Women’s Day 2021: ಟೈಂ ಟೇಬಲ್ ಸುನೀತಾ; ಯಾವ ರೈಲು ಎಷ್ಟೊತ್ತಿಗೆ ಎಲ್ಲಿಗೆ ಬರಬೇಕು ನಿರ್ಧರಿಸೋದು ಇವರು..

| Updated By: Lakshmi Hegde

Updated on: Mar 08, 2021 | 3:18 PM

ನೈಋತ್ಯ ರೈಲ್ವೆಯಲ್ಲಿ ವೇಳಾಪಟ್ಟಿ (Time Table) ನಿಯಂತ್ರಣದ ಹೊಣೆ ಹೊತ್ತಿರುವ ಸುನೀತಾ ಪ್ರಕಾಶ್ ಅವರಿಗೆ ತಮ್ಮ ಕರ್ತವ್ಯದ ಬಗ್ಗೆ ಅತೀವ ಹೆಮ್ಮೆಯಿದೆ. ಗಂಡಸರ ಮೇಲುಗೈ ಇರುವ ಕ್ಷೇತ್ರದಲ್ಲಿ ಇವರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Womens Day 2021: ಟೈಂ ಟೇಬಲ್ ಸುನೀತಾ; ಯಾವ ರೈಲು ಎಷ್ಟೊತ್ತಿಗೆ ಎಲ್ಲಿಗೆ ಬರಬೇಕು ನಿರ್ಧರಿಸೋದು ಇವರು..
ರೈಲು ವೇಳಾಪಟ್ಟಿ ನಿಯಂತ್ರಕಿ ಸುನೀತಾ ಪ್ರಕಾಶ್
Follow us on

ರೈಲುಗಳ ಸಂಚಾರ ನಿರ್ವಹಣೆ ಬಲು ಸವಾಲಿನ ಕೆಲಸ. ಕಂಟ್ರೋಲ್ ಆಫೀಸ್​ನಲ್ಲಿ ಡ್ಯೂಟಿ ಮೇಲಿರುವವರು ತುಸು ಯಾಮಾರಿದರೂ ಸಾವಿರಾರು ಜೀವಿಗಳಿಗೆ ಕುತ್ತು ಬರುತ್ತದೆ. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳಿರುವ ನೈಋತ್ಯ ರೈಲ್ವೆ ವಲಯದಲ್ಲಿ ಒಟ್ಟು 79 ಸಂಚಾರ ನಿಯಂತ್ರಕರು ಈ ಮಹತ್ವದ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಈ ತಂಡದ ನೇತೃತ್ವ ವಹಿಸಿರುವಾಕೆ ಮಹಿಳೆ ಎನ್ನುವುದು ವಿಶೇಷ.

ನೈಋತ್ಯ ರೈಲ್ವೆಯಲ್ಲಿ ವೇಳಾಪಟ್ಟಿ (Time Table) ನಿಯಂತ್ರಣದ ಹೊಣೆ ಹೊತ್ತಿರುವ ಸುನೀತಾ ಪ್ರಕಾಶ್ ಅವರಿಗೆ ತಮ್ಮ ಕರ್ತವ್ಯದ ಬಗ್ಗೆ ಅತೀವ ಹೆಮ್ಮೆಯಿದೆ. ಗಂಡಸರ ಮೇಲುಗೈ ಇರುವ ಕ್ಷೇತ್ರದಲ್ಲಿ ಇವರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೈಲುಗಳ ವೇಳಾಪಟ್ಟಿ ತಯಾರಿಸುವುದು, ಹೊಸ ರೈಲುಗಳ ಬಗ್ಗೆ ಅಧಿಸೂಚನೆ ಹೊರಡಿಸುವುದು, ನೈಋತ್ಯ ರೈಲ್ವೆ ವಲಯದಲ್ಲಿ ರೈಲುಗಳ ನಿಲುಗಡೆ ನಿರ್ಧರಿಸಿರುವುದು, ಬಜೆಟ್​ಗಳಲ್ಲಿ ಘೋಷಣೆಯಾದ ಹೊಸ ರೈಲುಗಳನ್ನು ಚಾಲ್ತಿಗೆ ತರಲು ವಿಭಾಗೀಯ ರೈಲ್ವೆ ವೇಳಾಪಟ್ಟಿ ನಿರ್ವಾಹಕರೊಂದಿಗೆ ಸಹಯೋಗದಿಂದ ಕೆಲಸ ಮಾಡುವುದು ಇವರ ಹೊಣೆಗಾರಿಕೆಯಲ್ಲಿ ಸೇರುತ್ತದೆ.

ರೈಲು ಸಂಚಾರದ ಬಗ್ಗೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ವೇಳಾಪಟ್ಟಿಗಳನ್ನು ರೂಪಿಸಿ ರೈಲುಗಳು ಸುಸೂತ್ರವಾಗಿ ಸಂಚರಿಸುವಂತೆ ಅವಕಾಶ ಮಾಡಿಕೊಡುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹವರ್ತಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸುನೀತಾ ಮಾರ್ಗದರ್ಶನ ಮಾಡುತ್ತಾರೆ. ವಲಯ ರೈಲ್ವೆ ಕಚೇರಿಗಳು ಮುದ್ರಿಸುವ ವಲಯ ವೇಳಾಪಟ್ಟಿಯಲ್ಲಿಯೂ ಇವರ ಪರಿಶ್ರಮ ಇರುತ್ತದೆ.

ರೈಲ್ವೆ ಕಂಟ್ರೋಲ್ ರೂಂ (ಪ್ರಾತಿನಿಧಿಕ ಚಿತ್ರ / Courtesy: www.railpost.in)

ನೈಋತ್ಯ ರೈಲ್ವೆಯ ಮೊದಲ ಮಹಿಳಾ ವೇಳಾಪಟ್ಟಿ ನಿಯಂತ್ರಕರು ಮತ್ತು ವೇಳಾಪಟ್ಟಿ ವಿಭಾಗದ ಮುಖ್ಯಸ್ಥರು ಎನ್ನುವುದು ಮುಖ್ಯವಾಗಿ ಉಲ್ಲೇಖಿಸಲೇಬೇಕಾಗಿರುವ ಸಂಗತಿ. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳಲ್ಲಿ ಸಂಚರಿಸುವ ಎಲ್ಲ ರೈಲುಗಾಡಿಗಳೂ ಇವರ ನಿಯಂತ್ರಣದಲ್ಲಿರುತ್ತವೆ. ರೈಲು ಸಂಚಾರದಲ್ಲಿ ವ್ಯತ್ಯಯವಾದಾಗ, ಅಪಘಾತಗಳು ಸಂಭವಿಸಿದಾಗ, ರೈಲು ಹಳಿ ಡಬ್ಲಿಂಗ್, ನಿರ್ವಹಣೆ ಕೆಲಸಗಳು ನಡೆಯುತ್ತಿದ್ದಾಗ ಇವರ ಹೊಣೆಗಾರಿಕೆ ಹೆಚ್ಚು.

‘ರೈಲ್ವೆ ಇಲಾಖೆಯ ಇತರೆಲ್ಲ ಸಿಬ್ಬಂದಿಯ ಸಹಕಾರ, ನನ್ನ ಕುಟುಂಬದ ಪ್ರೋತ್ಸಾಹದೊಂದಿಗೆ ಈ ಮಹತ್ವದ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗಿದೆ’ ಎಂದು ನೆನೆಯುತ್ತಾರೆ ಸುನೀತಾ ಪ್ರಕಾಶ್.

ಪ್ರಾತಿನಿಧಿಕ ಚಿತ್ರ

ಮಹಿಳಾ ದಿನದ ಪ್ರಯುಕ್ತ ಮಹಿಳಾ ವಿಶೇಷ ರೈಲು
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 8 ರಂದು ಬೆಳಿಗ್ಗೆ 11.15ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳಿ ರಾಯಣ್ಣ ರೈಲು ನಿಲ್ದಾಣದ 8ನೇ ಪ್ಲಾಟ್​ಫಾರಂನಿಂದ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯಾಚರಿಸುವ ಬಸವ ಎಕ್ಸ್​ಪ್ರೆಸ್​ ರೈಲು ಸಂಚರಿಸಲಿದೆ. 12.15ರಿಂದ 1.00 ಗಂಟೆಯ ನಡುವೆ ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿಯೇ ಇರುವ ಗೂಡ್ಸ್​ ರೈಲು ಸಂಚರಿಸಲಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆ 2021: ಬೆಳಕು ಹರಿಯದ ಮುಂಜಾನೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಆಸರೆಯಾದ ಆಟೋ ಚಾಲಕಿ

ಮಹಿಳಾ ದಿನಾಚರಣೆ 2021: ‘ಎಲ್ಲ ನೋವುಗಳ ಮಧ್ಯೆಯೂ ಹೆಮ್ಮೆಯಿದೆ..’- ಕೊರೊನಾ ವೇಳೆ ಪಟ್ಟ ಪಡಿಪಾಟಲು ಬಿಚ್ಚಿಟ್ಟ ಹಲ್ಲೆಗೊಳಗಾದ ಆಶಾಕಾರ್ಯಕರ್ತೆ

International Women’s Day 2021: ‘ಸವಾಲಿಗೆ ಸಿದ್ಧ ನಾವು..; ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !

Published On - 3:18 pm, Mon, 8 March 21