AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Birthday Celebrations: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ?

ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್ ಕತ್ತರಿಸುವುದು ಮತ್ತು ಮೇಣದಬತ್ತಿ ಆರಿಸುವುದು ಆಧುನಿಕ ಪದ್ಧತಿಗಳು. ಹಿಂದೂ ಸಂಪ್ರದಾಯದ ಪ್ರಕಾರ, ಜನ್ಮದಿನವು ಆತ್ಮಾವಲೋಕನ, ಹಿರಿಯರ ಆಶೀರ್ವಾದ, ದಾನ-ಧರ್ಮ ಮತ್ತು ದೇವರ ಸ್ಮರಣೆಗೆ ಮೀಸಲಾಗಿರಬೇಕು. ಅನ್ನದಾನ, ಪುಸ್ತಕ ದಾನ, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಜನ್ಮದಿನವನ್ನು ಸಾರ್ಥಕಗೊಳಿಸಬಹುದು. ತಿಥಿಯ ಆಧಾರದ ಮೇಲೆ ಆಚರಣೆ ಹೆಚ್ಚು ಶುಭಕರ.

Birthday Celebrations: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ?
ಹುಟ್ಟುಹಬ್ಬದ ಸಾರ್ಥಕ ಆಚರಣೆImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 11, 2026 | 7:30 AM

Share

ನಮ್ಮ ಸಂಸ್ಕೃತಿಯಲ್ಲಿ ವಿವಾಹ ಅಥವಾ ಜನ್ಮದಿನದಂತಹ ಆಚರಣೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನ್ಮದಿನಾಚರಣೆಯ ವಿಧಾನಗಳು ಆಧುನೀಕರಣಗೊಂಡಿವೆ. ಕೇಕ್ ಕತ್ತರಿಸುವುದು, ಮೇಣದಬತ್ತಿ ಆರಿಸುವುದು, ಬಲೂನ್‌ಗಳನ್ನು ಸಿಡಿಸುವುದು ಮುಂತಾದ ಪದ್ಧತಿಗಳು ನಮ್ಮ ಮೂಲ ಸಂಪ್ರದಾಯಗಳಿಂದ ಭಿನ್ನವಾಗಿವೆ. ಇಂತಹ ಆಚರಣೆಗಳು ಶುಭಕರವೇ ಅಥವಾ ಅಶುಭಕರವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಉತ್ತರ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಜನ್ಮದಿನವು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ನಾನು ಹುಟ್ಟಿದ ಮೇಲೆ ನನ್ನ ಜೀವನದಲ್ಲಿ ಏನು ಸಾಧಿಸಿದ್ದೇನೆ? ಮುಂದಿನ ವರ್ಷದೊಳಗೆ ನಾನು ಯಾವ ಶುಭ ಕಾರ್ಯಗಳನ್ನು ಮಾಡಬೇಕು? ನನ್ನ ಕುಟುಂಬವನ್ನು ಹೇಗೆ ರಕ್ಷಿಸಬೇಕು? ಸಮಾಜಕ್ಕೆ ನನ್ನ ಕೊಡುಗೆ ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯ ಇದು. ಕ್ಯಾಲೆಂಡರ್ ದಿನಾಂಕದ ಪ್ರಕಾರ ಜನ್ಮದಿನ ಆಚರಿಸುವ ಪದ್ಧತಿ ಹಿಂದೂ ಸನಾತನ ಸಂಸ್ಕೃತಿಯಲ್ಲಿಲ್ಲ. ಬದಲಿಗೆ, ತಿಥಿಯ ಆಧಾರದ ಮೇಲೆ ಜನ್ಮದಿನವನ್ನು ಆಚರಿಸುವುದು ಮಹಾ ಶುಭಕರವೆಂದು ನಂಬಲಾಗಿದೆ.

ಜನ್ಮದಿನವನ್ನು ಸಾರ್ಥಕಗೊಳಿಸುವ ಮಾರ್ಗಗಳು ಅನೇಕ. ಅಶಕ್ತರಿಗೆ ಸಹಾಯ ಮಾಡುವುದು ಅತ್ಯಂತ ಪುಣ್ಯದ ಕೆಲಸ. ಅನ್ನದಾನ, ಪುಸ್ತಕ ದಾನ, ವಸ್ತ್ರದಾನ, ಔಷಧ ದಾನ ಇವುಗಳೆಲ್ಲವೂ ಅತ್ಯುತ್ತಮ ದಾನಗಳು. ಅನಾಥಾಲಯಗಳಲ್ಲಿ ಒಂದು ಹೊತ್ತಿನ ಊಟ ನೀಡುವುದು, ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಔಷಧಿ, ಊರುಗೋಲು, ಛತ್ರಿ ಅಥವಾ ಬೆಡ್‌ಶೀಟ್ ನೀಡುವುದು ಜನ್ಮದಿನಕ್ಕೆ ವಿಶೇಷ ಅರ್ಥ ನೀಡುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ದೀರ್ಘಾಯುಷ್ಯಕ್ಕಾಗಿ ಮಾರ್ಕಂಡೇಯ ಋಷಿಯನ್ನು ಸ್ಮರಿಸಬೇಕು. ದೀಪ ಹಚ್ಚಬೇಕೇ ಹೊರತು ಅದನ್ನು ಆರಿಸಬಾರದು. ಜನ್ಮದಿನಾಂಕದ ದಿನ ಸುಂದರಕಾಂಡ ಪಾರಾಯಣ ಮಾಡುವುದು ಅತೀವ ಶಕ್ತಿಯನ್ನು ತರುತ್ತದೆ. ಕೆಲವು ಆಚರಣೆಗಳನ್ನು ತಪ್ಪಿಸುವುದು ಕೂಡ ಮುಖ್ಯ. ಜನ್ಮದಿನದಂದು ಉಗುರು ಕತ್ತರಿಸಬಾರದು, ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು ಮತ್ತು ಯಾವುದೇ ಮನಸ್ಸಿಗೆ ನೋವುಂಟು ಮಾಡಬಾರದು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ನಿಯಮಗಳನ್ನು ಪಾಲಿಸುವುದು ಜನ್ಮದಿನಕ್ಕೆ ಸಾರ್ಥಕತೆಯನ್ನು ನೀಡುತ್ತದೆ.

ಬೆಳಗ್ಗೆ ಸ್ನಾನ ಮಾಡಿ, ಹಿರಿಯರ ಆಶೀರ್ವಾದ ಪಡೆದು, ಅವರ ಪಾದಗಳಿಗೆ ನಮಸ್ಕರಿಸಿ, ಇಷ್ಟ ದೇವತಾ ಮತ್ತು ಕುಲ ದೇವತಾ ದರ್ಶನ ಮಾಡುವುದು, ಒಳ್ಳೆಯ ಮಾತುಗಳನ್ನು ಆಡುವುದು, ಚಿಕ್ಕ ಮಕ್ಕಳಿಗೆ ಆರೈಕೆ ಮಾಡುವುದು ಇವೆಲ್ಲವೂ ಜನ್ಮದಿನದ ಶುಭ ಆಚರಣೆಗಳು. ಪ್ರಾರ್ಥನೆಯು ವಿಧಿಯನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಜನ್ಮದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನಾ ದಿನವಾಗಿ ಆಚರಿಸಿದರೆ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಬರುತ್ತವೆ. ನಾವು ಮಾಡಿದ ದಾನ ಪ್ರಯೋಜನಕಾರಿಯಾಗಿರಬೇಕು, ಅಪ್ರಾಪ್ತ ದಾನವಾಗಬಾರದು. ಹೀಗೆ ಸರಿಯಾದ ಮಾರ್ಗದಲ್ಲಿ ಹುಟ್ಟುಹಬ್ಬವನ್ನು ಆಚರಿಸುವುದರಿಂದ ನಮಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More