Navratri 2025 Day 3: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ ಮತ್ತು ಪೂಜಾ ವಿಧಾನ ತಿಳಿಯಿರಿ
ಶರನ್ನವರಾತ್ರಿಯ ಮೂರನೇ ದಿನ ಆರಾಧಿಸುವ ಚಂದ್ರಘಂಟಾ ದೇವಿಯ ಮಹತ್ವ, ಪೂಜಾ ವಿಧಾನ ಮತ್ತು ಪುರಾಣವನ್ನು ಇಲ್ಲಿ ವಿವರಿಸಲಾಗಿದೆ. ದೇವಿಯ ಈ ರೂಪವು ಶಾಂತಿ ಹಾಗೂ ಶ್ರೇಯಸ್ಸಿನ ಸಂಕೇತವಾಗಿದೆ. ಅವಳ ಆರಾಧನೆಯಿಂದ ಪಾಪಕ್ಷಯ, ಇಚ್ಛಾ ಪೂರ್ತಿ, ಧೈರ್ಯ ಮತ್ತು ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಕೆಂಪು ಬಣ್ಣದ ವಸ್ತ್ರ ಮತ್ತು ಮಲ್ಲಿಗೆ ಹೂವುಗಳಿಂದ ಪೂಜಿಸುವುದು ಶ್ರೇಷ್ಠ.

ಶರನ್ನವರಾತ್ರಿಯ ಮೂರನೇ ದಿನ ಆರಾಧಿಸಲ್ಪಡುವ ದುರ್ಗೆಯ ಸ್ವರೂಪವೇ ಚಂದ್ರಘಂಟಾ. ಅವಳನ್ನು ಚಂದ್ರಿಕಾ ಅಥವಾ ರಣಚಂಡಿ ಎಂದೂ ಕರೆಯಲಾಗುತ್ತದೆ. ದೇವಿಯ ವಿಗ್ರಹವನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಿದರೆ ಶುಭಫಲ ದೊರೆಯುತ್ತದೆ. ತಲೆ ಮೇಲೆ ಗಂಟೆಯಾಕಾರದ ಅರ್ಧಚಂದ್ರ ಹೊಳೆಯುವುದರಿಂದ ಆಕೆಗೆ “ಚಂದ್ರಘಂಟಾ” ಎಂಬ ನಾಮ ಬಂದಿದೆ. ಈ ರೂಪವು ಶಾಂತಿ ಹಾಗೂ ಶ್ರೇಯಸ್ಸಿನ ಸಂಕೇತವಾಗಿದೆ.
ಚಂದ್ರಘಂಟಾ ದೇವಿಯ ಧ್ಯಾನ ಶ್ಲೋಕ:
ಪಿಂಡಜಪ್ರವರಾರೂಢಾ ಚಂಡಕೋಪಾಸಕೈರ್ಯುತಾ ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ
ಚಂದ್ರಘಂಟೆಯ ಸ್ವರೂಪ:
- ದೇಹದ ವರ್ಣವು ಚಿನ್ನದಂತೆ ಪ್ರಕಾಶಮಾನ.
- ಹತ್ತು ಕೈಗಳಲ್ಲಿ ವಿಭಿನ್ನ ಶಸ್ತ್ರಗಳು – ಖಡ್ಗ, ಬಾಣ ಇತ್ಯಾದಿ.
- ಸಿಂಹವಾಹಿನಿಯಾಗಿ ಯುದ್ಧಸಜ್ಜಳಾಗಿ ನಿಂತಿರುವ ರೂಪ.
- ಆಕೆಯ ಗಂಟೆಯ ಧ್ವನಿಯ ಶಕ್ತಿ – ದೈತ್ಯರು, ರಾಕ್ಷಸರು ದುರ್ಬಲರಾಗುತ್ತಾರೆ.
ಆರಾಧನೆಯ ಮಹತ್ವ:
- ಚಂದ್ರಘಂಟಾ ಪೂಜೆಯಿಂದ ಪಾಪಕ್ಷಯ ಸಂಭವಿಸುತ್ತದೆ.
- ಭಕ್ತರ ಇಚ್ಛೆಗಳು ನಿಶ್ಚಯವಾಗಿ ನೆರವೇರುತ್ತವೆ.
- ಸಿಂಹದಂತೆ ಪರಾಕ್ರಮ, ಧೈರ್ಯ ಹಾಗೂ ನಿರ್ಭಯತೆ ದೊರೆಯುತ್ತದೆ.
- ಪ್ರೇತಬಾಧೆ, ದುಷ್ಟಶಕ್ತಿಗಳಿಂದ ರಕ್ಷಣೆ.
- ಕಷ್ಟಗಳು ದೂರವಾಗಿ ಸುಖಶಾಂತಿ ದೊರೆಯುತ್ತದೆ.
ಪೂಜಾ ವಿಧಾನ:
- ಮಲ್ಲಿಗೆ ಹೂವಿನಿಂದ ಪೂಜೆ ಮಾಡುವುದು ಶ್ರೇಷ್ಠ.
- ಭಕ್ತಿಯಿಂದ 16 ಬಗೆಯ ಉಪಚಾರ ಅರ್ಪಣೆ.
- ಆರತಿ ಸಮರ್ಪಣೆ ಅತ್ಯಾವಶ್ಯಕ.
- ಕೆಂಪು ಬಣ್ಣದ ವಸ್ತ್ರ ಹಾಗೂ ಅಲಂಕಾರ ತಾಯಿಗೆ ಅತಿ ಪ್ರಿಯ.
ಇದನ್ನೂ ಓದಿ: ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ; ದೇವಿಯ ಸ್ತುತಿ ಹಾಗೂ ಪೂಜಾ ವಿಧಾನ ಇಲ್ಲಿದೆ
ಚಂದ್ರಘಂಟಾ ಪೌರಾಣಿಕ ಪ್ರಸಂಗ:
ಪಾರ್ವತಿಯ ವಿವಾಹದ ಸಮಯದಲ್ಲಿ ಶಿವನು ತನ್ನ ಭೀಕರ ರೂಪದೊಂದಿಗೆ ಗಣಗಳೊಂದಿಗೆ ಬಂದು ನಿಂತಾಗ, ಮಾತೆ ಚಿಂತೆಗೊಂಡು ಮೂರ್ಛಿತಳಾದಳು. ಆಗ ಚಂದ್ರಘಂಟಾ ಸ್ವರೂಪದಲ್ಲಿ ಅವಳು ಪ್ರತ್ಯಕ್ಷಳಾಗಿ, ಶಿವನು ಸುಂದರ ವಧೂವರನಂತೆ ಕಾಣಬೇಕೆಂದು ಪ್ರಾರ್ಥಿಸಿದಳು. ಆಕೆಯ ಪ್ರಾರ್ಥನೆಯ ಫಲವಾಗಿ ಶಿವನು ಸೌಮ್ಯರೂಪ ತಾಳಿದನು. ಹೀಗೆ ಶಿವ–ಪಾರ್ವತಿಯ ದಿವ್ಯವಿವಾಹ ನೆರವೇರಿತು.
ಕೆಂಪು ಬಣ್ಣದ ಮಹತ್ವ:
- ನವರಾತ್ರಿಯ ಮೂರನೇ ದಿನ ಕೆಂಪು ಬಣ್ಣಕ್ಕೆ ಆದ್ಯತೆ.
- ಧೈರ್ಯ, ಶೌರ್ಯ ಮತ್ತು ಕೃಪೆಯ ಸಂಕೇತ.
- ಕೆಂಪು ವಸ್ತ್ರ ಹಾಗೂ ಕೆಂಪು ಹೂವುಗಳಿಂದ ಆರಾಧನೆ ಮಾಡಿದರೆ ಭಕ್ತರ ಕುಟುಂಬಕ್ಕೆ ಶ್ರೇಯಸ್ಸು, ಆರ್ಥಿಕ ಸುಸ್ಥಿತಿ ಹಾಗೂ ಆಧ್ಯಾತ್ಮಿಕ ಶಕ್ತಿ ದೊರೆಯುತ್ತದೆ.
- ಚಂದ್ರಘಂಟಾ ಸ್ವರೂಪಿಣಿ ಆರಾಧನೆಯಿಂದ ಭಯ, ದುರ್ಬಲತೆ, ದುಷ್ಟಬಾಧೆ ನಿವಾರಣೆಗೊಂಡು, ಜೀವನದಲ್ಲಿ ಶಕ್ತಿ, ಶಾಂತಿ ಮತ್ತು ಪರಾಕ್ರಮ ಬೆಳೆಯುತ್ತದೆ.
ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




