ಕೃಷ್ಣಾವತಾರದ ಅಂತ್ಯದಲ್ಲಿ ಒಂದೇ ತಿಂಗಳಲ್ಲಿ ಬಂದಿತ್ತು ಎರಡು ಅಮಾವಾಸ್ಯೆ; ಇನ್ನೊಂದು ತಿಂಗಳಲ್ಲಿ ಅಂಥದ್ದೇ ಸನ್ನಿವೇಶ

ಒಂದು ತಿಂಗಳ ಫಾಸಲೆಯೊಳಗೆ ಎರಡು ಅಮಾವಾಸ್ಯೆ ಬಂದಿರುವುದರಿಂದ ಪ್ರಕೃತಿ ಹಾಗೂ ಮಾನವರ ಮೇಲೆ ಇದರ ಪರಿಣಾಮವನ್ನು ಕಾಣಬಹುದು. ಇನ್ನು ಇದು ಎಷ್ಟು ಸಮಯ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೃಷ್ಣಾವತಾರದ ಅಂತ್ಯದಲ್ಲಿ ಒಂದೇ ತಿಂಗಳಲ್ಲಿ ಬಂದಿತ್ತು ಎರಡು ಅಮಾವಾಸ್ಯೆ; ಇನ್ನೊಂದು ತಿಂಗಳಲ್ಲಿ ಅಂಥದ್ದೇ ಸನ್ನಿವೇಶ
Follow us
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2023 | 1:10 PM

ಇನ್ನು ಒಂದು ತಿಂಗಳಲ್ಲಿ ಎರಡು ಅಮಾವಾಸ್ಯೆ ಬರಲಿದೆ. ರವಿ ಗ್ರಹ ಮೂವತ್ತು ಡಿಗ್ರಿ ಕ್ರಮಿಸುವುದರೊಳಗಾಗಿ ಚಂದ್ರ 720 ಡಿಗ್ರಿ ಕ್ರಮಿಸಿದಂತಾಗುತ್ತದೆ. ಇದೇ ಒಂದು ವೇಳೆ ರವಿ ಗ್ರಹ ಏನಾದರೂ ರಾಹು (ಸದ್ಯಕ್ಕೆ ಮೇಷ ರಾಶಿ) ಅಥವಾ ಕೇತು (ಸದ್ಯಕ್ಕೆ ತುಲಾ ರಾಶಿ) ಜತೆಗೆ ಇದ್ದಿದ್ದರೆ ಸೂರ್ಯ ಗ್ರಹಣ ಆಗಿರುತ್ತಿತ್ತು. ಆಗ ಪರಿಸ್ಥಿತಿ ಬಹಳ ವಿಕೋಪಕ್ಕೆ ಹೋಗುತ್ತಿತ್ತು. ಹಾಗಂತ ಈಗಿನ ಈ ಸ್ಥಿತಿ ಒಳ್ಳೆಯದು ಅಂತೇನೂ ಅಲ್ಲ. ಹೀಗೆ ಒಂದು ತಿಂಗಳ ಫಾಸಲೆಯೊಳಗೆ ಎರಡು ಅಮಾವಾಸ್ಯೆ ಬಂದಿರುವುದರಿಂದ ಪ್ರಕೃತಿ ಹಾಗೂ ಮಾನವರ ಮೇಲೆ ಇದರ ಪರಿಣಾಮವನ್ನು ಕಾಣಬಹುದು. ಇನ್ನು ಇದು ಎಷ್ಟು ಸಮಯ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಬರುತ್ತದೆ. ಇಳಿಜಾರಿನ ಹಾದಿಯಲ್ಲಿ ದೊಡ್ಡ ಬಂಡೆಯೊಂದನ್ನು ಉರುಳಿಬಿಟ್ಟರೆ ಅದು ಇಂಥಲ್ಲಿಯೇ ನಿಲ್ಲುತ್ತದೆ ಎಂಬುದನ್ನು ಗ್ರಹಿಸುವುದು ಕಷ್ಟ. ಅದು ತಡೆದು ನಿಲ್ಲುವ ಸ್ಥಳವೊಂದು ಎದುರಾಗಬೇಕು, ಅಲ್ಲಿಯ ತನಕ ಉರುಳುತ್ತಾ ಅದರ ಪ್ರಭಾವ ಬೀರುತ್ತಲೇ ಇರುತ್ತದೆ.

ಪ್ರಕೃತಿ ಮೇಲಿನ ಪರಿಣಾಮ ಅಂದಾಗ ಭೂಕಂಪನ, ಸುನಾಮಿ, ಸಮುದ್ರಕ್ಕೆ ಸಂಬಂಧಿಸಿದಂಥ ಅನಾಹುತಗಳು ಆಗಬಹುದು. ಇನ್ನು ಮಾನವರ ಮೇಲಿನ ಪ್ರಭಾವ ಅಂತ ನೋಡುವುದಾದರೆ, ಧರ್ಮಕ್ಕೆ ಸಂಬಂಧಿಸಿದಂತೆ ಕಲಹ, ಜಾತಿ- ಜಾತಿಗಳ ಮಧ್ಯೆ ಕಲಹ ಇವುಗಳಾಗಬಹುದು. ಮುಖ್ಯವಾಗಿ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತಿದಂತಾಗುತ್ತದೆ. ಈ ಕಾರಣಕ್ಕೆ ನಾನು ಹೆಚ್ಚು- ನಾನೇ ಸರಿ, ನಾವಷ್ಟೇ ಇರಬೇಕು, ಎಲ್ಲರೂ ನಾವು ಅನುಸರಿಸುವುದನ್ನೇ ಅನುಸರಿಸಬೇಕು ಇಂಥ ಭಾವನೆಗಳು ಪ್ರಚೋದನೆಗೊಂಡು ಕಲಹಗಳಿಗೆ ಕಾರಣವಾಗುತ್ತದೆ. ಅದೇ ರೀತಿ ಮನುಷ್ಯರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ದೊರೆಯುವಂಥ ಸನ್ನಿವೇಶಗಳು ಎದುರಾಗುತ್ತವೆ.

ಇದನ್ನೂ ಓದಿ: ಸ್ನಾನವನ್ನು ಯಾವಾಗ ಮಾಡಬೇಕು? ಏಕೆ ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?

ಜನ್ಮ ಜಾತಕದಲ್ಲಿ ಯಾರಿಗೆ ಈ ಕೆಳಕಂಡಂಥ ಗ್ರಹ ಸ್ಥಿತಿಗಳು ಇವೆಯೋ ಅಂಥವರು ಮಾನಸಿಕವಾಗಿ ಗಟ್ಟಿ ಆಗಬೇಕು.

– ಜನ್ಮ ಜಾತಕದಲ್ಲಿ ಚಂದ್ರನಿಂದ ಹನ್ನೆರಡು- ಎರಡನೇ ಮನೆಯಲ್ಲಿ ಯಾವುದೇ ಗ್ರಹಗಳು ಇಲ್ಲದ ಪಕ್ಷದಲ್ಲಿ (ದ್ವಿರ್ದ್ವಾದ್ವಶ- ಇದನ್ನು ಕೇಮದ್ರುಮ ಯೋಗ) ಅಂಥವರು ಜಾಗ್ರತೆಯಿಂದ ಇರಬೇಕು.

– ಯಾರಿಗೆ ಜಾತಕದಲ್ಲಿ ಚಂದ್ರ ನೀಚ ಸ್ಥಾನದಲ್ಲಿ ಇರುತ್ತದೋ ಅಥವಾ ಚಂದ್ರ ದುರ್ಬಲ ಆಗಿರುತ್ತದೋ ಅಂಥವರು ಎಚ್ಚರಿಕೆ ವಹಿಸಬೇಕು.

– ಚಂದ್ರನಿಗೆ ಆರು ಅಥವಾ ಎಂಟನೇ ಮನೆಯಲ್ಲಿ ರವಿ ಗ್ರಹ ಇದ್ದರೆ ಆಗಲೂ ಸಮಸ್ಯೆ.

– ಚಂದ್ರನಿಂದ ಕೇಂದ್ರ ಸ್ಥಾನದಲ್ಲಿ (1, 4, 7, 10) ಯಾವುದೇ ಗ್ರಹಗಳು ಇಲ್ಲದಿದ್ದರೆ ಎಚ್ಚರ.

– ಚಂದ್ರನು ಶನಿಯೊಟ್ಟಿಗೆ ಯುತಿಯಲ್ಲಿ ಇದ್ದರೆ ಜಾಗ್ರತೆ.

– ರಾಹು ಅಥವಾ ಕೇತುವಿನ ಜತೆಗೆ ಚಂದ್ರ ಯುತಿಯಲ್ಲಿ ಇದ್ದಲ್ಲಿ ಆಗಲೂ ಸಮಸ್ಯೆ

– ಚಂದ್ರನಿಗೆ ಪಕ್ಷ ಬಲವನ್ನು ಸಹ ನೋಡಬೇಕು (ಶುಕ್ಲ ಪಕ್ಷವೋ ಅಥವಾ ಕೃಷ್ಣ ಪಕ್ಷವೋ ನೋಡಬೇಕು).

– ಶತ್ರು ಗ್ರಹಗಳ ಜತೆಗೆ ಚಂದ್ರನು ಇದ್ದಲ್ಲಿ ಆಗಲೂ ತೊಂದರೆ

ಕೃಷ್ಣಾವತಾರದ ಅಂತ್ಯದಲ್ಲಿ ಹಾಗೂ ಶ್ರೀರಾಮನ ಪಟ್ಟಾಭಿಷೇಕದ ವರ್ಷದಲ್ಲಿ ಹೀಗೆ ಒಂದು ತಿಂಗಳಲ್ಲಿ ಎರಡು ಅಮಾವಾಸ್ಯೆಗಳು ಬಂದಿದ್ದವು ಎಂಬ ಉಲ್ಲೇಖವಿದೆ. ಆದ್ದರಿಂದ ಇಂಥ ಸನ್ನಿವೇಶದಲ್ಲಿ ಎಂಥ ಫಲ ನಿರೀಕ್ಷೆ ಮಾಡಬಹುದು ಎಂಬುದು ಇದರಲ್ಲಿಯೇ ತಿಳಿಯುತ್ತದೆ.

ಇನ್ನು ವ್ಯಕ್ತಿಗಳ ವಿಚಾರದಲ್ಲಿ ಹೇಳುವುದಾದರೆ ಯಾರು ಮಾನಸಿಕವಾಗಿಯೂ ದುರ್ಬಲರಾಗಿರುತ್ತಾರೋ ಹಾಗೂ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿರಬಹುದು. ಇಂಥವರು ಹಿಂದಿಗಿಂತಲೂ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು.

ಚಂದ್ರ ಅಂದರೆ ಮನೋಕಾರಕ. ಆದ್ದರಿಂದ ಮಾನಸಿಕ ವಿಕಾರಗಳು ಏರ್ಪಡದಂತೆ ಎಚ್ಚರಿಕೆಯನ್ನು ವಹಿಸಬೇಕು. ಸಾತ್ವಿಕ ಆಹಾರ ಸೇವನೆ, ದೈವ ಚಿಂತನೆ- ಆರಾಧನೆ, ಸತ್ ಚಿಂತನೆ ಇಂಥವುಗಳಿಂದ ಮನಸ್ಸನ್ನು ತಹಬಂದಿಗೆ ತರುವುದಕ್ಕೆ ಯತ್ನಿಸಬೇಕು.

ಅಂದ ಹಾಗೆ, ಈಗ ಬಂದಿರುವುದು ಅಧಿಕ ಶ್ರಾವಣ ಮಾಸ. ಈ ಅಧಿಕ ಮಾಸದಲ್ಲಿ ಅಧಿಕಸ್ಯ ಅಧಿಕ ಫಲಂ ಎನ್ನುತ್ತಾರೆ. ನೀವು ಶುಭ ಕಾರ್ಯಗಳನ್ನು ಮಾಡಿದಲ್ಲಿ ಅದರಿಂದ ಅಧಿಕ ಫಲಂ. ಅದೇ ರೀತಿ ಪಾಪ ಕಾರ್ಯಗಳನ್ನು ಮಾಡಿದಲ್ಲಿ ಅದರ ದುಷ್ಫಲವೂ ಅಧಿಕ. ಆದ್ದರಿಂದ ಸತ್ಕಾರ್ಯಗಳನ್ನು ಮಾಡುವುದಕ್ಕೇ ಆದ್ಯತೆ ನೀಡಬೇಕು.

ವೃಶ್ಚಿಕ ರಾಶಿಯವರೇ ಆಗಿದ್ದು, ಜನ್ಮ ಜಾತಕದಲ್ಲಿ ಶುಭ ಯೋಗಗಳು ಇಲ್ಲ ಎಂದಾದಲ್ಲಿ ಯದ್ವಾತದ್ವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಫಲಿತಾಂಶ- ಪರಿಣಾಮಗಳ ವಿವೇಚನೆ ಇಲ್ಲದೆ, ಬಾಯಿಗೆ ಬಂದಂತೆ ಮಾತನಾಡಿ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆಗಳು ಸಹ ಉಂಟು.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ