RCB IPL Celebration: ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ ಆಗಿರುವುದರಿಂದ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ವಿಧಾನಸೌಧದಲ್ಲಿ ಸಿಎಂ ಮತ್ತು ಡಿಸಿಎಂ ಅಭಿನಂದನೆ ಸಲ್ಲಿಸಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭವಿದೆ. ಹೆಚ್ಚಿನ ಜನಸಂದಣಿ ಇದ್ದು, ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳನ್ನು ಬಳಸದಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಬೆಂಗಳೂರು, ಜೂನ್ 4: ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ (IPL) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ಗಳ ರೋಚಕ ಜಯ ಗಳಿಸಿ ಚಾಂಪಿಯನ್ ಆಗಿ ಆರ್ಸಿಬಿ (RCB) ತಂಡ ಬೆಂಗಳೂರಿಗೆ ಆಗಮಿಸಿದೆ. ಆರ್ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಲಿದ್ದಾರೆ. ನಂತರ ಸಂಜೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಆಟಗಾರರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಹೀಗಾಗಿ, ಮಧ್ಯಾಹ್ನ 3 ಗಂಟೆ ನಂತರ ರಾತ್ರಿ 8ರ ವರೆಗೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳನ್ನು ಬಳಸದಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
‘‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡಕ್ಕೆ ಸಂಜೆ 5 ರಿಂದ 6 ರವರೆಗೆ ಸನ್ಮಾನ ಸಮಾರಂಭ ಇರುವುದರಿಂದ ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳನ್ನು ಬಳಸದಂತೆ ಸಲಹೆ ನೀಡಲಾಗಿದೆ. ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ. ಸೀಮಿತ ಪಾರ್ಕಿಂಗ್ ಇರುವುದರಿಂದ ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ’’ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 4, 2025
ಆರ್ಸಿಬಿ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂಗೆ ಕರೆದೊಯ್ಯಲು ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಆದರೆ, ಭದ್ರತೆಯ ದೃಷ್ಟಿಯಿಂದ ಅದಕ್ಕೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಈಗಾಗಲೇ ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಸಂಭ್ರಮಾಚರಣೆ, ಬೆಂಗಳೂರಿನಲ್ಲಿ ಆಟಗಾರರಿಗೆ ಅಭಿನಂದನೆ
ಆದಾಗ್ಯೂ, ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ಆರ್ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಆರ್ಸಿಬಿ ಜೆರ್ಸಿ ಧರಿಸಿ, ಫ್ಲ್ಯಾಗ್ ಹಿಡಿದು ಅಭಿಮಾನಿಗಳು ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು, ಯುವಕರು ಆಗಮಿಸಿದ್ದು, ಆರ್ಸಿಬಿ ಆಟಗಾರರನ್ನು ಹತ್ತಿರದಿಂದ ನೋಡಲು ಕಾತರದಿಂದ ಇದ್ದಾರೆ. ಆರ್ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.








