RCB IPL Celebration Live: ಆರ್ಸಿಬಿ ಆಟಗಾರರಿಗೆ ಅಭಿನಂದನೆ ಕಾರ್ಯಕ್ರಮ ಆರಂಭ: ನೇರ ಪ್ರಸಾರ ಇಲ್ಲಿ ನೋಡಿ
ಆರ್ಸಿಬಿ ಸಂಭ್ರಮಾಚರಣೆ ಲೈವ್: 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ನಗರಕ್ಕೆ ಬಂದಿದ್ದಾರೆ. ವಿಧಾನಸೌಧದಲ್ಲಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿದ್ದು, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ನೇರ ಪ್ರಸಾರ ಇಲ್ಲಿದೆ.

ಬೆಂಗಳೂರು, ಜೂನ್ 4: ಕೊನೆಗೂ ಐಪಿಎಲ್ (IPL) ಕಪ್ ಜಯಿಸಿ ತವರಿಗೆ ಮರಳಿರುವ ಆರ್ಸಿಬಿ (RCB) ಕ್ರಿಕೆಟ್ ತಂಡಕ್ಕೆ ಬೆಂಗಳೂರಿನಲ್ಲಿ (Bengaluru) ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆತಿದೆ. ಗುಜರಾತ್ನ ಅಹ್ಮದಾಬಾದ್ನಿಂದ ಬೆಂಗಳೂರಿನ ಹೆಚ್ಎಎಲ್ಗೆ ಬಂದಿಳಿದ ಆರ್ಸಿಬಿ ಆಟಗಾರರನ್ನು ಸರ್ಕಾರದ ಪರವಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆರ್ಸಿಬಿ ಆಟಗಾರರನ್ನು ವಿಶೇಷ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ವಿಧಾನಸೌಧದಿಂದ ಆಟಗಾರರನ್ನು ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುತ್ತದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಪರೇಡ್ ನಡೆಯಲಿದ್ದು, ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ. ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿ ನೋಡಬಹುದಾಗಿದೆ.
ಆರ್ಸಿಬಿ ಸಂಭ್ರಮಾಚರಣೆ, ಆಟಗಾರರಿಗೆ ಅಭಿನಂದನೆ ಲೈವ್ ಇಲ್ಲಿ ನೋಡಿ
ಅಹಮದಾಬಾದ್ನಿಂದ ಬೆಂಗಳೂರಿಗೆ ಬರುವ ಆರ್ಸಿಬಿ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂಗೆ ಕರೆದೊಯ್ಯಲು ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಆದರೆ, ಭದ್ರತೆಯ ದೃಷ್ಟಿಯಿಂದ ಅದಕ್ಕೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಈಗಾಗಲೇ ತಿಳಿಸಿದ್ದಾರೆ.
ಮೊದಲಿಗೆ, ಆರ್ಸಿಬಿ ತಂಡದ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ. ಇದೇ ವೇಳೆ, ತಂಡದ ಪರವಾಗಿ ಒಬ್ಬರು ಆಟಗಾರರು ಮಾತನಾಡಲಿದ್ದಾರೆ. ನಂತರ ಎಲ್ಲಾ ಆಟಗಾರರು ಬಸ್ನಲ್ಲಿ ಸ್ಟೇಡಿಯಂಗೆ ತೆರಳಲಿದ್ದಾರೆ ಎಂದು ಸಚಿವ ಪರಮೇಶ್ವರ ಮಾಹಿತಿ ನೀಡಿದ್ದಾರೆ.
ಪಂಜಾಬ್ ವಿರುದ್ಧ ಗೆದ್ದು ಬೀಗಿದ ಆರ್ಸಿಬಿ
ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ವಿರಾಟ್ ಕೊಹ್ಲಿ ಅವರ 43 ರನ್ಗಳ ನೆರವಿನಿಂದ 190 ರನ್ ಗಳಿಸಿತ್ತು. 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿ ಪಂಜಾಬ್ಗೆ 191 ರನ್ಗಳ ಗುರಿ ನಿಗದಿಪಡಿಸಿತ್ತು.
ಇದನ್ನೂ ಓದಿ: ಆರ್ಸಿಬಿ ಆಟಗಾರರ ವಿಜಯೋತ್ಸವ ಮೆರವಣಿಗೆ ಇಲ್ಲ, ಗೃಹ ಸಚಿವರು ಕೊಟ್ಟ ಕಾರಣ ಇಲ್ಲಿದೆ
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಆರ್ಸಿಬಿಯ 18 ವರ್ಷಗಳ ಕಪ್ ಬರ ನೀಗಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Wed, 4 June 25




