Deepavali vs Diwali: ದೀಪಾವಳಿ ಅಥವಾ ದಿವಾಳಿ, ಯಾವ ಪದ ಬಳಸುವುದು ಸೂಕ್ತ?
ದೀಪಾವಳಿ ಮತ್ತು ದಿವಾಳಿ ಪದಗಳ ಬಳಕೆಯಲ್ಲಿನ ಗೊಂದಲವನ್ನು ಇಲ್ಲಿ ವಿವರಿಸಲಾಗಿದೆ. 'ದೀಪಾವಳಿ' ಶಾಸ್ತ್ರೀಯ ಮತ್ತು ಸಂಸ್ಕೃತದ ಮೂಲ ಪದವಾಗಿದ್ದು, 'ದೀಪಗಳ ಸಾಲು' ಎಂದರ್ಥ. 'ದಿವಾಳಿ' ಎಂಬುದು ಜನಪ್ರಿಯ ಬಳಕೆಯ ರೂಪವಾದರೂ, ಕನ್ನಡದಲ್ಲಿ 'ದಿವಾಳಿತನ' ಎಂಬ ಬೇರೆ ಅರ್ಥವನ್ನು ನೀಡುತ್ತದೆ. ಆದ್ದರಿಂದ, ಹಬ್ಬದ ಶುಭಾಶಯಗಳಿಗೆ 'ದೀಪಾವಳಿ' ಪದವನ್ನೇ ಬಳಸುವುದು ಸೂಕ್ತ.

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಇದರ ಜೊತೆಗೆ ಹಬ್ಬದ ಶುಭ ಸಂದೇಶಗಳು ಸೋಶಿಯಲ್ ಮೀಡಿಯಾಗಳಲ್ಲಿ ರವಾನೆಯಾಗುತ್ತಿವೆ. ಕೆಲವೊಂದಿಷ್ಟು ‘ದೀಪಾವಳಿಯ ಶುಭಾಶಯಗಳು’ ಎಂಬ ಸಂದೇಶಗಳು ಬಂದರೆ, ಇನ್ನೊಂದೆಡೆ ‘ಹ್ಯಾಪಿ ದಿವಾಳಿ’ ಸದ್ದು ಜೋರಾಗಿದೆ. ಆದರೆ ಈ ಪದ ಯಾಕೆ ಬಂತು ದೀಪಾವಳಿ ಅಥವಾ ದಿವಾಳಿ, ಯಾವುದು ಸರಿಯಾದ ಪದ? ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
‘ದೀಪಾವಳಿ’ ಶಾಸ್ತ್ರೋಕ್ತ ಮತ್ತು ಮೂಲ ಪದ:
ಸಂಸ್ಕೃತದಲ್ಲಿ ಇದರ ಸರಿಯಾದ ಮತ್ತು ಮೂಲ ಪದ ‘ದೀಪಾವಳಿ’ ಆಗಿದೆ. ಇದು ಎರಡು ಪದಗಳಿಂದ ನಿರ್ಮಿತವಾಗಿದೆ. ದೀಪ ಎಂದರೆ ದೀಪಕ (ಬೆಳಕು) ಜೊತೆಗೆ ಆವಳಿ ಎಂದರೆ ಸರಪಳಿ, ಸಾಲು ಅಥವಾ ಪಂಕ್ತಿ. ಇದರ ಒಟ್ಟಾರಡ ಅರ್ಥ ದೀಪಗಳ ಪಂಕ್ತಿ ಅಥವಾ ದೀಪಗಳ ಸರಪಳಿ. ಆದ್ದರಿಂದ ಸಂಸ್ಕೃತ ಮತ್ತು ಶಾಸ್ತ್ರಗಳಲ್ಲಿ ಇದನ್ನು ‘ದೀಪಾವಳಿ’ ಎಂದೇ ಕರೆಯಲಾಗಿದೆ.
‘ದಿವಾಳಿ’ ಪ್ರಚಲಿತ ಬಳಕೆಯಲ್ಲಿರುವ ರೂಪ:
‘ದೀಪಾವಳಿ’ ಎಂಬ ಪದದ ಜನಪ್ರಿಯ ಮತ್ತು ಲೌಕಿಕ ರೂಪ ದಿವಾಳಿ ಆಗಿದೆ. ಕಾಲಕ್ರಮೇಣ ಸಾಮಾನ್ಯ ಮಾತಿನಲ್ಲಿ ‘ದೀಪ’ ‘ದಿವ’ ಆಗಿ ಬದಲಾಯಿತು. ಹಾಗೆ ಅನೇಕ ಸಂಸ್ಕೃತ ಪದಗಳಲ್ಲಿಯೂ ರೂಪಾಂತರ ಕಂಡುಬಂದಿದೆ. ಆದ್ದರಿಂದ ‘ದಿವಾಳಿ’ ತಪ್ಪು ಪದವಲ್ಲ, ಆದರೆ ಶಾಸ್ತ್ರೀಯ ಅಥವಾ ಶುದ್ಧ ರೂಪವಲ್ಲ.
ಶಾಸ್ತ್ರಗಳಲ್ಲಿ ಪ್ರಾಮಾಣಿಕತೆ:
ಪುರಾಣಗಳು ಮತ್ತು ಗ್ರಂಥಗಳಲ್ಲಿ ದೀಪಾವಳಿ ಎಂಬ ಪದವೇ ಕಂಡುಬರುತ್ತದೆ, ಉದಾಹರಣೆಗೆ ಸ್ಕಂದಪುರಾಣ, ಪದ್ಮಪುರಾಣ, ನಾರದಪುರಾಣ ಮೊದಲಾದ ಗ್ರಂಥಗಳಲ್ಲಿ ಇದರ ಉಲ್ಲೇಖವಿದೆ.
ಉದಾಹರಣೆ (ಸ್ಕಂದಪುರಾಣ):
ಕಾರ್ತಿಕಮಾಸೇ ಅಮಾವಾಸ್ಯಾಯಾಂ ದೀಪದಾನಂ ಶುಭಂ ಸ್ಮೃತಮ್। ದೀಪಾವಲ್ಯಾಂ ತು ಯಃ ಕುರ್ಯಾತ್ ಸ ಸರ್ವಪಾಪೈಃ ಪ್ರಮುಚ್ಯತೇ॥
ಇಲ್ಲಿ “ದೀಪಾವಲ್ಯಾಂ” (ದೀಪಾವಳಿಯ ದಿನ) ಎಂಬ ಪದ ಸ್ಪಷ್ಟವಾಗಿ ಕಾಣುತ್ತದೆ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಕನ್ನಡದಲ್ಲಿ ದಿವಾಳಿ ಪದ ಬಳಕೆ:
‘ದೀಪಾವಳಿ’ ಮತ್ತು ‘ದಿವಾಳಿ’ ವಿಭಿನ್ನ ಪದಗಳಾಗಿವೆ. ಹಿಂದಿ, ಆಂಗ್ಲ ಭಾಷೆಗಳಲ್ಲಿ ‘ದಿವಾಳಿ’ ಎಂದು ಹೇಳಿದರೂ, ಕನ್ನಡದಲ್ಲಿ ಇದು ವಿಭಿನ್ನ ಅರ್ಥವನ್ನು ನೀಡುತ್ತದೆ. ‘ದೀಪಾವಳಿ’ ಎಂದರೆ ‘ದೀಪಗಳ ಸಾಲು’ ಮತ್ತು ಇದು ಬೆಳಕಿನ ಹಬ್ಬವನ್ನು ಸೂಚಿಸುತ್ತದೆ, ಆದರೆ ‘ದಿವಾಳಿ’ ಎಂದರೆ ದಿವಾಳಿತನ, ಅಂದರೆ ಹಣಕಾಸಿನ ತೊಂದರೆ ಅಥವಾ ಹಬ್ಬಕ್ಕೆ ಸಂಬಂಧವಿಲ್ಲದ ಇನ್ನೊಂದು ಪದವಾಗಿದೆ. ಆದ್ದರಿಂದ ಹಬ್ಬದ ಶುಭಾಶಯ ಹೇಳುವಾಗ ‘ದೀಪಾವಳಿ’ ಪದವನ್ನು ಬಳಸುವುದು ಉತ್ತಮ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Tue, 21 October 25




