Mysore Dasara: ದಸರಾ ಉತ್ಸವ; ಮೈಸೂರಿಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಕೆಎಸ್​ಆರ್​ಟಿಸಿ ವಿಶೇಷ ಬಸ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 26, 2022 | 3:05 PM

ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 200 ಹೆಚ್ಚುವರಿ ಬಸ್​ಗಳು ಹೊರಡಲಿವೆ.

Mysore Dasara: ದಸರಾ ಉತ್ಸವ; ಮೈಸೂರಿಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಕೆಎಸ್​ಆರ್​ಟಿಸಿ ವಿಶೇಷ ಬಸ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮೈಸೂರು ದಸರಾ ಉತ್ಸವಕ್ಕೆ ಜನರು ಹೋಗಲು ಅನುಕೂಲವಾಗುವಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ಹೊರ ರಾಜ್ಯಗಳ ಪ್ರಮುಖ ಸ್ಥಳಗಳಿಂದ ಕೆಎಸ್​ಆರ್​ಟಿಸಿ ವಿಶೇಷ ಬಸ್​ ಸೌಲಭ್ಯ ಕಲ್ಪಿಸಿದೆ. ಸೆ 30ರಿಂದ ಅ 3ರವರೆಗೆ ಸುಮಾರು 2000 ವಿಶೇಷ ಬಸ್​ಗಳು ಸಂಚರಿಸಲಿವೆ. ಬೆಂಗಳೂರಿನಿಂದಲೂ ವಿಶೇಷ ಬಸ್​ಗಳು ಹೊರಡಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್​ಗಳು ಹೊರಡುತ್ತವೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಮೈಸೂರಿಗೆ ಬಸ್​ಗಳು ಹೊರಡಲಿವೆ. ಮೈಸೂರಿನಿಂದ ಪುನಃ ಈ ನಗರಗಳಿಗೆ ಬಸ್​ ಸಂಪರ್ಕ ಇರುತ್ತದೆ.

ನೆರೆ ರಾಜ್ಯಗಳ ಪ್ರಮುಖ ನಗರಗಳಾದ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚನಾಪಳ್ಳಿ, ಪುದುಚೇರಿ, ಮಧುರೈ, ಪಣಜಿ, ಶಿರಡಿ, ಪೂನಾ, ಎರ್ನಾಕುಲಂ, ಪಾಲ್​ಘಾಟ್ ಹಾಗೂ ಇತರ ಸ್ಥಳಗಳಿಗೆ ವಿಶೇಷ ಬಸ್​ಗಳು ಸಂಚರಿಸಲಿವೆ.

ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 200 ಹೆಚ್ಚುವರಿ ಬಸ್​ಗಳು ಹೊರಡಲಿವೆ. ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆಆರ್​ಎಸ್, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಸೇರಿದಂತೆ ಹಲವು ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು 250 ಬಸ್​ಗಳನ್ನು ಬಿಡಲಾಗಿದೆ ಎಂದು ಕೆಎಸ್​ಆರ್​ಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.