Mysore Dasara 2022: ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 24, 2022 | 7:51 PM

ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು. ಪರ್ಯಾಯವಾಗಿ ಯಾರನ್ನು ಕರೆಸಬೇಕೆಂದು‌ ಯೋಚಿಸ್ತಿದ್ದೇವೆ.

Mysore Dasara 2022: ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ನಟ ಸುದೀಪ್, ಸಚಿವ ಎಸ್.ಟಿ.ಸೋಮಶೇಖರ್
Follow us on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಕ್ಷಣಗಣನೆ ಶುರುವಾಗಿದೆ. ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು. ಕಾರ್ಯಕ್ರಮಕ್ಕೆ ಬರಲ್ಲವೆಂದು ಸುದೀಪ್ ಮಾಹಿತಿ ನೀಡಿದ್ದಾರೆ. ಪರ್ಯಾಯವಾಗಿ ಯಾರನ್ನು ಕರೆಸಬೇಕೆಂದು‌ ಯೋಚಿಸ್ತಿದ್ದೇವೆ ಎಂದು ಹೇಳಿದರು. ರಾಜಮನೆತನದವರಿಗೆ ಮೈಸೂರು ಜಿಲ್ಲಾಡಳಿತದಿಂದ ಯದುವಂಶದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗೆ ಆಹ್ವಾನ ಅಧಿಕೃತ ಆಹ್ವಾನ ನೀಡಲಾಗಿದೆ. ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಲು ಒಪ್ಪಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಾಜ ಧನ ನೀಡಲಾಗಿದೆ ಎಂದರು.

ದಸರಾ ಕಾರ್ಯಕ್ರಮಗಳಿಗೆ ಶಾಸಕ ರಾಮದಾಸ್ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮೋದಿ ಯುಗ ಉತ್ಸವ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಹೀಗಾಗಿ ರಾಮದಾಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಮುಂದಿನ‌ ದಿನಗಳಲ್ಲಿ ಶಾಸಕ S.A.ರಾಮದಾಸ್ ಬರುತ್ತಾರೆ. ನಾಡಹಬ್ಬ ಮೈಸೂರು ದಸರಾಗೆ ಪ್ರಚಾರದ ಕೊರತೆಯಾಗಿಲ್ಲ. ಮೈಸೂರು ದಸರಾಗೆ ಫ್ಲೆಕ್ಸ್ ಹಾಕುವುದೇ ಪ್ರಚಾರ ಅಲ್ಲ. ಪ್ರತಿ ವರ್ಷದಂತೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ರಾಷ್ಟ್ರಪತಿ ಆಗಮನ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಪೊಲೀಸ್ ಭದ್ರತೆ ನಿಯೋಜಿಸಲಾಗುತ್ತದೆ. ಆದರೆ ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಕೂಡ ಆಗಮಿಸಲಿರುವ ಹಿನ್ನೆಲೆ ಮೈಸೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತೆ ಮಾಡಲಾಗಿದೆ. 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಹೊರ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ನಗರದಲ್ಲಿ ವಿಶೇಷ ಕಣ್ಗಾವಲು ಇಡುವ ನಿಟ್ಟಿನಲ್ಲಿ 13 ಸಾವಿರಕ್ಕೂ ಹೆಚ್ಚು ಸಿಸಿಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ದಸರಾ ಹಿನ್ನೆಲೆ ಮೈಸೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 5,485 ಪೊಲೀಸರನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದ 3,380 ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಮೈಸೂರು ನಗರದಿಂದ 1255 ಮಂದಿ ಪೊಲೀಸ್ ನಿಯೋಜನೆ ಮಾಡಲಾಗಿದೆ. 550 ಗೃಹ ರಕ್ಷಕ ಸಿಬ್ಬಂದಿಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಗಳಲ್ಲಿ ಡ್ರೋನ್ ಕ್ಯಾಮರಾ ಮೂಲಕ ಕಣ್ಗಾವಲು ಇರಿಸಲಾಗುತ್ತಿದ್ದು, ನಗರದಲ್ಲಿ 13,140 ಸಿಸಿಕ್ಯಾಮರಾ ಅಳವಡಿಸಲಾಗಿದೆ. ಮೆರವಣಿಗೆ ಮಾರ್ಗ ಸೇರಿದಂತೆ ಇತರೆ ಕಡೆ 110 ಸಿಸಿಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮೈಸೂರಿನಲ್ಲಿ ಪ್ರತಿದಿನ ಬಾಂಬ್ ಪತ್ತೆ ದಳ, ಶ್ವಾನದಳ ತಪಾಸಣೆ ನಡೆಸಲಾಗುತ್ತಿದೆ. ಮಂಡಿಠಾಣೆ, ದೇವರಾಜ ಠಾಣೆ, ಲಷ್ಕರ್, ನಜರ್ಬಾದ್ ಪೊಲೀಸ್ ಠಾಣೆಗಳಿಂದ 8 ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ರೈಲು ನಿಲ್ದಾಣ, ಏರ್​ಪೋರ್ಟ್​, ಬಸ್​ ನಿಲ್ದಾಣದಲ್ಲಿ ಹೈಅಲರ್ಟ್ ಆಗಿರುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ. ವಿವಿಧ ಕಾರ್ಯಕ್ರಮ‌ ಸ್ಥಳಗಳಲ್ಲಿ 12 ಅಗ್ನಿಶಾಮಕ ಹಾಗೂ ಎಂಟು ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.