ಜೀವನದಲ್ಲಿ ಒಳಿತಾಗಬೇಕು, ಉತ್ತಮವಾದದ್ದನ್ನು ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಅದಕ್ಕೋಸ್ಕರ ಹಲವರು ಪ್ರಾಮಾಣಿಕವಾದ ಶ್ರಮವನ್ನು ಪಡುತ್ತಿರುತ್ತಾರೆ. ಆದರೆ ಅವರ ಪ್ರಯತ್ನವೇನಿದೆ ಅಷ್ಟು ಫಲ ಪ್ರಾಪ್ತವಾಗಿರುವುದಿಲ್ಲ. ಇನ್ನು ಕೆಲವರದ್ದು ಪ್ರಯತ್ನ ಕಡಿಮೆ ಇರುತ್ತದೆ ಆದರೆ ಅವರಿಗೆ ಫಲ ಅದ್ಭುತವಾಗಿರುತ್ತದೆ. ಇದೆಕ್ಕೇನು ಕಾರಣ ? ಉತ್ತರ ಸಾಮಾನ್ಯವಾಗಿ ಹಣೆಬರಹ ಎಂದು. ಈಗ ಪ್ರಶ್ನೆಯ ಉದಯವಾಗುತ್ತದೆ. ನಿಜವಾಗಿಯೂ ಹಣಬರಹ ನಿಜವೇ ? ಎಂದು. ಹಣೆಬರಹವೆಂದರೆ ಬೇರೇನಲ್ಲ ನಮ್ಮ ಕರ್ಮಫಲ. ನಾವು ಉದಾರಭಾವದಿಂದ ತ್ಯಾಗ / ದಾನಾದಿಗಳನ್ನು ಮಾಡಿದರೆ ಅದು ಉತ್ತಮ ಫಲವನ್ನೇ ನೀಡುತ್ತದೆ. ಗೊಣಗುತ್ತಾ ದಾನ ಮಾಡಿದರೆ ಫಲವೂ ಹಾಗೆಯೇ ಬರುತ್ತದೆ. ಹಣಬರಹವೆಂದರೆ ವಿಧಿ. ವಿಧಿ ಹೇಗೆ ಕಾರ್ಯಮಾಡುತ್ತದೆಯೆಂದರೆ ನೀವು ಬ್ಯಾಂಕ್ ನಲ್ಲಿ ವ್ಯವಹರಿಸಿದಂತೆ ಸಾಲ ಮಾಡುವಾಗ ಹಣ ಲಭ್ಯವಾಗುತ್ತದೆ. ಆಗ ಮನಸ್ಸಿಗೆ ಆನಂದವುಂಟಾಗುತ್ತದೆ. ಆ ಸಾಲ ತುಂಬುವ ಸಮಯ ಬಂದಾಗ ತುಂಬಾ ಹಿಂಸೆ ಆಗುತ್ತದೆ ಮತ್ತು ಕೆಲವು ಸಲ ಅವಮಾನವೂ ಅನುಭವಿಸಬೇಕಾಗುತ್ತದೆ. ವಿಧಿ ನೀಡುವ ಫಲವೂ ಹಾಗೆ ಕೆಟ್ಟ ಕಾರ್ಯಗಳನ್ನು, ನಿಯಮ ಬಾಹಿರ ಕೆಲಸವನ್ನು ಮಾಡುವಾಗ ಮನಸ್ಸಿಗೆ ಏನೋ ಮುದವೆಂಬ ಭ್ರಮೆಯಿರುತ್ತದೆ.
ಒಂದು ಸಲ ವಿಧಿ ಕರ್ಮಫಲ ನೀಡಲು ಆರಂಭಿಸಿದಾಗ ನೋವು ಆರಂಭವಾಗಿ ಪಶ್ಚಾತ್ತಾಪ ಉಂಟಾಗುತ್ತದೆ ಅಲ್ಲವೇ ? ಹಾಗೇ ಬ್ಯಾಂಕ್ ನಲ್ಲಿ Deposit ಇಡುವಾಗ ಪೈಸೆ ಪೈಸೆ ಕೂಡಿ ಕಷ್ಟಪಟ್ಟು ಇಡುತ್ತೇವೆ. ಹಾಗೆ ಅದು ಬೆಳೆದು ದೊಡ್ಡಮೊತ್ತವಾದಾಗ ಆನಂದದಿಂದ ಅನುಭವಿಸುತ್ತೇವೆ. ಅದೇ ರೀತಿ ಶ್ರದ್ಧೆಯಿಂದ ಒಳ್ಳೆಯ ಮನಸ್ಸಿನಿಂದ ನಿಯಮ ಬದ್ಧನಾಗಿ ಕರ್ಮಗಳನ್ನು ಮಾಡಿದರೆ ವಿಧಿ ನೀಡುವ ಶುಭಫಲಗಳನ್ನು ಆನಂದವಾಗಿ ಅನುಭವಿಸಬಹುದು. ಇಷ್ಟೇ ವೆತ್ಯಾಸ.
ಶ್ರೀಮನ್ನಾರಾಯಣನ ಮಡದಿಯಾದ ಲಕ್ಷ್ಮೀದೇವಿಗೆ ಒಬ್ಬ ತಮ್ಮ ಇದ್ದಾನೆ. ಅವನ ಹೆಸರೂ ನಾರಾಯಣ. ಆದರೆ ಅವನಿಗೆ ದಾರಿದ್ರ್ಯವೆಂಬುದು ಬಹಳ ಕಾಡುತ್ತಿತ್ತು. ಅಕ್ಕ ಸಂಪತ್ತಿನ ಒಡತಿ. ತಮ್ಮ ದಾರಿದ್ರ್ಯಕ್ಕೆ ಹೆಸರುವಾಸಿ. ಹೀಗಿರುವಾಗ ಒಂದು ದಿನ ಲಕ್ಷ್ಮೀದೇವಿಗೆ ಮನಸ್ಸು ತಡೆಯದೇ ಪತಿಯಲ್ಲಿ ಹೇಳುತ್ತಾಳೆ. ತಮ್ಮನ ಬಡತನ ನೋಡಲಾಗುವುದಿಲ್ಲ. ಏನಾದರೂ ಸಹಾಯ ಮಾಡೋಣವೇ ಎಂದು. ಅದಕ್ಕೆ ನಾರಾಯಣ ಹೇಳುತ್ತಾನೆ – ಅದು ನಿನ್ನ ಅಣ್ಣನ ಕರ್ಮಫಲ. ಅದು ಅವನ ವಿಧಿ. ವಿಧಿ ನಿಯಮ ಎಲ್ಲರೂ ಪಾಲಿಸಲೇಬೇಕು ಎಂಬುದಾಗಿ.
ಇದನ್ನೂ ಓದಿ:ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ
ಆದರೂ ಮನಸ್ಸೊಪ್ಪದ ಲಕ್ಷ್ಮಿಯು ದಿನಾ ಅವನು ಸಾಗುವ ದಾರಿಯಲ್ಲಿ ಅವನ ಮನೆಗೆ ಸಮೀಪವಾಗುವಂತೆ ಚಿನ್ನದ ನಾಣ್ಯದ ಥೈಲಿ, ಆಭರಣಗಳ ರಾಶಿಯನ್ನು ಅವನು ಬರುವ ಸಮಯಕ್ಕೆ ಸರಿಯಾಗಿ ಇಡುತ್ತಾಳೆ. ಪ್ರತೀ ದಿನ ಬರುವಂತೆ ಆತ ಬರುತ್ತಾನೆ. ಮನೆಯ ಸಮೀಪ ಬರುತ್ತಿದ್ದಂತೆ ಅವನ ಮನಸ್ಸಿಗಾಗುತ್ತದೆ ನನಗೆ ಈಗ ಆರೋಗ್ಯವಿದೆ. ಕಾಲ ಸಾಗುತ್ತಾ ತನ್ನ ಕಣ್ಣಿನ ಸಮಸ್ಯೆಯಿಂದ ಕುರುಡನಾದರೆ ಹೇಗೆ ಮನೆಗೆ ಹೋಗಲಿ? ಯಾರನ್ನ ಆಶ್ರಯಿಸಲಿ ? ಅದಕ್ಕಾಗಿ ಮನೆ ಹತ್ತಿರವಿರುವ ಕಾರಣ ತಾನು ಕಣ್ಣುಮುಚ್ಚಿಕೊಂಡು ಹೋಗುತ್ತೇನೆ. ಅದರಿಂದ ಅಭ್ಯಾಸವಾಗಿ ಮುಂದೆ ಅನುಕೂಲವಾಗುವುದು ಎಂದು ಯೋಚಿಸಿ. ಕಣ್ಣು ಮುಚ್ಚಿಕೊಂಡು ಮನೆಯನ್ನು ಸೇರುತ್ತಾನೆ. ಇತ್ತ ಕಡೆ ದಾರಿಯಲ್ಲಿ ಲಕ್ಷ್ಮಿಯು ಇಟ್ಟ ಸಂಪತ್ತು ಗಮನಕ್ಕೂ ಬರಲಿಲ್ಲ. ಆ ಸಂಪತ್ತು ದಾರಿಹೋಕರ ಪಾಲಾಯಿತು. ಪತಿಯಾದ ಶ್ರೀಮನ್ನಾರಾಯಣ ನಸುನಗುತ್ತಾ ಹೇಳುತ್ತಾನೆ ವಿಧಿಯ ಬರಹ ಅನುಭವಿಸಿಯೇ ಸಿದ್ಧ ಎಂದು. ಅದಕ್ಕಾಗಿ ನಾವುಗಳು ಕಷ್ಟ ಬಂತೆಂದು ಕೊರಗದೆ ಅದನ್ನು ಒಳ್ಳೆಯ ಮನಸ್ಸಿಂದ ಅನುಭವಿಸಬೇಕು. ಕ್ರಮೇಣ ಅದರಿಂದ ಒಳ್ಳೆಯದೇ ಆಗುವುದು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಸಲಹೆಗಾರರು ಮತ್ತು ಚಿಂತಕರು