
ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಸ್ಥಾನವಿದೆ. ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮೊದಲು ಶಿವಲಿಂಗದ ಎದುರು ಕುಳಿತಿರುವ ನಂದಿಯನ್ನು ಕಾಣಬಹುದು. ಭಕ್ತರು ನಂದಿಯ ಮುಂದೆ ಕೈಮುಗಿದು ನಮಸ್ಕರಿಸುವುದಲ್ಲದೆ, ಅವರ ಕಿವಿಯಲ್ಲಿ ತಮ್ಮ ಮನದ ಇಷ್ಟಾರ್ಥಗಳನ್ನು ಪಿಸುಗುಟ್ಟುವುದನ್ನೂ ನೋಡಿರಬಹುದು. ಕೆಲವರು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ, ಇನ್ನು ಕೆಲವರು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ದೂರವಾಗಲಿ, ಬಯಸಿದ ಕಾರ್ಯಗಳು ನೆರವೇರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾದರೆ ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳುವ ಸಂಪ್ರದಾಯದ ಹಿಂದಿನ ಅರ್ಥವೇನು? ಇದರ ಪೌರಾಣಿಕ ಹಿನ್ನೆಲೆ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ನಂದಿಯು ಶಿವನ ವಾಹನ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಹಿಂದೂ ಪುರಾಣಗಳಲ್ಲಿ ನಂದಿಗೆ ಶಿವನ ಪರಮಭಕ್ತ, ದ್ವಾರಪಾಲಕ ಮತ್ತು ಶಿವಗಣಗಳ ಅಧಿಪತಿ ಎಂಬ ವಿಶೇಷ ಸ್ಥಾನವೂ ಇದೆ. ನಂದಿಯು ಶಿವನ ಸನ್ನಿಧಿಯಲ್ಲಿ ಸದಾ ನೆಲೆಸಿರುವ ಭಕ್ತನ ಸಂಕೇತವಾಗಿದ್ದಾನೆ. ಶಿವನ ದೇವಸ್ಥಾನಗಳಲ್ಲಿ ನಂದಿಯ ವಿಗ್ರಹವನ್ನು ಸಾಮಾನ್ಯವಾಗಿ ಶಿವಲಿಂಗದ ಎದುರಿಗೆ ಪ್ರತಿಷ್ಠಾಪಿಸಲಾಗುತ್ತದೆ. ನಂದಿಯು ಸದಾ ಶಿವನನ್ನೇ ನೋಡುತ್ತಾ ಕುಳಿತಿರುವ ಭಂಗಿಯು ಅಚಲ ಭಕ್ತಿ, ಶ್ರದ್ಧೆ, ತಾಳ್ಮೆ ಮತ್ತು ಸಮರ್ಪಣಾ ಭಾವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದಲೇ ಶಿವನ ದರ್ಶನ ಪಡೆಯುವ ಮೊದಲು ನಂದಿಗೆ ನಮಸ್ಕರಿಸುವ ಸಂಪ್ರದಾಯವೂ ಅನೇಕ ದೇವಾಲಯಗಳಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!
ಧಾರ್ಮಿಕ ನಂಬಿಕೆಯ ಪ್ರಕಾರ, ನಂದಿಯು ಶಿವನ ಅತ್ಯಂತ ಆಪ್ತ ಭಕ್ತನಾಗಿದ್ದು, ಭಕ್ತರು ಸಲ್ಲಿಸುವ ಪ್ರಾರ್ಥನೆಗಳನ್ನು ಶಿವನಿಗೆ ತಲುಪಿಸುವ ದೈವಿಕ ಸಂದೇಶವಾಹಕ ಎಂಬ ಭಾವನೆಯಿದೆ. ಶಿವನ ಸನ್ನಿಧಿಯಲ್ಲಿ ಸದಾ ಇರುವ ನಂದಿಯು ಭಕ್ತರ ಮನದ ಮಾತುಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ಶಿವನಿಗೆ ತಿಳಿಸುತ್ತಾನೆ ಎಂಬ ನಂಬಿಕೆ ಜನಪ್ರಿಯವಾಗಿದೆ. ಇದೇ ಕಾರಣಕ್ಕೆ ಭಕ್ತರು ನಂದಿಯ ಕಿವಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ನಿಧಾನವಾಗಿ ಹೇಳಿಕೊಳ್ಳುತ್ತಾರೆ. ಮದುವೆ, ಉದ್ಯೋಗ, ಆರೋಗ್ಯ, ಕುಟುಂಬದ ನೆಮ್ಮದಿ, ಆರ್ಥಿಕ ಸಮಸ್ಯೆಗಳು ಸೇರಿದಂತೆ ಜೀವನದ ವಿವಿಧ ವಿಚಾರಗಳಿಗಾಗಿ ನಂದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಪ್ರಾರ್ಥನೆ ಸಲ್ಲಿಸುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ