Travel : ಕಣಿವೆಯಲ್ಲಿ ಸಿಕ್ಕ ಛಲಗಾತಿ ಸುಂದರಿಯರು

Himachal Pradesh : ಜೊತೆಗೆ ಬಂದಿದ್ದ ನನ್ನ ಗೆಳತಿಯೊಬ್ಬಳು ‘ನನ್ನ ಸೊಸೆ ಬಸುರಿ. ಇನ್ನೆರಡು ತಿಂಗಳಿನಲ್ಲಿ ಮೊಮ್ಮಗು ಬರುತ್ತೆ ಅದಕ್ಕೆ ಚಿಕ್ಕದಾದ ಕಾಲುಚೀಲ ಸ್ವೆಟರ್ ಮಾಡಿಕೊಡಲು ಸಾಧ್ಯವೇ’ ಎಂದು ಕೇಳಿಕೊಂಡಳು. ಅದಕ್ಕೆ ಅವರು ಖುಷಿಯಿಂದ ‘ಮೇಡಂಜೀ ನೀವು ನಾಳೆಯೂ ಕೂಡ ಇರುವುದಾದರೆ ಈಗ ಆರ್ಡರ್ ಕೊಡಿ ನಾಳೆ ಇಷ್ಟು ಹೊತ್ತಿಗೆ ತಂದು ಕೊಡುತ್ತೇವೆ’ ಎಂದರು.

Travel : ಕಣಿವೆಯಲ್ಲಿ ಸಿಕ್ಕ ಛಲಗಾತಿ ಸುಂದರಿಯರು
ಪಹಾಡಿ ಮಹಿಳೆಯರು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jul 08, 2021 | 2:21 PM

ಈಗಲೂ ಆ ಬೆಟ್ಟದ ಸುಂದರಿಯರು ಮನಸ್ಸಿನಿಂದ ಮಾಸಿಲ್ಲ. ಬೆಟ್ಟದ ಕಷ್ಟಸಹಿಷ್ಣುಜೀವಿಗಳು ಕಣ್ಣಿಗೆ ಕಟ್ಟಿದಂತಿದ್ದಾರೆ. ಲಾಕ್​ಡೌನಿನಲ್ಲಿ ಅವರ ಫೋಟೋಗಳನ್ನು ನೋಡುತ್ತ ನಾವು ಹಿಮಾಚಲ ಪ್ರದೇಶದ ಕುಲು ಮನಾಲಿಗೆ ನಾಲ್ಕು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಿಬಂದಿರುವುದು ನೆನಪಾಗುತ್ತಿದೆ. ಶಿಮ್ಲಾ, ಚಂಡಿಗಡ, ಅಮೃತಸರ್, ವಾಘಾ ಬಾರ್ಡರ್ ಎಲ್ಲಾ ಸುತ್ತಾಡಿ, ಮನಾಲಿಯ ಬಳಿ ಇರುವ ಮಣಿಕರಣ್ ಎಂಬ ಹಿಂದೂ ಮತ್ತು ಸಿಕ್ಖರ ಪವಿತ್ರಸ್ಥಳವನ್ನು ನೋಡಿಕೊಂಡು ಲಾಡ್ಜ್ ಒಂದರಲ್ಲಿ ಉಳಿದಿದ್ದೆವು. ಆ ಲಾಡ್ಜ್ ಎತ್ತರದ ಕಣಿವೆ ಪ್ರದೇಶದಲ್ಲಿತ್ತು. ಅದನ್ನು ಸುತ್ತುವರಿದು ಸುಂದರ ಬೆಟ್ಟಗುಡ್ಡಗಳು, ಕಣಿವೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಸುತ್ತಲೂ ರಭಸದಿಂದ ಹರಿಯುವ ಬಿಯಾಸ್ ನದಿಯ ಶಬ್ದ ಮತ್ತು ಹಾವಿನಂತೆ ಹರಿಯುವ ಅದರ ಸುಂದರ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ಅಂತಹ ಸ್ವರ್ಗಕ್ಕೆ ಮನಸ್ಸು ಹಂಬಲಿಸುತ್ತಿದೆ.  ಸುಮಾರಾಣಿ ಕೆ.ಎಚ್. ಶಿವಮೊಗ್ಗ

ನಾವು ಹೋಗಿದ್ದು ಮೇ ತಿಂಗಳಿನಲ್ಲಿ ಆಗಲೇ ಅಲ್ಲಿ ಸಂಜೆ ಆರು ಗಂಟೆಯ ನಂತರ ಥರಗುಟ್ಟುವಂತಹ ಚಳಿ. ಹಗಲು ಹೊತ್ತಿನಲ್ಲಿಯೂ ಬಿಸಿಲು ಮೈಗೆ ತಾಕುತ್ತಿರಲಿಲ್ಲ. ಬೆಳಗಿನ ಜಾವ ಮಂಜಿನ ಮಳೆ. ನಾವು ಉಳಿದಿದ್ದ ಲಾಡ್ಜ್​ನ ಸುತ್ತಲೂ ಇರುವ ಬೆಟ್ಟಗುಡ್ಡಗಳ ಮೇಲೆಲ್ಲ ಜನ ಮನೆ ಮಾಡಿಕೊಂಡಿದ್ದರು. ನಮ್ಮ ಲಾಡ್ಜ್​ನಿಂದ ಅವರ ಮನೆಗಳು ಬೆಂಕಿಪೊಟ್ಟಣಗಳಂತೆ ಕಂಡುಬರುತ್ತಿದ್ದವು. ಅಲ್ಲಿನ ಜನರು ಆ ಬೆಟ್ಟಗಳ ಮೇಲಿಂದ ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಇಳಿಯುವುದು ಹತ್ತುವುದು ಮಾಡುತ್ತಿದ್ದರು. ಕೆಲವು ಕಡೆಯಂತೂ ಎಷ್ಟು ದುರ್ಗಮ ಪ್ರದೇಶದಲ್ಲಿ ಅವರ ವಾಸ ಎಂದರೆ. ಕಬ್ಬಿಣದ ಸರಪಳಿಗಳಿಂದ ಮಾಡಿದ ರೋಪ್ ವೇಗಳಿಗೆ ತೊಟ್ಟಿಲನ್ನು ಕಟ್ಟಿರುತ್ತಿದ್ದರು. ನದಿಯ ಮೇಲಿಂದ ಎತ್ತರ ಬೆಟ್ಟದ ವರೆಗೂ ಅದರಲ್ಲಿ ಕುಳಿತು ಹೋಗುವುದು ಇಳಿಯುವುದು ಮಾಡುತ್ತಿದ್ದರು. ಶಾಲಾ ಮಕ್ಕಳು ಸಹ ಭಯವಿಲ್ಲದೆ ಅದರಲ್ಲಿ ಕುಳಿತು ಓಡಾಡುವುದನ್ನು ನೋಡಿ ನಾವೆಷ್ಟು ಪುಣ್ಯವಂತರು ಎಂದುಕೊಳ್ಳುತ್ತಿದ್ದೆವು.

ಹೀಗೆ ಸಂಜೆ ಲಾಡ್ಜ್​ನಿಂದ ಹೊರಗೆ ಬಂದು ಹತ್ತಿರದಲ್ಲೇ ಇರುವ ಮಾರುಕಟ್ಟೆಗೆ ಹೊರಟೆವು. ಬೆಟ್ಟದ ಮೇಲಿಂದ ಬೆನ್ನಿನ ಮೇಲೆ ಬೆತ್ತದ ಬುಟ್ಟಿಗಳನ್ನು ಹೊತ್ತುಕೊಂಡು ಮಹಿಳೆಯರಿಬ್ಬರು ಇಳಿದು ಬರುತ್ತಿದ್ದರು. ಅದರಲ್ಲಂತೂ ಒಬ್ಬ ಮಹಿಳೆ ಬುಟ್ಟಿಯ ಜೊತೆ ಒಂದು ಹಸುಗೂಸನ್ನು ಕೂಡ ಜೋಳಿಗೆಯಲ್ಲಿ ಕಟ್ಟಿಕೊಂಡು ಇಳಿಯುತ್ತಿದ್ದಳು. ಜೊತೆಗೆ ಮೂರ್ನಾಲ್ಕು ವರ್ಷದ ಮಗುವೊಂದು ಅವಳ ಜೊತೆ ನಡೆದು ಬರುತ್ತಿತ್ತು. ಇನ್ನೊಬ್ಬರು ಮಧ್ಯವಯಸ್ಸಿನ ಮಹಿಳೆ. ಇಬ್ಬರೂ ತಾವು ಉಲನ್ನಿನಲ್ಲಿ ಹೆಣೆದ ಸ್ವೆಟರ್, ಕಾಲುಚೀಲ, ಟೋಪಿ ಇತ್ಯಾದಿಗಳನ್ನು ದಾರಿಬದಿ ಮಾರಲು ಕುಳಿತಿದ್ದರು. ಉಲನ್ನಿನ ಉಂಡೆಗಳನ್ನಿಟ್ಟುಕೊಂಡು ನಿಟ್ಟಿಂಗ್​ನಲ್ಲಿ ತೊಡಗಿಕೊಂಡಿದ್ದರು.  ನಿಜಕ್ಕೂ ಅವರು ಹೆಣೆದ ಉಣ್ಣೆಬಟ್ಟೆಗಳು ತುಂಬಾ ಆಕರ್ಷಕವಾಗಿದ್ದವು. ಆ ಮಹಿಳೆಯರು ಕೂಡ ಅಷ್ಟೇ ಈಶಾನ್ಯ ರಾಜ್ಯದ ಸುಂದರಿಯರೆಂದೇ ಕೇಳಬೇಕು. ಸಹಜವಾದ ಕೆಂಪುಬಣ್ಣ, ನೇರವಾದ ರೇಶ್ಮೆಯಂತಹ ಸುಂದರ ಕೂದಲು. ಕಷ್ಟಜೀವಿಗಳೆಂದು ಸಹಜವಾಗಿ ಹೇಳಬಹುದಿತ್ತು. 

ನಾವು ಅವರು ಮಾರಾಟಕ್ಕಿಟ್ಟ ವಸ್ತುಗಳನ್ನು ಕೊಂಡುಕೊಂಡೆವು. ಮಕ್ಕಳಿಗಾಗಿ ಹೆಣೆದ ‘ಟೋಪಿ ಸ್ವೆಟರ್​ಗಳಂತೂ  ಒಂದಕ್ಕಿಂತ ಒಂದು ಚೆಂದವಾಗಿದ್ದವು. ಜೊತೆಗೆ ಬಂದಿದ್ದ ನನ್ನ ಗೆಳತಿಯೊಬ್ಬಳು ‘ನನ್ನ ಸೊಸೆ ಬಸುರಿ. ಇನ್ನೆರಡು ತಿಂಗಳಿನಲ್ಲಿ ಮೊಮ್ಮಗು ಬರುತ್ತೆ ಅದಕ್ಕೆ ಚಿಕ್ಕದಾದ ಕಾಲುಚೀಲ ಸ್ವೆಟರ್ ಮಾಡಿಕೊಡಲು ಸಾಧ್ಯವೇ’ ಎಂದು ಕೇಳಿಕೊಂಡಳು. ಅದಕ್ಕೆ ಅವರು ಖುಷಿಯಿಂದ ‘ಮೇಡಂಜೀ ನೀವು ನಾಳೆಯೂ ಕೂಡ ಇರುವುದಾದರೆ ಈಗ ಆರ್ಡರ್ ಕೊಡಿ ನಾಳೆ ಇಷ್ಟು ಹೊತ್ತಿಗೆ ತಂದು ಕೊಡುತ್ತೇವೆ’ ಎಂದರು.

‘ನಿಮ್ಮ ಮನೆ ಎಲ್ಲಿ ಹೇಗೆ ಬರುತ್ತೀರಿ? ನಿಮ್ಮ ಜೀವನ ಹೇಗೆ ಎಂದೆಲ್ಲ ವಿಚಾರಿಸಿದೆವು. ಬೆಟ್ಟದ ಮೇಲೆ ಇಲ್ಲಿಂದ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಮನೆಗಳಿವೆ. ಮನೆಯ ಸುತ್ತಲೂ ಸ್ವಲ್ಪ ಸ್ವಲ್ಪ ಹೊಲಗಳಿವೆ ಅಲ್ಲಿ ಆಲೂಗಡ್ಡೆ, ಸಾಸಿವೆ, ಹೂಕೋಸು, ಗೋಧಿ, ಬಾರ್ಲಿ, ಹಲವಾರು ಗೆಡ್ಡೆಗೆಣೆಸುಗಳನ್ನು ಬೆಳೆಯುತ್ತೇವೆ. ಮಳೆಗಾಲದಲ್ಲಿ ಇಲ್ಲಿ ಭೂಕುಸಿತಗಳು ಸರ್ವೇಸಾಮಾನ್ಯ. ಚಳಿಗಾಲದಲ್ಲಿ ಇಲ್ಲಿ ತುಂಬಾ ಹಿಮಪಾತವಾಗುತ್ತಿರುತ್ತದೆ. ಆಗ ಮನೆಯಿಂದ ಹೊರಬರುವುದೇ ಕಷ್ಟ. ಈಗ ಬೇಸಿಗೆಯಲ್ಲಿ ನಾಲ್ಕು ತಿಂಗಳುಗಳ ತನಕ ಪ್ರವಾಸಿಗರು ಬರುತ್ತಾರೆ. ಹೀಗೆ ಇಲ್ಲಿ ಸುತ್ತಲೂ ಇರುವ ಲಾಡ್ಜ್​ಗಳಲ್ಲಿ ಉಳಿಯುತ್ತಾರೆ. ಆಗ ಈತರಹದ ವಸ್ತುಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರು ಮಾಡಿ ಬೆಟ್ಟದ ಮೇಲಿರುವ ಮನೆಗಳಿಂದ ಹೊತ್ತು ತಂದು ಮಾರುತ್ತೇವೆ. ಇದರಿಂದಲೇ ನಮ್ಮ ಜೀವನ ನಡೆಯುವುದು ಎಂದರು. 

ನನಗೆ ಯಾಕೋ ಕರಳು ಕಿವುಚಿದಂತಾಯಿತು. ನಿಜಕ್ಕೂ ಆ ಸುಂದರಿಯರ ಬದುಕು ಸುಂದರವಾಗಿರಲಿಲ್ಲ. ಮೂರ್ನಾಲ್ಕು ಕಿಲೋಮೀಟರ್ ದೂರದಿಂದ ಬೆಟ್ಟದ ಇಳಿಜಾರುಗಳಲ್ಲಿ ಬುಟ್ಟಿಗಳನ್ನು ಜೊತೆಗೆ ಮಕ್ಕಳನ್ನೂ ಹೊತ್ತು ತಂದು ಈ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಮಾಡುವ ಗಟ್ಟಿಗಿತ್ತಿಯರು ಅವರು.ಅವರು ಕೇಳಿದ್ದಕ್ಕಿಂತ ಹೆಚ್ಚಿನ ದುಡ್ಡನ್ನೇ ಕೊಟ್ಟು ಅವರಿವರಿಗೆ ಗಿಫ್ಟ್ ಕೊಡಬಹುದೆಂದು ಹೆಚ್ಚಿನ ವಸ್ತುಗಳನ್ನೇ ಕೊಂಡುಕೊಂಡು ಅವರ ಜೀವನ ಸುಖಮಯವಾಗಿರಲಿ ಎಂದು ಮನತುಂಬಿ ಹಾರೈಸಿದೆ.

ಫೋಟೋ ತೆಗೆದುಕೊಳ್ಳಲು ಹೋದಾಗ ಆ ಮಕ್ಕಳತಾಯಿ ನಾಚಿ ಆ ಕಡೆ ತಿರುಗಿಕೊಂಡಳು. ಮಧ್ಯ ವಯಸ್ಸಿನ ಆ ತಾಯಿಯ ಪಟವನ್ನೂ ನೆನಪಿಗಾಗಿ ತೆಗೆದುಕೊಂಡೆ. ಲಾಕ್‌ಡೌನ್ನ ಈ ಸಮಯದಲ್ಲಿ, ಈ ದಿನ ಹಳೆಯ ಚಿತ್ರಗಳನ್ನು ನೋಡುತ್ತಾ ಕುಳಿತಾಗ ಅವರಿಬ್ಬರ ಚಿತ್ರಗಳು ಈ ಬರಹ ಬರೆಯಲು ಸ್ಪೂರ್ತಿಯಾದವು.

ಇದನ್ನೂ ಓದಿ : Travel : ಮತ್ತೊಂದು ಸೆಪ್ಟೆಂಬರಿಗಾಗಿ ಹಾರಲು ಕಾಯುತ್ತಾ