
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಟ್ಯಾಟೂ (ಹಚ್ಚೆ) ಹಾಕಿಸಿಕೊಳ್ಳುವ ಕ್ರೇಜ್ ಹೆಚ್ಚಾಗಿದೆ. ಅನೇಕರು ಭಕ್ತಿ ಅಥವಾ ಫ್ಯಾಷನ್‌ಗಾಗಿ ತಮ್ಮ ಕೈ, ಕುತ್ತಿಗೆ ಅಥವಾ ದೇಹದ ವಿವಿಧ ಭಾಗಗಳಲ್ಲಿ ದೇವರ ಹೆಸರು, ಮಂತ್ರ ಅಥವಾ ತ್ರಿಶೂಲದಂತಹ ಧಾರ್ಮಿಕ ಚಿಹ್ನೆಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ, ಹೀಗೆ ಮಾಡುವುದು ಧಾರ್ಮಿಕವಾಗಿ ಸರಿಯೇ? ಈ ಕುರಿತು ಉತ್ತರ ಪ್ರದೇಶದ ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರು ನೀಡಿದ ಮಹತ್ವದ ಸತ್ಯಾಸತ್ಯತೆಗಳು ಮತ್ತು ನಿಯಮಗಳು ಇಲ್ಲಿವೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಭಕ್ತನೊಬ್ಬ ತನ್ನ ಕುಟುಂಬದೊಂದಿಗೆ ಪ್ರೇಮಾನಂದ ಮಹಾರಾಜ್ ಅವರ ಆಶೀರ್ವಾದ ಪಡೆಯಲು ಬಂದಿದ್ದನು. ಆಗ ಮಹಾರಾಜರ ಗಮನ ಆ ವ್ಯಕ್ತಿಯ ಎಡಗೈ ಮೇಲಿದ್ದ ಟ್ಯಾಟೂ ಕಡೆಗೆ ಹೋಯಿತು. ಆತನ ಎಡಗೈಯಲ್ಲಿ ತ್ರಿಶೂಲದ ಚಿತ್ರದೊಂದಿಗೆ ಇಂಗ್ಲಿಷ್‌ನಲ್ಲಿ “Mahadev” ಮತ್ತು “Blessings” ಎಂದು ಬರೆಯಲಾಗಿತ್ತು. ಇದನ್ನು ಕಂಡ ಪ್ರೇಮಾನಂದ ಮಹಾರಾಜ್ ಅವರು ತಕ್ಷಣವೇ ಆತನನ್ನು ತಡೆದು, ದೇಹದ ಮೇಲೆ ವಿಶೇಷವಾಗಿ ಕೈಗಳ ಮೇಲೆ ದೇವರ ಹೆಸರು ಅಥವಾ ಚಿಹ್ನೆಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ತಪ್ಪು ಎಂದು ತಿಳಿಸಿದರು.
ನಾವು ದೈನಂದಿನ ಜೀವನದಲ್ಲಿ ಶೌಚಾಲಯ ಬಳಕೆಗೆ ಮತ್ತು ಅಶುಚಿಯಾದ ವಸ್ತುಗಳನ್ನು ತೊಳೆಯಲು ಮುಖ್ಯವಾಗಿ ಎಡಗೈಯನ್ನೇ ಬಳಸುತ್ತೇವೆ. ಇದಲ್ಲದೆ, ದಿನನಿತ್ಯದ ಕೆಲಸಗಳಲ್ಲಿ ನಮ್ಮ ಕೈಗಳು ಅನೇಕ ಅಶುದ್ಧ ಸ್ಥಳಗಳನ್ನು ಸ್ಪರ್ಶಿಸುತ್ತವೆ. ಅಂತಹ ಸಂದರ್ಭಗಳಲ್ಲಿ ಕೈ ಮೇಲಿರುವ ದೇವರ ಪವಿತ್ರ ಹೆಸರು ಅಥವಾ ಚಿಹ್ನೆಗಳು ಕಲ್ಮಶದ ಸಂಪರ್ಕಕ್ಕೆ ಬರುತ್ತವೆ. ಇದು ಅರಿಯದೇ ನಡೆಯುವ ಗಂಭೀರ ಅಪಚಾರ ಹಾಗೂ ಪಾಪಕ್ಕೆ ಕಾರಣವಾಗುತ್ತದೆ ಎಂದು ಮಹಾರಾಜ್ ಜೀ ವಿವರಿಸಿದರು.
ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಕೈಗಳಲ್ಲಿ ಈಗಾಗಲೇ ದೇವರ ಹೆಸರು ಅಥವಾ ಚಿಹ್ನೆಗಳ ಹಚ್ಚೆ ಹಾಕಿಸಿಕೊಂಡಿರುವವರಿಗೆ ಮಹಾರಾಜ್ ಜೀ ಸರಳ ಪರಿಹಾರ ನೀಡಿದ್ದಾರೆ. ದೇವರ ಹೆಸರಿಗೆ ಅಥವಾ ಪವಿತ್ರ ಚಿಹ್ನೆಗಳಿಗೆ ಅಗೌರವ ಉಂಟಾಗದಂತೆ, ಆ ಟ್ಯಾಟೂವನ್ನು ಮಾರ್ಪಡಿಸುವುದು (Modify) ಸೂಕ್ತ. ಅಂದರೆ, ದೇವರ ಹೆಸರು ಮತ್ತು ತ್ರಿಶೂಲದ ಗುರುತಿನ ಮೇಲೆ ಹೂವು, ಎಲೆ ಅಥವಾ ಸಾಮಾನ್ಯ ಡಿಸೈನ್ ಹಾಕಿ ಅದನ್ನು ಮರೆಮಾಚಲು ಸಲಹೆ ನೀಡಿದರು.
ಪ್ರೇಮಾನಂದ ಮಹಾರಾಜ್ ಅವರ ಪ್ರಕಾರ, ದೇವರ ಪವಿತ್ರ ಹೆಸರನ್ನು ಚರ್ಮದ ಮೇಲೆ ಹಚ್ಚೆಯಾಗಿ ಪ್ರದರ್ಶಿಸುವುದಕ್ಕಿಂತ, ಅದನ್ನು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಳ್ಳಬೇಕು. ಭಗವಂತನ ಹೆಸರಿನ ನಿಜವಾದ ಸಾರ್ಥಕತೆ ಇರುವುದು ಅದನ್ನು ನಿರಂತರವಾಗಿ ಜಪಿಸುವುದರಲ್ಲಿ ಮತ್ತು ಸ್ಮರಿಸುವುದರಲ್ಲಿಯೇ ಹೊರತು, ದೇಹದ ಮೇಲೆ ಪ್ರದರ್ಶಿಸುವುದರಲ್ಲಲ್ಲ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Wed, 9 September 26