Mysore Dasara: ಅರಮನೆಯಲ್ಲಿ ಆಯುಧಪೂಜೆ, ಆನೆಗಳ ಮೇಲೆ ಚಿತ್ತಾರ, ಜಂಬೂ ಸವಾರಿಗೆ ಭರದ ಸಿದ್ಧತೆ, ಬಿಗಿ ಭದ್ರತೆ
ಆಯುಧಪೂಜೆಗಾಗಿ ರಾಜಪರಿವಾರಕ್ಕೆ ಸೇರಿದವರು ಕೋಡಿ ಸೋಮೆಶ್ವರ ದೇಗುಲಕ್ಕೆ ಬಂದಿದ್ದು, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ (Mysore Dasara Jambu Savari) ವಿಜಯದಶಮಿಯಂದು (ಅ 5) ನಡೆಯಲಿದೆ. ಮೆರವಣಿಗೆ ಸಾಗುವ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಲಕ್ಷಾಂತರ ಜನರು ಸೇರಬಹುದೆಂಬ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅರಮನೆಯಿಂದ ಜಂಬೂ ಸವಾರಿ ಹೊರಬರುವ ಬಲರಾಮ ಗೇಟ್ ಬಳಿ ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ಕಸದ ಡಸ್ಟ್ಬಿನ್ ಸೇರಿದಂತೆ ಪ್ರತಿಯೊಂದು ವಸ್ತುವನ್ನೂ ಅರಮನೆ ಮೈದಾನದಿಂದ ಬನ್ನಿಮಂಟಪವರೆಗೂ ತಪಾಸಣೆ ನಡೆಸಲಾಯಿತು.
ಆಯುಧಪೂಜೆಗಾಗಿ ರಾಜಪರಿವಾರಕ್ಕೆ ಸೇರಿದವರು ಕೋಡಿ ಸೋಮೆಶ್ವರ ದೇಗುಲಕ್ಕೆ ಬಂದಿದ್ದು, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಮುತೈದೆಯರ ಜೊತೆ ದೇವರನ್ನು ತರಲಾಗುತ್ತಿದೆ. ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯಿಟ್ಟು ಜಯಮಾರ್ತಾಂಡ ದ್ವಾರದ ಮೂಲಕ ಕೋಡಿ ಸೋಮೇಶ್ವರ ದೇಗುಲಕ್ಕೆ ಕಳಿಸಲಾಯಿತು. ಈ ವೇಳೆ ನಾದಸ್ವರ ತಂಡ ಹಾಗೂ ರಾಜ ಪರಿವಾರದವರು ಜೊತೆಗಿದ್ದರು. ಅರಮನೆಯ ಒಂಟೆ ಹಾಗೂ ಆನೆಗಳು ಇದ್ದವು.
ಮೈಸೂರು ಅರಮನೆಯಲ್ಲಿ ಆಯುಧಪೂಜೆಯ ಪೂಜಾ ಕೈಂಕರ್ಯ ಆರಂಭವಾಗಿದ್ದು, ಆನೆಬಾಗಿಲು ಮೂಲಕ ಪಟ್ಟದ ಆನೆ, ಕುದುರೆ, ಹಸುಗಳು ಬಂದಿವೆ. ಪಾರಂಪರಿಕ ಆಯುಧ ಪಲ್ಲಕ್ಕಿಯನ್ನು ರಾಜವಂಶಸ್ಥರು, ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ತರಲಾಯಿತು. ಕೋಡಿಸೋಮೇಶ್ವರ ದೇಗುಲದಲ್ಲಿ ಪಾರಂಪರಿಕ ಆಯುಧಗಳನ್ನು ಅಲಂಕರಿಸಿದ ರಾಜಪುರೋಹಿತರು ವಿಶೇಷ ಪೂಜೆ ನೆರವೇರಿಸಲಾಯಿತು.
ಅರಮನೆ ನಗರಿಯಲ್ಲಿ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಂಡಿ ಹೋಮದ ವಿಧಿಗಳು ಆರಂಭವಾಗಿದ್ದು, 9 ಗಂಟೆಗೆ ಚಂಡಿಹೋಮ ಪೂರ್ಣಾಹುತಿ ನಡೆಯಿತು. 11.02ರಿಂದ 11.25ರ ಶುಭ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್ ಪೂಜೆ ಆಯುಧಗಳಿಗೆ ಪೂಜೆ ಸಲ್ಲಿಸಲಾಗುವುದು. ಇಂದು ರಾತ್ರಿ ಈ ವರ್ಷದ ಖಾಸಗಿ ದರ್ಬಾರ್ನ ಕೊನೆಯ ದಿನ. ದರ್ಬಾರ್ ನಂತರ ಸಿಂಹಾಸನದ ಸಿಂಹ ವಿಸರ್ಜಿಸಲಾಗುವುದು. ರಾತ್ರಿ ದೇವರ ಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.
ಆನೆಗಳಿಗೆ ಚಿತ್ತಾರ
ಮೈಸೂರು ಅರಮನೆಯ ಪಟ್ಟದ ಆನೆಗಳಾದ ಭೀಮ ಮತ್ತು ಧನಂಜಯ್ಗೆ ಚಿತ್ತಾರದ ಅಲಂಕಾರ ಮಾಡಲಾಗಿದೆ. ಅರಮನೆಯ ಎರಡು ಹೆಣ್ಣು ಆನೆಗಳೂ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿವೆ. ಪಟ್ಟದ ಆನೆಗಳ ಮೇಲೆ ಮೈಸೂರು ರಾಜಮನೆತನದ ಲಾಂಛನವಾದ ಗಂಡಬೇರುಂಡ, ಕಾಲುಗಳಿಗೆ ಎಲೆ ಬಳ್ಳಿ, ಕಿವಿಗಳಿಗೆ ಶಂಕು-ಚಕ್ರ, ಸೊಂಡಿಲಿಗೆ ಹೂ ಬಳ್ಳಿ ಚಿತ್ತಾರಗಳನ್ನು ಮೈಸೂರು ಮೂಲದ ಕಲಾವಿದ ರಾಜು ಬಿಡಿಸಿದ್ದಾರೆ.
ವಿಶೇಷ ವ್ಯವಸ್ಥೆ
ಜಂಬೂ ಸವಾರಿ ವೀಕ್ಷಣೆಗಾಗಿ ವಿದೇಶಿಯರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಆಯುರ್ವೇದ ಕಾಲೇಜು ಬಳಿ ಹಾಕಿರುವ ಪೆಂಡಾಲ್ನಲ್ಲಿ ಕುಳಿತು ಇವರು ದಸರಾ ವೀಕ್ಷಿಸಬಹುದಾಗಿದೆ. ಪೆಂಡಾಲ್ನಿಂದ ರಸ್ತೆಗೆ ಯಾರೂ ಬರದಂತೆ ಮರದ ಗಳುಗಳನ್ನು ಅಡ್ಡ ಕಟ್ಟಲಾಗಿದೆ.