
ಕೆಲವೇ ದಿನಗಳಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ದೃಶ್ಯವೊಂದು ಮೂಡಲಿದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಜಗತ್ತಿನ ಹಲವೆಡೆ “ರಿಂಗ್ ಆಫ್ ಫೈರ್” ಎಂಬ ಅದ್ಭುತ ದೃಶ್ಯ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು ಸುಮಾರು 4 ಗಂಟೆ 32 ನಿಮಿಷಗಳ ಕಾಲ ಈ ಗ್ರಹಣ ಪ್ರಕ್ರಿಯೆ ನಡೆಯಲಿದೆ.
ಗ್ರಹಣದ ಗರಿಷ್ಠ ಹಂತ ಸಂಜೆ 5:42ರ ಸುಮಾರಿಗೆ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಈ ದೃಶ್ಯವೇ “ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ. ಗರಿಷ್ಠ ಹಂತವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಮುಂದುವರಿದು, ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.
ಕಂಕಣ ಸೂರ್ಯಗ್ರಹಣವು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಆದರೆ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿರುವ ಕಾರಣ ಸೂರ್ಯನಿಗಿಂತ ಸಣ್ಣದಾಗಿ ಕಾಣುತ್ತದೆ. ಈ ಕಾರಣದಿಂದ ಸೂರ್ಯನನ್ನು ಸಂಪೂರ್ಣ ಮುಚ್ಚಲು ಸಾಧ್ಯವಾಗದೆ, ಸೂರ್ಯನ ಸುತ್ತಲೂ ಉಂಗುರದ ಆಕಾರದಲ್ಲಿ ಬೆಳಕು ಕಾಣಿಸುತ್ತದೆ. ಇದೇ ಈ ಗ್ರಹಣದ ವೈಶಿಷ್ಟ್ಯವಾಗಿದ್ದು, ಖಗೋಳಶಾಸ್ತ್ರ ಪ್ರಿಯರಿಗೆ ಅತ್ಯಂತ ಆಕರ್ಷಕ ಕ್ಷಣವಾಗಿರುತ್ತದೆ.
ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ
ಆದರೆ ಭಾರತೀಯರಿಗೆ ಈ ಬಾರಿ ಈ ಅದ್ಭುತವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯುವುದಿಲ್ಲ. ಭಾರತದಲ್ಲಿಯೂ ಅಲ್ಲದೆ ಏಷ್ಯಾದ ಬಹುತೇಕ ಭಾಗಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ದೇಶದಲ್ಲಿ ಸೂತಕ ಅಥವಾ ವಿಶೇಷ ಧಾರ್ಮಿಕ ಆಚರಣೆಗಳ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಈ ಗ್ರಹಣವನ್ನು ನೇರಪ್ರಸಾರ ಮಾಡುವ ಸಾಧ್ಯತೆ ಇದೆ. ನಾಸಾದ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಆನ್‌ಲೈನ್ ವೇದಿಕೆಗಳ ಮೂಲಕ ಈ ಅಪರೂಪದ ದೃಶ್ಯವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ