
ಹಿಂದೂ ಧರ್ಮದಲ್ಲಿ ನವಗ್ರಹಗಳಿಗೆ ವಿಶೇಷ ಮಹತ್ವವಿದೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ ಒಂಬತ್ತು ಗ್ರಹಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ದೇವಾಲಯಗಳಿಗೆ ತೆರಳುವ ಅನೇಕ ಭಕ್ತರು ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆಯುತ್ತಾರೆ. ಆದರೆ ಒಂದು ಕುತೂಹಲಕಾರಿ ವಿಷಯವೆಂದರೆ, ಅನೇಕ ಪ್ರಾಚೀನ ವೈಷ್ಣವ ದೇವಾಲಯಗಳಲ್ಲಿ ನವಗ್ರಹ ಮಂಟಪಗಳು ಕಾಣಿಸುವುದಿಲ್ಲ.
ಆಧ್ಯಾತ್ಮಿಕ ಸಂಪ್ರದಾಯದ ಪ್ರಕಾರ, ವಿಷ್ಣುವೇ ಎಲ್ಲಾ ಗ್ರಹಶಕ್ತಿಗಳ ಮೂಲಸ್ವರೂಪ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನನ್ನು ಸರ್ವವ್ಯಾಪಿ ಪರಮಾತ್ಮನೆಂದು ವಿವರಿಸಿದ್ದಾನೆ. ಹೀಗಾಗಿ ವಿಷ್ಣುವಿನ ಆರಾಧನೆಯೇ ನವಗ್ರಹಗಳ ಆರಾಧನೆಗೆ ಸಮಾನ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ಅನೇಕ ಹಳೆಯ ವೈಷ್ಣವ ದೇವಾಲಯಗಳಲ್ಲಿ ನವಗ್ರಹಗಳನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪಿಸುವ ಸಂಪ್ರದಾಯ ಇರಲಿಲ್ಲ.
ಶಿವನನ್ನು ನವಗ್ರಹಗಳ ಅಧಿಪತಿ ಹಾಗೂ ಗ್ರಹದೋಷಗಳನ್ನು ಶಮನಗೊಳಿಸುವ ದೇವರೆಂದು ಭಕ್ತರು ನಂಬುತ್ತಾರೆ. ಆದ್ದರಿಂದ ಶಿವ ದೇವಾಲಯಗಳಲ್ಲಿ ನವಗ್ರಹ ಮಂಟಪಗಳನ್ನು ನಿರ್ಮಿಸಿ, ಗ್ರಹಶಾಂತಿ ಹಾಗೂ ನವಗ್ರಹ ಪೂಜೆಗಳನ್ನು ನಡೆಸುವ ಪದ್ಧತಿ ಹೆಚ್ಚು ಪ್ರಚಲಿತದಲ್ಲಿದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಕಾಲಕ್ರಮೇಣ ದೇವಾಲಯಗಳ ನಿರ್ಮಾಣ ಶೈಲಿಯಲ್ಲೂ ಬದಲಾವಣೆಗಳಾಗಿವೆ. ಭಕ್ತರ ಅನುಕೂಲಕ್ಕಾಗಿ ಗಣಪತಿ, ಸುಬ್ರಹ್ಮಣ್ಯ, ಅಮ್ಮನವರು ಹಾಗೂ ನವಗ್ರಹಗಳಂತಹ ಉಪದೇವತೆಗಳ ಸನ್ನಿಧಿಗಳನ್ನು ಒಂದೇ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾರಣದಿಂದಾಗಿ ಇತ್ತೀಚಿನ ಕೆಲವು ವೈಷ್ಣವ ದೇವಾಲಯಗಳಲ್ಲೂ ನವಗ್ರಹ ಮಂಟಪಗಳನ್ನು ಕಾಣಬಹುದು.
ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದ ನಂತರ ಪಾದಗಳನ್ನು ತೊಳೆಯುವುದು ಕಡ್ಡಾಯ ಎಂಬ ನಿಯಮ ಧರ್ಮಶಾಸ್ತ್ರಗಳಲ್ಲಿ ಇಲ್ಲ. ಆದರೆ ಶನಿ ದೇವರಿಗೆ ಎಣ್ಣೆ ಅಭಿಷೇಕ ಅಥವಾ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪಾದಗಳನ್ನು ತೊಳೆಯುವುದು ಉತ್ತಮ ಎಂದು ವಿದ್ವಾಂಸರು ಸಲಹೆ ನೀಡುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ