Navratri Day 5: ನವರಾತ್ರಿಯ ಐದನೇ ದಿನದ ವಿಶೇಷ; ಭಕ್ತರ ಮೇಲೆ ಸ್ಕಂದಮಾತೆಯ ಕೃಪಾದೃಷ್ಟಿ
ನವರಾತ್ರಿಯ ಐದನೇ ದಿನ ಸ್ಕಂದಮಾತೆಯ ಆರಾಧನೆ ವಿಶೇಷ ಮಹತ್ವವನ್ನು ಹೊಂದಿದೆ. ಕುಮಾರ ಕಾರ್ತಿಕೇಯ (ಸ್ಕಂದ)ನ ತಾಯಿಯಾದ ಸ್ಕಂದಮಾತೆಯ ಪೂಜೆಯಿಂದ ಶಾಂತಿ, ಸಮಾಧಾನ, ಆಂತರಿಕ ಶಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಸಂತಾನ ಪ್ರಾಪ್ತಿಗಾಗಿ ದಂಪತಿಗಳು ಈ ದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸ್ಕಂದಮಾತೆಯ ರೂಪ, ಪೂಜಾ ವಿಧಾನ ಮತ್ತು ಪೌರಾಣಿಕ ಹಿನ್ನೆಲೆಯನ್ನು ಇಲ್ಲಿ ವಿವರಿಸಲಾಗಿದೆ.

ನವರಾತ್ರಿಯ ಐದನೇ ದಿನ ಆರಾಧನೆಗೆ ಪಾತ್ರವಾಗುವ ಜಗನ್ಮಾತೆಯ ಸ್ವರೂಪವೇ ಸ್ಕಂದಮಾತಾ. ದೇವತೆಗಳ ಸೇನಾಧಿಪತಿಯಾದ ಕುಮಾರ ಕಾರ್ತಿಕೇಯ (ಸ್ಕಂದ)ನ ತಾಯಿಯಾದ್ದರಿಂದಲೇ ಆಕೆಗೆ ಈ ಹೆಸರು ಬಂದಿದೆ. ಪೌರಾಣಿಕವಾಗಿ ಆಕೆ “ಪದ್ಮಾಸನಾ ದೇವಿ” ಎಂದೂ ಪ್ರಸಿದ್ಧಳಾಗಿದ್ದಾಳೆ. ನವರಾತ್ರಿಯ ಐದನೇ ದಿನ ಸ್ಕಂದಮಾತೆಯ ಆರಾಧನೆ ಮಾಡುವವರು ತಾಯಿಯ ಕೃಪಾದೃಷ್ಟಿಯಿಂದ ಶಾಂತಿ, ಸಮಾಧಾನ, ಆಂತರಿಕ ಶಕ್ತಿ, ತೇಜಸ್ಸನ್ನು ಪಡೆಯುತ್ತಾರೆ. ವಿಶೇಷವಾಗಿ ಸಂತಾನ ಬಯಸುವ ದಂಪತಿಗಳು ಈ ದಿನದ ಪೂಜೆಯಿಂದ ಅಪಾರ ಅನುಗ್ರಹವನ್ನು ಅನುಭವಿಸುತ್ತಾರೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದೆ.
ಸ್ಕಂದಮಾತೆಯ ಆರಾಧನೆಯ ವೇಳೆ ಈ ಮಂತ್ರ ಪಠಿಸಿ:
ಸಿಂಹಾಸನಾಗತಾ ನಿತ್ಯಂ ಪದ್ಮಾಶ್ರೀತಕರದ್ವಯಮ್ । ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ॥
ದೇವಿಯ ಸ್ವರೂಪ:
ಸ್ಕಂದಮಾತೆಯ ರೂಪದಲ್ಲಿ, ಬಾಲರೂಪಿಯ ಸ್ಕಂದನು ತಾಯಿಯ ತೊಡೆಯ ಮೇಲೆ ಕುಳಿತಿರುತ್ತಾನೆ. ದೇವಿಗೆ ನಾಲ್ಕು ಭುಜಗಳಿದ್ದು, ಬಲಗಡೆಯ ಮೇಲಿನ ಹಸ್ತದಲ್ಲಿ ಸ್ಕಂದನನ್ನು ಹಿಡಿದಿದ್ದಾಳೆ. ಬಲಗಡೆಯ ಇನ್ನೊಂದು ಹಸ್ತದಲ್ಲಿ ಕಮಲ ಹೂವಿದೆ. ಎಡಗಡೆಯ ಮೇಲಿನ ಹಸ್ತವು ವರಮುದ್ರೆಯಲ್ಲಿದೆ. ಎಡಗಡೆಯ ಇನ್ನೊಂದು ಹಸ್ತದಲ್ಲೂ ಕಮಲವಿದೆ. ಕಮಲಾಸನದ ಮೇಲೆ ವಿರಾಜಮಾನಳಾಗಿರುವುದರಿಂದ ಆಕೆಯನ್ನು ಪದ್ಮಾಸನಾ ಎಂದೂ ಕರೆಯುತ್ತಾರೆ. ಆಕೆಯ ವಾಹನವು ಸಿಂಹ.
ಸ್ಕಂದಮಾತಾ ಆರಾಧನೆಯ ಮಹತ್ವ:
ಈ ದಿನ ಸ್ಕಂದಮಾತೆಯನ್ನು ಪೂಜಿಸುವವರು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡು, ಏಕಾಗ್ರತೆಯೊಂದಿಗೆ ಆರಾಧನೆ ಮಾಡಬೇಕು. ಸ್ಕಂದಮಾತೆಯ ಆರಾಧನೆ ಮಾಡಿದಾಗ ಭಕ್ತರ ಮನಸ್ಸಿನ ಕೋರಿಕೆಗಳು ಈಡೇರುತ್ತವೆ. ಶಾಂತಿ, ನೆಮ್ಮದಿ, ಸಮಾಧಾನ ದೊರೆಯುತ್ತದೆ. ಈ ಆರಾಧನೆಯ ವಿಶೇಷವೆಂದರೆ – ತಾಯಿಯೊಂದಿಗೆ ಬಾಲರೂಪಿಯ ಸ್ಕಂದನ ಆರಾಧನೆಯೂ ಸಹ ನೆರವೇರುತ್ತದೆ.
ಸ್ಕಂದಮಾತೆಯ ಆರಾಧನೆಯ ಫಲವಾಗಿ ಭಕ್ತರಿಗೆ ಅಲೌಕಿಕ ತೇಜಸ್ಸು, ಕಾಂತಿ ಲಭಿಸುತ್ತದೆ. ಮಕ್ಕಳಿಲ್ಲದ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಈ ದಿನ ವಿಶೇಷವಾಗಿ ಸ್ಕಂದಮಾತೆಯ ವ್ರತವನ್ನು ಆಚರಿಸಬೇಕು ಎಂದು ನಂಬಿಕೆ ಇದೆ. ಶುಭ್ರವಾದ ಬಟ್ಟೆ ಧರಿಸಿ, ಬಾಳೆಹಣ್ಣು ಮತ್ತು ಅದರಿಂದ ಮಾಡಿದ ನೈವೇದ್ಯವನ್ನು ಅರ್ಪಿಸುವುದು ಅತ್ಯಂತ ಶ್ರೇಯಸ್ಕರ.
ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ; ಪೂಜಾ ವಿಧಾನವನ್ನು ತಿಳಿಯಿರಿ
ಸ್ಕಂದಮಾತಾ ಪೌರಾಣಿಕ ಹಿನ್ನೆಲೆ:
ಪುರಾಣದ ಪ್ರಕಾರ, ತಾರಕಾಸುರ ಎಂಬ ರಾಕ್ಷಸನು ಬ್ರಹ್ಮನ ತಪಸ್ಸಿನಿಂದ ಅಮರತ್ವದ ವರ ಪಡೆದ. ಆದರೆ, ಜೀವಿಗಳೆಲ್ಲರೂ ಮರಣವನ್ನು ಅನುಭವಿಸಬೇಕೆಂಬ ನಿಯಮವನ್ನು ಬ್ರಹ್ಮನು ವಿವರಿಸಿದಾಗ, ತಾರಕಾಸುರನು “ನನಗೆ ಶಿವನ ಮಗನಿಂದಲೇ ಮರಣವಾಗಲಿ” ಎಂದು ಕೇಳಿಕೊಂಡ. ಶಿವನು ಎಂದಿಗೂ ಮದುವೆಯಾಗುವುದಿಲ್ಲ ಎಂಬ ಅಹಂಕಾರದ ಭಾವದಿಂದ ಅವನು ಈ ವರವನ್ನು ಬೇಡಿಕೊಂಡನು.
ಆದರೆ ಕಾಲಕ್ರಮದಲ್ಲಿ ಶಿವನು ಪಾರ್ವತಿಯನ್ನು ವಿವಾಹವಾದರು, ಅವರಿಂದ ಕಾರ್ತಿಕೇಯ (ಸ್ಕಂದ) ಜನಿಸಿದರು. ಕಾರ್ತಿಕೇಯ ಬೆಳೆದ ನಂತರ ತಾರಕಾಸುರನ ವಧೆಯನ್ನು ನೆರವೇರಿಸಿ ಲೋಕವನ್ನು ರಕ್ಷಿಸಿದರು. ಅಂಥ ಸ್ಕಂದನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ.
ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 25 September 25




