ಹಿಂದೂ ಧರ್ಮದಲ್ಲಿ, ವಾರದ ಎಲ್ಲಾ ದಿನವೂ ಒಂದಲ್ಲ ಒಂದು ದೇವರಿಗೆ ಪೂಜೆ ಮಾಡುವ ಸಂಪ್ರದಾಯವಿದೆ ಅದೂ ಅಲ್ಲದೆ ಆ ದಿನ ಆಯಾಯ ದೇವರಿಗೆ ಸಮರ್ಪಿತವಾಗಿವೆ. ಅಂತೆಯೇ, ಮಂಗಳವಾರ ಮತ್ತು ಶನಿವಾರದಂದು ಭಗವಾನ್ ರಾಮನ ಮಹಾನ್ ಭಕ್ತನಾದ ಹನುಮಂತನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಈ ಎರಡು ದಿನ ಮಾಡಿದ ಪೂಜೆಗೆ ವಿಶೇಷ ಮಹತ್ವವಿದೆ ಎಂದು ನಂಬಲಾಗಿದೆ. ಹಾಗಾಗಿ ಈ ದಿನಗಳಲ್ಲಿ ಸುಂದರಕಾಂಡ ಪಾರಾಯಣ ಅಥವಾ ಶ್ಲೋಕ ಪಠಣೆ ಮಾಡುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಮತ್ತು ಪುರಾಣಗಳಲ್ಲಿ ಶನಿದೇವನು ಹನುಮಂತನಿಗೆ ಮಾತ್ರ ಹೆದರುತ್ತಾನೆ ಎಂದು ಹೇಳಲಾಗಿದೆ. ಹಾಗಾಗಿ ಶನಿ ದೋಷ ನಿವಾರಣೆ ಮಾಡಿಕೊಳ್ಳಲು ಸರಳ ಮಾರ್ಗವೆಂದರೆ ಹನುಮಂತನನ್ನು ಆರಾಧನೆ ಮಾಡುವುದು. ಶನಿದೋಷದಿಂದ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಸುಂದರಕಾಂಡವನ್ನು ಪಠಿಸಿ. ಇದನ್ನು ಪಠಿಸುವುದರಿಂದ ಹನುಮಂತನು ಸಂತೋಷಗೊಳ್ಳುತ್ತಾನೆ ಹಾಗೂ ಶನಿದೋಷ ಅಥವಾ ಶನಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾದರೆ ಸುಂದರಕಾಂಡ ಪಾರಾಯಣ ಎಂದರೇನು? ಸುಂದರಕಾಂಡದ ಮಹತ್ವವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತುಳಸೀದಾಸರು ಬರೆದ ರಾಮಚರಿತಮಾನಸವು ಭಗವಾನ್ ಶ್ರೀ ರಾಮನಿಗೆ ಸಮರ್ಪಿತವಾದ ಹಿಂದೂಗಳ ಪವಿತ್ರ ಗ್ರಂಥವಾಗಿದೆ. ಇದರಲ್ಲಿ, ಸುಂದರಕಾಂಡ ಎಂಬ ಅಧ್ಯಾಯವು ಪ್ರಸಿದ್ಧವಾಗಿದೆ, ಅದರಲ್ಲಿ ಭಗವಾನ್ ರಾಮನ ಬಗ್ಗೆ ಅಲ್ಲ, ಆದರೆ ಅವನ ಮಹಾನ್ ಭಕ್ತನಾದ ಹನುಮಂತನ ಬಗ್ಗೆ ವಿವರಣೆ ನೀಡಲಾಗಿದೆ. ಇದರಲ್ಲಿ ಬರುವ ಒಂದೊಂದು ಶ್ಲೋಕವೂ ಕೂಡ ಅತ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಸೀತಾ ಆಂಜನೇಯರ ಸಂಭಾಷಣೆ, ಆಂಜನೇಯ ಮತ್ತು ರಾಮನ ಸಂಭಾಷಣೆ, ಹನುಮ ಸೀತೆಯನ್ನು ಹುಡುಕಿದ ರೀತಿ, ಲಂಕೆಯನ್ನು ಸುಟ್ಟ ಸಂದರ್ಭ ಸೇರಿದಂತೆ ಆಂಜನೇಯನಿಗೆ ಸಂಬಂಧಿಸಿದ ಎಲ್ಲಾ ಸನ್ನಿವೇಶಗಳನ್ನು ಇಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಅಷ್ಟು ಮಾತ್ರವಲ್ಲ, ಹನುಮನ ಮತ್ತೊಂದು ಹೆಸರು ಸುಂದರ ಎಂದಾಗಿರುವುದರಿಂದಲೇ ಈ ಕಾಂಡವನ್ನು ಸುಂದರಕಾಂಡವೆಂದು ಕರೆಯಲಾಗುತ್ತದೆ. ಇಲ್ಲಿ ಕಾಂಡ ಎಂಬುದು ಒಂದು ಅಧ್ಯಾಯ ಅಥವಾ ಒಂದು ಭಾಗವಾಗಿದೆ. ಇದನ್ನು ಮಂಗಳವಾರ ಮತ್ತು ಶನಿವಾರದ ದಿನ ಪಠಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳು ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ: ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರವಿಲ್ಲ… ಆದರೆ ಈ ಮೂರು ರಾಶಿಗಳ ಮೇಲೆ ಪ್ರಭಾವ
ಮಂಗಳವಾರ ಮತ್ತು ಶನಿವಾರದಂದು ಸುಂದರಕಾಂಡ ಪಾರಾಯಣ ಮಾಡಿದಲ್ಲಿ ಹನುಮಂತನ ಆಶೀರ್ವಾದ ಪ್ರಾಪ್ತವಾಗುತ್ತದೆ. ಜೊತೆಗೆ ಜೀವನದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಂತೋಷ, ಸಂಪತ್ತು, ಬುದ್ಧಿವಂತಿಕೆ ಎಲ್ಲವೂ ಸಿಗುತ್ತದೆ. ಈ ಅಧ್ಯಾಯವನ್ನು ಪಠಣೆ ಮಾಡುವವರಿಗೆ ನಕಾರಾತ್ಮಕ ಶಕ್ತಿಗಳ ಭಯವಿರುವುದಿಲ್ಲ. ಜೊತೆಗೆ ಇದರಿಂದ ಭಕ್ತನ ತೀಕ್ಷ್ಣತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇನ್ನು ಮನೋವಿಜ್ಞಾನಿಗಳ ಪ್ರಕಾರ, ಸುಂದರಕಾಂಡ ಪಾರಾಯಣ ಮಾಡುವುದರಿಂದ ಜನರಲ್ಲಿ ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದೆಲ್ಲದರ ಜೊತೆಗೆ ಇದನ್ನು ಪಠಣೆ ಮಾಡುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ, ಗ್ರಹದೋಷ ನಿವಾರಣೆಯಾಗುತ್ತದೆ, ಇದು ಭಯವನ್ನು ಕೂಡ ಹೋಗಲಾಡಿಸುತ್ತದೆ. ಆದರೆ ಇದನ್ನು ತಪ್ಪು ತಪ್ಪಾಗಿ ಓದಬಾರದು ಹಾಗಾಗಿ ನಿಮ್ಮ ಪುರೋಹಿತರು ಅಥವಾ ಹನುಮಂತನ ದೇವಾಲಯದಲ್ಲಿ ನೀವು ಈ ರೀತಿಯ ಪೂಜೆ ಮಾಡಿಸಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ