Kamakhya Temple : ಕಾಮಾಖ್ಯಾ ದರ್ಶನದಿಂದ ಹೊಸ ಉಲ್ಲಾಸ

| Updated By: ಶ್ರೀದೇವಿ ಕಳಸದ

Updated on: Feb 19, 2022 | 5:47 PM

Trip To Assam : ‘ಕೊರೊನಾ ಕಾಲಘಟ್ಟದ ನಂತರ ನಮ್ಮ ಪ್ರವಾಸ ಕಾರ್ಯಕ್ರಮಗಳನ್ನು ನಿಲ್ಲಿಸಿ ಮಂಕಾಗಿ ಹೋಗಿದ್ದೆವು. ಆದದ್ದಾಗಲಿ ಎಂದು ಮೂರನೇ ಅಲೆ ಕಾಲಲ್ಲಿರುವಾಗಲೇ ದಿಢೀರ್ ನಿರ್ಧಾರ ಮಾಡಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್‌ನೊಂದಿಗೆ ಎಂಟೂ ಗೆಳತಿಯರು  ಡಿಸೆಂಬರ್ ಚಳಿಯಲ್ಲಿ ಹಾರಲು ತಯಾರಾಗಿಯೇ ಬಿಟ್ಟೆವು.’ ಶಾಂತಾ ಜಯಾನಂದ

Kamakhya Temple : ಕಾಮಾಖ್ಯಾ ದರ್ಶನದಿಂದ ಹೊಸ ಉಲ್ಲಾಸ
ಲೇಖಕಿ ಶಾಂತಾ ಜಯಾನಂದ
Follow us on

ಕಾಮಾಖ್ಯಾ ಶಕ್ತಿಪೀಠ | Kamakhya Shaktipita :  ನಾವು ಗೆಳತಿಯರೆಲ್ಲಾ ಹೀಗೆ ಮಾತನಾಡುತ್ತಾ ಶಕ್ತಿಪೀಠಗಳು ಎಲ್ಲಿವೆ, ಹೇಗೆ ಹೋಗುವುದು ಎಂದೆಲ್ಲ ಚರ್ಚಿಸುತ್ತಿದ್ದೆವು. ಹಾಗೇ ಕಾಮಾಖ್ಯಾ ಶಕ್ತಿ ಪೀಠದ ಬಗ್ಗೆ ಮಾತು ಬಂದು, ಅಲ್ಲಿಗೆ ಹೋಗಲೇಬೇಕು ಎಂದು ನಿರ್ಧಾರ ಮಾಡಿದೆವು. ಕೊರೊನಾ ಕಾಲಘಟ್ಟದ ನಂತರ ನಮ್ಮ ಪ್ರವಾಸ ಕಾರ್ಯಕ್ರಮಗಳನ್ನು ನಿಲ್ಲಿಸಿ ಮಂಕಾಗಿ ಹೋಗಿದ್ದೆವು. ಆದದ್ದಾಗಲಿ ಎಂದು ಮೂರನೇ ಅಲೆ ಕಾಲಲ್ಲಿರುವಾಗಲೇ ದಿಢೀರ್ ನಿರ್ಧಾರ ಮಾಡಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್‌ನೊಂದಿಗೆ ಎಂಟೂ ಗೆಳತಿಯರು  ಡಿಸೆಂಬರ್ ಚಳಿಯಲ್ಲಿ ಹಾರಲು ತಯಾರಾಗಿಯೇ ಬಿಟ್ಟೆವು. ಬೆಂಗಳೂರು ವಿಮಾನ ನಿಲ್ದಾಣದಿಂದ ಟೇಕ್ ಆಫ್ ತೆಗೆದುಕೊಳ್ಳುವ ಮುಂಚೆ ಗಗನಸಖಿ ದಯವಿಟ್ಟು ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳ ಉಪಯೋಗ ನಿಲ್ಲಿಸಿ ಎಂದು ಹೇಳುತ್ತಿದ್ದರೂ ನಾವೆಲ್ಲರೂ ಪ್ರಪಂಚವೇ ಮರೆತಂತೆ ಯಾವುದೋ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಂತೆ ತನ್ಮಯರಾಗಿ ನಮ್ಮ ನಮ್ಮ ಮೊಬೈಲ್​ಗಳಲ್ಲೇ ಲೀನವಾಗಿದ್ದೆವು. ಬಹಳ ದಿನಗಳ ಮೇಲೆ ಈ ದೂರದ ಪ್ರವಾಸ ಕೈಗೊಂಡಿದ್ದಕ್ಕೆ ಬಹಳ ಖುಷಿಯಾಯಿತು.
ಶಾಂತಾ ಜಯಾನಂದ, ಕವಿ, ಲೇಖಕಿ

*

ಭಾಗ 1

ಕಾಮಾಖ್ಯಾ ದೇವಸ್ಥಾನ ಇರುವುದು ಅಸ್ಸಾಮಿನ ಗೌಹಾಟಿಯ ನೀಲಾದ್ರಿ ಬೆಟ್ಟದ ಮೇಲೆ. ಇದಕ್ಕೆ ಪುರಾಣದಲ್ಲಿನ ಒಂದು ಘಟನೆಯನ್ನು ಹೇಳಲೇಬೇಕು. ದಕ್ಷನ ಮಗಳಾದ ದಾಕ್ಷಾಯಣಿಯನ್ನು ಶಿವ ಮದುವೆಯಾಗಿದ್ದು, ಶಿವನಿಗೆ ವಿವಾಹ ಮಾಡಿಕೊಡಲು ಇಷ್ಟವಿಲ್ಲದ ಕಾರಣ ದಕ್ಷನು ತನ್ನ ಅರಮನೆಯಲ್ಲಿ ನಡೆದ ಹೋಮಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಿದ್ದ ದಕ್ಷನು ಶಿವನನ್ನು ತನ್ನ ಪುತ್ರಿ ದಾಕ್ಷಾಯಣಿಯನ್ನು ಆಹ್ವಾನಿಸುವುದಿಲ್ಲ. ದಾಕ್ಷಾಯಣಿ ಯಜ್ಞಕ್ಕೆಂದು ಅಲ್ಲಿಗೆ ತೆರಳಿದಾಗ ತಂದೆಯಿಂದಾದ ಅವಮಾನವನ್ನು ತಾಳದೆ, ಹೋಮ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ತನ್ನ ಪ್ರಿಯ ಪತ್ನಿಯನ್ನು ಅರಸುತ್ತಾ ಬಂದ ಶಿವನು ಅಗ್ನಿಗೆ ಆಹುತಿಯಾದ ತನ್ನ ಪತ್ನಿಯ ದೇಹವನ್ನು ನೋಡಿ ಅತ್ಯಂತ ದುಃಖಿತನಾಗಿ ತನ್ನ ಹೆಗಲ ಮೇಲೆ ದಾಕ್ಷಾಯಣಿಯನ್ನು ಹೊತ್ತುಕೊಂಡು ತಾಂಡವ ನೃತ್ಯ ಮಾಡಲಾರಂಭಿಸುತ್ತಾನೆ.

ಅದನ್ನು ಕಂಡ ವಿಷ್ಣುವು ಭಯಭೀತನಾಗಿ ಶಿವನ ಕೋಪದಿಂದ ಪ್ರಳಯವಾಗಿ ಪ್ರಪಂಚ ನಾಶವಾಗುವುದೆಂದು ತನ್ನ ಸುದರ್ಶನ ಚಕ್ರದಿಂದ ದೇವಿಯ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸುವಂತೆ ಮಾಡುತ್ತಾನೆ. ದೇವಿಯ ದೇಹದ ಹಲವಾರು ಭಾಗಗಳು ಹಲವು ಸ್ಥಳಗಳಲ್ಲಿ ಬಿದ್ದು ಆ ಭಾಗಗಳನ್ನೆಲ್ಲಾ ಶಕ್ತಿ ಪೀಠಗಳೆಂದು ಗುರುತಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಗರ್ಭಾಶಯ ಅಥವಾ ಮಾತೃ ಯೋನಿ ಭಾಗವು ಗೌಹಾಟಿಯ ಉತ್ತರಭಾಗದ ನೀಲಾದ್ರಿ ಪರ್ವತದ ಮೇಲೆ ಬಿದ್ದು ಅಲ್ಲಿ ನೆಲೆಸಿರುವ ದೇವಿ ಅತ್ಯಂತ ಶಕ್ತಿಯುತವಾದ ಶಕ್ತಿಪೀಠವಾಗಿದ್ದು ಅಲ್ಲೇ ಕಾಮಾಖ್ಯಾದೇವಿಯು ನೆಲೆಸಿರುವುದು ಎಂಬ ಪ್ರತೀತಿ.

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ವಸಂತ ದಿವಾಣಜಿಯವರ ‘ಕ್ರಾಂತದರ್ಶನ’ ಮತ್ತು ‘ನಕ್ಷೆಗೆ ಎಟುಕದ ಕಡಲು’ ಇದೀಗ ಲಭ್ಯ

ಅಷ್ಟೇ ಅಲ್ಲದೇ, ಬೆಟ್ಟದ ಒಂದೇ ಗುಹೆಯ ಭಾಗದ ಒಳಗಿದ್ದು ಅಲ್ಲಿ ಸದಾ ನೀರಿನ ಒರತೆ ಇರುತ್ತದೆ. ನಾವು ದೇವಿಯನ್ನು ಕಾಣಲು ಹೋದಾಗ ಬಹಳಷ್ಟು ಜನರು ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ನಿಂತಿದ್ದು ಜೈಮಾತಾಜಿ ಜೈಮಾತಾಜಿ ಎಂದು ದೇವಿಯ ಹೆಸರನ್ನು ಉದ್ಘೋಷಿಸುತ್ತಾ ತೆರಳುತ್ತಿದ್ದರು. ಸಣ್ಣ ಗುಡಿಯ ರೀತಿ ಮಾಡಿ ಅಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ನಂತರ ಅಲ್ಲೇ ಸಂಕಲ್ಪವನ್ನು ಮಾಡಿಸುತ್ತಾರೆ. ಕಾಮಾಖ್ಯಾ ಎಂದರೆ ಬೇಡಿದ್ದನ್ನು ನೀಡುವ ತಾಯಿ ಎಂಬ ಅರ್ಥ. ನಂತರ ಒಂದು ಗುಹೆಯಾಕಾರದಲ್ಲಿ ಒಳಗಡೆ ಐದಾರು ಮೆಟ್ಟಿಲನ್ನು ಇಳಿದು ಒಳ ಹೋದರೆ ಅಲ್ಲಿ ಬಂಡೆಯ ಮೇಲೆ ಯೋನಿಯಾಕಾರದ ಬಂಡೆ ಇದೆ. ಇದೇ ದೇವಿಯ ಮಾತೃ ಯೋನಿ ಎಂದು ಇದೇ ಭಾರತೀಯ ಪರಂಪರೆಯಲ್ಲಿ ನೋಡಿದಾಗ ಆಶ್ಚರ್ಯವು ಎಂಬುದು ವಿಶೇಷವು ಎನಿಸುತ್ತದೆ. ಇಲ್ಲಿ ಯೋನಿಗೆ ಪೂಜೆ ನಡೆಯುತ್ತದೆ. ಯಾವುದೇ ವಿಗ್ರಹಗಳಿಲ್ಲ ಇಲ್ಲಿ 4 ಬಂಡೆಯಿಂದ ನೀರು ಒಸರುವ ಒರತೆ ಸಹ ಇದೆ. ಇಲ್ಲಿ ಕುಂಕುಮದಿಂದ ಪೂಜೆ ನಡೆಯುತ್ತದೆ.

ಇದು ಶಿವಪಾರ್ವತಿಯರ ಸಮಾಗಮವಾಗುತ್ತಿದ್ದ ಸ್ಥಳ ಎಂಬ ನಂಬಿಕೆ ಇದೆ. ನಾವು ಅಲ್ಲಿ ಪೂಜೆ ಮುಗಿಸಿ ಹೊರಬಂದೆವು. ಹಣೆಯ ತುಂಬಾ ಕುಂಕುಮ ಹಚ್ಚಿ ಹರಸುತ್ತಾರೆ. ಆದರೆ ನಮ್ಮ ಭಾರತದ ಪೂಜಾ ವಿಧಾನಗಳು ಬಹಳಷ್ಟು ದೈವಗಳಿವೆ. ಕಾಯಿ ಕರ್ಪೂರ ಪೂಜೆಗಳಲ್ಲಿ ದೇವಿಗೆ ಕೆಂಪು ಚುನರಿಯನ್ನು ಹೊದಿಸಿ ಹೂಹಣ್ಣುಗಳನ್ನು ದೇವಿಗೆ ಅರ್ಪಿಸುವುದಷ್ಟೆ. ಮತ್ತೆ ಆಚೆ ಬಂದಾಗ ನಾವು ಕೊಂಡುಹೋಗಿದ್ದ ತೆಂಗಿನಕಾಯಿ ಪೂಜಾ ಸಲಕರಣೆಗಳನ್ನು ದೇವಿಗೆ ಮುಟ್ಟಿಸಿ ಹಾಗೆ ನಮಗೆ ಕೊಡುತ್ತಾರೆ. ನಾವು ನಮ್ಮ ಮನೆಯಲ್ಲಿಟ್ಟು ಅದನ್ನು ಪೂಜಿಸಬೇಕೆಂದು ಹಾಗೆ ಮೇಲೆ ಬಂದರೆ ಅಲ್ಲಿ ಒಂದು ಗಣೇಶನ ವಿಗ್ರಹವಿದೆ. ಅಲ್ಲಿ ಕುಂಕುಮದಿಂದ ಗಣೇಶನನ್ನು ಪೂಜಿಸುವುದು. ಒಂದೊಂದು ಗಣೇಶನ ವಿಗ್ರಹಕ್ಕೆ ಅಂಟಿಸುವುದು ಹಾಗೆ ಅಂಟಿಸಿದಾಗ ಅದು ಅದಕ್ಕೆ ಅಂಟಿಕೊಂಡರೆ ನಾವು ಅಂದುಕೊಂಡ ಕಾರ್ಯ ಆಗುತ್ತದೆ ಎಂಬ ಪ್ರತೀತಿಯಲ್ಲಿ ನಾವೂ ಹಾಗೆ ಮಾಡಿ ತೃಪ್ತಿ ಪಟ್ಟುಕೊಂಡೆವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : ಶಾಂತಾ ಜಯಾನಂದರ ಕವಿತೆಗಳು : Poetry : ಅವಿತಕವಿತೆ ; ‘ನೀ ಮಾಡಿದ್ದೇನು, ದುಡಿದು ತಂದಿದ್ದೇನು, ಮಾಡಿಟ್ಟ ಆಸ್ತಿಯೇನು?’

Published On - 5:25 pm, Sat, 19 February 22