Spiritual Tips: ಮನೆಯಲ್ಲಿ ವಿಷ್ಣು ಹಾಗೂ ಲಕ್ಷ್ಮಿ ತುಳಸಿ ಎರಡೂ ಇರಲೇಬೇಕು ಏಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಮನೆಯಲ್ಲಿ ಕೇವಲ ಒಂದು ತುಳಸಿ ಗಿಡವಿರುವುದು ಶುಭವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಲಕ್ಷ್ಮಿ ತುಳಸಿ (ಕೃಷ್ಣ ತುಳಸಿ) ಮತ್ತು ವಿಷ್ಣು ತುಳಸಿ (ರಾಮ ತುಳಸಿ) ಎರಡನ್ನೂ ಪ್ರತ್ಯೇಕವಾಗಿ ನೆಡುವುದರಿಂದ ಅದೃಷ್ಟ, ಐಶ್ವರ್ಯ, ಉತ್ತಮ ಆರೋಗ್ಯ, ಕುಟುಂಬದಲ್ಲಿ ಸಾಮರಸ್ಯ ಹಾಗೂ ಕೆಟ್ಟ ದೃಷ್ಟಿಗಳಿಂದ ರಕ್ಷಣೆ ದೊರೆಯುತ್ತದೆ. ತುಳಸಿ ಪೂಜೆಯ ನಿಯಮಗಳನ್ನು ಪಾಲಿಸುವುದು ಸಹ ಮುಖ್ಯ.

ತುಳಸಿ ಪೂಜೆಯ ಮಹತ್ವ ಮತ್ತು ಅದರ ವಿಶೇಷತೆಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಮನೆಗಳಲ್ಲಿ ತುಳಸಿ ಗಿಡವನ್ನು ಬೆಳೆಸುವುದು, ಪೂಜಿಸುವುದು ಸಾಮಾನ್ಯ. ತುಳಸಿ ವಿವಾಹ ಮತ್ತು ವಿಷ್ಣುವಿಗೆ ತುಳಸಿ ಅರ್ಪಣೆ ಭಾರತೀಯ ಸಂಪ್ರದಾಯದ ಭಾಗವಾಗಿದೆ. ತುಳಸಿಯು ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ಸಸ್ಯ ಎಂದು ನಮಗೆಲ್ಲರಿಗೂ ತಿಳಿದಿದೆ.
ಆದರೆ, ಕೇವಲ ಒಂದು ರೀತಿಯ ತುಳಸಿ ಗಿಡವನ್ನು ಮನೆಯಲ್ಲಿ ಇಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ತುಳಸಿಯಲ್ಲಿ ಮುಖ್ಯವಾಗಿ ಕೃಷ್ಣ ತುಳಸಿ ಮತ್ತು ರಾಮ ತುಳಸಿ ಎಂಬ ಎರಡು ವಿಧಗಳಿವೆ. ಕೃಷ್ಣ ತುಳಸಿಯನ್ನು ಕೆಲವು ಕಡೆ ಲಕ್ಷ್ಮಿ ತುಳಸಿ ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ಸ್ವಲ್ಪ ಕಪ್ಪು ಬಣ್ಣ ಅಥವಾ ಗಾಢ ಹಸಿರು ಬಣ್ಣದಲ್ಲಿರುತ್ತದೆ. ಇನ್ನು ರಾಮ ತುಳಸಿಯನ್ನು ವಿಷ್ಣು ತುಳಸಿ ಎಂದೂ ಕರೆಯುತ್ತಾರೆ. ಇದು ಹೆಚ್ಚು ಹಸಿರು ಬಣ್ಣವನ್ನು ಹೊಂದಿರುತ್ತದೆ.
ಪ್ರತಿ ಮನೆಯಲ್ಲಿಯೂ ಹಿಂದೂ ಸಂಪ್ರದಾಯದ ಪ್ರಕಾರ, ಈ ಎರಡೂ ಬಗೆಯ ತುಳಸಿ ಗಿಡಗಳನ್ನು ಪೂಜಿಸುವುದು ಹೆಚ್ಚು ಶುಭಕರ. ಮನೆಯಲ್ಲಿ ಲಕ್ಷ್ಮಿ ತುಳಸಿ ಮತ್ತು ವಿಷ್ಣು ತುಳಸಿ ಎರಡನ್ನೂ ಪ್ರತ್ಯೇಕವಾಗಿ ಇಡುವುದರಿಂದ ಎಲ್ಲಾ ವಿಧದಲ್ಲೂ ಶುಭವುಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಅದೃಷ್ಟ, ಐಶ್ವರ್ಯ, ಮತ್ತು ಬಹುಮುಖ್ಯವಾಗಿ ಉತ್ತಮ ಆರೋಗ್ಯವನ್ನು ತರುತ್ತದೆ. ಅಲ್ಲದೆ, ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗಿ, ಯಾವುದೇ ಕೆಟ್ಟ ದೃಷ್ಟಿಯು ಮನೆಯ ಮೇಲೆ ಬೀಳುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ.
ಎರಡೂ ಗಿಡಗಳನ್ನು ಒಂದೇ ಕಡೆ ಇಡಬೇಕಾ ಅಥವಾ ಅಕ್ಕಪಕ್ಕ ಇಡಬೇಕಾ ಎಂಬ ಪ್ರಶ್ನೆ ಮೂಡುವುದು ಸಹಜ. ಮನೆಯ ವಾತಾವರಣದಲ್ಲಿ ಒಂದು ಕಡೆ ಲಕ್ಷ್ಮಿ ತುಳಸಿ ಮತ್ತು ಇನ್ನೊಂದು ಕಡೆ ವಿಷ್ಣು ತುಳಸಿಯನ್ನು ಇರಿಸಬಹುದು. ಈಶಾನ್ಯ ಭಾಗ, ನೈರುತ್ಯ ಭಾಗ, ಬ್ರಹ್ಮಸ್ಥಾನ ಅಥವಾ ಮನೆಯ ಮುಂಭಾಗದಲ್ಲಿ ಇವುಗಳನ್ನು ನೆಡಬಹುದು. ಆದರೆ, ಎರಡೂ ತುಳಸಿ ಗಿಡಗಳನ್ನು ಒಂದೇ ಪಾಟ್‌ನಲ್ಲಿ ಅಥವಾ ಒಂದೇ ಬೃಂದಾವನದಲ್ಲಿ ಬೆಳೆಸಬಾರದು. ಅವುಗಳನ್ನು ಬೇರೆ-ಬೇರೆಯಾಗಿ ಇಟ್ಟು ಪೂಜಿಸಿದರೆ ಶೀಘ್ರ ಫಲ ಲಭಿಸುತ್ತದೆ.
ಇದನ್ನೂ ಓದಿ: ಮದುವೆಯಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ಸೀರೆ ಉಡೋದು ಯಾಕೆ ಗೊತ್ತಾ?
ತುಳಸಿ ಕಟ್ಟೆ ಅಥವಾ ತುಳಸಿ ಬೃಂದಾವನದ ಪಕ್ಕದಲ್ಲಿಯೇ ದೀಪ ಹಚ್ಚುವುದು, ಕರ್ಪೂರ ಇಡುವುದು ಅಥವಾ ಅಗರಬತ್ತಿ ಇಡುವುದು ಸರಿಯಲ್ಲ. ತುಳಸಿಯನ್ನು ಶುದ್ಧಗೊಳಿಸಿ ದೇವರ ಗುಡಿಯಲ್ಲಿ ಇಡುವುದು ಉತ್ತಮ. ತುಳಸಿಯ ಎಲೆಗಳನ್ನು ಕೀಳುವಾಗಲೂ ಕೆಲವು ನಿಯಮಗಳನ್ನು ಪಾಲಿಸಬೇಕು. ತುಳಸಿಯನ್ನು ಮಹಾತಾಯಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಮಹಾಕಾಳಿ ಎಂದು ಪರಿಗಣಿಸಲಾಗುತ್ತದೆ. ಈ ದೇವಿಯ ಅನುಗ್ರಹ ತುಳಸಿಯಲ್ಲಿದೆ ಎಂಬ ಭಾವನೆಯಿಂದ ಅದನ್ನು ಗೌರವಿಸಬೇಕು. ತುಳಸಿಯನ್ನು ಕತ್ತರಿಯಿಂದ ಕತ್ತರಿಸಬಾರದು. ಸಂಧ್ಯಾಕಾಲ ಅಥವಾ ಬೆಳಗಿನ ಸಮಯದಲ್ಲಿ ಎಲೆಗಳನ್ನು ಕೀಳಬಾರದು. ತುಳಸಿ ಎಲೆಗಳನ್ನು ಬಿಡಿಸುವಾಗ ಓಂ ನಮೋ ನಾರಾಯಣಾಯ ಅಥವಾ ಅಷ್ಟಾಕ್ಷರಿ ಮಂತ್ರವನ್ನು ಹೇಳಿಕೊಂಡು ಕೀಳಬೇಕು. ಚಪ್ಪಲಿ ಹಾಕಿಕೊಂಡು ತುಳಸಿ ಎಲೆ ಕೀಳಬಾರದು. ಭೂಮಿಗೆ, ನೆಲವನ್ನು ಮುಟ್ಟಿ ಪಾದಗಳನ್ನು ನೆಲದ ಮೇಲೆ ಇಟ್ಟು ತುಳಸಿಯನ್ನು ಕಿತ್ತಾಗ ಅದು ತುಂಬಾನೇ ಒಳ್ಳೆಯದಾಗುತ್ತದೆ.
ಇನ್ನೊಂದು ಮುಖ್ಯ ವಿಷಯವೆಂದರೆ, ತುಳಸಿಯನ್ನು ಗಣಪತಿಗೆ ಅರ್ಪಿಸಬಾರದು. ಆದ್ದರಿಂದ, ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿ ಎರಡನ್ನೂ ಮನೆಯ ಪ್ರಾಂಗಣದಲ್ಲಿ ಸರಿಯಾದ ರೀತಿಯಲ್ಲಿ ಇರಿಸಿಕೊಂಡು ಪೂಜಿಸಿದಾಗ ಸರ್ವ ವಿಧದಲ್ಲೂ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




