ಹನುಮಜಯಂತಿ (ಏಪ್ರಿಲ್ 27, 2021) ಬಗ್ಗೆ ಪಂಡಿತ್ ಡಾ. ಭಿಮಸೇನಾಚಾರ್ ಅಥನೂರು ಅವರು ಈ ದಿನದ ವಿಶೇಷ ಹಾಗೂ ಮಾಡಬೇಕಾದ ದಾನ- ಧರ್ಮ ಹಾಗೂ ಆಚರಣೆಗಳ ಬಗ್ಗೆ ಯೂಟ್ಯೂಬ್ನಲ್ಲಿ ಮಾಡಿದ ಪ್ರವಚನದ ಆಯ್ದ ಭಾಗವನ್ನು ಅವರ ಒಪ್ಪಿಗೆ ಪಡೆದು, ಇಲ್ಲಿ ಸಣ್ಣ ಲೇಖನ ರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆಸ್ತಿಕರು ಇಲ್ಲಿನ ಆಚರಣೆಯನ್ನು ಅನುಸರಿಸಬಹುದು. ರಾಮಾಯಣದಲ್ಲಿ ಇರುವ ಸುಂದರಕಾಂಡದ ವಿಶೇಷವನ್ನು ಅವರು ತಿಳಿಸಿಕೊಟ್ಟಿದ್ದಾರೆ.
ಇಂದು ಚಿತ್ರಾ ಪೌರ್ಣಮಿ. ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಇಂದು ತುಂಬ ವಿಶಿಷ್ಟವಾದ ದಿನ. ಇಂದು ಹನುಮಂತ ದೇವರು ಅವತರಿಸಿದ ದಿನ. ತಿರುಪತಿಯಲ್ಲಿ ಇರುವ ಆಕಾಶ ಗಂಗೆಯಲ್ಲಿ ಇಂದು ಸ್ನಾನ ಮಾಡಿದರೆ ಹನ್ನೆರಡು ವರ್ಷಗಳ ಕಾಲ ತೀರ್ಥ ಸ್ನಾನ ಮಾಡಿದ ಪುಣ್ಯ ಬರುತ್ತದೆ ಎಂಬ ಉಲ್ಲೇಖ ಇದೆ. ಇನ್ನು ಈ ದಿನ ಚಿತ್ರಾನ್ನ, ಮೊಸರಾನ್ನವನ್ನು ದಾನ ಮಾಡಬೇಕು. ಇದರ ಜತೆಗೆ ಬ್ರಾಹ್ಮಣ ದಂಪತಿಗೆ ಭೋಜನ ವ್ಯವಸ್ಥೆಯನ್ನು ಮಾಡಿ, ಅವರಿಗೆ ಉತ್ತಮವಾದ ವಸ್ತ್ರದಾನವನ್ನು ಮಾಡಬೇಕು ಎಂದು ಕೂಡ ಹೇಳಲಾಗಿದೆ. ಪಾನಕ- ಕೋಸಂಬರಿ ಮೊದಲಾದವುಗಳು ದಾನದ ಬಗ್ಗೆ ಕೂಡ ಹೇಳಲಾಗಿದೆ. ಈ ದಾನ- ಧರ್ಮ ಎಲ್ಲದರ ಜತೆಗೆ ಇವತ್ತು ಹನುಮಂತ ದೇವರು ಅವತರಿಸಿದ ದಿನವಾದ್ದರಿಂದ ಸುಂದರ ಕಾಂಡದ ಪಾರಾಯಣ, ಶ್ರವಣ, ಪಠಣ ಹಾಗೂ ಚಿಂತನೆಯನ್ನು ಮಾಡಬೇಕು.
ಮಾರ್ಗಶಿರ ಮಾಸದ ಶುದ್ಧ ತ್ರಯೋದಶಿಯಂದು ಹನುಮದ್ ವ್ರತ ಎಂದು ಕರೆಯಲಾಗುತ್ತದೆ. ಚೈತ್ರ ಮಾಸದ ಪೌರ್ಣಮಿಯಂದು ಹನುಮದ್ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮಂತ ಅವತರಿಸಿದ ದಿನವಾದ ಇಂದು ಹನುಮದ್ ಜಯಂತಿ ಎಂದು ಆಚರಿಸಲಾಗುತ್ತದೆ. ಎರಡರ ಬಗ್ಗೆ ವ್ಯತ್ಯಾಸ ತಿಳಿದಿರಬೇಕು. ಮಧ್ವಾಚಾರ್ಯರು ತಮ್ಮ ಸರ್ವಮೂಲ ಗ್ರಂಥದಲ್ಲಿ ಹನುಮಂತ ದೇವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು, ವಿಚಾರಗಳನ್ನು ನಿರೂಪಿಸುತ್ತಾ ಹೋಗಲಿದ್ದೇನೆ. ಸುಂದರಕಾಂಡದ ನಿರೂಪಣೆಯನ್ನು ಆ ದೇವರ ಅನುಗ್ರಹದೊಂದಿಗೆ ಕೈಲಾದ ಮಟ್ಟಿಗೆ ಮಾಡುತ್ತಾ ಹೋಗುತ್ತೇನೆ.
ಸುಂದರ ಕಾಂಡ. ಇದು ಹೆಸರೇ ಹೇಳುವಂತೆ ಪರಮ ಸುಂದರ ಕಾಂಡ. ಸುಂದರೇ ಸುಂದರೋ ರಾಮ. ಸುಂದರೇ ಸುಂದರಿ ಸೀತೆ. ಸುಂದರೇ ಸುಂದರೋ ಕಪಿಃ. ಸುಂದರೇ ಸುಂದರಂ ಸರ್ವಂ, ಸುಂದರೇ ಕಿಮ್ನ ಸುಂದರಂ. ಸುಂದರ ಕಾಂಡದಲ್ಲಿ ಯಾವುದು ಸುಂದರವಲ್ಲ. ಇದರಲ್ಲಿ ಎಲ್ಲವೂ ಸುಂದರ. ಜೀವೋತ್ತಮರಾದ ಹನುಮಂತ ದೇವರ ಅವತಾರದ ಬಗ್ಗೆ, ಪರಾಕ್ರಮದ ಬಗ್ಗೆ ಸೊಗಸಾದ ವಿವರಣೆ ಇದೆ. ಸುಂದರಕಾಂಡ ಪಾರಾಯಣ ಮಾಡಿದರೆ ಸಕಲ ಇಷ್ಟಾರ್ಥ ಸಿದ್ಧಿ. ಶ್ರವಣ ಮಾಡಿದರೆ ಎಲ್ಲ ಕಷ್ಟಕೋಟಲೆಗಳು ನಿವಾರಣೆ ಆಗುತ್ತದೆ. ಇನ್ನು ಮೋಕ್ಷಕ್ಕೆ ಮಾರ್ಗವಾಗುತ್ತದೆ. ಆದ್ದರಿಂದ ರಾಮಾಯಣದಲ್ಲಿನ ಸುಂದರ ಕಾಂಡವನ್ನು ಇಂದು ಪಠಣ, ಶ್ರವಣ, ಚಿಂತನೆ ಮಾಡಬೇಕು. ಇವುಗಳ ಜತೆಗೆ ಮೇಲೆ ತಿಳಿಸಿದಂತೆ ಪಾನಕ- ಕೋಸಂಬರಿ, ಚಿತ್ರಾನ್ನ, ಮೊಸರನ್ನ ದಾನ, ಬ್ರಾಹ್ಮಣ ದಂಪತಿಗೆ ವಸ್ತ್ರದಾನ ಮಾಡಬೇಕು.
ನಿರೂಪಣೆ: ಎಮ್.ಶ್ರೀನಿವಾಸ
ಇದನ್ನೂ ಓದಿ: ಮನೆಯ ಮುಂಭಾಗವೇ ತುಳಸಿ ಗಿಡ ನೆಡೋದೇಕೆ?
(Hanuma Jayanti today. Here is the explainer about celebration, significance and ritual to be followed)
Published On - 4:13 pm, Tue, 27 April 21