Body Shaming ; ಸುಮ್ಮನಿರುವುದು ಹೇಗೆ? : ಹಳ್ಳಿಯಲ್ಲಿ ಹುಡುಗ ಹುಡುಗಿ ಮಾತನಾಡಿದರೆ ಈಗಲೂ ‘ಹೊಟ್ಟೆ ಬರೂದು’!

|

Updated on: Apr 10, 2021 | 5:16 PM

‘ಕೆಲ ಮುಖ್ಯೋಪಾಧ್ಯಾಯರು ‘ಶುಚಿ’ ಪ್ಯಾಡ್ ತೆಗೆದುಕೊಂಡು ಹೋಗುವುದೇ ಮೈಲಿಗೆ ಎಂಬಂತೆ ವರ್ತಿಸಿದ್ದಾರೆ; ‘ಗಂಡಸರಾದ ನಾವು ಹೆಂಡತಿಗೇ ಒಂದು ದಿನ ತಗೊಂಡು ಹೋಗಿ ಕೊಡಲಿಲ್ಲ. ಈಗ ಹೀಗೆ ಪ್ಯಾಡ್ ತಗೊಂಡು ಹೋಗೋ ಸ್ಥಿತಿ ಬಂತಲ್ರಿ’  ಇನ್ನು ಕೆಲ ವಿದ್ಯಾರ್ಥಿನಿಯರಿಗೆ ಆಗಷ್ಟೇ ಮಾಸಿಕಸ್ರಾವ ಪ್ರಾರಂಭವಾಗಿರುತ್ತದೆ, ಅದು ನಿಯಮಿತವಾಗಿರುವುದಿಲ್ಲ. ‘ಟೀಚರ್ ಹತ್ತಿರ ಪ್ರತಿ ತಿಂಗಳೂ ಬಂದು ಕೇಳ್ತೀರಲ್ಲ? ಸ್ವಲ್ಪಾನೂ ನಾಚಿಕೆ ಇಲ್ಲ. ಇಂಥಾ ಡೇಟಿಗೆ ಆಗ್ತದೆ ಅಂತಾ ಗೊತ್ತಿರಲ್ವಾ? ಅಥವಾ ನಾವು ಪ್ರತಿ ತಿಂಗಳೂ ಆಗ್ತಿದ್ದೇವೆ ಅಂತಾ ತೋರಿಸೋದಕ್ಕೆ ಹೀಗೆ ಬರ್ತೀರಾ?’ ಹೀಗೆಂದು ಸ್ವತಃ ಶಿಕ್ಷಕಿಯರೇ ಕೇಳಿದ್ದಿದೆ.’ ಶ್ರೀದೇವಿ ಕೆರೆಮನೆ

Body Shaming ; ಸುಮ್ಮನಿರುವುದು ಹೇಗೆ? : ಹಳ್ಳಿಯಲ್ಲಿ ಹುಡುಗ ಹುಡುಗಿ ಮಾತನಾಡಿದರೆ ಈಗಲೂ ‘ಹೊಟ್ಟೆ ಬರೂದು’!
ಲೇಖಕಿ ಶ್ರೀದೇವಿ ಕೆರೆಮನೆ
Follow us on

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಲೇಖಕಿ, ಕವಿ ಶ್ರೀದೇವಿ ಕೆರೆಮನೆ ಅವರು, ಮನಸ್ಸನ್ನೂ ಕೆದಕಿ ಬೆದಕಿ ಅವಮಾನಿಸಿ ಸಂತೃಪ್ತಿ ಪಡುವ ಸ್ಯಾಡಿಸಂಗಳ ನಡುವೆ ಕಮಲ ಪತ್ರದ ಮೇಲಿನ ನೀರಹನಿಯಂತೆ ಇರುವುದನ್ನು ರೂಢಿಸಿಕೊಳ್ಳಬೇಕಾದುದು ಇಂದಿನ ಹೆಣ್ಣಿನ ಹೊಸ ಸವಾಲು ಎನ್ನುತ್ತಿರುವುದು ಯಾಕಿರಬಹುದು? ಓದಿ.

ಕೆಲವು ದಿನಗಳ ಹಿಂದೆ ಪ್ರಸಿದ್ದ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡ ದಕ್ಷಿಣ ಭಾರತದ ಸಿನೇಮಾವೊಂದನ್ನು ನೋಡುತ್ತಿದ್ದೆ. ಹುಡುಗಿ ತುಸು ದಪ್ಪ. ಹೆಸರೂ ಕೂಡ ಅಪ್ಪಟ ಹಳ್ಳಿ ಹೆಸರು. ಅಯ್ಯೋ ಎಷ್ಟು ದಪ್ಪ ಇರುವ ಇವಳು ಹಿರೋಯಿನ್ನಾ? ಸ್ನೇಹಿತರೊಬ್ಬರು ಮೂಗು ಮುರಿದಿದ್ದರು. ಮುಂದುವರೆದು ‘ಅದೆಂತಹ ಹೆಸರು? ಶೀ… ಒಂದು ಚಂದದ ಹೆಸರು ಇಡಬಾರದೇ?’ ಆದರೆ ಅದನ್ನು ನೋಡುತ್ತಿದ್ದ ನಾನು ನಿಜಕ್ಕೂ ಖುಷಿ ಪಟ್ಟಿದ್ದೆ. ಹಿಂದೊಂದು ಕಾಲವಿತ್ತು. ಸರಿತಾಳಂತಹ ಕೃಷ್ಣಸುಂದರಿ, ಒಂದಿಷ್ಟು ಸ್ಥೂಲವಾದವಳೂ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆಯುತ್ತಿದ್ದ ಕಾಲವೊಂದಿತ್ತು. ಆದರೂ ಅವಳನ್ನೂ ಕಪ್ಪು ದಪ್ಪ ಎಂಬರ್ಥದಲ್ಲಿ ನಾಯಕ ಛೇಡಿಸುವ ಮಾತುಗಳಿರುತ್ತಿದ್ದವು. ಆದರೆ ಈಗ ಬಳಕುವ, ಶ್ವೇತವರ್ಣದ ಹುಡುಗಿಯರು ಮಾತ್ರ ನಾಯಕಿಯರಾಗಲು ಯೋಗ್ಯರು ಎಂಬ ಭಾವನೆ ಬೇರೂರಿದೆ.

ಇನ್ನು ಕನ್ನಡ ಸಾಹಿತ್ಯ ಲೋಕವು ಹೆಣ್ಣಿನ ಕಣ್ಣು ಮೂಗು, ಎದೆ, ಕಟಿ ನಿತಂಬಗಳನ್ನು ವರ್ಣಿಸಿದಷ್ಟೇ ಆಕೆಯ ಬಣ್ಣವನ್ನೂ ವರ್ಣಿಸಿದೆ. ಬೆಳದಿಂಗಳ ಬಣ್ಣ, ಹಾಲಿನಲ್ಲಿ ತೋಯಿಸಿಟ್ಟಂತೆ ಎಂಬೆಲ್ಲ ಮಾತುಗಳು ಭಾರತೀಯರಾದ ನಾವು ಮೂಲತಃ ಕಪ್ಪುಬಣ್ಣದವರು ಎಂಬುದನ್ನೇ ಮರೆತು ಬೆಳ್ಳಗಾಗಲು ಪ್ರಚೋದನೆ ನೀಡುವಂತಿರುತ್ತದೆ. ಜಾಹಿರಾತುಗಳಂತೂ ಬೆಳ್ಳಗಿರದೇ ಹೋದರೆ ಬದುಕೇ ವ್ಯರ್ಥ ಎಂದು ಪ್ರಚಾರ ಮಾಡುತ್ತಿರುತ್ತವೆ. ಹೆಣ್ಣಿನ ಬುದ್ಧಿವಂತಿಕೆಗಿಂತ ಆಕೆಯ ಬಣ್ಣ, ತಳುಕು ಬಳುಕುಗಳೇ ಆಕೆ ಉನ್ನತ ಹುದ್ದೆಗೆ ಹೋಗಲು ಇರುವ ರಹದಾರಿಗಳು ಎಂಬಂತೆ ಬಿಂಬಿಸುತ್ತವೆ. ಬೆಳ್ಳಗಾಗಲು ಮತ್ತು ತೆಳ್ಳಗಾಗಲು ಅದೆಷ್ಟು ಜಾಹಿರಾತುಗಳು? ಅದೆಷ್ಟು ಕಸರತ್ತುಗಳು?

ಇನ್ನು ಶಾಲೆಗಳಲ್ಲಿ ನಡೆಯುವ ಬಾಡಿ ಶೇಮಿಂಗ್ ಕಥೆಗಳು ಬೇರೆಯದ್ದೇ ತರಹ. ಸಾಂಸ್ಕೃತಿಕ‌ ಕಾರ್ಯಕ್ರಮಗಳಲ್ಲಿ, ಕ್ರೀಡೆಗಳಲ್ಲಿ ಭಾಗವಹಿಸುವ ತುಸು ಮೈಕೈ ತುಂಬಿಕೊಂಡಿರುವ ಹುಡುಗಿಯರಿಗೆ ‘ಅಷ್ಟು ದಪ್ಪ ಇದ್ದೀಯಾ. ಏನು ಕುಣಿತಿಯಾ?’ ಅನ್ನೋದು ಒಂದು ಮಾಮೂಲಿ ಬೈಗುಳ. ಒಂದಿಷ್ಟು ಮಾಸಲು ಬಣ್ಣದವಳಾದರೆ ‘ಈಗಲೇ ಹೀಗೆ, ಸ್ವಲ್ಪ ಬಿಳಿ ಇದ್ದಿದ್ದರೆ ಇವಳನ್ನು ಹಿಡಿಯೋದು ಕಷ್ಟ ಆಗ್ತಿತ್ತು’ ಎನ್ನುವುದು ಸದಾ ಕೇಳಿಬರುವ ಮಾತು. ಇವೆಲ್ಲದರ ಜೊತೆ ಹುಡುಗಿಯರ ಎದೆ, ನಿತಂಬಗಳೂ ಆಗಾಗ ಟೀಕೆಗೆ ಒಳಗಾಗುತ್ತಿರುತ್ತವೆ. ಎದೆಯ ಗಾತ್ರ ಹೆಚ್ಚಿದ್ದರಂತೂ ‘ಈಗಲೇ ಹೇಗೆ ಇಷ್ಟು ದೊಡ್ಡ ಆಗಿದೆ?’ ಎನ್ನುವ ವ್ಯಂಗ್ಯಭರಿತ ನಗುವಿನ ಕೂರಂಬು ಚುಚ್ಚುತ್ತದೆ. ಇವೆಲ್ಲ ಬಿಡಿ, ಧ್ವನಿ ತುಸು ದೊಡ್ಡದಿದ್ದರೂ ಆ ಹುಡುಗಿಗೆ ಅಣಕ ತಪ್ಪುವುದಿಲ್ಲ.

ಮೊನ್ನೆಯಷ್ಟೇ ನನ್ನ ಹುಟ್ಟಿದ ದಿನಕ್ಕೆ ಶುಭ ಹಾರೈಸಿದ ಸಹೋದ್ಯೋಗಿಯೊಬ್ಬರು ‘ಮತ್ತೆ ದಪ್ಪ ಆಗಬೇಡಿ’ ಎಂದರು. ಮತ್ತೊಬ್ಬರು ಬೆನ್ನ ಹಿಂದಿನ ಕೊಬ್ಬಿನ ಕುರಿತು ಹೇಳಿದರು. ಮತ್ತೊಬ್ಬರು ‘ತೂಕ ಮಾಡುವ ಯಂತ್ರ ಮುರಿದು ಹೋದೀತು’ ಎಂದು ಯಾವಾಗಲೂ ತಮಾಷೆ ಮಾಡುತ್ತಾರೆ. ಅಂದರೆ ನಮ್ಮ ದೇಹ ಕೇವಲ ನಮ್ಮ ಸ್ವತ್ತಲ್ಲ ಎಂಬುದನ್ನು ಸೂಚ್ಯವಾಗಿ ತೋರಿಸುತ್ತಲೇ ಇರುವ ಮಾತುಗಳಿವು. ‘ಗಾಳಿಪಟದ ಹಾಗಿದ್ದಿ, ಮದುವೆ ಆಗುವಾಗ ಒಂದಿಷ್ಟಾದರೂ ದಪ್ಪ ಆಗು.’ ಮದುವೆ ನಿಶ್ಚಯವಾದಾಗ ಹುಡುಗ ಹೇಳಿದ ಮೊದಲ ಮಾತಿದು. ಆದರೆ ಮೊದಲ ಮಗು ಜನಿಸಿದ ನಂತರ ಯಾರೂ ಊಹಿಸಲಾಗದಷ್ಟು ದಪ್ಪ ಆಗಿದ್ದ ನನಗೆ ನನ್ನ ಇಬ್ಬರು ಉಪನ್ಯಾಸಕರು ಹೇಳಿದ ಮಾತು ಯಾವಾಗಲೂ ಕಿವಿಯಲ್ಲಿ ಗುಯ್ಗುಡುತ್ತದೆ. ‘ನೆನೆಸಿಟ್ಟ ಕಡ್ಲೆ ಹಂಗೆ ಊದ್ಕಂಡಿದ್ದೀಯಲ್ಲೇ’ ಎಂದು ಒಬ್ಬರೆಂದರೆ ಇನ್ನೊಬ್ಬರು’ ಕಟ್ಟಿ ಹಾಕಿ ಸಾಕಿದ ಎಮ್ಮೆ ಹಂಗೆ ಆಗೋಗಿದ್ದೆ. ಇಳ್ಸು ಒಂದಿಷ್ಟು’ ಎಂದಿದ್ದರು. ತಮಾಷೆಯೆಂದರೆ ಅವರಿಬ್ಬರೂ ಕನ್ನಡ ಸಾಹಿತ್ಯ ಲೋಕದ ನಾಮಾಂಕಿತ ಹೆಸರುಗಳು. ‘ಆಗ ತ್ರಿಬಲ್ ಎಕ್ಸ್ ಆಗಿದ್ದೆ. ಈಗ ಡಬಲ್ ಎಕ್ಸ್ ಆಗಿರುವೆ’ ಒಂದಿಷ್ಟು ದಿನಗಳ ನಂತರ ಸಿಕ್ಕ ವಿಚಾರವಂತ ಮಿತ್ರರೊಬ್ಬರು ಉದ್ಘರಿಸಿದ್ದರು. ಸಮಾಧಾನವೆಂದರೆ ಮನೆಯಲ್ಲಿ ಈ ಕುರಿತು ಯಾವತ್ತೂ ವ್ಯಂಗ್ಯದ ಮಾತು ಬರದಿರುವುದು.

ಮೊದಲೆಲ್ಲ ಬರೀ ಕಪ್ಪು ಬಣ್ಣಕ್ಕಷ್ಟೇ ಮಾತು ಕೇಳಬೇಕಿದ್ದ ನಾನು ಈಗ ನನ್ನ ದೇಹಾಕೃತಿಯ ಬಗ್ಗೆಯೂ ಅನ್ನಿಸಿಕೊಳ್ಳಬೇಕಲ್ಲ ಎಂಬ ಬೇಸರ, ದುಃಖ ಕೋಪ ಎಲ್ಲವೂ ಒಟ್ಟೊಟ್ಟಿಗೆ ಆಗಿ ಮನಸ್ಸು ಹದ ತಪ್ಪುವಂತಾಗಿದ್ದು ಎಷ್ಟು ಸಲವೋ. ಆದರೆ ಬೇರೆಯವರ ಮುಂದೆ ಏನೂ ಹೇಳಲಾಗದ ಕಾರಣ ಸುಮ್ಮನೆ ಪೇಲವ ನಗೆ ನಕ್ಕು ಬಿಡುತ್ತಿದ್ದುದೇ ಹೆಚ್ಚು. ಆದರೆ ಮನೆಯಲ್ಲಿ ಮಕ್ಕಳ ಬಾಯಲ್ಲಿ ಯಾರಾದರೂ ದಪ್ಪ, ಕಪ್ಪು ಎಂದು ಬಂದು ಬಿಟ್ಟರೆ ಹೊರಗಿನವರ ಕೋಪವೂ ಅವರ ಮೇಲೆರಗಿ ನಂತರ ಮಕ್ಕಳೂ ಹಾಗೆ ಮಾತಾಡುವುದು ತಪ್ಪೆಂದು ಅರ್ಥ ಮಾಡಿಕೊಳ್ಳುವಂತಾಗಿದೆ.

ಚಿಕ್ಕವಳಿರುವಾಗ ನನ್ನನ್ನು ಕಪ್ಪು ಎಂದಾಗ ಅನುಭವಿಸುತ್ತಿದ್ದ ಕೀಳರಿಮೆ ಈಗಿಲ್ಲ. ಆದರೆ ಅದರಿಂದಾದ ಒಂದು ಲಾಭವೆಂದರೆ ಆಗಲೇ ಬೇರೆಯವರ ದೇಹದ ಬಗ್ಗೆ ಮಾತನಾಡುವ ಅಧಿಕಾರ ನನಗಿಲ್ಲ ಎಂಬುದು ಆಗಲೇ ಅರ್ಥವಾಗಿದ್ದು.

ಇತ್ತೀಚೆಗೆ ಗೆಳೆಯನೊಬ್ಬ ಊಟ ತಿಂಡಿ ಬಿಟ್ಟು ಸತತ ಆರೆಂಟು ತಿಂಗಳ ಕಠಿಣ ವ್ಯಾಯಾಮ ಪರಿಶ್ರಮದಿಂದ ಸಾಕಷ್ಟು ತೂಕ ಇಳಿಸಿಕೊಂಡಿದ್ದನ್ನು ನೋಡಿದ್ದೇನೆ. ಊಟ ತಿಂಡಿ ಬಿಟ್ಟು, ಬೆಳಿಗ್ಗೆ ಸಂಜೆ ವಾಕ್ ಮುಂತಾದ ಪ್ರಯೋಗ ಮಾಡಿಯೂ ತೂಕ ಇಳಿಯದಾದಾಗ ಇದು ಆಗದ ವ್ಯರ್ಥ ಪ್ರಯತ್ನ ಎಂಬುದು ಮನವರಿಕೆಯಾಗುವುದರ ಜೊತೆಜೊತೆಗೆ ಬೇರೆಯವರ ದೇಹದ ಬಗ್ಗೆ ಆಡಿಕೊಳ್ಳುವವರ ವರ್ತನೆ ಬಾಲಿಶ ಹಾಗೂ ನಾಲಿಗೆ ಚಪಲದ್ದು ಎಂಬುದೂ ಅರ್ಥವಾಗಿದೆ. ಎಷ್ಟು ಪುಸ್ತಕ ಓದಿದೆವು, ಪ್ರಸ್ತುತ ವಿದ್ಯಮಾನಗಳು ಎಷ್ಟು ಗೊತ್ತು? ಹೊಸ ತಂತ್ರಜ್ಞಾನಕ್ಕೆ, ಪ್ರಪಂಚದ ಆಗುಹೋಗುಗಳಿಗೆ ಎಷ್ಟು ಅಪ್ಡೇಟ್ ಆಗಿದ್ದೇವೆ ಎಂಬುದರ ಕುರಿತು ಕಿಂಚಿತ್ತೂ ಯೋಚಿಸದವರು ಇತರರ ಬಣ್ಣ ಗಾತ್ರದ ಬಗ್ಗೆ ಮಾತನಾಡುವಾಗಲೆಲ್ಲ ಮನಸ್ಸು ಅವರ ಸಣ್ಣತನಕ್ಕೆ ಒಳಗೊಳಗೇ ನಗುತ್ತಿರುತ್ತದೆ. ಹೊರಗೆ ಆ ಕುರಿತು ದೊಡ್ಡ ನಿರ್ಲಕ್ಷವಿರುತ್ತದೆ.

ಸೌಜನ್ಯ : ಅಂತರ್ಜಾಲ

ಇಷ್ಟೆಲ್ಲದರ ಜೊತೆ ನಾವು ಇನ್ನೊಂದು ಆಯಾಮವನ್ನು ಮರೆತು ಬಿಡುತ್ತಿದ್ದೇವೆ. ಹೈಸ್ಕೂಲ್ ಮೆಟ್ಟಿಲು ಹತ್ತಿದರೆ ಸಾಕು ಹುಡುಗರು ಹುಡುಗಿಯರು ಮಾತನಾಡಬಾರದು ಎನ್ನುವ ಅಲಿಖಿತ ನಿಯಮವೊಂದನ್ನು ಇಂದಿಗೂ ಹಳ್ಳಿಗಳಲ್ಲಿ ಜಾರಿಯಲ್ಲಿಡಲಾಗಿದೆ. ಹಾಗೇನಾದರೂ ಮಾತನಾಡಿದರೆ ‘ಹೊಟ್ಟೆ ಬರೂದು’ ಎನ್ನುವ ಅಸಹ್ಯಕರ ಮಾತು ಬೈಗುಳರೂಪದಲ್ಲಿ ಮೇಲೆರಗುತ್ತದೆ. ತುಸು ಹೆಚ್ಚು ಮಾತನಾಡುವ ಹುಡುಗಿಯರನ್ನು ‘ಇವಳು ಗ್ಯಾರಂಟಿ ಓಡಿ ಹೋಗ್ತಾಳೆ’ ಎಂದು ಹೀಯಾಳಿಸುವುದು ಹೈಸ್ಕೂಲು ದಿನಗಳ ಮಾಮೂಲಿ ನಡವಳಿಕೆ. ಮನೆಯವರ ಹೆಸರಿನಲ್ಲಿ, ಮನೆಯ ಬಡತನ, ಉದ್ಯೋಗ, ಹಿರಿಯರ ನಡೆವಳಿಕೆಗಳನ್ನು ಆಧರಿಸಿದ ಬೈಗುಳಗಳು, ಹೀಯಾಳಿಕೆಗಳು ಮಕ್ಕಳನ್ನು ಮಾನಸಿಕವಾಗಿ ಕೈದಿಗಳನ್ನಾಗಿಡುವ ಹುನ್ನಾರಗಳಂತೆ ಗೋಚರವಾಗುತ್ತದೆ.

ಶಾಲೆ ಕ್ರಮವಾಗಿ ನಡೆಯುತ್ತಿದ್ದಾಗ ಹುಡುಗಿಯರಿಗೆ ಸರಕಾರ ‘ಶುಚಿ’ (ಪ್ಯಾಡ್) ವಿತರಿಸುತ್ತಿತ್ತು. ಕೆಲವು ಶಾಲೆಗಳ ಮುಖ್ಯೋಪಾಧ್ಯಾಯರು ಅದನ್ನು ತೆಗೆದುಕೊಂಡು ಹೋಗುವುದೇ ಮೈಲಿಗೆ ಎಂಬಂತೆ ವರ್ತಿಸುತ್ತಿದ್ದುದನ್ನು ನೋಡಿದ್ದೇನೆ. ಅದರಲ್ಲೂ, ‘ಗಂಡಸರಾದ ನಾವು ಹೆಂಡತಿಗೇ ಒಂದು ದಿನ ತಗೊಂಡು ಹೋಗಿ ಕೊಡಲಿಲ್ಲ. ಈಗ ಹೀಗೆ ಪ್ಯಾಡ್ ತಗೊಂಡು ಹೋಗೋ ಸ್ಥಿತಿ ಬಂತಲ್ರಿ’ ಎಂದು ಅಲವತ್ತುಕೊಳ್ಳುವುದನ್ನು ಕಂಡಾಗಲೆಲ್ಲ ಕಸಿವಿಸಿ ಎನ್ನಿಸುತ್ತಿತ್ತು. ಆದರೆ ಅದಕ್ಕಿಂತ ಕಸಿವಿಸಿ ಎನಿಸಿದ್ದು ಶಿಕ್ಷಕಿಯರ ಪ್ರತಿಕ್ರಿಯೆಗಳು. ವಿದ್ಯಾರ್ಥಿನಿಯರಿಗೆಲ್ಲ ವಿತರಿಸಿದ ನಂತರವೂ ಒಂದಿಷ್ಟು ಪ್ಯಾಕೆಟ್ಗಳನ್ನು ಇಟ್ಟುಕೊಳ್ಳುವುದು ರೂಢಿ.‌  ತಕ್ಷಣವೇ ಅತ್ಯವಶ್ಯ ಎನ್ನಿಸಿದರೆ ನಮ್ಮ ಬಳಿ ಬನ್ನಿ ಎಂದೂ ಹೇಳಿರುತ್ತೇವೆ. ಕೆಲವು ವಿದ್ಯಾರ್ಥಿನಿಯರಿಗೆ ಆಗಷ್ಟೇ ಮಾಸಿಕಸ್ರಾವ ಪ್ರಾರಂಭವಾಗಿರುತ್ತದೆ. ಅದು ನಿಯಮಿತವಾಗಿರುವುದಿಲ್ಲ. ಕೆಲವೊಮ್ಮೆ ಎರಡು ಮೂರು ತಿಂಗಳು ಆಗುವುದೇ ಇಲ್ಲ. ಮತ್ತೆ ಕೆಲವೊಮ್ಮೆ ಹದಿನೈದೇ ದಿನಕ್ಕೆ ಸ್ರಾವವಾಗಿಬಿಡುವುದೂ ಇದೆ. ಆದರೆ ಆಗ ಕೇಳಲು ಬಂದರೆ ಹೇಳುವ ಮಾತುಗಳೆಷ್ಟು ಮಾನಸಿಕ ಕಿರಿಕಿರಿಯನ್ನುಂಟು ಮಾಡುತ್ತದೆ ಎಂಬುದನ್ನು ಗಮನಿಸುವುದಿಲ್ಲ. ‘ಟೀಚರ್ ಹತ್ತಿರ ಪ್ರತಿ ತಿಂಗಳೂ ಬಂದು ಕೇಳ್ತೀರಲ್ಲ? ಸ್ವಲ್ಪಾನೂ ನಾಚಿಕೆ ಇಲ್ಲ. ಇಂಥಾ ಡೇಟಿಗೆ ಆಗ್ತದೆ ಅಂತಾ ಗೊತ್ತಿರಲ್ವಾ? ಅಥವಾ ನಾವು ಪ್ರತಿ ತಿಂಗಳೂ ಆಗ್ತಿದ್ದೇವೆ ಅಂತಾ ತೋರಿಸೋದಕ್ಕೆ ಹೀಗೆ ಬರ್ತೀರಾ?’ ಎಂದು ಚುಚ್ಚು ಮಾತಾಡುವಾಗ ನಾವೂ ಇಂತಹ ಬೇಗನೇ ಸ್ರಾವಕ್ಕೆ ಒಳಗಾಗುವ ದಿನಗಳನ್ನು ಎದುರಿಸಿದ್ದೆವು ಎಂಬುದನ್ನೇ ಮರೆತುಬಿಡುತ್ತೇವೆ.

ಹೆಣ್ಣು ಕೇವಲ ತನ್ನ ದೇಹ, ಬಣ್ಣದಿಂದಷ್ಟೇ ಅವಮಾನಿತಳಾಗುವುದಿಲ್ಲ. ಅವಳ ಮನೆತನ, ಹಿರಿಯರ ನಡವಳಿಕೆಗಳಿಂದಲೂ ಸಮಾಜದಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಮನಸ್ಸನ್ನೂ ಕೆದಕಿ ಬೆದಕಿ ಅವಮಾನಿಸಿ ಸಂತೃಪ್ತಿ ಪಡುವ ಸ್ಯಾಡಿಸಂಗಳ ನಡುವೆ ಕಮಲ ಪತ್ರದ ಮೇಲಿನ ನೀರಹನಿಯಂತೆ ಇರುವುದನ್ನು ರೂಢಿಸಿಕೊಳ್ಳಬೇಕಾದುದು ಇಂದಿನ ಹೆಣ್ಣಿನ ಹೊಸ ಸವಾಲು.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’

Summaniruvudu Hege series on body shaming controversial statement by Dindigul Leoni and response from writer Shreedevi Keremane

Published On - 5:15 pm, Sat, 10 April 21