HALAL vs JATKA: ದಸರಾ ಸಂಭ್ರಮದಲ್ಲೂ ಸದ್ದು ಮಾಡುತ್ತಿದೆ ಹಲಾಲ್ VS ಜಟ್ಕಾ ಕಟ್ ಅಭಿಯಾನ
ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುತ್ವ ಪರ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ VS ಜಟ್ಕಾ ಕಟ್ (HALAL vs JATKA Cut) ಅಭಿಯಾನ ಜೋರಾಗಿ ನಡೆದಿತ್ತು. ಇದೀಗ ಮಹಾನವಮಿ, ವಿಜಯದಶಮಿ ವೇಳೆಯಲ್ಲಿ ಇದೇ ಅಭಿಯಾನವು ಮತ್ತೊಮ್ಮೆ ಸದ್ದು ಮಾಡಿದೆ. ದಸರಾ ವೇಳೆ ಮಹಾನವಮಿಯಂದು ಮಾಂಸದ ಅಡುಗೆ ಮಾಡುವ ಸಂಪ್ರದಾಯ ಹಲವೆಡೆ ಇದ್ದರೆ, ಕೆಲವೆಡೆ ವಿಜಯದಶಮಿಯ ನಂತರ ಮಾಂಸದ ಅಡುಗೆ ಮಾಡುವ ರೂಢಿ ಇದೆ. ಹಿಂದೂ ವ್ಯಾಪಾರಿಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುತ್ವ ಪರ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.
‘ನಾವು ಹಿಂದವೀ ಮೀಟ್ ಮಾರ್ಟ್ ಜಟ್ಕಾ ಕಟ್ ಆರಂಭ ಮಾಡಿರೋದು ವ್ಯಾಪಾರಕ್ಕಾಗಿ ಅಲ್ಲ. ಮರೆತ ಹಿಂದೂ ಧಾರ್ಮಿಕ ಶೈಲಿಯನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಲು ಜನರಿಗೆ ಪ್ರೇರಣೆ ನೀಡುತ್ತಿದ್ದೇವೆ. ಯಾವುದೇ ಪ್ರಾಣಿಯನ್ನು ವಧೆ ಮಾಡುವ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಬಲಿ ಕೊಡುವುದು ನಮ್ಮ ಪದ್ಧತಿ. ಪಿತೃಪಕ್ಷದಿಂದ ವಿಜಯದಶಮಿಗೆ ಎಡೆ ಇಡಲು ಬಲಿ ಕೊಟ್ಟ ಮಾಂಸವನ್ನು ಇಡುವುದು ವಾಡಿಕೆ’ ಎಂದು ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಟಿವಿ9ಗೆ ಪ್ರತಿಕ್ರಿಯಿಸಿದರು.
‘ನಾವು ಜಟ್ಕಾ ಕಟ್ ಅಭಿಯಾನ ಆರಂಭಿಸಿದ ನಂತರ ಹಿಂದೂಗಳು ಅರಂಭಿಸಿರುವ ಮಾಂಸದ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗಿದೆ. ಭಗವದ್ಗೀತೆಯ 17ನೇ ಅಧ್ಯಾಯದಲ್ಲಿ ‘ನೀನು ಯಾವುದೇ ಆಹಾರ ಸ್ವೀಕಾರ ಮಾಡು. ನನ್ನ ಹೆಸರಿನಲ್ಲಿ ಸ್ವೀಕಾರ ಮಾಡಿದರೆ ಪಾಪ ಮುಕ್ತನಾಗುವೆ’ ಎಂದು ಹೇಳಲಾಗಿದೆ. ಅದರಂತೆ ನಡೆಯಬೇಕು ಎನ್ನುವುದು ನಮ್ಮ ಕಾಳಜಿಯಾಗಿದೆ. ವಿಜಯದಶಮಿಯ ಪ್ರಯುಕ್ತ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಪದ್ಮನಾಭನಗರದಲ್ಲಿ ಎರಡು ಹಿಂದವೀ ಮೀಟ್ ಮಾರ್ಟ್ ತೆರೆಯುತ್ತಿದ್ದೇವೆ. ಹಿಂದವೀ ಮೀಟ್ ಮಾರ್ಟ್ನಲ್ಲಿ ತರಬೇತಿ ಕೊಟ್ಟ ಯುವಕರು ಮುಧೋಳ, ಬಳ್ಳಾರಿ, ತುಮಕೂರು ಸೇರಿದಂತೆ ಹಲವೆಡೆ ಅಂಗಡಿಗಳನ್ನು ತೆರೆದಿದ್ದಾರೆ’ ಎಂದು ವಿವರಿಸಿದರು.
‘ಇಂದು (ಅ 3) ಹಿಂದೂಪರ ಸಂಘಟನೆಗಳ ಮುಖಂಡರ ಸಭೆ ಮಾಡುತ್ತೇವೆ. ಜಟ್ಕಾ ಕಟ್ ಅಭಿಯಾನವನ್ನು ನಾವು ಮುಂದುವರಿಸಬೇಕಿದೆ. ಕಳೆದ ಬಾರಿ ನಾವು ಕರೆಕೊಟ್ಟ ಜಟ್ಕಾ ಕಟ್ ಅಭಿಯಾನ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಇಂದಿನಿಂದ ಎಲ್ಲರೂ ಮನೆ ಮನೆಗೆ ತೆರಳಿ ಜಾಗೃತಿ, ಕರಪತ್ರ ಹಂಚಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತೇವೆ. ದೇವಾಲಗಳಿಗೆ ತೆರಳಿ ಭಕ್ತರ ಬಳಿ ಮನವಿ ಮಾಡುತ್ತೇವೆ. ನಮ್ಮವರ ಬಳಿ ನಮ್ಮ ವ್ಯವಹಾರವಿರಲಿ ಅನ್ನೋದು ನಮ್ಮ ಉದ್ದೇಶ’ ಎಂದು ಹೇಳಿದರು.
ಜಟ್ಕಾ Vs ಹಲಾಲ್ ಏನು ವ್ಯತ್ಯಾಸ?
ಮುಸ್ಲಿಮರು ಹಲಾಲ್ ಮಾಂಸದ ಅಭ್ಯಾಸವನ್ನು ಅನುಸರಿಸುತ್ತಾರೆ. ಆದರೆ ಇತರ ಸಮುದಾಯಗಳು ‘ಜಟ್ಕಾ’ ವಿಧಾನಕ್ಕೆ ಆದ್ಯತೆ ನೀಡುತ್ತವೆ. ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂಬ ಪದದ ಅರ್ಥ ‘ಬಳಕೆಗೆ ಯೋಗ್ಯ’. ಈ ಪ್ರಕ್ರಿಯೆಯು ಕುರಾನ್‌ನ ಸಾಲುಗಳೊಂದಿಗೆ ಪ್ರಾಣಿಯನ್ನು ನಿಧಾನವಾಗಿ ವಧೆ ಮಾಡುವುದಾಗಿದೆ. ಜಟ್ಕಾ ಕಟ್ ಎಂದರೆ ಎಂದರೆ ವೇಗವಾಗಿ, ಒಂದೇ ಹೊಡೆತದಲ್ಲಿ ಪ್ರಾಣಿಗಳ ತಲೆಯನ್ನು ಕತ್ತರಿಸುವುದು, ಇದರಿಂದಾಗಿ ಪ್ರಾಣಿ ಹೆಚ್ಚು ನೋವು ಇಲ್ಲದೆ ತಕ್ಷಣವೇ ಸಾಯುತ್ತವೆ.