Vatsavitri Vrata 2023: ವಟಸಾವಿತ್ರಿ ವ್ರತಾಚರಣೆಯ ಇತಿಹಾಸ, ಮಹತ್ವ, ಆಚರಣೆ ಹೇಗೆ?
ವಟ ಸಾವಿತ್ರಿ ವ್ರತ ಮಂಗಳಕರವಾದ ಹಿಂದೂ ಹಬ್ಬವಾಗಿದೆ. ಈ ದಿನ ಎಲ್ಲಾ ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮಕ್ಕಾಗಿ ಮತ್ತು ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ.
ಹಿಂದೂ ಧರ್ಮದಲ್ಲಿ ಪ್ರತಿ ಉಪವಾಸ ಮತ್ತು ಹಬ್ಬಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅಂತಹ ಉಪವಾಸ ಮತ್ತು ಹಬ್ಬಗಳಲ್ಲಿ ವಟ ಸಾವಿತ್ರಿ ವ್ರತವೂ ಒಂದು. ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ. ಮತ್ತು ಸತ್ಯವಾನ್-ಸಾವಿತ್ರಿಯ ಗೌರವಾರ್ಥವಾಗಿ ಆಲದ ಮರವನ್ನು ಪೂಜಿಸುತ್ತಾರೆ. ಉತ್ತರ ಭಾರತದಲ್ಲಿ ಭಕ್ತರು ಜ್ಯೇಷ್ಠ ಅಮವಾಸ್ಯೆ ಅಥವಾ ಅಮವಾಸ್ಯೆಯಂದು ಉಪವಾಸವನ್ನು ಆಚರಿಸುತ್ತಾರೆ. ಹಾಗೂ ದಕ್ಷಿಣ ಭಾರತದಲ್ಲಿ ಭಕ್ತರು ಜ್ಯೇಷ್ಠ ಪೂರ್ಣಿಮೆ ಅಥವಾ ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ದೃಕ್ ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಪೂರ್ಣಿಮಾ ತಿಥಿಯಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಈ ಬಾರಿ ವಟ ಸಾವಿತ್ರಿ ವ್ರತವನ್ನು ಜೂನ್ 3ನೇ ತಾರಿಕಿನಂದು ಆಚರಿಸಲಾಗುತ್ತದೆ.
ವಟ ಸಾವಿತ್ರಿ ವ್ರತದ ಇತಿಹಾಸ:
ದಂತ ಕಥೆಯ ಪ್ರಕಾರ, ಮದ್ರಾ ಸಾಮ್ರಾಜ್ಯದ ದೊರೆ ಸಾವಿತ್ರಿಯು ರಾಜ ಅಶ್ವಪತಿಯ ಮಗಳು, ಮದುಮೆಯಾದ ಒಂದು ವರ್ಷದ ನಂತರ ಸಾಯುವಂತೆ ಶಾಪಗ್ರಸ್ತನಾದ ಸತ್ಯವಾನನನ್ನು ಮದುವೆಯಾದಳು. ಮದುವೆಯಾಗಿ ಒಂದು ವರ್ಷದ ನಂತರ ಸತ್ಯವಾನ್ ಬಲಹೀನನಾಗಿ ತನ್ನ ಹೆಂಡತಿಯ ಮಡಿಲಲ್ಲಿ ಕೊನೆಯುಸಿರೆಳೆದ. ಸಾವಿತ್ರಿ ತನ್ನ ಪತಿಯ ಸಾವನ್ನು ಒಪ್ಪಿಕೊಳ್ಳುವುದಿಲ್ಲ. ಮತ್ತು ತನ್ನ ಗಂಡನನ್ನು ಕರೆದುಕೊಂಡು ಹೋಗಬೇಡ ಎಂದು ಯಮರಾಜನಲ್ಲಿ ಬೇಡಿಕೊಂಡಳು. ಸಾವಿತ್ರಿಯ ಮಾತಿಗೆ ಕಿವಿಗೊಡದ ಯಮರಾಜ ಹೊರಟುಹೋದನು. ಅವನನ್ನು ಹಿಂಬಾಲಿಸುತ್ತಾ ತನ್ನ ಗಂಡ ಪ್ರಾಣವನ್ನು ಹಿಂತಿರುಗಿಸುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ಕೊನೆಗೂ ಯಮರಾಜ ಸಾವಿತ್ರಿಯ ಬುದ್ಧಿವಂತಿಕೆ ಮತ್ತು ಆಕೆಯ ಪತಿಪ್ರೇಮಕ್ಕೆ ಮೆಚ್ಚಿ ಅವಳ ಪತಿಯ ಜೀವವನ್ನು ಮರಳಿ ನೀಡಿದನು. ಸತ್ಯವಾನ್ ಮತ್ತು ಸಾವಿತ್ರಿ ಕಥೆಯು ಪತಿ-ಪತ್ನಿ ಸಂಬಂಧದ ನಿಜವಾದ ಬಾಂಧವ್ಯವನ್ನು ಮತ್ತು ನಿಜವಾದ ದಾಂಪತ್ಯ ಜೀವನದ ಸಾರವನ್ನು ಹೇಳುತ್ತದೆ. ಸಾವಿತ್ರಿ ತನ್ನ ಪತಿಯನ್ನು ಸಾವಿನ ದವಡೆಯಿಂಡ ಕಾಪಾಡಿದ ಈ ಪವಿತ್ರ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ಶ್ರೇಯಸ್ಸಿಗಾಗಿ ಪ್ರತಿ ವರ್ಷ ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ.
ಇದನ್ನೂ ಓದಿ: Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ
ವಟ ಸಾವಿತ್ರಿ ವ್ರತದ ಮಹತ್ವ:
ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ. ವಟ ಅಥವಾ ಆಲದ ಮರಕ್ಕೆ ಈ ದಿನದಂದು ಮಹಿಳೆಯರು ಪೂಜೆ ಸಲ್ಲಿಸುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ ಆಲದ ಮರವು ಬ್ರಹ್ಮ, ವಿಷ್ಣು ಮತ್ತು ಶಿವ ದೇವರನ್ನು ಪ್ರತಿನಿಧಿಸುತ್ತದೆ. ಸಾವಿತ್ರಿ ವ್ರತವನ್ನು ಮಹಿಳೆಯರು ಮೂರು ದಿನಗಳ ವರೆಗೆ ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವ ಮೂಲಕ ಸಾವಿತ್ರಿಯು ತನ್ನ ಪತಿಯ ಜೀವವನ್ನು ಸಾವಿನ ದವಡೆಯಿಂದ ಮರಳಿ ತಂದ ರೀತಿಯಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿಗೆ ಅದೃಷ್ಟವನ್ನು ತರುತ್ತಾರೆ ಎಂದು ನಂಬಲಾಗಿದೆ.
ವಟ ಸಾವಿತ್ರಿ ವ್ರತಾಚರಣೆ:
ವಟ ಸಾವಿತ್ರಿ ವ್ರತವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಅವರು ದಿನವಿಡೀ ಉಪವಾಸವನ್ನು ಮಾಡಿ ವ್ರತಾಚರಣೆಯನ್ನು ಮಾಡುತ್ತಾರೆ. ಈ ದಿನ ಮಹಿಳೆಯು ಮುಂಜಾನೆ ಎದ್ದು, ಸ್ನಾನವನ್ನು ಮಾಡಿದ ನಂತರ, ಶುಭ್ರವಾದ ಸೀರೆಯುಟ್ಟು, ಹಣೆಗೆ ಸಿಂಧೂರವನ್ನಿಟ್ಟು ಮದುಮಗಳಂತೆ ಅಲಂಕೃತಗೊಂಡು, ನಂತರ ಆಲದ ಮರಕ್ಕೆ ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. ನಂತರ ಆಳದ ಮರದ ಸುತ್ತಲೂ ಹಳದಿ ಮತ್ತು ಕೆಂಪು ಬಣ್ಣದ ದಾರವನ್ನು ಕಟ್ಟಿ ಅದಕ್ಕೆ ಸಿಂಧೂರವನ್ನು ಸಿಂಪಡಿಸಿ, ಮತ್ತು ಮರಕ್ಕೆ 7, 11, 21, 51 ಅಥವಾ 101 ಸುತ್ತು ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಬಳಿಕ ವ್ರತಾಚರಣೆ ಸಂಪನ್ನಗೊಳಿಸಿದ ನಂತರ ಉಪವಾಸ ಮುರಿಯುತ್ತಾರೆ.
ವಟ ಸಾವಿತ್ರಿ ವ್ರತದ ಮಂಗಳಕರ ಸಮಯ:
ಜ್ಯೇಷ್ಠ ಪೂರ್ಣಿಮೆಯು ಶನಿವಾರ, ಜೂನ್ 3 ರಂದು ಬೆಳಗ್ಗೆ 11:16 ಕ್ಕೆ ಪ್ರಾರಂಭವಾಗಿ ಜೂನ್ 4 ರಂದು ಬೆಳಗ್ಗೆ 9:11 ಕ್ಕೆ ಕೊನೆಗೊಳ್ಳುತ್ತದೆ. ವ್ರತವನ್ನು ಜೂನ್ 3 ರಂದು ಆಚರಿಸಲಾಗುತ್ತದೆ.