Navratri: ಸಪ್ತಶತಿಯ (ಚಂಡೀ ಪಾಠದ )ಮಹತ್ವ ಮತ್ತು ನವರಾತ್ರೆಯಲ್ಲಿ ಇದನ್ನು ಪಾರಾಯಣ ಮಾಡಿದರೇನು ಫಲ?

ಕೆಲವು ಸ್ತೋತ್ರಗಳು ಶೀಘ್ರಫಲವನ್ನು ನೀಡುತ್ತವೆ. ಹಾಗೆಯೇ ಅಂತಹ ಶೀಘ್ರಫಲಪ್ರದವಾದ ಸ್ತೋತ್ರಗಳನ್ನು ಅವುಗಳಿಗೆ ಅತ್ಯಂತ ಉಚಿತವಾದ ಪರ್ವ ಕಾಲದಲ್ಲಿ ಪಠಿಸಿದರೆ / ಪಾರಾಯಣ ಮಾಡಿದರೆ ಅತ್ಯಂತ ಶುಭಫಲಗಳು ಲಭ್ಯವಾಗುವುದು ನಿಶ್ಚಿತ.

Navratri: ಸಪ್ತಶತಿಯ (ಚಂಡೀ ಪಾಠದ )ಮಹತ್ವ ಮತ್ತು ನವರಾತ್ರೆಯಲ್ಲಿ ಇದನ್ನು ಪಾರಾಯಣ ಮಾಡಿದರೇನು ಫಲ?
TV9kannada Web Team

| Edited By: ಅಕ್ಷಯ್​ ಕುಮಾರ್​​

Sep 24, 2022 | 7:11 AM

ಶ್ರೀದೇವಿಯ ಸ್ತುತಿಗಳು / ದೇವಿಯ ಕುರಿತಾದ ಸ್ತೋತ್ರಗಳು ಹಲವು ಇವೆ. ಅವೆಲ್ಲವೂ ಅತ್ಯಂತ ಮಹತ್ವವಾದ ಫಲವನ್ನೇ ನೀಡುತ್ತವೆ. ಆದರೂ ಅವುಗಳಲ್ಲಿ ಕೆಲವು ಸ್ತೋತ್ರಗಳು ಶೀಘ್ರಫಲವನ್ನು ನೀಡುತ್ತವೆ. ಹಾಗೆಯೇ ಅಂತಹ ಶೀಘ್ರಫಲಪ್ರದವಾದ ಸ್ತೋತ್ರಗಳನ್ನು ಅವುಗಳಿಗೆ ಅತ್ಯಂತ ಉಚಿತವಾದ ಪರ್ವ ಕಾಲದಲ್ಲಿ ಪಠಿಸಿದರೆ / ಪಾರಾಯಣ ಮಾಡಿದರೆ ಅತ್ಯಂತ ಶುಭಫಲಗಳು ಲಭ್ಯವಾಗುವುದು ನಿಶ್ಚಿತ.

ಅಂತಹ ಮಹತ್ವ ಪೂರ್ಣ ಸ್ತೋತ್ರಗಳಲ್ಲಿ ಒಂದಾದ ದೇವೀಮಾಹಾತ್ಮ್ಯೆ ಅಥವಾ ಸಪ್ತಶತೀ ಅಥವಾ ಚಂಡೀಪಾಠವೇನಿದೆ ಅದು ಯಾವತ್ತೂ ಮಹತ್ತರವಾದ ಕ್ಷೇಮಫಲವನ್ನು ನೀಡುವ ಸ್ತೋತ್ರವಾಗಿದೆ. ಅದರಲ್ಲೂ ಅದನ್ನು ನವರಾತ್ರೆಯ ಸಂದರ್ಭದಲ್ಲಿ ವ್ರತ ನಿಷ್ಠರಾಗಿ ಪಾರಾಯಣ ಮಾಡಿದರೆ ಅಥವಾ ಶ್ರವಣ ಮಾಡಿದರೆ ಇಷ್ಟಾರ್ಥ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಹಾಗದರೆ ಏನೀ ಸಪ್ತಶತೀ ಎಂದರೆ ? ಅದಕ್ಕುತ್ತರ ಸಪ್ತ ಅಂದರೆ ಏಳು ಎಂದರ್ಥ. ಶತೀ ಅಂದರೆ ಶತದ ಭಾವ ನೂರು ಎಂದರ್ಥ. ಒಟ್ಟೂ ಹೇಳುವುದಾದರೆ ಏಳುನೂರು ಎಂದು ತಾತ್ಪರ್ಯ. ಈ ಸ್ತೋತ್ರದಲ್ಲಿ (ಚಂಡೀ ಪಾಠದಲ್ಲಿ) 700 ಶ್ಲೋಕಗಳು ಇವೆ. ಒಟ್ಟೂ ಹದಿಮೂರು ಅಧ್ಯಾಯಗಳು ಇವೆ. ಮೊದಲನೇಯ ಅಧ್ಯಾಯದಲ್ಲಿ ಮಧು-ಕೈಟಭರನ್ನು ನಾಶಮಾಡಿದ ದೇವಿಯ ಸ್ತುತಿಯನ್ನು ಮಾಡಲಾಗಿದೆ. ಪ್ರಥಮ ಚರಿತ್ರೆ ಎನ್ನುವರು. ಈ ಪ್ರಥಮ ಚರಿತ್ರೆಗೆ ಮಹಾಕಾಳಿ ಪ್ರಧಾನ ದೇವತೆಯಾಗಿರುವಳು.

ಎರಡನೇಯ ಅಧ್ಯಾಯದಲ್ಲಿ ಮಹಿಷಾಸುರ ಸೈನ್ಯದ ಸಂಹಾರ ಮತ್ತು ಮೂರನೇಯ ಅಧ್ಯಾಯದಲ್ಲಿ ಮಹಿಷಾಸುರನ ವಧೆ ಮಾಡಿದ ದೇವಿಯ ಸ್ತುತಿಯನ್ನು ಮಾಡಲಾಗಿದೆ. ಇನ್ನು ನಾಲ್ಕನೇಯ ಅಧ್ಯಾಯವನ್ನು ಶಕ್ರಾದಿಸ್ತುತಿ ಎನ್ನುವರು. ಅಂದರೆ ಇಂದ್ರಾದಿದೇವತೆಗಳು ತಾಯಿಯನ್ನು ಕಷ್ಟ ನಿವಾರಣೆ ಮಾಡಲು ಪ್ರಾರ್ಥಿಸುವ ವಿಧಾನ ಇಲ್ಲಿದೆ. ಅಂತ್ಯಂತ ಅದ್ಭುತ ಭಾಗ ಇದು. ಈ ಅಧ್ಯಾಯ ಸೇರಿ ಮಧ್ಯಮ ಚರಿತ್ರೆ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಮಧ್ಯಮ ಚರಿತ್ರೆಗೆ ಮಹಾಲಕ್ಷ್ಮೀ ದೇವಿಯು ಪ್ರಧಾನ ದೇವತೆಯಾಗಿರುವಳು. ಹಾಗೆಯೇ ಐದನೇಯ ಅಧ್ಯಾಯಲ್ಲಿ ಐದನೇಯ ಅಧ್ಯಾಯದಲ್ಲಿ ದೇವಿಯ ಸ್ತುತಿ ಮತ್ತು ದೂತರೊಂದಿಗೆ ದೇವಿಯ ಸಂಭಾಷಣೆಯನ್ನು ವರ್ಣಿಸಲಾಗಿದೆ. ಆರನೇಯ ಅಧ್ಯಾಯದಲ್ಲಿ ಧೂಮ್ರಾಕ್ಷನ ವಧೆ, ಏಳನೇಯ ಅಧ್ಯಾಯದಲ್ಲಿ ಚಂಡ -ಮುಂಡರ ವಧೆ, ಎಂಟನೇ ಅಧ್ಯಾಯದಲ್ಲಿ ರಕ್ತಬೀಜನ ವಧೆ, ಒಂಭತ್ತನೇ ಅಧ್ಯಾಯದಲ್ಲಿ ನಿಶುಂಭನ ವಧೆ, ಹತ್ತನೇಯ ಅಧ್ಯಾಯದಲ್ಲಿ ಶುಂಭನ ವಧೆ ಮಾಡಿದ ನಂತರ ದುರ್ಗಾದೇವಿಯ ಉಗ್ರ ರೂಪವನ್ನು ನೋಡಲು ಹೆದರಿದ ದೇವತೆಗಳು ಹನ್ನೊಂದನೇಯ ಅಧ್ಯಾಯದಲ್ಲಿ ನಾರಾಯಣೀ ಸ್ತುತಿ ಎನ್ನುವ ಅತ್ಯಂತ ಮಹತ್ವ ಪೂರ್ಣ ಶ್ಲೋಕಗಳಿಂದ ತಾಯಿ ದುರ್ಗೆಯನ್ನು ಶಾಂತಗೊಳಿಸುತ್ತಾರೆ. ಆ ನಂತರ ಹನ್ನೆರಡು ಮತ್ತು ಹದಿಮೂರನೇಯ ಅಧ್ಯಾಯದಲ್ಲಿ ಫಲಶ್ರುತಿಯನ್ನು ಹೇಳಲಾಗಿದೆ. ಈ ಭಾಗಕ್ಕೆ ಉತ್ತರ ಚರಿತ್ರೆ ಎನ್ನುವರು. ಇದಕ್ಕೆ ಮಹಾಸರಸ್ವತಿಯು ಪ್ರಧಾನ ದೇವತೆ.

ಈ ಪಾರಾಯಾಣ ಆರಂಭಿಸುವ ಮೊದಲು ಸ್ನಾನಾದಿಗಳನ್ನು ಶುಭ್ರ ಮಡಿಯನ್ನುಟ್ಟು ಮಾಡಿ ಸಾಧ್ಯವಿದ್ದಲ್ಲಿ ತುಪ್ಪದೀಪ ಹಚ್ಚಿ ಹಣೆಗೆ ಕುಂಕುಮದ ತಿಲಕವನಿಟ್ಟು ಪೂರ್ವಾಭಿಮುಖವಾಗಿ ಕುಳಿತು ಸಂಕಲ್ಪವನ್ನು ಮಾಡಿ. ಪುಸ್ತಕ ಪೂಜೆ ಮಾಡಬೇಕು. ಆನಂತರ ಕವಚ, ಅರ್ಗಲ, ಕೀಲಕವೆಂಬ ಭಾಗವನ್ನು ಪಠಿಸಿ, ನ್ಯಾಸವನ್ನು ಮಾಡಿಕೊಂಡು ಪಾರಾಯಣ ಆರಂಭಿಸಬೇಕು. ಪಾರಾಯಣ ಆರಂಭವಾದ ಮೇಲೆ ಮುಗಿಯುವ ತನಕ ಯಾವುದೇ ಕಾರಣಕ್ಕೂ ಮಾತನಾಡಬಾರದು ಮತ್ತು ಆಸನ ಬದಲಿಸಬಾರದು ಇದು ಪಾಠ ನಿಯಮ.

ಆದರೆ ಒಂದು ವಿಧಿಯಿದೆ. ನವಾಕ್ಷರವೆಂಬ ಮೂಲಮಂತ್ರವನ್ನು ಪಾರಾಯಣದ ಪೂರ್ವದಲ್ಲಿ ಮತ್ತು ಕೊನೆಯಲ್ಲಿ ಮಾಡಬೇಕು. ಇದನ್ನು ಸರಿಯಾಗಿ ಬಲ್ಲವರಿಂದ ಉಪದೇಶ ಪಡೆದುಕೊಡೇ ಮಾಡಬೇಕು. ಜಪವು ಛಿದ್ರವಾದರೆ ಕಷ್ಟಗಳು ಸಂಭವಿಸುವ ಸಾಧ್ಯತೆಯಿದೆ. ಅಥವಾ ಬಲ್ಲವರಿಂದ ಪಾರಾಯಣ ಮಾಡಿಸಿ ಶ್ರವಣ ಮಾಡಿದರೂ ಉತ್ತಮ.

ಇಂತಹ ಪರಮಪವಿತ್ರವಾದ ದೇವೀ ಸ್ತುತಿ ಬೇರೆ ಇಲ್ಲ. ಇದನ್ನು ಪಾರಾಯಣ ಮಾಡುವುದರಿಂದ ಅಥವಾ ಮಾಡಿಸುವುದರಿಂದ ಅದರಲ್ಲೂ ನವರಾತ್ರೆಯಲ್ಲಿ ಮಾಡುವುದರಿಂದ ಕಷ್ಟಗಳು ನಾಶವಾಗಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಸಂಶಯವೇ ಇಲ್ಲ. ಮಾರ್ಕಾಂಡೇಯ ಪುರಾಣದ ಭಾಗವಾಗಿದೆ ಇದು. ಅದರಲ್ಲೇ ಉಲ್ಲೇಖಿಸಿದಂತೆ ಈ ಪಾರಾಯಣವನ್ನು ಶ್ರವಣ ಮಾಡಿದ ರಾಜನು ತನ್ನ ನಷ್ಟವಾದ ರಾಜ್ಯವನ್ನು ಅನಾಯಾಸವಾಗಿ ಪುನಃ ಪಡೆದುಕೊಂಡನು. ತನ್ನ ಸಂಸಾರದಿಂದ ದೂರ ಮಾಡಲ್ಪಟ್ಟ ವ್ಯಾಪಾರಿಯೊಬ್ಬನಿಗೆ ಅವನ ಇಷ್ಟಾರ್ಥ ಲಭ್ಯವಾಯಿತು. ಆ ಪಾರಾಯಣದ ಫಲವಾಗಿ ಅವನಿಗೆ ಅಮಿತವಾದ ಆನಂದ ಪ್ರಾಪ್ತಿಯಾಯಿತು.

ಇದು ಸಂಪೂರ್ಣವಾಗಿ ದೇವಿಯ ಮಾಹಾತ್ಮ್ಯದಿಂದ ಕೂಡಿದ ತ್ರಿದುರ್ಗಾ ಸ್ತುತಿಯಾಗಿದೆ. ನವರಾತ್ರೆಯಲ್ಲಿ ದೇವಿಯ ಆರಾಧನೆಗೆ ಮಹತ್ವವಿರುವುದರಿಂದ ಮುಂದೆ ಬರುವ ನವರಾತ್ರೆಯಲ್ಲಿ ಚಂಡೀ ಪಾಠವನ್ನು ಓದೋಣ / ಶ್ರವಣ ಮಾಡೋಣ. ಈ ಶ್ಲೋಕಗಳಿಂದ ಹೋಮ ಮಾಡುವ ಕ್ರಮವೂ ಇದೆ. ತಿಳಿದು ಮಾಡಿರಿ, ಶುಭಪಲವಿದೆ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada