆರಡೂ ಕುಸಿಯತೊಡಗಿದ್ದವು. ಇನ್ನೇನು ನಾನು ಪೂರಾ ಹದಗೆಟ್ಟು ಹೋಗುವುದರಲ್ಲಿದ್ದಾಗ ಮತ್ತೆ ಬದುಕಿನ್ನೊಂದು ಅನಿರೀಕ್ಷಿತ ತಿರುವಿನಲ್ಲಿ ನಿಂತು ಮುಂದಡಿಯಿಡು ಬಾ ಅನ್ನುತ್ತಿತ್ತು. ನೂರಾರು ಬೆಳವಣಿಗೆಗಳು ಕಣ್ಣು ಮಿಟುಕಿಸುವಷ್ಟರಲ್ಲಿ ನಡೆದು ಆ ಅಂಚಿನಲ್ಲಿ ಬೊಗಸೆಕಂಗಳ, ಪುಟ್ಟ ಹಣೆಯ ಮೇಲೆ ಜೊಂಪೆಗೂದಲಿರುವ, ಮೂತಿ ಉಬ್ಬಿಸಿ ಊ… ಅಂತ ಕಣ್ಣಿಗೆ ಕಣ್ಣುಕೂಡಿಸಿ ಮಾತಾಡುವ ದೇವತೆಯೊಬ್ಬಳು ನನ್ನ ಮಗಳಾಗಿದ್ದಳು. ಅಲ್ಲಿಂದೀಚೆಗೆ ಆವರೆಗಿನ ಹತ್ತುವರ್ಷಗಳು ಮಾಡಿದ ಹಾನಿಯೊಂದೂ ಲೆಕ್ಕಕ್ಕಿಲ್ಲದ ಹಾಗೆ ಬದುಕು ಮತ್ತೆ ಚಿಗಿತುಕೊಂಡಿತು. ಇವತ್ತು ‘ಅಮ್ಮ, ನೀನಂದರೆ ನನಗೆ ಗರ್ವವಿದೆ, ನಿನ್ನ ಹಾಗೆ ನಾನಾಗಬೇಕಮ್ಮಾ’ ಅನ್ನುವ ಹದಿನೇಳರ ಮಗಳು ಈ ಹದಿನೇಳು ವರ್ಷಗಳಲ್ಲಿ ಹಲವು ಜೀವನಕ್ಕಾಗುವಷ್ಟು ಧನ್ಯತೆಯನ್ನು ಮೊಗೆಮೊಗೆದು ಕೊಟ್ಟಿದ್ದಾಳೆ.

ಒಬ್ಬಳು ಒಳ್ಳೆಮನಸಿನ ಸಹಾಯಕಿ ದೊರೆತದ್ದರಿಂದ ಮನೆ, ಮಗು ಮತ್ತು ವೃತ್ತಿ ಎಲ್ಲವನ್ನೂ ನಿಭಾಯಿಸುತ್ತಿದ್ದೆ. ಮುಂದೆ ಬಡ್ತಿಯಾಗಿ ಮಂಡ್ಯದ ಒಂದು ವಿಭಾಗದ ಮುಖ್ಯಸ್ಥೆಯಾಗಿ ಜವಾಬುದಾರಿ ಹೊತ್ತಾಗ ಮಗಳಿಗೆ ಎರಡುವರೆ ವರ್ಷ! ಮೈಸೂರಿನಿಂದ ಅವಳನ್ನೂ ಅವಳಿಗೆ ಮೂರು ಹೊತ್ತಿಗಾಗುವಷ್ಟು ಆಹಾರವನ್ನೂ ಪ್ಯಾಕ್ ಮಾಡಿಕೊಂಡು ನಮ್ಮದೇ ಕಾರಿಗೊಬ್ಬ ಚಾಲಕನನ್ನು ನೇಮಿಸಿ ಮಂಡ್ಯಕ್ಕೆ ನಿತ್ಯ ಓಡಾಡುತ್ತಿದ್ದೆ. ಅಲ್ಲಿ ಒಂದು  ಪ್ಲೇಹೋಮ್​ನಲ್ಲಿ ಅವಳನ್ನು ಹತ್ತರಿಂದ ಆರರವರೆಗೆ ಬಿಡುತಿದ್ದೆ. ಒಂದುದಿನ ಅವಳನ್ನು ಕರೆತರಲು ಹೋದಾಗ ಆರೂವರೆ ದಾಟಿತ್ತು. ಉಪ್ಪರಿಗೆ ಮೇಲಿದ್ದ ಆ ಪ್ಲೇಹೋಮಿನಿಂದ ಮಗುವೊಂದು ಅಳುವ ದನಿ ಕೇಳುತ್ತಿತ್ತು. ನನ್ನ ಅರ್ಪಿತಾ ಅವಳನ್ನು ಬಿಟ್ಟು ನಾನು ಕೆಲಸಕ್ಕೆ ಹೊರಡುವಾಗಲೂ ಅತ್ತದ್ದಿಲ್ಲ, ಹಾಗಾಗಿ ಇದು ನನ್ನ ಮಗಳಲ್ಲ ಅಂದುಕೊಂಡು ಮೇಲೆ ಹೋದರೆ ಇಷ್ಟಗಲ  ಕೋಣೆಯ ಮೂಲೆಯಲ್ಲಿ ನನ್ನ ದೇವತೆ ಮುದುಡಿ ಕೂತು ಸಶಬ್ದ ಅಳುತ್ತಿದ್ದಾಳೆ, ಎದುರಿಗೆ ಒಬ್ಬಳು ಹೆಂಗಸು ಪೊರಕೆ ಕಡ್ಡಿ ಹಿಡಿದು ‘ಬಿಡಲಾ ಒಂದು’ ಅಂತ ಹೆದರಿಸುತ್ತಿದ್ದಾಳೆ. ಮಾತಿರಲಿಲ್ಲ ನನ್ನಲ್ಲಿ, ಸೀದಾ ಮಗುವನ್ನೆತ್ತಿಕೊಂಡು ಬಂದಿದ್ದೆ. ಮನೆಗೆ ಬಂದವಳೇ ಪತಿಯಲ್ಲಿ ಕೇಳಿದ್ದೆ ‘ನಾನು ರಾಜಿನಾಮೆ ಕೊಡಬಹುದಾ…’ ‘ಖಂಡಿತ’ ಅಂದಿದ್ದರು ಅವರು.

ಸಾಂದರ್ಭಿಕ ಚಿತ್ರ

ಕೆಲಸದ ಜಾಗದಲ್ಲಿಲ್ಲೂ ಸುಳ್ಳುಬಿಲ್ಲುಗಳು, ಸುಳ್ಳು ಸಬೂಬುಗಳು, ಮೋಸದಾಟಗಳಿಗೆ ಒಂದೋ ಮೂಕಪ್ರೇಕ್ಷಕಿಯಾಗುವ ಅಥವಾ ಅದರಲ್ಲಿ ಪರೋಕ್ಷವಾಗಿ ಭಾಗಿಯಾಗುವ  ಹಿಂಸೆಗಳನ್ನು ನಿಭಾಯಿಸಬೇಕಿತ್ತು. ಮನಸು ದಿನೇದಿನೆ ಪ್ರಕ್ಷುಬ್ಧವಾಗುತ್ತಲೇ ಇರುತ್ತಿತ್ತು. ಮುಂದೆ ತಡ ಮಾಡಲಿಲ್ಲ. ಮಾರನೆ ದಿನವೇ ನನ್ನ ಸ್ವಯಂನಿವೃತ್ತಿಯ ತಯಾರಿ ಶುರುವಾಗಿತ್ತು. ಒಂದೆರಡು ವರ್ಷ ರಜೆ ಕೇಳಿ ಅಂದರು ಮೇಲಧಿಕಾರಿಗಳು. ನಾಮಕೇವಾಸ್ತೇ ಅದೂ ಮಾಡಿದ್ದಾಯಿತು. ಮಂಡ್ಯ ತೊಂದರೆದಾಯಕ ಸ್ಟೇಶನ್ ಅಂತ ಹೆಸರುವಾಸಿಯಿದ್ದು ಅಲ್ಲಿಂದ ಒಬ್ಬರಿಗೆ ದೀರ್ಘಾವಧಿಯ ರಜೆ ಮಂಜೂರಾಗಬೇಕಾದರೆ ಅವರ ಜಾಗಕ್ಕೊಬ್ಬರು ಬರಬೇಕಿತ್ತು. ನನಗೆ ಅಂಥ ವ್ಯವಸ್ಥೆಯೊಂದು ಸಾಧ್ಯಾಗಲಿಲ್ಲವಾಗಿ ರಜೆ ಮಂಜೂರಾಗಲಿಲ್ಲ. ಕಸ ಗುಡಿಸುವವನಿಂದ ಹಿಡಿದು ನನ್ನ ಡಿಜಿಎಮ್​ವರೆಗೂ ನಂಬಲಾರದ ಬೆಳವಣಿಗೆ ಅದಾಗಿತ್ತು. ನಾನು ಸ್ವಯಂನಿವೃತ್ತಿಗೆ ಕೇಳಿಕೊಂಡದ್ದು ಡಿಸೆಂಬರಿನಲ್ಲಿ, ಮಾರ್ಚಿನಲ್ಲಿ ಏಳನೇ ಪೇ ಕಮಿಶನ್ ಲಾಗೂ ಆಗುವುದಿತ್ತು. ಮೂರು ತಿಂಗಳು ತಡೆದುಕೊಳ್ಳಿ ಮೇಡಂ ಅಂದವರು ಅನೇಕರು. ಮೂರುದಿನವೂ ಸಾಧ್ಯವಿಲ್ಲ ಅಂದಿದ್ದೆ. ಒಂದು ಹಣ, ಹೆಸರು, ಪದವಿ ಎಲ್ಲವೂ ಕೈಯಳತೆಯೊಳಗಿದ್ದ ವ್ಯವಸ್ಥೆಯಿಂದ ನಗುನಗುತ್ತಲೇ ಹೊರಬಂದವಳಿಗೆ ಇವತ್ತು ಅದಾಗಿ ಹನ್ನೆರಡು ವರ್ಷಗಳ ನಂತರವೂ ಒಂದಿಷ್ಟೂ ಆ ಬಗ್ಗೆ ಪಶ್ಚಾತ್ತಾಪವಾಗಲಿ, ಹಳಹಳಿಕೆಯಾಗಲಿ ಇಲ್ಲ. ಇಡೀ  ಪ್ರಪಂಚವೇ ನನ್ನನ್ನಾಗ ಮೂಢಳೆಂಬಂತೆ ನೋಡಿತ್ತು ಈಗಲೂ ನೋಡುತ್ತಿದೆ, ನನಗೆ ಮಾತ್ರ ಯಾವತ್ತೂ ಅದೊಂದು ಮೂರ್ಖ ಹೆಜ್ಜೆ ಅನಿಸಿಲ್ಲ.  ಕಳಕೊಂಡದ್ದರ ಬದಲಾಗಿ ನಾನು ಪಡಕೊಂಡದ್ದೇನು ಅನ್ನುವ ಅರಿವು ನನಗೊಬ್ಬಳಿಗೇ ಇರಬಹದಾದ ಕಾರಣ ಅದನ್ನು ಲೋಕಕ್ಕೆ ಒಪ್ಪಿಸುವ ತುರ್ತೂ ನನಗೆ ಯಾವತ್ತೂ ಭಾಸವಾಗಿಲ್ಲ.

ಮಗಳು, ನನ್ನ ಹುದ್ದೆ ಮತ್ತು ಅದರ ಘನತೆ ಏನಿತ್ತು ಅನ್ನುವ ಅರಿವು ಅವಳಲ್ಲಿ ಮೂಡುತ್ತಿರುವ ಈ ಹೊತ್ತಲ್ಲಿ ನಿನ್ನ ಗುರುತನ್ನು ಮೊಟಕುಗೊಳಿಸಿದೆಯಲ್ಲಮ್ಮಾ ಅಂತ ಕೇಳುವುದಿದೆ. ನಾನಾಗ ಹೇಳುತ್ತೇನೆ ‘ನನಗೆ ಅಪರಿಚಿತಳಾಗುತ್ತಾ ನಡೆಯುವ ಹಾದಿಯಲ್ಲಿ ನಾನು ಲೋಕದೆದುರು ಎಷ್ಟು ಗುರುತನ್ನು ಗಳಿಸಿ ಮೆರೆಸಿದರೇನು  ಮಗಳೇ… ಮೊದಲು ನಿನಗೆ ಪರಿಚಿತಳಾಗು, ನಿನಗೆ ಸ್ನೇಹಿತಳಾಗು, ನಿನ್ನ ನಂಬಿಕೆ, ನಿನ್ನ ಆಪ್ತತೆ ಮತ್ತು ನಿನ್ನ ಮೆಚ್ಚುಗೆ ಗಳಿಸಿಕೋ ಆಮೇಲೆ ಲೋಕ ತಂತಾನೇ ನಿನ್ನನ್ನು ಪರಿಚಯಿಸಿಕೊಳ್ಳುತ್ತದೆ. ನಿನ್ನೊಳಗಿನ ಆತ್ಮವಿಶ್ವಾಸ ನಿನ್ನ ಗಳಿಕೆಯಲ್ಲಾಗಲಿ, ನಿನ್ನ ಪದವಿ-ಪ್ರಸಿದ್ದಿಗಳಲ್ಲಾಗಲಿ ಅಲ್ಲ, ಅದಿರುವುದು ನಿನಗೆ ನೀನು, ನಿನ್ನ ಆದ್ಯತೆಗಳು ಎಷ್ಟು ಗೊತ್ತು ಮತ್ತು ಅದಕ್ಕೆ ನೀನೆಷ್ಟು ಬದ್ಧಳಾಗಿರಬಲ್ಲೆ ಅನ್ನುವುದರ ಮೇಲೆ. ಆರ್ಥಿಕ ಸ್ಬಾತಂತ್ರ್ಯ ಪಡೆವ ಅರ್ಹತೆ ಇರಬೇಕು, ಪಡೆದು ಅನುಭವವೂ ಇರಬೇಕು, ಆದರೆ ನಿನ್ನ ಆದ್ಯತೆಯೇನು ಅನ್ನುವ ಪ್ರಶ್ನೆಯೆದುರು ಬದುಕು ನಿನ್ನನ್ನು ನಿಲ್ಲಿಸಿದಾಗ ನಿರ್ಧರಿಸುವ ಸ್ಪಷ್ಟತೆ ಇರಬೇಕು. ಗೌರವ ಮತ್ತು ಪ್ರೀತಿ ಇವೆರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಜರೂರು ನನ್ನೆದುರಿತ್ತು, ನಾನು ಪ್ರೀತಿಯನ್ನು ಆಯ್ದುಕೊಂಡೆ, ನೋಡು ನಿನ್ನೆದುರು ಹೀಗಿದ್ದೇನೆ’ ಅನ್ನುತ್ತೇನೆ, ಅವಳು ತಬ್ಬಿಕೊಳ್ಳುತ್ತಾಳೆ.

ಈಗ ಬಿಡುವಿನಲ್ಲಿ ನಂತರ ನನಗೆ ಗೊತ್ತಿರುವ ಕಿಂಚಿತ್ ಸುಗಮ ಸಂಗೀತವನ್ನು, ಯೋಗಾಭ್ಯಾಸವನ್ನು ಆಸಕ್ತರಿಗೆ ಕಲಿಸುತ್ತಿದ್ದೇನೆ. ನನ್ನನ್ನು ನನಗೆ ಪರಿಚಯಿಸುತ್ತಾ ಹೋಗುವ ಕಥೆಕವನಗಳನ್ನು ಬರೆಯುತ್ತಿದ್ದೇನೆ. ಈ ಚಟುವಟಿಕೆಗಳ ಮೂಲಕ  ‘ನಿನ್ನನ್ನು ನೋಡಬೇಕನಿಸುತ್ತಿದೆ ಬರುತ್ತಿದ್ದೇನೆ’ ಎಂದು ಸೀದಾ ಮನೆಗೆ ಬಂದಿಳಿಯುವ ಒಂದಷ್ಟು ಸ್ನೇಹಗಳು ನನ್ನವಾಗಿವೆ. ನನ್ನ ಸುಖಕ್ಕೆ ಅರಳಿ ನನ್ನ ಸಂಕಟಗಳಿಗೆ ಮರುಗುವ, ನನಗಾಗಿ ಪ್ರಾರ್ಥಿಸುವ ಆ ಬಳಗದೊಳಗೆ ನಿಂತು ಹಿಂತಿರುಗಿ ನೋಡಿದಾಗ ಕಹಿಗಿಂತ ಹೆಚ್ಚು ಸಿಹಿಯ ತುತ್ತುಗಳೇ ಮೆಲುಕಿಗೆ ಸಿಕ್ಕುತ್ತವೆ ಮತ್ತು ಆಗೆಲ್ಲ ಹೇಳಬೇಕನಿಸುತ್ತದೆ, ಬದುಕೇ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.

***

ಪರಿಚಯ: ಮೂಲತಃ ಉಡುಪಿಯವರಾಗಿದ್ದು,ಮೈಸೂರಿನಲ್ಲಿ ಇಪ್ಪತ್ತೈದು ವರ್ಷಗಳಿಂದ ವಾಸ. ಬಿಎಸ್ ಎನ್ ಎಲ್ ನಲ್ಲಿ ಹನ್ನೆರಡು ವರ್ಷ ಸೇವೆ ಸಲ್ಲಿಸಿ ಸ್ವಯಂನಿವೃತ್ತಿಯ ಬಳಿಕ ಈಗ ಗೃಹಿಣಿ. ಸುಗಮಸಂಗೀತ ಮತ್ತು ಕಥೆಕವನ ರಚನೆ ಹವ್ಯಾಸಗಳು. ಮೊಗ್ಗು ಮಾತಾಡಿತು ಮತ್ತು ಮುಚ್ಚಿದೆವೆಯಡಿ ಕಣ್ಣ ಕನ್ನಡಿ ಎಂಬ ಎರಡು ಕನಸಂಕಲನಗಳು ಪ್ರಕಟವಾಗಿವೆ.

ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ

 

Published On - 6:04 pm, Thu, 4 February 21