
ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ಅಲ್ಲಿನ ರಾಜ್ಯ ಸರ್ಕಾರ ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ದೇವಾಲಯಗಳ ಒಳಗೆ ಮೊಬೈಲ್ ಫೋನ್ಗಳನ್ನು ಕೊಂಡೊಯ್ಯುವುದರ ಮೇಲೆ ವಿಧಿಸಲಾಗಿದ್ದ ಸಂಪೂರ್ಣ ನಿಷೇಧವನ್ನು ಸಡಲಿಸಲು ಹಿಂದೂ ಧಾರ್ಮಿಕ ಮತ್ತು ದಾನ ದತ್ತಿ ಇಲಾಖೆ (HR&CE) ಪ್ರಮುಖ ಆದೇಶ ಹೊರಡಿಸಿದೆ. ನೂತನ ನಿಯಮದಂತೆ, ಭಕ್ತರು ಇನ್ಮುಂದೆ ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ (Switch Off) ಮಾಡಿ ದೇವಾಲಯದ ಆವರಣದೊಳಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.
ದೇವಾಲಯಗಳ ಪವಿತ್ರತೆಯನ್ನು ಕಾಪಾಡುವ ಹಾಗೂ ಭಕ್ತರ ದರ್ಶನಕ್ಕೆ ಅಡಚಣೆಯಾಗದಂತೆ ತಡೆಯುವ ಉದ್ದೇಶದಿಂದ, 2026ರ ಸೆಪ್ಟೆಂಬರ್ 1 ರಿಂದ ರಾಜ್ಯದ 52 ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ಪಟ್ಟಿಯಲ್ಲಿ ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯ, ಪಳನಿ ದಂಡಾಯುಧಪಾಣಿ ಸ್ವಾಮಿ ದೇವಾಲಯ, ತಿರುಚೆಂದೂರ್ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ರಾಮೇಶ್ವರಂ ರಾಮನಾಥಸ್ವಾಮಿ ದೇವಾಲಯ, ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯ ಹಾಗೂ ತಿರುತ್ತಣಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಂತಹ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಸೇರಿದ್ದವು.
ಮೊಬೈಲ್ ನಿಷೇಧದ ಹಿನ್ನೆಲೆಯಲ್ಲಿ ಭಕ್ತರ ಫೋನ್ಗಳನ್ನು ಸುರಕ್ಷಿತವಾಗಿಡಲು ದೇವಾಲಯಗಳ ಹೊರಗೆ ಕೌಂಟರ್ಗಳನ್ನು ತೆರೆದು, ಪ್ರತಿ ಫೋನ್ಗೆ 5ರೂ. ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ದರ್ಶನ ಮುಗಿದ ನಂತರ ಫೋನ್ಗಳನ್ನು ಹಿಂಪಡೆಯಲು ಭಕ್ತರು ಘಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಸಣ್ಣ ಮಕ್ಕಳು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಈ ತೊಂದರೆಗಳನ್ನು ನಿವಾರಿಸುವಂತೆ ಭಕ್ತರಿಂದ ವ್ಯಾಪಕ ಒತ್ತಡ ಕೇಳಿಬಂದಿತ್ತು.
ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ
ಜನಸಾಮಾನ್ಯರ ಪರದಾಟವನ್ನು ಪರಿಗಣಿಸಿ ಅಧಿಕಾರಿಗಳು ಈಗ ನಿಯಮಗಳನ್ನು ಸಡಲಿಸಿದ್ದಾರೆ. ಹೊಸ ನಿಯಮದ ಪ್ರಕಾರ ಭಕ್ತರು ಫೋನ್ ಅನ್ನು ಜತೆಯಲ್ಲಿಯೇ ಕೊಂಡೊಯ್ಯಬಹುದು, ಆದರೆ ಗರ್ಭಗುಡಿ ಅಥವಾ ದೇವಾಲಯ ಪ್ರವೇಶಿಸುವ ಮುನ್ನವೇ ಅದನ್ನು ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಿರಬೇಕು.
ಅಲ್ಲದೆ, ಮೊಬೈಲ್ ತರಲು ಅವಕಾಶ ನೀಡಲಾಗಿದೆಯಾದರೂ, ದೇವಾಲಯದ ಒಳಗೆ ಫೋಟೋ ಕ್ಲಿಕ್ಕಿಸುವುದು, ವೀಡಿಯೊ ರಿಕಾರ್ಡ್ ಮಾಡುವುದು, ಸೆಲ್ಫಿ ಹಾಗೂ ರೀಲ್ಸ್ (Reels) ಮಾಡುವುದರ ಮೇಲಿನ ನಿಷೇಧ ಮುಂದುವರಿಯಲಿದೆ. ನಿಯಮ ಉಲ್ಲಂಘಿಸಿ ವೀಡಿಯೊ ಅಥವಾ ಫೋಟೋ ತೆಗೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ