ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರು ನಗರವಾಸಿಗಳು ಗೌರಿ ಗಣೇಶ ಹಬ್ಬ ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾದ್ರಪದ ಶುಕ್ಲ ಚೌತಿಯಂದು ಬರುವ ಗೌರಿ-ಗಣೇಶನನ್ನ ಸ್ವಾಗತಿಸಲು ಸಿಟಿ ಮಂದಿ ಸಜ್ಜಾಗಿದ್ದು, ಗುರುವಾರವೇ ಕೆಆರ್ ಮಾರ್ಕೆಟ್ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ವ್ಯಸ್ತರಾಗಿದ್ದರು. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಿತ್ತು.
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ದರ ತಗ್ಗಿದ್ದು ಗ್ರಾಹಕರಿಗೆ ನೆಮ್ಮದಿ ಮೂಡಿಸಿತ್ತು.
ಕನಕಾಂಬರ ಕೆಜಿಗೆ – 3000 ರೂ.
ಮಲ್ಲಿಗೆ – ಕೆಜಿಗೆ 600 ರೂ.
ಗುಲಾಬಿ- ಕೆಜಿಗೆ 250 ರೂ.
ಸೇವಂತಿಗೆ – ಕೆಜಿಗೆ 180 ರೂ.
ಸುಗಂಧರಾಜ-ಕೆಜಿಗೆ 240 ರೂ.
ಇನ್ನು ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ.
ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಮುಂಬೈ, ಪುಣೆ ಸೇರಿದಂತೆ ಹಲವೆಡೆಯಿಂದ ಬಂದ ಗಣಪನ ಮೂರ್ತಿಗಳು ಮಾರಾಟವಾಗಿದ್ದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ: ಮಾನವ ಮುಖದ ಗಣೇಶನ ವಿಗ್ರಹ ಹೊಂದಿರುವ ದೇವಾಲಯವಿದು
ಒಟ್ಟಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ನಗರವಾಸಿಗಳು ಸಜ್ಜಾಗಿದ್ದು, ವಾರಾಂತ್ಯದಲ್ಲೇ ಹಬ್ಬ ಬಂದಿರುವುದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ