ಆಲದ ಮರವೇ ಈ ಶಿವನಿಗೆ ಆಲಯ, ಇದು ತುಳುವರ ಅಧಿದೇವತೆ ತುಳುವೇಶ್ವರ

|

Updated on: May 03, 2023 | 7:01 AM

ತುಳುನಾಡು ಎಂದು ಕರೆಯಲ್ಪಡುವ ಕಾಸರಗೋಡಿನಿಂದ ಬೈಲೂರಿನವರೆಗಿನ ಕಡಲ ಕಿನಾರೆ ಪ್ರದೇಶದ ತುಳು ಭಾಷೆಗರಿಗೆ ಈ ದೇವಾಲಯವೇ ಅದಿದೇವತೆಯಾಗಿದೆ. ಶತಶತಮಾನಗಳ ಹಿಂದೆ ತುಳುವೇಶ್ವರನಿಗೆ ದೇವಾಲಯ ಇತ್ತು ಆದರೆ ಕಾಲದ ವಿನಾಶಕ್ಕೆ ಸಿಕ್ಕಿ ಸುಮಾರು 200 ವರ್ಷಗಳ ಹಿಂದೆ ಈ ದೇವಾಲಯವು ಶಿಥಿಲಗೊಂಡಿದೆ. ಇದರ ವಿಶೇಷತೆ ಏನೆಂದರೆ ಯಾವುದೇ ರೀತಿಯ ಮಾನವ ನಿರ್ಮಿತ ಆಲಯ ಇಲ್ಲದೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬಳಿ ಬೆಳೆದ ಆಲದ ಮರವು ಶಿವಲಿಂಗದ ಸುತ್ತ ಆವರಿಸಿದೆ.

ಆಲದ ಮರವೇ ಈ ಶಿವನಿಗೆ ಆಲಯ, ಇದು ತುಳುವರ ಅಧಿದೇವತೆ ತುಳುವೇಶ್ವರ
ತುಳುವೇಶ್ವರ ದೇವಾಲಯ
Follow us on

ಭಕ್ತರ ಸಂಕಷ್ಟಗಳಿಗೆ ಶರಣಾಗುವ ಈಶನಿಗೆ ಯಾವುದೇ ರೀತಿಯ ವೈಭೋಗದ ಆಸೆ ಇರುವುದಿಲ್ಲ, ಅದಕ್ಕೆ ತಕ್ಕಂತೆ ಇರುವ ಸನ್ನಿಧಾನವೇ ತುಳುವೇಶ್ವರ. ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಸರಿ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬಸ್ರುರುನಲ್ಲಿ ಈ ತುಳುವೇಶ್ವರ ದೇವಾಲಯವಿದೆ. ತುಳುನಾಡು ಎಂದು ಕರೆಯಲ್ಪಡುವ ಕಾಸರಗೋಡಿನಿಂದ ಬೈಲೂರಿನವರೆಗಿನ ಕಡಲ ಕಿನಾರೆ ಪ್ರದೇಶದ ತುಳು ಭಾಷೆಗರಿಗೆ ಈ ದೇವಾಲಯವೇ ಅದಿದೇವತೆಯಾಗಿದೆ. ಶತಶತಮಾನಗಳ ಹಿಂದೆ ತುಳುವೇಶ್ವರನಿಗೆ ದೇವಾಲಯ ಇತ್ತು ಆದರೆ ಕಾಲದ ವಿನಾಶಕ್ಕೆ ಸಿಕ್ಕಿ ಸುಮಾರು 200 ವರ್ಷಗಳ ಹಿಂದೆ ಈ ದೇವಾಲಯವು ಶಿಥಿಲಗೊಂಡಿದೆ. ಇದರ ವಿಶೇಷತೆ ಏನೆಂದರೆ ಯಾವುದೇ ರೀತಿಯ ಮಾನವ ನಿರ್ಮಿತ ಆಲಯ ಇಲ್ಲದೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬಳಿ ಬೆಳೆದ ಆಲದ ಮರವು ಶಿವಲಿಂಗದ ಸುತ್ತ ಆವರಿಸಿದೆ. ಈ ಮರವೇ ಶಿವನಿಗೆ ರಕ್ಷ ಕವಚವಾಗಿರುವುದೇ ಒಂದು ವಿಸ್ಮಯವಾದ ಸಂಗತಿಯಾಗಿದೆ.

ಇತಿಹಾಸದ ಕಾಲದಲ್ಲಿ ತುಳುವೇಶ್ವರ ದೇವಾಲಯವು ಸಂವಿಧಾನವಾಗಿತ್ತು ಎನ್ನಲು ಶಾಸನಾಧಾರಗಳು ಇವೆ. ಕ್ರಿಸ್ತಶಕ 1041ರಂದು ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರನಿಗೆ ದಾನ ಕೊಟ್ಟ ವಿಷಯವಿದೆ. ಬಸ್ರುರಿನ ರಾಜ್ಯಪಾಲನಾದ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿ ಅದೇ ಊರಿನ ಭೂ ಒಡೆತನದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕ ಹೆಗ್ಗಡತಿ ಎಂಬುವವಳು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆ ಭೂಮಿಯಿಂದ ಬರುವ ಆದಾಯವನ್ನು ದಾನ ಮಾಡುತ್ತಿದ್ದುದಲ್ಲದೆ ತುಳುವೇಶ್ವರ ದೇವರಿಗೆ ಮತ್ತು ಮುಳುಲ ದೇವಿಗೆ ದಾನವನ್ನು ಮಾಡುತ್ತಿದ್ದ ವಿಚಾರ ಹಾಸನದಲ್ಲಿ ಪ್ರಸ್ತಾಪವಾಗಿದೆ.

ಬಸ್ರುರಿನ ಸ್ಥಳದಲ್ಲಿ ಶಿವನ ನೆಲೆಯಾಗಿತ್ತು ಎನ್ನಲು ದಾಖಲೆಯಂತೆ ಶಿವನ ಎದುರಲ್ಲಿ ನಂದಿಯ ವಿಗ್ರಹವೇ ಸಾಕ್ಷಿಯಾಗಿದೆ. ಅಲ್ಲದೆ ಮುರುಕಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ, ಅವಶೇಷಗಳು ಹೀಗೆ ಮತ್ತಷ್ಟು ಪ್ರಾಚೀನ ದಾಖಲೆಗಳಿವೆ. ನಂದಿ ವಿಗ್ರಹವು ಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದೆ. ಇದು ಏಕಶೀಲ ವಿಗ್ರಹವಾಗಿದೆ.

ಇದನ್ನೂ ಓದಿ: Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ಸುಮಾರು 60 ವರ್ಷಗಳ ಹಿಂದೆ ನಿಧಿಯಾಸೆಗೆ ನಂದಿಯ ವಿಗ್ರಹವನ್ನು ಕಬ್ಬಿಣದ ಸಲಾಕೆಯಿಂದ ಪೀಠದಿಂದ ಬೇರ್ಪಡಿಸಲು ಪ್ರಯತ್ನವಾಗಿತ್ತು ಆದರೆ ನಂದಿಯ ವಿಗ್ರಹವನ್ನು ಬೇರ್ಪಡಿಸಲು ವಿಫಲವಾಯಿತು. ಅಂದಿನ ದಿನದಿಂದಲೂ ನಂದಿಯ ಒಂದು ಭಾಗ ವಾಲಿಕೊಂಡಂತೆ ಮತ್ತು ಮೇಲಕ್ಕೆ ಎದ್ದಿರುವ ಹಾಗೆ ಇದೆ.

ವೈಷ್ಣವ ಮನೆತನಕ್ಕೆ ಸೇರಿದ ವಿಠಲ ಕಿಣಿ ಎಂಬ ವ್ಯಕ್ತಿಯು ಶಿವಲಿಂಗವಿದ್ದ ಜಾಗವನ್ನು ತಿಳಿಯದೆ ಖರೀದಿಸುತ್ತಾನೆ, ಮುಂದೆ ಆ ಸ್ಥಳದಲ್ಲಿ ಶಿವಲಿಂಗ ವಿರುವ ವಿಷಯ ತಿಳಿದ ನಂತರ ಪರಮೇಶ್ವನಿಗೆ ದಿನಾಲು ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾನೆ. ಅಂದಿನಿಂದ ಇಂದಿನವರೆಗೂ ವಿಠಲಕಿಣಿ ಮನೆತನದವರೆ ತುಳುವೇಶ್ವರನಿಗೆ ನಿತ್ಯ ಪೂಜೆಯನ್ನು ಮಾಡುತ್ತಾರೆ.

ಅಲ್ಲದೆ ಬದಿಯಡ್ಕ ಹಾಗೂ ಧರ್ಮಸ್ಥಳದಲ್ಲಿ ನಡೆದ ವಿಶ್ವತುಳು ಸಮ್ಮೇಳನಕ್ಕೆ ಇದೆ ಸನ್ನಿದಾನದಲ್ಲಿ ಚಾಲನೆಯನ್ನು ನೀಡಲಾಗಿದೆ. ಅನೇಕ ಇತಿಹಾಸವಿರುವ ತುಳುವೇಶ್ವರ ದೇವಾಲಯದ ಹಿನ್ನಲೆಯು ಮರಿಮಾಚಿದೆ. ನಮ್ಮ ತುಳುನಾಡಿನ ಈ ದೇವಾಲಯವು ಪ್ರಪಂಚಕ್ಕೆ ಪ್ರಸಿದ್ದಿಯಾಗಿ ಭಕ್ತಾದಿಗಳ ಸಂಖ್ಯೆ ತುಳುವೇಶ್ವರ ಸನ್ನಿದಾನದಲ್ಲಿ ಮೊಳಗಲಿ ಎನ್ನುವುದು ನಮ್ಮ ಆಶಯ.

ಲೇಖನ: ಧರ್ಮಶ್ರೀ ಧರ್ಮಸ್ಥಳ

ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.