
ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ನಂತರ ದೇವರಿಗೆ ಮಹಾಮಂಗಳಾರತಿ ಮಾಡುವುದು ಕಡ್ಡಾಯ. ಆದರೆ, ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದಾಗ ಅದಕ್ಕೆ ಕಡ್ಡಾಯವಾಗಿ ಹಣ ಅಥವಾ ನಾಣ್ಯಗಳನ್ನು ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಮೂಢನಂಬಿಕೆಯಲ್ಲ ಅಥವಾ ಬಲವಂತದ ಆಚರಣೆಯಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಶಾಸ್ತ್ರ ಹೇಳಿದೆ.
ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ ನೀಡಿರುವ ಐಶ್ವರ್ಯ, ಆರೋಗ್ಯ ಮತ್ತು ಪ್ರಕೃತಿಯ ಕೊಡುಗೆಗಳಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆರತಿ ತಟ್ಟೆಗೆ ನಾಣ್ಯವನ್ನು ಹಾಕುವುದು ಎಂದರೆ ನಮ್ಮಲ್ಲಿರುವ ‘ಮಮಕಾರ’ ಮತ್ತು ‘ಅಹಂಕಾರ’ವನ್ನು ದೇವರ ಪಾದಕ್ಕೆ ಅರ್ಪಿಸುವುದು ಎಂದರ್ಥ. ದೇವಸ್ಥಾನಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಬರಿಗೈಯಲ್ಲಿ ವಾಪಸ್ ಬರಬಾರದು ಎಂಬ ನಿಯಮವಿದೆ. ಭಕ್ತಿಪೂರ್ವಕವಾಗಿ ನೀಡುವ ಈ ಕಾಣಿಕೆ ಮನುಷ್ಯನಲ್ಲಿ ಕಂಜೂಸ್ ಗುಣವನ್ನು ದೂರ ಮಾಡಿ, ತ್ಯಾಗ ಮನೋಭಾವನೆಯನ್ನು ಬೆಳೆಸುತ್ತದೆ.
ಪ್ರಾಚೀನ ಇತಿಹಾಸವನ್ನು ಗಮನಿಸಿದರೆ, ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ಇಡೀ ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ರಾಜರು ಮತ್ತು ಶ್ರೀಮಂತರು ದೇವಸ್ಥಾನಗಳಿಗೆ ಭಾರಿ ದಾನ ನೀಡುತ್ತಿದ್ದರು. ಆದರೆ ಸಾಮಾನ್ಯ ಜನರಿಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಸಿಗಲೆಂದು ಆರತಿ ತಟ್ಟೆಗೆ ಸಣ್ಣ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂತು. ಈ ರೀತಿ ಸಂಗ್ರಹವಾದ ಹಣವನ್ನು ದೇವಸ್ಥಾನದ ದೀಪದ ಎಣ್ಣೆ, ಪೂಜಾ ಸಾಮಗ್ರಿಗಳು, ಅರ್ಚಕರ ಜೀವನೋಪಾಯ ಹಾಗೂ ಅಲ್ಲಿಗೆ ಬರುವ ಬಡ ಭಕ್ತರ ಅನ್ನದಾನಕ್ಕೆ ಬಳಸಲಾಗುತ್ತಿತ್ತು.
ಹಳೆಯ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಂಪೂರ್ಣವಾಗಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಲೋಹದಿಂದ ಮಾಡಲ್ಪಟ್ಟಿದ್ದವು. ಆರತಿಯನ್ನು ಸಾಮಾನ್ಯವಾಗಿ ತಾಮ್ರ ಅಥವಾ ಹಿತ್ತಾಳೆ ತಟ್ಟೆಯಲ್ಲೇ ಬೆಳಗಲಾಗುತ್ತದೆ. ಲೋಹದ ನಾಣ್ಯಗಳು ತಟ್ಟೆಗೆ ಸ್ಪರ್ಶಿಸಿದಾಗ ಮತ್ತು ಕರ್ಪೂರದ ಶಾಖ ತಗುಲಿದಾಗ, ಅಲ್ಲಿ ಒಂದು ಧನಾತ್ಮಕ ಶಕ್ತಿ ಹಾಗೂ ಕಂಪನ ಉತ್ಪತ್ತಿಯಾಗುತ್ತದೆ. ಭಕ್ತರು ಆರತಿ ತೆಗೆದುಕೊಳ್ಳುವಾಗ ಕೈಗಳನ್ನು ತಟ್ಟೆಯ ಹತ್ತಿರ ತಂದಾಗ ಆ ದಿವ್ಯ ಲೋಹದ ಶಕ್ತಿ ಅವರ ದೇಹವನ್ನು ಪ್ರವೇಶಿಸುತ್ತದೆ ಎಂಬ ವೈಜ್ಞಾನಿಕ ನಂಬಿಕೆಯೂ ಇದೆ.
ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ
ಶಾಸ್ತ್ರಗಳ ಪ್ರಕಾರ, ಆರತಿ ತಟ್ಟೆಗೆ ಇಷ್ಟೇ ಹಣ ಹಾಕಬೇಕು ಎಂಬ ಯಾವುದೇ ಕಟ್ಟುಪಾಡುಗಳಿಲ್ಲ. ನಿಮ್ಮ ಶಕ್ತಿ ಮತ್ತು ಭಕ್ತಿಗೆ ಅನುಗುಣವಾಗಿ ಶ್ರದ್ಧೆಯಿಂದ ಒಂದು ರೂಪಾಯಿ ಹಾಕಿದರೂ ಅದು ಕೋಟಿ ಪುಣ್ಯವನ್ನು ತರುತ್ತದೆ. ಇಲ್ಲಿ ಭಕ್ತಿ ಪ್ರಧಾನವೇ ಹೊರತು ಹಣದ ಮೌಲ್ಯವಲ್ಲ ಎಂದು ಧರ್ಮಶಾಸ್ತ್ರಗಳು ಸಾರುತ್ತವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ