ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಜಯಶ್ರೀ ಜಗನ್ನಾಥ

| Updated By: ganapathi bhat

Updated on: Apr 06, 2022 | 11:09 PM

'ಪರವೀನ್ ಬಾಬಿಯೊಡನೆ ಆ ಕಾಲಘಟ್ಟದಲ್ಲಿ ಒಬ್ಬರಾದ ಮೇಲೆ ಒಬ್ಬರಾಗಿ ಇದ್ದ ಅವಳ ಮೂರೂ ಬಾಯ್ ಫ್ರೆಂಡುಗಳೂ ಅವಳ ಸಂಪಾದನೆಯನ್ನು ಅವಲಂಬಿಸಿದ್ದವರೇ ಆಗಿದ್ದರು. ಆ ಕಾಲಕ್ಕೆ ನಿಜಕ್ಕೂ ಸ್ತ್ರೀತ್ವವನ್ನು ಬದುಕಿ ತೋರಿಸಿದ ಹುಡುಗಿ ಅವಳಾಗಿದ್ದಳು. ಆದರೆ, ಮಾನಸಿಕ ರೋಗ ಅವಳನ್ನು ಬಗ್ಗಿಸಿಬಿಟ್ಟಿತು.' ಜಯಶ್ರೀ ಜಗನ್ನಾಥ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಜಯಶ್ರೀ ಜಗನ್ನಾಥ
ಲೇಖಕಿ ಜಯಶ್ರೀ ಜಗನ್ನಾಥ
Follow us on

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಫ್ರೆಂಚ್ ಶಿಕ್ಷಕಿ, ಲೇಖಕಿ ಜಯಶ್ರೀ ಜಗನ್ನಾಥ ಅವರ ಆಯ್ಕೆಗಳು ಇಲ್ಲಿವೆ.

ಲಾಕ್-ಡೌನಿನಂಥ ಲಾಕ್-ಡೌನನ್ನೇ ಅಣಕವಾಡಿ ಕಾಲ ದೇಶ ಲಿಂಗ ವರ್ತಮಾನಗಳನ್ನು ಮೀರಿ ಹಾರಿ ವಿಹರಿಸುವಂತೆ ನಮ್ಮನ್ನು ಮಾಡಬಲ್ಲವು ಈ ಎರಡೂ ಪುಸ್ತಕಗಳು.

ಕೃ: L’Étranger
ಲೇ:  Albert Camus
ಪ್ರ: Gallimard, French

ಈ ಸಮಯದಲ್ಲಿ ನಾನು ಮತ್ತೆ ಮರು-ಓದಿದ ಒಂದು ಪುಸ್ತಕ, ಆಲ್ಬರ್ಟ್ ಕಮೂವಿನ ‘ಲ್’ಎತ್ರಾಂಜೇರ್’. ಜನಮನವನ್ನು ಅಲುಗಿಸಿ ನಂಬಿಕೆಗಳನ್ನು ಮೇಲೆಕೆಳಗು ಮಾಡುವಂಥ ಸಾಮರ್ಥ್ಯವಿದೆ ಎಂದು ಆರೋಪಿಸಲಾಗುವ ಪುಸ್ತಕಗಳಲ್ಲಿ ಇದೂ ಒಂದು. ಅಸಂಬದ್ಧತೆ ಮತ್ತು ಅಸ್ಥಿತ್ವವಾದದ ಕೈಪಿಡಿಯಂತಿರುವ ಈ ಕೃತಿಯು, ನಮ್ಮ ಸಾಮಾಜಿಕ ಜೀವನದ ಅಭ್ಯಾಸಗಳು ಮತ್ತು ನಮ್ಮ ಭಾವನೆಗಳು ಎಷ್ಟರ ಮಟ್ಟಿಗೆ ನೈಜವಾದವು ಮತ್ತು ಎಷ್ಟರ ಮಟ್ಟಿಗೆ ಅವು ಸಾಮಾಜಿಕ ಸ್ಥಿತಿಗಳಿಂದ ನಮ್ಮನ್ನು ಆ ಭಾವನೆಗಳನ್ನು ತೋರ್ಪಡಿಸಲಷ್ಟೇ ಅಲ್ಲ, ಅನುಭವಿಸಲೂ ಸಹ ನಮ್ಮನ್ನು ಕಟ್ಟುಪಾಡಿನಲ್ಲಿರಿಸಿರುತ್ತವೆ ಎಂಬ ಪ್ರಶ್ನೆಗಳನ್ನು ಮುಂದಿಡುತ್ತವೆ.

ಮೆರ್ಸೋ ಎಂಬ ಸಾಮಾನ್ಯ ಕಾರಕೂನನ ಜೀವನದ ಕೆಲವು ದಿನಗಳನ್ನು ಪ್ರಥಮ ಪುರುಷ ಕಥಾಶೈಲಿಯಲ್ಲಿ ಬರೆದಿದ್ದರೂ ಅದು ಯಾರೊಬ್ಬರ ಮನಸ್ಸಿನ ದ್ವಂದ್ವಗಳ ನಿರೂಪಣೆಯೂ ಆಗಿರಬಹುದು. ಕಮೂ ಸ್ವತಃ ಹೇಳುವಂತೆ ‘ನಮ್ಮ ಸಮಾಜದಲ್ಲಿ ತಮ್ಮ ತಾಯಿಯ ಅಂತ್ಯ ಸಂಸ್ಕಾರದಲ್ಲಿ ರೋಧಿಸದ ಎಲ್ಲಾ ವ್ಯಕ್ತಿಗಳನ್ನೂ ಸಾಮಾಜಿಕ ಮರಣದಂಡನೆಗೆ ಗುರಿ ಮಾಡುತ್ತಾರೆ’ ಮೆರ್ಸೋನನ್ನು. ಅವನು ಆಟವನ್ನು ಆಡಲು ಒಪ್ಪದುದರಿಂದ ಕೊಂದು ಹಾಕಲಾಗುತ್ತದೆ. ಮೆರ್ಸೋ ತಾಯಿಯ ಮರಣಕ್ಕಾಗಿ ಅಳುವುದಿಲ್ಲ; ಹಸಿವಾಗಿದೆಯೆಂದು ತಾಯಿಯ ಮೃತದೇಹದ ಬಳಿಯಲ್ಲಿ ತಿನ್ನುತ್ತಾನೆ, ನಿದ್ದೆ ಮಾಡುತ್ತಾನೆ ಅಲ್ಲದೆ ಅಲ್ಲಿಂದ ಸೀದಾ ಹೋಗಿ ತನ್ನ ಪ್ರೇಯಸಿಯನ್ನು ಕೂಡುತ್ತಾನೆ. ಅದೇ ಪ್ರೇಯಸಿಯನ್ನು ಯಾವುದೇ ಸಂವೇದನೆಯೂ ಇಲ್ಲದಂತೆ ಸಲೀಸಾಗಿ ಬಿಟ್ಟುಬಿಡುತ್ತಾನೆ. ಸಮುದ್ರ ತೀರದಲ್ಲಿ ಒಂದು ವ್ಯಕಿಯ ಕೊಲೆ ಮಾಡಿ ‘ಅವನು ತುಂಬಾ ಗಲಾಟೆ ಮಾಡುತ್ತಿದ್ದ, ನನಗೆ ತಲೆ ನೋಯುತ್ತಿತ್ತು ಅದಕ್ಕೆ ಅವನನ್ನು ಕೊಂದೆ, ಅವನು ಸತ್ತ’ ಎಂದು ಯಾವ ಭಾವನೆಯೂ ಇಲ್ಲದೆ ಸತ್ಯವನ್ನೇ ಹೇಳಿ ಮರಣದಂಡನೆ ಈಡಾಗುತ್ತಾನೆ. ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕೆಂದಾಗಲೀ ಸುಳ್ಳು ಪಶ್ಚಾತ್ತಾಪ ಪಟ್ಟು ತಪ್ಪಿಸಿಕೊಳ್ಳ ಬೇಕೆಂದಾಗಲೀ ಅವನಿಗೆ ಅನ್ನಿಸುವುದೇ ಇಲ್ಲ. ಇರುವುದು ಇದ್ದ ಹಾಗೇ. ಅಸ್ಥಿತ್ವವಾದದ ಅತಿರೇಕದ ಬದುಕು/ಸಾವು.

ಇದೆಲ್ಲಾ ಅಸಂಬದ್ಧ ಎನಿಸಬೇಕಾಗಿದ್ದರೂ ಅನಿಸುವುದಿಲ್ಲ; ಅದು ಅಲ್ಲಿ ಲೇಖಕನ ವಿಜಯ. ನಮ್ಮ ಸುತ್ತಮುತ್ತಾ ಪ್ರತಿಯೊಬ್ಬ ವ್ಯಕ್ತಿಯೂ ಒಳಗೊಂದು ಹೊರಗೊಂದು ಎಂದು ಬದುಕುತ್ತಿರುವ ಬಹುಮುಖಕವಚಗಳ ಈ ಜಗತ್ತಿನಲ್ಲಿ ಅತಿರೇಕದ ಅಸಂಬದ್ಧವನ್ನು ಸಂಗತವೆನಿಸುವಂತೆ 138 ಪುಟಗಳಲ್ಲಿ ಬರೆದು ಮರೆಯಲಾಗದ ಪರಿಣಾಮವನ್ನು ಬೀರಿರಿವುದು ಕಾಮೂನ ಅಸಾಧಾರಣ ಕಾಲ್ಪನಿಕ ಸೃಜನಶಕ್ತಿ. ನನ್ನ ಜೀವನದಲ್ಲಿ ಓದಿನಿಂದ ಅತ್ಯಂತ ಆಳವಾಗಿ ಪರಿಣಾಮವನ್ನು ಮೂಡಿಸಿರುವ ಪುಸ್ತಕಗಳಲ್ಲಿ ಇದು ಮುಖ್ಯವಾದುದು.

ಕೃ: Parveen Babi: A Life
ಲೇ: Karishma Upadhyay
ಪ್ರ: Hachette India

ಎರಡನೆಯ ಪುಸ್ತಕ, ಲಾಕ್​ ಡೌನಿನ ಒಂಟಿವಾಸದಲ್ಲಿ ಓದಿದ ಒಂದು ಆತ್ಮಕಥೆ. ‘ಪರವೀನ್ ಬಾಬಿ’ ಎಂಬ ಅದೇ ಹೆಸರಿನ 70-80ರ ದಶಕದ ಹಿಂದಿ ಸಿನೆಮಾ ತಾರೆಯ ಮನಕಲಕುವ ದುರಂತಗಾಥೆ. ಕರಿಶ್ಮಾ ಉಪಾಧ್ಯಾಯ ಬರೆದಿರುವ ಈ ಪುಸ್ತಕವನ್ನು ನಾನು ಸ್ವಲ್ಪ ಕಾಲ್ಪನಿಕ ಬೌದ್ಧಿಕ ಹೆಚ್ಚಳದ ಹೆಚ್ಚುಗಾರಿಕೆಯಿಂದುದಿಸುವ ತಿರಸ್ಕಾರದಿಂದಿಂದಲೇ ಕೈಗೆತ್ತಿಕೊಂಡೆ. ಆದ್ರೆ ಬರೆಯುವ ಶೈಲಿ, ಮತ್ತೊಬ್ಬ ವ್ಯಕ್ತಿಯ ಜೀವನವನ್ನು ತೆರೆದಿಡಬೇಕಾದಾಗ ಇರಬೇಕಾದ ಸೂಕ್ಷ್ಮತೆ ಮತ್ತು ಗೌರವ, ನಿಜ ಹೇಳಲೇಬೇಕು ಆದರೆ ತೀರ್ಪು ನೀಡುವುದು ನಿಮ್ಮ ಅಥವಾ ನನ್ನ ಶಿಶ್ಟಾಚಾರವಲ್ಲ ಎಂಬ ಸದಾ ಕಾವಲಿಟ್ಟಿರುವ ಸಜ್ಜನ ನಡತೆ ಇವುಗಳಿಂದಾಗಿ ಈ ಕೃತಿ ನನಗೆ ಪ್ರಿಯವಾಯಿತು. ಪುಟ ತಿರುಗಿಸುತ್ತಿದ್ದಂತೇ ಪರವೀನ್ ಬಾಬಿಯ ವ್ಯಕ್ತಿತ್ವ, ಅವಳ ಕೆಚ್ಚು ಸೌಂದರ್ಯ ಮತ್ತು ಅಭಿನಯ ಕುಶಲತೆಯ ಪರಿಚಯವಾಯಿತು.

‘ಒಬ್ಬ ಎಳೆ ವಯಸ್ಸಿನ ಹೆಣ್ಣು ಅದರಲ್ಲೂ ಸಾಂಪ್ರದಾಯಿಕ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಹೆಣ್ಣು ತನ್ನ ಮನಸ್ಸಿಗೆ ತೋರಿದ ಜೀವನ ಮಾರ್ಗವನ್ನು ಯಾರ ಸಹಾಯವೂ ಇಲ್ಲದೇ ತಾನೆ ಹುಡುಕಿಕೊಳ್ಳುತ್ತಾ , ಅದರಲ್ಲಿ ಎರಗುವ ಏಳುಬೀಳುಗಳೆಲ್ಲವನ್ನೂ ತಾನೇ ನಿಭಾಯಿಸುತ್ತಾ ಯಶಸ್ವಿಯಾಗುವುದು ನನಗೆ ಎಂದೂ ಮನ ಸಂಭ್ರಮಿಸುವ ವಿಷಯ. ಅದರಲ್ಲೂ ಗಂಡು ಮಾಡುತ್ತಿದ್ದ ಎಲ್ಲಾ ‘ಕಾರ್ಯಗಳನ್ನೂ’ ಅದು ಹೆಣ್ಣಿಗೆ ಕಲಂಕ ತರುತ್ತಿದ್ದಂಥ ಕಾಲದಲ್ಲಿ ಕೂಡಾ ರಾಜಾರೋಷವಾಗಿ ಮಾಡಿ ಅದರ ಎಲ್ಲಾ ಪರಿಣಾಮಗಳನ್ನೂ ಎದುರಿಸಿ ಗೆದ್ದ ಹೆಣ್ಣು ನನಗೆ ಅತ್ಯಂತ ಆಕರ್ಷಕಳಾಗಿ ಕಾಣುತ್ತಾಳೆ.

ಅದರಲ್ಲೂ ಪರವೀನ್ ಬಾಬಿಯೊಡನೆ ಆ ಕಾಲಘಟ್ಟದಲ್ಲಿ ಒಬ್ಬರಾದ ಮೇಲೆ ಒಬ್ಬರಾಗಿ ಇದ್ದ ಅವಳ ಮೂರೂ ಬಾಯ್ ಫ್ರೆಂಡುಗಳೂ ಅ ಕಾಲದಲ್ಲಿ ಅವಳ ಸಂಪಾದನೆಯನ್ನು ಅವಲಂಬಿಸಿದ್ದವರೇ ಆಗಿದ್ದರು. ಆ ಕಾಲಕ್ಕೆ ನಿಜಕ್ಕೂ ಸ್ತ್ರೀತ್ವವನ್ನು ಬದುಕಿ ತೋರಿಸಿದ ಹುಡುಗಿ, ಅವಳಾಗಿದ್ದಳು. ಆದರೆ, ಮಾನಸಿಕ ರೋಗ ಅವಳನ್ನು ಬಗ್ಗಿಸಿಬಿಟ್ಟಿತು. ಈ ಕೊರೋನಾ ಸೋಂಕಿನ ಸಮಯದಲ್ಲಿ ಖಿನ್ನತೆ ಮತ್ತು ಮಾನಸಿಕ ರೋಗಗಳು ಹೆಚ್ಚು ಹೆಚ್ಚು ಚರ್ಚಿತಗೊಳ್ಳುತ್ತಿರುವ ಕಾಲದಲ್ಲಿ ಪರವೀನ್ ಬಾಬಿಯು ತನ್ನ ಕಾಲದಲ್ಲಿ ಜನರಲ್ಲಿರುತ್ತಿದ್ದ ಮಾನಸಿಕ ರೋಗಗಳ ಬಗೆಗಿನ ಅಜ್ಞಾನಕ್ಕೆ ಬಲಿಯಾಗುತ್ತಾಳೆ. ಸರಿಯಾದ ಚಿಕಿತ್ಸೆಗೆ ಒಳ ಪಡದೆ ತನ್ನ ಕೀರ್ತಿ ಯಶಸ್ಸು ಸೌಂದರ್ಯ ಎಲ್ಲವನ್ನೂ ಕಳೆದುಕೊಂಡು ತಲೆಮರೆಸಿಕೊಂಡು ಬದುಕಿ ಕೊನೆಗಾಲಕ್ಕೆ ಮುಂಬೈಗೆ ತಿರುಗಿ ಬಂದು ತನ್ನ ಹುಚ್ಚಾಟದಿಂದ ನಗೆಪಾಟಲಾಗುತ್ತಾಳೆ. ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯಿದ್ದರೂ ಒಂಟಿಯಾಗಿ ಅನಾಥ ಶವದಂತೆ ಕೊನೆಗಾಣುತ್ತಾಳೆ.

ಕಾಮೂನ ಪುಸ್ತಕ ಓದುವ ಮೊದಲೇ, ದಶಕಗಳಿಂದ ಬುದ್ಧಿಜೀವಿಗಳಿಂದ ಮನ್ನಣೆ ಪಡೆದ ಪುಸ್ತಕ ಎಂದು ಗೊತ್ತಿದ್ದರೂ ಓದಿದ ಮೇಲೆ ನಾನು ಎದುರು ನೋಡಿದ್ದಕ್ಕಿಂತಾ ಹೆಚ್ಚಾಗಿ ಅದು ನನ್ನನ್ನು ಚಕಿತಗೊಳಿಸಿತು. ಪರವೀನ್ ಬಾಬಿಯ ಜೀವನಕಥನ, ಪುಸ್ತಕ ಓದುವ ಮೊದಲು “ಮಧ್ಯ ಮಧ್ಯ ಕೆಲವು ಲಘು ಪುಸ್ತಕಗಳನ್ನು ಓದುತ್ತಿರಬೇಕು, ಬಾಲಿವುಡ್ ತಾರೆಯ ಕತೆ ಇನ್ನೆಷ್ಟು ಗಂಭೀರವಾಗಿರಲು ಸಾಧ್ಯ” ಎಂಬ ನನ್ನ ದುರಹಂಕಾರದ ತಿಳಿಯಾದ ತಿರಸ್ಕಾರದಿಂದ ಎತ್ತಿಕೊಂಡ ಪುಸ್ತಕ. ಅದು ನನ್ನನ್ನು ಕಲಕಿ ಧರೆಗಿಳಿಸಿತು. ಜೀವನವೆಂಬುದು ಅನೀರೀಕ್ಷಿತಗಳ ಅಕ್ಕಪಕ್ಕದಲ್ಲೇ ನಡೆಯುವ ಆಟ ಎಂಬ ಅರಿವಿಗೆ ಈ ಸೋಂಕಿಗಿಂತ ಹೆಚ್ಚಿನ ಕನ್ನಡಿ ಬೇಕೇ?

ವರ್ಷಾಂತ್ಯ ವಿಶೇಷ 2020: ‘ಓದಿನಂಗಳದ‘ಲ್ಲಿ ಕಥೆಗಾರ ಅನು ಬೆಳ್ಳೆ

Published On - 12:25 pm, Thu, 31 December 20