ಮಹಿಳಾ ದಿನಾಚರಣೆ 2021: ‘ಎಲ್ಲ ನೋವುಗಳ ಮಧ್ಯೆಯೂ ಹೆಮ್ಮೆಯಿದೆ..’- ಕೊರೊನಾ ವೇಳೆ ಪಟ್ಟ ಪಡಿಪಾಟಲು ಬಿಚ್ಚಿಟ್ಟ ಹಲ್ಲೆಗೊಳಗಾದ ಆಶಾಕಾರ್ಯಕರ್ತೆ
ಆಶಾ ಕಾರ್ಯಕರ್ತೆಯರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದ ಸರ್ಕಾರ ಅವರಿಗೆ ಒಂದು ದೊಡ್ಡ ಜವಾಬ್ದಾರಿಯನ್ನೇ ವಹಿಸಿತ್ತು. ಕೊರೊನಾ ಸೋಂಕಿಗೆ ಹೆದರಿ ಜನರೆಲ್ಲ ಮನೆಯೊಳಗೇ ಇರುತ್ತಿದ್ದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಭಾಗಗಳ ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹಿಸಬೇಕಿತ್ತು.
‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನೀವತ್ತೂ ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ, ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ. ಹಾಗೇ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಜನಮನ ಗೆದ್ದಿದ್ದಾರೆ. ಅಂಥ ಕೊರೊನಾ ವಾರಿಯರ್ಸ್ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ. ಪ್ರಸ್ತುತ ಲೇಖನ ಕಲಬುರಗಿ ಜಿಲ್ಲೆಯ ಆಶಾ ಕಾರ್ಯಕರ್ತೆ ರೇಣುಕಾ ಅವರ ಬಗ್ಗೆ..
ಕೊರೊನಾ ಸೋಂಕಿಗೆ ದೇಶದಲ್ಲಿ ಮೊದಲ ಬಲಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ. 2020ರ ಮಾರ್ಚ್ 10ರಂದು ಕಲಬುರಗಿ ನಗರದ 76ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟ ಬಳಿಕ ಆತಂಕ ನೂರ್ಮಡಿಯಾಗಿತ್ತು. ಲಾಕ್ಡೌನ್ ಬಳಿಕವೂ ಅಷ್ಟೇ ಬೇರೆ ರಾಜ್ಯಗಳಿಂದ, ಬೇರೆ ನಗರಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬಂದಿದ್ದು ಕಲಬುರಗಿಗೆ. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಜತೆ, ಹೆಗಲು ಕೊಟ್ಟವರು ಸಾವಿರಾರು ಆಶಾಕಾರ್ಯಕರ್ತೆಯರು..
ಆಶಾ ಕಾರ್ಯಕರ್ತೆಯರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದ ಸರ್ಕಾರ ಅವರಿಗೆ ಒಂದು ದೊಡ್ಡ ಜವಾಬ್ದಾರಿಯನ್ನೇ ವಹಿಸಿತ್ತು. ಕೊರೊನಾ ಸೋಂಕಿಗೆ ಹೆದರಿ ಜನರೆಲ್ಲ ಮನೆಯೊಳಗೇ ಇರುತ್ತಿದ್ದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಭಾಗಗಳ ಮನೆಮನೆಗೆ ಹೋಗಿ, ಯಾರಾದರೂ ವಿದೇಶದಿಂದ ಬಂದಿದ್ದಾರಾ? ಕೊರೊನಾ ಟೆಸ್ಟ್ಗೆ ಒಳಗಾಗಿದ್ದಾರಾ? ಕ್ವಾರಂಟೈನ್ ಆಗಿದ್ದಾರಾ? ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಹೋದವರು ಹೇಗಿದ್ದಾರೆ, ಮತ್ತೆ ಎಲ್ಲಿಗಾದರೂ ಹೋದರಾ?ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಬೇಕಿತ್ತು. ಈ ಕೆಲಸವಂತೂ ಅವರ ಪಾಲಿಗೆ ಕಬ್ಬಿಣದ ಕಡಲೆಯಂತಾಗಿತ್ತು. ಅದೆಷ್ಟೋ ಆಶಾ ಕಾರ್ಯಕರ್ತೆಯರಿಗೆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರು, ವಯಸ್ಸಾದ ಪಾಲಕರು, ಅತ್ತೆ-ಮಾವ ಇದ್ದರು. ಆದರೂ ಕೊರೊನಾ ವೈರಸ್ನ ಭಯಬಿಟ್ಟು, ಆರೋಗ್ಯ ಇಲಾಖೆ ತಮಗೆ ನೀಡಿದ ಕೆಲಸವನ್ನು ತುಂಬ ಶ್ರದ್ಧೆಯಿಂದ ಮಾಡಿದರು.
ಆಶಾ ಕಾರ್ಯಕರ್ತೆ ರೇಣುಕಾ ಮೇಲೆ ಹಲ್ಲೆ ಈ ಘಟನೆ ಬಹುತೇಕರಿಗೆ ನೆನಪಿರಬಹುದು. ಮುಂಬೈನಿಂದ ಬಂದಿದ್ದ ವಲಸೆ ಕಾರ್ಮಿಕ ಮತ್ತು ಆತನ ಕುಟುಂಬದವರು ಆಶಾ ಕಾರ್ಯಕರ್ತೆ ರೇಣುಕಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ರೇಣುಕಾ ನಾಗಪ್ಪ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದವರು. ಆರೋಗ್ಯ ಇಲಾಖೆ ನೀಡಿದ ಜವಾಬ್ದಾರಿಯನ್ವಯ ಮುಂಬೈನಿಂದ ಬಂದ ವಲಸೆ ಕಾರ್ಮಿಕರ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದರು. ಆಗ ಅವರನ್ನೆಲ್ಲ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿತ್ತು. ಇದೇ ಸಿಟ್ಟಿನಲ್ಲಿದ್ದ ಅವರು, ನಂತರ ರೇಣುಕಾರನ್ನು ನೋಡುತ್ತಿದ್ದಂತೆ, ನಮ್ಮನ್ನು ಕ್ವಾರಂಟೈನ್ ಕೇಂದ್ರಕ್ಕೆ ತರಲು ನೀನೇ ಕಾರಣ, ಇಲ್ಲಿ ಸರಿಯಾದ ಊಟ ಇಲ್ಲ, ಚಿಕನ್ ಇಲ್ಲ, ಯಾವ ವ್ಯವಸ್ಥೆಯೂ ಚೆನ್ನಾಗಿಲ್ಲ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ಮಾಡಿದ್ದರು. ಹೀಗೆ ಥಳಿತಕ್ಕೆ ಒಳಗಾದ ರೇಣುಕಾರ ಕೈ ಮುರಿದಿತ್ತು. ಇದರಿಂದಾಗಿ ಸುಮಾರು 2 ತಿಂಗಳು ಅವರು ಆರೈಕೆ ಪಡೆಯಬೇಕಾಯಿತು. ಸುಮಾರು 30 ಸಾವಿರ ರೂ.ಖರ್ಚು ಮಾಡಬೇಕಾಯಿತು. ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ.
ಮುಂಬೈನಿಂದ ಬಂದವರಿಂದಲೇ ಕಷ್ಟವಾಯಿತು ರೇಣುಕಾ ಅಂದಿನ ಸಂದರ್ಭವನ್ನು ನೆನಪಿಸಿಕೊಂಡು ಈಗಲೂ ಭಯಪಡುತ್ತಾರೆ. ನಮಗೆ ಉಳಿದೆಲ್ಲಕ್ಕಿಂತ ಮುಂಬೈನಿಂದ ಬಂದಿದ್ದ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳಿಸುವುದೇ ದೊಡ್ಡ ಕಷ್ಟವಾಗಿತ್ತು ಎನ್ನುತ್ತಾರೆ. ನನಗೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಲು ತುಂಬ ಆತಂಕವಿತ್ತು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದರು. ಮುಂಜಾನೆಯಿಂದ ಶುರು ಮಾಡಿದರೆ, ಅದೆಷ್ಟೋ ಮನೆಗಳಿಗೆ ಹೋಗಬೇಕಿತ್ತು. ನಮಗೆ ಕೊರೊನಾ ಸೋಂಕು ತಗುಲುವ ಆತಂಕ ಒಂದೆಡೆಯಾದರೆ, ಇನ್ನೊಂದೆಡೆ ಹಲ್ಲೆ ಮಾಡುವ ಭಯವೂ ಶುರುವಾಗಿತ್ತು ಎಂದು ಹೇಳುತ್ತಾರೆ.
ಪ್ರಾರಂಭದಲ್ಲಿ ಮುಂಬೈನಿಂದ ಬಂದ ಅನೇಕರಲ್ಲಿ ಕೊರೊನಾ ಲಕ್ಷಣಗಳು ಇದ್ದವು. ಅವರಲ್ಲಿ ಅನೇಕರು ಕೊರೊನಾ ಟೆಸ್ಟ್ ಮಾಡಿಸಿಕೊಂಡಿರಲಿಲ್ಲ. ಅವರೆಲ್ಲರ ಮನೆಗಳಿಗೆ ಹೋಗಿ, ಮಾಹಿತಿಯನ್ನು ಪಡೆದು ಅದನ್ನು ಮೇಲಧಿಕಾರಿಗಳಿಗೆ ನೀಡಬೇಕಾಗಿತ್ತು. ಇನ್ನು ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳಿಸುವುದು ದೊಡ್ಡ ಸವಾಲಾಗಿತ್ತು. ಇವರು ಹೋಗಲು ಒಪ್ಪುತ್ತಿರಲಿಲ್ಲ.. ಕಳಿಸದೆ ಹೋದರೆ ಮೇಲಧಿಕಾರಿಗಳು ನಮ್ಮ ಮೇಲೆ ರೇಗುತ್ತಿದ್ದರು. ಕೆಲಸ ಮಾಡಲು ಆಗದೆ ಹೋದರೆ ಮನೆಯಲ್ಲೇ ಇದ್ದುಬಿಡಿ ಎನ್ನುತ್ತಿದ್ದರು. ಇನ್ನು ಮುಂಬೈನಿಂದ ಬಂದ ಕಾರ್ಮಿಕರು ನನ್ನ ಮೇಲೆ ಹಲ್ಲೆ ಮಾಡಿದ್ದನ್ನಂತೂ ಮರೆಯಲು ಸಾಧ್ಯವಿಲ್ಲ. ತುಂಬ ಕಷ್ಟಪಟ್ಟೆ. ಆದರೆ ಈ ನೋವಿನ ಮಧ್ಯೆಯೂ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ರೇಣುಕಾ.
(ನಿರೂಪಣೆ: ಸಂಜಯ್ ಚಿಕ್ಕಮಠ)