ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ(Mysuru Dasara 2022) ಮನೆ ಮಾಡಿದೆ. ದಸರೆಗೆ ಭರ್ಜರಿ ತಾಲೀಮು ನಡೆಯುತ್ತಿದೆ. ಇದರ ನಡುವೆ ದಸರೆಗೆ ಕಾಡಿನಿಂದ ನಾಡಿಗೆ ಆಗಮಿಸಿದ್ದ ಲಕ್ಷ್ಮಿ ಎಂಬ ಆನೆ ಸೆ.13ರಂದು ಅರಮನೆ ಕೋಡಿ ಸೋಮೇಶ್ವರ ದೇಗುಲದ ಬಳಿ ಗಂಡು ಮರಿಗೆ ಜನ್ಮ ನೀಡಿದೆ. ಲಕ್ಷ್ಮಿ ಆನೆ ಹಾಗೂ ಮರಿಯನ್ನು ಅಧಿಕಾರಿಗಳು ಪ್ರತ್ಯೇಕವಾಗಿರಿಸಿದ್ದಾರೆ.
ಸುರಕ್ಷತಾ ದೃಷ್ಟಿಯಿಂದ ಅರಮನೆಯಲ್ಲೇ ಲಕ್ಷ್ಮಿ ಆನೆ ಹಾಗೂ ಮರಿಯನ್ನು ಪ್ರತ್ಯೇಕವಾದ ವ್ಯವಸ್ಥೆ ಮಾಡಿ ಇಡಲಾಗಿದೆ. ಮಾಧ್ಯಮದವರು ಸೇರಿ ಯಾರು ಆನೆ ಹಾಗೂ ಮರಿ ಹತ್ತಿರ ಹೋಗದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದಿನ ದಿನದಲ್ಲಿ ಫೋಟೋ ವಿಡಿಯೋ ನಾವೇ ಕೊಡುವುದಾಗಿ ಡಿಸಿಎಫ್ ಡಾ ಕರಿಕಾಳನ್ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ-2022: ಈ ಬಾರಿಯ ಉತ್ಸವದಲ್ಲಿ ಜಂಬೂಸವಾರಿ ಜೊತೆ ಕುದುರೆ ಸವಾರಿಯೂ ಹೆಚ್ಚುವರಿ ಆಕರ್ಷಣೆಯಾಗಲಿದೆ
ಇನ್ನು ರಾಂಪುರ ಆನೆ ಶಿಬಿರದಲ್ಲಿ ಲಕ್ಷ್ಮಿ ಅರ್ಜುನ ಆನೆ ಜೊತೆ ಸೇರಿತ್ತು. ತಾಯಿ ಆನೆ ಲಕ್ಷ್ಮಿ ಮತ್ತು ಮರಿ ಆನೆ ಎರಡು ಆರೋಗ್ಯವಾಗಿವೆ. 15 ವರ್ಷದ ಹಿಂದೆ ದಸರೆಗೆ ಬಂದಿದ್ದ ಸರಳ ಸಹಾ ಅರಮನೆಯಲ್ಲೇ ಮರಿಗೆ ಜನ್ಮ ನೀಡಿತ್ತು. ಸರಳ ಜನ್ಮ ನೀಡಿದ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು.
ಇನ್ನು ಈ ಸಂಬಂಧ ಡಿಸಿಎಫ್ ಕರಿಕಾಳನ್ ಮಾತನಾಡಿದ್ದು, ಲಕ್ಷ್ಮೀ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ದಸರಾಗೂ ಮುನ್ನಾ ಆನೆಗಳನ್ನ ತಪಾಸಣೆ ಮಾಡಲಾಗಿದೆ. ತಪಾಸಣೆ ವೇಳೆ ಲಕ್ಷ್ಮೀ ಆನೆ ಗರ್ಭಿಣಿ ಎಂದು ಗೊತ್ತಾಗಿಲ್ಲ. ನಿನ್ನೆ ರಾತ್ರಿ ಆನೆಯ ಚಲನವಲನ ಬದಲಾದ ಕಾರಣ ಆನೆಯ ಮೂತ್ರ ಮತ್ತು ರಕ್ತವನ್ನ ಪರೀಕ್ಷೆಗೆ ಕಳುಹಿಸಲಾಗಿದೆ.ಪರೀಕ್ಷೆಯ ವರದಿ ಬರುವ ಮುನ್ನವೇ ಲಕ್ಷ್ಮೀ ಗಂಡು ಆನೆಗೆ ಜನ್ಮ ನೀಡಿದೆ. ರಾತ್ರಿ 8.15ಕ್ಕೆ ಲಕ್ಷ್ಮೀ ಆನೆ ಗಂಡು ಮರಿ ಆನೆಗೆ ಜನ್ಮನೀಡಿದೆ. ಇಬ್ಬರು ವೈದ್ಯರು ಲಕ್ಷ್ಮೀ ಆನೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಲಕ್ಷ್ಮೀ ಆನೆ ಕ್ಯಾಂಪ್ ನಲ್ಲಿ ಗರ್ಭಿಣಿ ಎಂದು ತಿಳಿದಿರಲಿಲ್ಲ. ಅರಮನೆಗೆ ಬಂದ ಮೇಲೆ ಒಳ್ಳೆಯ ಆಹಾರ ನೀಡಿದ್ದೇವೆ. ಪ್ರತಿನಿತ್ಯ ವಾಕಿಂಗ್ ಮಾಡಿರುವುದು ಆನೆಗೆ ಸಹಾಯವಾಗಿದೆ. ಕೇವಲ 10 ನಿಮಿಷದಲ್ಲಿ ಲಕ್ಷ್ಮೀ ಮರಿ ಆನೆಗೆ ಜನ್ಮ ನೀಡಿದೆ. ಗರ್ಭಿಣಿ ಎಂದು ಗೊತ್ತಿದ್ದರೆ ಖಂಡಿತವಾಗಿಯೂ ಆನೆಯನ್ನ ಕರೆತರುತ್ತಿರಲಿಲ್ಲ. ಕಾಡಿಗೆ ಹೋದಾಗ ಆನೆಗೆ ಕ್ರಾಸ್ ಆಗಿರಬಹುದು. ಎಲ್ಲಾ ಆನೆಗಳ ರಿಪೋರ್ಟ್ ಪಡೆದ ನಂತರ ದಸರಾಗೆ ಕರೆತರಲಾಗಿದೆ. ಪ್ರಮೋದಾದೇವಿ ಒಡೆಯರ್ ಈಗಾಗಲೇ ಆನೆಯ ಆರೋಗ್ಯ ವಿಚಾರಿಸಿದ್ದಾರೆ. ಆನೆಗೆ ಉತ್ತಮ ಹೆಸರು ಸೂಚಿಸುವಂತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಕೇಳಿಕೊಳ್ಳಲಾಗಿದೆ. ತಾಯಿ ಮತ್ತು ಮಗ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಅರಮನೆಯಲ್ಲಿ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.
ಆನೆಗಳ ತಾಲೀಮು
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಬಂದಿದೆ. 4 ಹೆಣ್ಣಾನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಗೋಪಾಲಸ್ವಾಮಿ, ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಗೋಪಿ, ಶ್ರೀರಾಮ, ವಿಜಯಾ, ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಪ್ರತಿದಿನ ತಾಲೀಮು ಮಾಡುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:47 am, Wed, 14 September 22