Sri Krishna Janmashtami 2026: ಮಧ್ಯರಾತ್ರಿಯಲ್ಲೇ ಜನ್ಮಾಷ್ಟಮಿ ಆಚರಣೆ ಏಕೆ? ಗೋಕುಲದಲ್ಲಿ ನಡೆದಿತ್ತು ಅದೊಂದು ಪವಾಡ

ಪ್ರತಿ ವರ್ಷದಂತೆ 2026ರ ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಕಂಸನ ದೌರ್ಜನ್ಯದಿಂದ ಧರ್ಮವನ್ನು ರಕ್ಷಿಸಲು ದೇವಕಿ-ವಸುದೇವರ ಎಂಟನೇ ಮಗನಾಗಿ ಶ್ರೀಕೃಷ್ಣ ಮಧ್ಯರಾತ್ರಿ ಕಾರಾಗೃಹದಲ್ಲಿ ಜನಿಸಿದ ಪವಾಡಮಯ ಕಥೆ ಇಲ್ಲಿದೆ. ವಸುದೇವರು ಮಗುವನ್ನು ಗೋಕುಲಕ್ಕೆ ಕೊಂಡೊಯ್ದು ಯೋಗಮಾಯೆಯನ್ನು ತರುವ ರೋಚಕ ಪ್ರಸಂಗ, ಹಾಗು ಮಧ್ಯರಾತ್ರಿ ಪೂಜೆಯ ಮಹತ್ವವನ್ನು ಲೇಖನ ವಿವರಿಸುತ್ತದೆ.

Sri Krishna Janmashtami 2026: ಮಧ್ಯರಾತ್ರಿಯಲ್ಲೇ ಜನ್ಮಾಷ್ಟಮಿ ಆಚರಣೆ ಏಕೆ? ಗೋಕುಲದಲ್ಲಿ ನಡೆದಿತ್ತು ಅದೊಂದು ಪವಾಡ
ಸಾಂದರ್ಭಿಕ ಚಿತ್ರ

Updated on: Aug 31, 2026 | 4:42 PM

ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ವಿಶ್ವದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ 2026ರ ಸೆಪ್ಟೆಂಬರ್ 4 (ಶುಕ್ರವಾರ) ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಮಧ್ಯರಾತ್ರಿ ಭಗವಾನ್ ಶ್ರೀಕೃಷ್ಣನನ್ನು ಸ್ವಾಗತಿಸಲು ಭಕ್ತರು ಸಜ್ಜಾಗುತ್ತಿದ್ದಾರೆ. ಅಧರ್ಮ, ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಕೊನೆಗಣಿಸಿ ಧರ್ಮದ ಸಂಸ್ಥಾಪನೆಗಾಗಿ ಶ್ರೀಕೃಷ್ಣನು ಭೂಮಿಯ ಮೇಲೆ ಜನ್ಮತಾಳಿದ ಆ ಪವಾಡ ಮತ್ತು ರೋಚಕ ಕಥೆಯ ಸಂಕ್ಷಿಪ್ತ ವರದಿ ಇಲ್ಲಿದೆ.

ಅಶರೀರವಾಣಿ ಹಾಗೂ ಕಂಸನ ಭಯ:

ಭಾಗವತ ಪುರಾಣದ ಪ್ರಕಾರ, ಈ ಕಥೆಯು ಮಥುರೆಯ ಕ್ರೂರ ಆಡಳಿತಗಾರ ಕಂಸ ಮತ್ತು ಆತನ ತಂಗಿ ದೇವಕಿಯಿಂದ ಪ್ರಾರಂಭವಾಗುತ್ತದೆ. ದೇವಕಿ ಮತ್ತು ವಸುದೇವರ ವಿವಾಹದ ಸಮಯದಲ್ಲಿ, “ದೇವಕಿಯ ಎಂಟನೇ ಮಗನೇ ಕಂಸನಿಗೆ ಮೃತ್ಯುವಾಗಲಿದ್ದಾನೆ” ಎಂದು ಅಶರೀರವಾಣಿಯಾಗುತ್ತದೆ.

ಇದರಿಂದ ಭೀತಿಗೆಳಗಾದ ಕಂಸ, ತಂಗಿ ದೇವಕಿ ಹಾಗೂ ಭಾವ ವಸುದೇವರನ್ನು ಕಾರಾಗೃಹದಲ್ಲಿ ಬಂಧಿಸಿಡುತ್ತಾನೆ. ದೇವಕಿಗೆ ಜನಿಸಿದ ಮೊದಲ ಆರು ಮಕ್ಕಳನ್ನು ಕಂಸನು ನಿರ್ದಯವಾಗಿ ಕೊಲ್ಲುತ್ತಾನೆ. ಏಳನೇ ಮಗುವನ್ನು ಯೋಗಮಾಯೆಯ ಪ್ರಭಾವದಿಂದ ರೋಹಿಣಿಯ ಗರ್ಭಕ್ಕೆ ವರ್ಗಾಯಿಸಲಾಗುತ್ತದೆ, ಅವರೇ ಬಲರಾಮ.

ಮಧ್ಯರಾತ್ರಿ ಕಂಸನ ಕಾರಾಗೃಹದಲ್ಲಿ ಕೃಷ್ಣನ ಜನನ:

ದೇವಕಿ ಎಂಟನೇ ಬಾರಿ ಗರ್ಭಿಣಿಯಾದಾಗ ಕಂಸನು ಮಗುವಿನ ಕೊಲೆಗಾಗಿ ಕಾಯುತ್ತಿರುತ್ತಾನೆ. ಭಾದ್ರಪದ ಕೃಷ್ಣ ಅಷ್ಟಮಿಯ ಮಧ್ಯರಾತ್ರಿಯಂದು, ಕಾರಾಗೃಹದಲ್ಲಿ ಶ್ರೀಕೃಷ್ಣನು ನಾಲ್ಕು ಕೈಗಳನ್ನು ಹೊಂದಿದ ಶ್ರೀಮನ್ನಾರಾಯಣನ ದಿವ್ಯ ರೂಪದಲ್ಲಿ ದೇವಕಿ-ವಸುದೇವರ ಮುಂದೆ ಪ್ರತ್ಯಕ್ಷನಾಗುತ್ತಾನೆ. ತಂದೆ-ತಾಯಿಯ ಪ್ರಾರ್ಥನೆಯ ನಂತರ ಸಾಮಾನ್ಯ ಮಗುವಿನ ರೂಪಕ್ಕೆ ಬದಲಾಗುತ್ತಾನೆ.

ಮಗುವನ್ನು ಕಂಸನಿಂದ ರಕ್ಷಿಸಲು, ವಸುದೇವನು ಕೃಷ್ಣನನ್ನು ತಕ್ಷಣವೇ ಗೋಕುಲದಲ್ಲಿದ್ದ ನಂದಗೋಪ ಹಾಗೂ ಯಶೋದೆಯ ಮನೆಗೆ ತಲುಪಿಸಿ, ಅಲ್ಲಿ ಜನ್ಮತಾಳಿದ ಹೆಣ್ಣು ಮಗುವನ್ನು ಕರೆತರಲು ದಿವ್ಯ ಆದೇಶ ಸಿಗುತ್ತದೆ. ವಸುದೇವ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆ ಕಾರಾಗೃಹದ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ, ಕಾವಲುಗಾರರು ಗಾಢ ನಿದ್ರೆಗೆ ಜಾರುತ್ತಾರೆ. ಭೋರಾಟದ ಮಳೆಯ ನಡುವೆ ಯಮುನಾ ನದಿಯನ್ನು ದಾಟುವಾಗ ಆದಿಶೇಷನು (ಸರ್ಪ) ಮಗುವಿಗೆ ಛತ್ರಿಯಾಗಿ ರಕ್ಷಣೆ ನೀಡುತ್ತಾನೆ. ವಸುದೇವನು ಗೋಕುಲದಲ್ಲಿ ಮಗುವನ್ನು ಬದಲಾಯಿಸಿ, ಹೆಣ್ಣು ಮಗುವನ್ನು (ಯೋಗಮಾಯೆ) ಕಾರಾಗೃಹಕ್ಕೆ ತರುತ್ತಾನೆ. ಕಂಸನು ಆ ಮಗುವನ್ನು ಕೊಲ್ಲಲು ಬಂದಾಗ, ಆ ಮಗು ಆಕಾಶಕ್ಕೆ ಹಾರಿ “ನಿನ್ನನ್ನು ಕೊಲ್ಲುವವನು, ಬೇರೆಡೆ ಬೆಳೆಯುತ್ತಿದ್ದಾನೆ” ಎಂದು ಎಚ್ಚರಿಸಿ ಮಾಯವಾಗುತ್ತದೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ

ಮಧ್ಯರಾತ್ರಿಯಲ್ಲೇ ಜನ್ಮಾಷ್ಟಮಿ ಆಚರಣೆ ಏಕೆ?

ಶ್ರೀಕೃಷ್ಣನು ಮಧ್ಯರಾತ್ರಿಯ ಕತ್ತಲೆಯಲ್ಲಿ, ಭಾದ್ರಪದ ಅಷ್ಟಮಿ ತಿಥಿಯಂದು ಜನ್ಮತಾಳಿದ್ದರಿಂದ ಪ್ರತಿಯೊಬ್ಬ ಭಕ್ತರು ಜನ್ಮಾಷ್ಟಮಿಯ ದಿನ ಉಪವಾಸವಿದ್ದು, ಮಧ್ಯರಾತ್ರಿ ‘ನಿಶಿತ ಪೂಜೆ’ ನೆರವೇರಿಸಿ ಹಬ್ಬವನ್ನು ಆಚರಿಸುತ್ತಾರೆ. 2026ರಲ್ಲಿ, ಅಷ್ಟಮಿ ತಿಥಿಯು ಸೆಪ್ಟೆಂಬರ್ ೪ ರಂದು ಬೆಳಗಿನ ಜಾವ ೨:೨೫ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ ೫ ರಂದು ಮಧ್ಯರಾತ್ರಿ 12:13ಕ್ಕೆ ಮುಕ್ತಾಯಗೊಳ್ಳುತ್ತದೆ. ಮಧ್ಯರಾತ್ರಿಯ ಪೂಜಾ ಮುಹೂರ್ತವು ಸೆಪ್ಟೆಂಬರ್ 4 ರ ರಾತ್ರಿ 11;27 ರಿಂದ ಸೆಪ್ಟೆಂಬರ್ 5 ರ 14:43 ರವರೆಗೆ ಇರಲಿದೆ. “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…” ಎಂಬ ಭಗವದ್ಗೀತೆಯ ವಚನದಂತೆ, ಧರ್ಮಕ್ಕೆ ಧಕ್ಕೆಯಾದಾಗಲೆಲ್ಲಾ ಭಗವಂತ ಅವತರಿಸುತ್ತಾನೆ ಎಂಬುದಕ್ಕೆ ಶ್ರೀಕೃಷ್ಣನ ಜನನವೇ ಸಾಕ್ಷಿ.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Mon, 31 August 26

Loading...
Unable to load recommendations.
Follow Us