Ramadan 2023: ರಂಜಾನ್ ಉಪವಾಸ ಮಾಡುವವರು ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಇಲ್ಲಿವೆ ಕೆಲ ಟಿಪ್ಸ್
ರಂಜಾನ್ ಉಪವಾಸದ ವೇಳೆ ಯಾವ ರೀತಿ ಆರೋಗ್ಯದ ಕಾಳಜಿ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿದೆ.
ರಂಜಾನ್(Ramadan) ಮುಸ್ಲಿಮರ ಪ್ರಮುಖ ಹಾಗೂ ಪವಿತ್ರ ಹಬ್ಬ. ಈ ರಂಜಾನ್ ತಿಂಗಳು ಪೂರ್ತಿ ಮುಸ್ಲಿಮರು ಉಪವಾಸವಿದ್ದು(Ramadan Fasting) ಆಧ್ಯಾತ್ಮಿಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಸೂರ್ಯೋದಯಕ್ಕಿಂತ ಒಂದು ಗಂಟೆ ಮುಂಜೆಯಿಂದ ಸೂರ್ಯಾಸ್ತದವರೆಗೆ ಯಾವುದೇ ಆಹಾರ ಅಥವಾ ಪಾನೀಯವನ್ನು ತೆಗೆದುಕೊಳ್ಳದೆ ಕಟ್ಟುನಿಟ್ಟಿನ ಆಚರಣೆಗಳನ್ನು ಮಾಡುತ್ತಾರೆ. ಈ ಉಪವಾಸ ಆಚರಣೆ ಪ್ರತಿಯೊಬ್ಬರಿಗೂ ಕಡ್ಡಾಯ. ಆದ್ರೆ ಅನಾರೋಗದಿಂದ ಬಳಲುತ್ತಿರುವವರು, ಎದೆ ಹಾಲುಣಿಸುವ ತಾಯಂದಿರು, ಮುಟ್ಟಾಗುತ್ತಿರುವವರು, ರೋಗಿಗಳು ಉಪವಾಸ ಇಡುವಂತಿಲ್ಲ. ಜೊತೆಗೆ ಮಧುಮೇಹಿಗಳಿಗೆ ಉಪವಾಸ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ಹಾಗೂ ರಂಜಾನ್ ಉಪವಾಸದ ವೇಳೆ ಯಾವ ರೀತಿ ಆರೋಗ್ಯದ ಕಾಳಜಿ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಕೂಡ ಹೊರಡಿಸಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.
ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ. ಜೊತೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನೀರು ಸಹ ಸೇವಿಸದೆ ಉಪವಾಸ ಮಾಡುವ ಪ್ರತಿಯೊಬ್ಬ ಮುಸ್ಲಿಂ ಬಂಧುಗಳಿಗೂ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಂಜಾನ್ ತಿಂಗಳಲ್ಲಿ ಉಪವಾಸವಿರುವವರು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ನೀರು ಸೇವನೆ: ಸೂರ್ಯೋದಯಕ್ಕೂ ಮುನ್ನ ಸೇವಿಸುವ ಊಟ (ಸೆಹ್ರಿ) ಹಾಗೂ ಸೂರ್ಯೋದಯದ ನಂತರ ಸೇವಿಸುವ ಆಹಾರದ (ಇಫ್ತಾರ್) ಅಂತ್ಯದ ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಏಕೆಂದರೆ ದೇಹದಲ್ಲಿ ನೀರಿನಂಶ ಹೆಚ್ಚಿದ್ದರೆ ಉತ್ತಮ, ಇಲ್ಲದಿದ್ದರೆ ಪೋಷಕಾಂಶ ಕೊರತೆ ಉಂಟಾಗುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನ ರಕ್ಷಿಸಲು ಸೆಣಬಿನ ಬೀಜದ ಎಣ್ಣೆಯು ಉಪಯುಕ್ತವಾಗಿದೆ? ಇದರ ಪ್ರಯೋಜನಗಳು ಹೀಗಿವೆ
ಧಾನ್ಯಗಳು: ಧಾನ್ಯಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ. ಹೀಗಾಗಿ ಸೆಹ್ರಿ ಮತ್ತು ಇಫ್ತಾರ್ನಲ್ಲಿ ಧಾನ್ಯಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಿ. ಪ್ರೊಟೀನ್ ಯುಕ್ತ ಪನ್ನೀರ್, ಚಿಕನ್, ಮೀನು ಇತ್ಯಾದಿಗಳ ಸೇವನೆ ಮಾಡಿ. ಡಯಾಬಿಟಿಸ್ ರೋಗಿಗಳು, ಕಂದು ಅಕ್ಕಿ, ಕ್ವಿನೋವಾ ಮತ್ತು ಗೋಧಿ ಬ್ರೆಡ್ ಸೇವಿಸಿದರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜೊತೆಗೆ ಕಡಲೆ, ಕಡಲೆಕಾಳು, ಹೆಸರು ಕಾಳು ಮತ್ತು ಅಲಸಂದೆಯಂತಹ ಕಾಳುಗಳಲ್ಲಿ ಪ್ರೊಟೀನ್ ಮತ್ತು ಫೈಬರ್ ಅಂಶ ಅಧಿಕವಾಗಿರುತ್ತದೆ. ಆದ್ದರಿಂದ ಈ ಬೇಳೆಕಾಳುಗಳನ್ನೂ ಸೇವಿಸಿ.
ಹಣ್ಣುಗಳು: ಹಣ್ಣುಗಳಲ್ಲಿ ಪೋಷಕಾಂಶಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಅದರಲ್ಲೂ ಈಗ ಬೇಸಿಗೆ ಇರುವುದರಿಂದ ನೀರಿನ ಅಂಶ ಇರುವ ಹಣ್ಣುಗಳ ಸೇವನೆ ಮುಖ್ಯ. ಕಲ್ಲಂಗಡಿ, ಪಪ್ಪಾಯಿ, ಸೇಬು, ದಾಳಿಂಬೆ, ಸಪೋಟ ಮುಂತಾದ ಹಣ್ಣುಗಳನ್ನು ಸೇವಿಸಿ.
ತರಕಾರಿ: ಸೌತೆಕಾಯಿ, ಮೆಂತ್ಯೆ, ಪಾಲಕ್ ಮತ್ತು ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಅಧಿಕವಾಗಿರುತ್ತದೆ. ಆದ್ದರಿಂದ, ರಂಜಾನ್ ಉಪವಾಸದ ಅವಧಿಯಲ್ಲಿ ಮಧುಮೇಹಿಗಳಿಗೆ ತರಕಾರಿಗಳು ಉತ್ತಮ ಆಹಾರವಾಗಿದೆ. ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ದೇಹಕ್ಕೆ ಬೇಕಾಗುವಷ್ಟು ಶಕ್ತಿಯನ್ನು ಈ ತರಕಾರಿಗಳು ನೀಡುತ್ತವೆ.
ಡೇಟ್ಸ್: ಸಾಮಾನ್ಯವಾಗಿ ಮುಸ್ಲಿಮರು ರಂಜಾನ್ ಸಮಯದಲ್ಲಿ ಹೆಚ್ಚಾಗಿ ಖರ್ಜೂರವನ್ನು ಬಳಸುತ್ತಾರೆ. ಪ್ರತಿ ಬಾರಿ ಖರ್ಜೂರದ ಮೂಲಕವೇ ಉಪವಾಸ ಮುಗಿಸುತ್ತಾರೆ. ಏಕೆಂದರೆ ಇವುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ತಿಂದ ತಕ್ಷಣ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಹೀಗೆ ಉಪವಾಸ ಇರುವವರು ಹೆಚ್ಚಾಗಿ ಪ್ರೋಟೀನ್ ಇರುವ ಆಹಾರದ ಮೇಲೆ ಗಮನಕೊಡಬೇಕು. ಸಿಹಿ ತಿನಿಸು ತಿನ್ನುವುದನ್ನು ಕಡಿಮೆ ಮಾಡಬೇಕು. ಹಾಗೂ ಎಣ್ಣೆಯಲ್ಲಿ ಕರಿದ ಆಹಾರ ಒಳ್ಳೆಯದಲ್ಲ. ಆದಷ್ಟು ಕಡಿಮೆ ಮಾಡಿ ಎಂದು ವಿಶ್ವ ಸಂಸ್ಥೆ ಕೂಡ ಸಲಹೆ ನೀಡಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:30 am, Mon, 3 April 23