Navratri: ನವರಾತ್ರಿಯ ವಿಶೇಷ ಆರಾಧನೆ ಹೇಗೆ ಮತ್ತು ಅದರ ಫಲವೇನು? ಆರು ವಿಧವಾದ ವ್ರತಗಳ ಲಾಭ ಏನು?
ಭಕ್ತಿಯಿಂದ ಮಾಡುವ ಪೂಜೆಗೆ ಉತ್ತಮ ಫಲವಿದೆ. ಅದಕ್ಕೂ ಮಿಗಿಲಾಗಿ ಪರ್ವಕಾಲಗಳಲ್ಲಿ ಶ್ರದ್ಧೆಯಿಂದ ಮಾಡುವ ಆರಾಧನೆ/ಪೂಜೆಗೆ ದ್ವಿಗುಣ ಫಲಗಳನ್ನು ಶಾಸ್ತ್ರಗಳು ಹೇಳಿವೆ. ಯಾವ ದೇವತೆಯ ಸಂಬಂಧಿತವಾದ ಪರ್ವಕಾಲವೋ ಅದೇ ದೇವರನ್ನು ಆರಾಧಿಸಬೇಕು ಎಂದು ನಿಯಮ.
ದೇವತಾರಾಧನೆಗೆ ಸಫಲ / ಒಳ್ಳೆಯ ಫಲ ಇದ್ದೇ ಇದೆ. ಅದರಲ್ಲೂ ಭಕ್ತಿಯಿಂದ ಮಾಡುವ ಪೂಜೆಗೆ ಉತ್ತಮ ಫಲವಿದೆ. ಅದಕ್ಕೂ ಮಿಗಿಲಾಗಿ ಪರ್ವಕಾಲಗಳಲ್ಲಿ ಶ್ರದ್ಧೆಯಿಂದ ಮಾಡುವ ಆರಾಧನೆ/ಪೂಜೆಗೆ ದ್ವಿಗುಣ ಫಲಗಳನ್ನು ಶಾಸ್ತ್ರಗಳು ಹೇಳಿವೆ. ಯಾವ ದೇವತೆಯ ಸಂಬಂಧಿತವಾದ ಪರ್ವಕಾಲವೋ ಅದೇ ದೇವರನ್ನು ಆರಾಧಿಸಬೇಕು ಎಂದು ನಿಯಮ. ಸರಿಯಾದ ಕ್ರಮವನ್ನು ತಿಳಿದು ಪುಣ್ಯ ಪರ್ವಕಾಲದಲ್ಲಿ ನಾವು ಸತ್ಕರ್ಮಗಳನ್ನು ಮಾಡಿದರೆ ನಮ್ಮ ಮನೋಭಿಲಾಷೆ ಸಿದ್ಧಿಸುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಸಾಕಷ್ಟು ಪುರಾಣಗಳ ನಿದರ್ಶನಗಳು ನಮ್ಮ ಕಣ್ಮುಂದೆ ಸಿಗುತ್ತವೆ. ಅದರಲ್ಲೊಂದು ನವರಾತ್ರಿಯೆಂಬ ಜಗನ್ಮಾತೆಯ ಆರಾಧನೆ ಮಾಡುವ ಪರ್ವ ಪುಣ್ಯ ಸಮಯ. ಈ ನವರಾತ್ರಿಯನ್ನು ದೇಶದಾದ್ಯಂತ ವಿಧ ವಿಧವಾಗಿ ಆಚರಿಸುತ್ತಾರೆ. ಆದರೆ ಇದರ ಆಚರಣೆಗೆ ಒಂದು ವಿಧಿಯಿದೆ. ಇದನ್ನು ಒಂದು ವ್ರತವೆಂಬಂತೆ ಆಚರಿಸುವ ಕ್ರಮವಿದೆ. ಅದು ಆರು ವಿಧವಾದ ವ್ರತ.
ಮೊದಲನೇಯದ್ದು : ಪ್ರತಿಪತ್ (ನವರಾತ್ರಿಯ ಮೊದಲನೇಯ ದಿನದಿಂದ) ನಿಂದ ಆರಂಭಿಸಿ ನವಮೀ (ಮಹಾನವಮೀ) ತನಕ ಆಚರಿಸುವುದು. ಇದನ್ನು ಪೂರ್ಣಪಕ್ಷ ವ್ರತ ಎನ್ನುವರು.
ಎರಡೇಯದ್ದು: ತೃತೀಯಾ ತಿಥಿಯಿಂದ (ನವರಾತ್ರಿಯ ಮೂರನೇ ದಿನದಿಂದ) ಆರಂಭಿಸಿ ನವಮೀ ತನಕ ಏಳು ದಿನಗಳ ವ್ರತ.
ಮೂರನೇಯದ್ದು: ಪಂಚಮೀ ತಿಥಿಯಿಂದ (ನವರಾತ್ರಿಯ ಐದನೇಯ ದಿನದಿಂದ) ಆರಂಭಿಸಿ ನವಮೀ ತನಕ ಐದು ದಿನಗಳ ವ್ರತ.
ನಾಲ್ಕನೇಯದ್ದು: ಸಪ್ತಮೀ ತಿಥಿಯಿಂದ (ನವರಾತ್ರಿಯ ಏಳನೇಯ ದಿನದಿಂದ) ಆರಂಭಿಸಿ ನವಮೀ ತನಕ ಮೂರು ದಿನಗಳ ವ್ರತ.
ಐದನೇಯದ್ದು: ಅಷ್ಟಮೀ ಮತ್ತು ನವಮಿಯಂದು ಎರಡು ದಿನಗಳ ವ್ರತ.
ಆರನೇಯದ್ದು: ನವಮಿಯಂದು ಏಕ ವ್ರತ / ಒಂದು ದಿನದ ವ್ರತ.
ಇದರಲ್ಲಿ ಒಂದು ದಿನದ ನವರಾತ್ರಿ ವ್ರತವನ್ನು ಒಂಭತ್ತು ದಿನಗಳಲ್ಲಿ ಯಾವತ್ತಾದರೂ ಆಚರಿಸಬಹುದು ಆದರೆ ಮೊದಲದಿನ , ಪಂಚಮೀ, ನವಮಿಯಂದು ಮಾಡಿದರೆ ವಿಶೇಷ. ಈ ವ್ರತದ ಆರಂಭದಲ್ಲಿ ಕಲಶಸ್ನಾನ ಮಾಡಿಕೊಂಡು ಶುದ್ಧರಾಗಿ , ಮನೆಯಲ್ಲಿ ಪ್ರತಿಪತ್ ನಂದು / ಮೊದಲ ನವರಾತ್ರಿಯ ದಿನದಂದು ಘಟಸ್ಥಾಪನೆ ಮಾಡಿ ಮಾಡುವ ವಿಧಾನ ಉತ್ತಮ. ಘಟವೆಂದರೆ ಬೆಳ್ಳಿ/ಹಿತ್ತಾಳೆ ಅಥವಾ ತಾಮ್ರದ ಬಟ್ಟಲಲ್ಲಿ ಅಕ್ಕಿಯನ್ನಿಟ್ಟು ಅದರ ಮೇಲೆ ಕಲಶವನ್ನಿಟ್ಟು ಅದಕ್ಕೆ ತುಳಸಿಯ ಮಣ್ಣು, ಚಿನ್ನ, ಚಂದನಗಳನ್ನು ಹಾಕಿ ಕಾಯಿಯನ್ನಿಟ್ಟು ಉತ್ತಮ ಗುಣಮಟ್ಟದ ವಸ್ತ್ರವನ್ನು ಹೊದೆಸಿ. ದೇವರ ಮಂಟದಲ್ಲಿ ಇಡಬೇಕು. ಇದು ಕಷ್ಟಸಾಧ್ಯವಾದಲ್ಲಿ ಮೂರ್ತಿಯನ್ನು ಇಡಬಹುದು ಅಥವಾ ಫೋಟೋ ಅಥವಾ ಅಕ್ಕಿಯ ಮೇಲೆ ಕಾಯಿಯನ್ನಿಟ್ಟು ವ್ರತವನ್ನು ಮಾಡಬಹುದು. ಈ ವ್ರತದ ಸಮಯದಲ್ಲಿ ಮೂರೂ ಹೊತ್ತಲ್ಲಿ ಪೂಜೆ ಮಾಡುವ ಕ್ರಮವಿದೆ.ಮಧ್ಯಾಹ್ನ ಮಾತ್ರ ಮಾಡುವ ಕ್ರಮವೂ ಇದೆ. ರಾತ್ರೆ ಮಾತ್ರ ಮಾಡುವ ಕ್ರಮವೂ ಇದೆ. ಹಾಗೆಯೇ ಮಧ್ಯಾಹ್ನ ಮತ್ತು ರಾತ್ರೆ ಪೂಜೆ ಮಾಡುವ ಕ್ರಮವೂ ಇದೆ. ಪೂಜೆ ಮಾತ್ರ ಶ್ರದ್ಧೆಯಿಂದ ಮಾಡಬೇಕು ಅಷ್ಟೇ.
ಪೂಜಾ ಕಾಲದಲ್ಲಿ ಸಹಸ್ರನಾಮ , ಅಷ್ಟೋತ್ತರಶತನಾಮ ಹೇಳಿ ಅರ್ಚನೆ ಮಾಡಿದರೆ ಉತ್ತಮ ಫಲವಿದೆ. ಈ ವ್ರತಕ್ಕೆ ಉಪವಾಸ , ನಕ್ತ, ಏಕಭುಕ್ತ ಎಂಬ ನಿಯಮವೂ ಇದೆ. ಉಪವಾಸದಲ್ಲಿ ಎರಡು ವಿಧ ಒಂದು ನಿರ್ಜಲ ಮತ್ತು ದ್ರವಾಹಾರ ಮಾತ್ರ ಎಂದು. ನಿರ್ಜಲವೆಂದರೆ ಏನೂ ಆಹಾರ ಸೇವಿಸದೇ ಇರುವುದು. ಎರಡನೇಯದ್ದು ದ್ರವ ರೂಪವಾದ ಆಹಾರ ಸೇವೆನೆ. ನಕ್ತವೆಂದರೆ ಮಧ್ಯಾಹ್ನ ಊಟಮಾಡುವುದು ಬೆಳಗ್ಗೆ ಮತ್ತು ರಾತ್ರಿ ಫಲಾಹಾರ ಮಾಡುವುದು. ಇನ್ನು ಏಕ ಭುಕ್ತವೆಂದರೆ ಇಡೀ ದಿನಕ್ಕೆ ಒಂದು ಸಲ ಮಾತ್ರ ಆಹಾರ ಸೇವನೆ ಎಂದು ಅರ್ಥ. ಇದರಲ್ಲಿ ಯಾವುದಾದರೊಂದನ್ನು ಪಾಲಿಸುತ್ತಾ ವ್ರತ ಮಾಡಿದರೆ ಅಮೋಘ ಫಲ ಅಲ್ಲದೇ ಇಷ್ಟಕಾಮ್ಯ ಸಿದ್ಧಿಯಾಗುವುದೆಂದು ದೇವೀಭಾಗವತ ಹೇಳುತ್ತದೆ.
ಘಟಸ್ಥಾಪನೆ ಮೊದಲಾದ ವಿಧಿಯನ್ನು ಮಾಡದೇ ಕೇವಲ ಉಪವಾಸ ವಿಭಾಗಗಳಲ್ಲಿ ಒಂದನ್ನು ಆಯ್ದುಕೊಂಡು ವ್ರತದಂತೆ ಆಚರಿಸಲೂಬಹುದು. ಈ ವ್ರತದ ಸಮಯದಲ್ಲಿ ಕನ್ನಿಕೆಯರಿಗೆ (ಒಂದರಿಂದ ಒಂಭತ್ತು ವರುಷದ ಒಳಗಿನ ಹೆಣ್ಣು ಮಗು), ಮುತ್ತೈದೆಯರಿಗೆ ವಾಯನ/ ಅರಶಿನ-ಕುಂಕುಮ ನೀಡಿ ಅವರ ಆಶೀರ್ವಾದ ಪಡೆಯಬೇಕು. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಕುಮಾರೀ ಪೂಜೆ, ಸುವಾಸಿನೀ ಪೂಜೆ ಇತ್ಯಾದಿ ಮಾಡುವುದರಿಂದ ಉತ್ತಮ ಫಲವಿದೆ.
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು
S.R.B.S.S College ಹೊನ್ನಾವರ, kkmanasvi@gamail.com